ಅಧ್ಯಕ್ಷ ದಂಪತಿಯ ಕಾಮಿಡಿ ಪುರಾಣ

ಚಿತ್ರ ವಿಮರ್ಶೆ

Team Udayavani, Oct 6, 2019, 3:03 AM IST

“ನೀನು ಕುಡುಕ… ನಾನೂ ಕುಡುಕಿ. ಇಬ್ಬರೂ ಕುಡುಕ್ರು. ಮದುವೆ ಆದ್ಮೇಲೆ ಕುಡ್ಕೊಂಡೇ ಜೀವನ ಮಾಡೋಣ…’ ಮದುವೆಗೂ ಮುನ್ನ ಅವಳು ಹೀಗೆ ಹೇಳುವ ಹೊತ್ತಿಗೆ, ಅವನಾಗಲೇ ಕುಡಿದ ಅಮಲಿನಲ್ಲಿರುತ್ತಾನೆ. ಹಗಲು-ರಾತ್ರಿ ಕುಡಿಯೋ ಹೆಂಡತಿ ಸಿಕ್ಕರೆ ಆ ಗಂಡನ “ಗತಿ’ ಏನಾಗಬೇಡ? ಒಂದು ಮಜಾ ಇರುತ್ತೆ, ಇನ್ನೊಂದು ಸೆಂಟಿಮೆಂಟ್‌ ವರ್ಕೌಟ್‌ ಆಗುತ್ತೆ, ಮತ್ತೂಂದು ಎಮೋಷನ್ಸ್‌ ಹೆಚ್ಚಾಗುತ್ತೆ. ಈ ಮೂರನ್ನೂ ಅಷ್ಟೇ ಹದವಾಗಿ ಬೆರೆಸಿ ಮಾಡಿದ ಮನರಂಜನೆಯ ಪಾಕ ಈ ಸಿನಿಮಾದಲ್ಲಿದೆ.

ಒಂದೇ ಮಾತಲ್ಲಿ ಹೇಳುವುದಾದರೆ, “ಅಮೆರಿಕ’ದ ಅಧ್ಯಕ್ಷರು ನಗಿಸುವುದರಲ್ಲಿ ಹಿಂದೆ ಬಿದ್ದಿಲ್ಲ. ಪ್ರೀತಿಸುವುದರಲ್ಲೂ ಕಡಿಮೆ ಇಲ್ಲ ಎಂಬುದನ್ನಿಲ್ಲಿ ತಮ್ಮದೇ ಶೈಲಿಯಲ್ಲಿ ಹೇಳಿದ್ದಾರೆ. ಶರಣ್‌ ಸಿನಿಮಾಗಳನ್ನು ಸೂಕ್ಷ್ಮವಾಗಿ ಗಮನಿಸಿಕೊಂಡು ಬಂದರೆ, ಅಲ್ಲೊಂದು ಮಜವಾದ ಕಥೆ ಇರುತ್ತೆ, ಸೊಗಸಾದ ದೃಶ್ಯಗಳಿರುತ್ತವೆ, ಕಚಗುಳಿ ಇಡುವ ಮಾತುಗಳು ತುಂಬಿರುತ್ತವೆ. ಇಲ್ಲೂ ಅದು ಮುಂದುವರೆದಿದೆ.

ಹೊಡಿ, ಬಡಿ, ಕಡಿ ಇದ್ಯಾವುದಕ್ಕೂ ಆಸ್ಪದವೇ ಇಲ್ಲದಂತೆ ಆರಂಭದಿಂದ ಅಂತ್ಯದವರೆಗೂ ನಗಿಸುವ ಗುಣ ಹೊಂದಿರುವ ಅಧ್ಯಕ್ಷರ ಕಾರುಬಾರು ಇಲ್ಲಿ ಎಲ್ಲೂ ಮಿಸ್‌ ಆಗಿಲ್ಲ. ಹಾಗೆ ನೋಡಿದರೆ, ಇದು ಮಲಯಾಳಂನ “ಟು ಕಂಟ್ರೀಸ್‌’ ಚಿತ್ರದ ಅವತರಣಿಕೆ. ಹಾಗಿದ್ದರೂ, ಕನ್ನಡತನಕ್ಕೇನೂ ಕೊರತೆ ಇಲ್ಲ. ಸಿನಿಮಾ ನೋಡುಗರಿಗೆ ಬೇಕಾಗಿರುವುದು ಮನರಂಜನೆ. ಅದಕ್ಕಿಲ್ಲಿ ಕೊರತೆ ಇಲ್ಲದಂತೆ ನೋಡಿಕೊಂಡಿರುವುದೇ ಸಿನಿಮಾದ ಪ್ಲಸ್‌ ಎನ್ನಬಹುದು.

ಇಲ್ಲೂ ಕೆಲವು ಕಡೆ ಅಧ್ಯಕ್ಷರ ಸಣ್ಣಪುಟ್ಟ ಎಡವಟ್ಟುಗಳು ಕಾಣಸಿಗುತ್ತವೆಯಾದರೂ, ಅದನ್ನು ತಮ್ಮ ಮಾತುಗಳಲ್ಲೇ ಎಲ್ಲವನ್ನೂ ಮರೆಸುವ ಜಾಣತನ ಮೆರೆದಿದ್ದಾರೆ. ಇಲ್ಲಿ ಹೈಲೈಟ್‌ ಅಂದರೆ, ಪಾತ್ರಗಳು ಮತ್ತು ಮಾತುಗಳು. ಇಡೀ ಸಿನಿಮಾದುದ್ದಕ್ಕೂ ನಗುವಿನ ಅಲೆಗೆ ಕಾರಣ ಆಗೋದೇ ಪ್ರತಿ ಪಾತ್ರಗಳ ಮಾತುಗಳು. ಪಕ್ಕಾ ನಗೆಬುಗ್ಗೆ ಎಬ್ಬಿಸುವ ಮಾತುಗಳನ್ನು ಪೋಣಿಸಿರುವ ನಿರ್ದೇಶಕರಿಗಿದು ಮೊದಲ ಚಿತ್ರ ಅಂತೆನಿಸುವುದಿಲ್ಲ.

ಅಷ್ಟರಮಟ್ಟಿಗೆ ಅಧ್ಯಕ್ಷರನ್ನು ಪೋಷಿಸಿದ್ದಾರೆ. ಎಲ್ಲಿ, ಯಾವುದನ್ನು ,ಹೇಗೆ ಹೇಳಬೇಕು, ತೋರಿಸಬೇಕು ಎಂಬುದರ ಅರಿವು ಇರುವುದರಿಂದ ಅಧ್ಯಕ್ಷರನ್ನು ಗುಣಗಾನ ಮಾಡುವುದರಲ್ಲಿ ತಪ್ಪಿಲ್ಲ. ಕೆಲವು ಅನಗತ್ಯ ದೃಶ್ಯಗಳು ಇಲ್ಲೂ ಇವೆ. ಅವುಗಳಿಗೆ ಕತ್ತರಿ ಬಿದ್ದಿದ್ದರೆ, ಅಧ್ಯಕ್ಷರು ಇನ್ನಷ್ಟು ಸ್ವೀಟ್‌ ಆಗುತ್ತಿದ್ದರು. ಚಿತ್ರದ ವೇಗಕ್ಕೆ ಮತ್ತೂಂದು ಹೆಗಲು ಅಂದರೆ, ಅದು ಸಂಕಲನ. ತುಂಬಾ ಜೋರಾಗಿ, ಎಲ್ಲೂ ಬೋರಾಗದ ರೀತಿ ಕತ್ತರಿ ಪ್ರಯೋಗವಾಗಿದೆ.

ಇದು ಶರಣ್‌ ಅವರ “ಅಧ್ಯಕ್ಷ’ ಚಿತ್ರ ಮುಂದುವರೆದ ಭಾಗವಂತೂ ಅಲ್ಲ. ಇಲ್ಲಿ ಹೆಸರಷ್ಟೇ ಹೋಲಿಕೆ ಇದೆಯಾದರೂ, ಅವರ ಹಾವ-ಭಾವ ಎಲ್ಲವೂ ಹೊಸತು. ಹಾಗಾಗಿ, ಅಧ್ಯಕ್ಷರ ಅಮೆರಿಕ ಪ್ರವಾಸದ ರುಚಿ ನೋಡಿಯೇ ಸವಿಯಬೇಕು. ಹೀರೋ ಹೆಸರು ಉಲ್ಲಾಸ್‌. ಸದಾ ಟೋಟಲ್‌ ಲಾಸ್‌ ಅಂದುಕೊಂಡು ತಿರುಗಾಡುವ ಹೀರೋಗೆ ಸೇಠು ಹುಡುಗಿಯನ್ನು ಮದುವೆಯಾಗಿ ಲೈಫ‌ಲ್ಲಿ ಸೆಟ್ಲ ಆಗುವ ಆಸೆ.

ಹೇಗೋ ಸೇಠು ಹುಡುಗಿಯನ್ನು ಪಟಾಯಿಸಿ ಮದ್ವೆ ಮಾಡ್ಕೊಬೇಕು ಅಂದುಕೊಳ್ಳುವ ಹೊತ್ತಿಗೆ, ಅಮೆರಿಕದ ಹುಡುಗಿಯೊಬ್ಬಳು ಹೀರೋಗೆ ಲಿಂಕ್‌ ಆಗಿ ಸಿಂಕ್‌ ಆಗ್ತಾಳೆ. ಅವಳ್ಳೋ ದೊಡ್ಡ ಕುಡುಕಿ. ಇವನೂ ಕುಡಿಯೋದರಲ್ಲಿ ಕಡಿಮೆ ಏನಲ್ಲ. ಇಬ್ಬರಿಗೂ ಮದ್ವೆಯಾಗುತ್ತೆ. ಹೀರೋನದು ಸಂಪ್ರದಾಯಸ್ಥ ಕುಟುಂಬ. ಹಗಲಿನಲ್ಲೇ ಕುಡಿಯೋ ಹೆಂಡತಿಯ ವಿಷಯ ಗೊತ್ತಾಗದ ಹಾಗೆ ಮೈಂಟೇನ್‌ ಮಾಡುವ ಹೀರೋ, ಕೊನೆಗೆ ಹೆಂಡತಿ ಜೊತೆ ಅಮೆರಿಕಕ್ಕೆ ಹಾರುತ್ತಾನೆ.

ಅಲ್ಲೂ ಕುಡಿಯೋ ಹೆಂಡತಿಯನ್ನು ಸರಿದಾರಿಗೆ ತರಬೇಕೆಂದು ಹೋರಾಡುವ ಗಂಡನ ಬಗ್ಗೆ ತಪ್ಪು ತಿಳಿದು ಡೈವೋರ್ಸ್‌ಗೆ ಮುಂದಾಗುತ್ತಾಳೆ. ಆಮೇಲೆ ಏನಾಗುತ್ತೆ ಅನ್ನೋದೇ ಸಸ್ಪೆನ್ಸ್‌. ಆ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಅಧ್ಯಕ್ಷರನ್ನು ನೋಡಬಹುದು. ಶರಣ್‌ ಎನರ್ಜಿ ಎಂದಿಗಿಂತ ಸ್ವಲ್ಪ ಜೋರಾಗಿದೆ. ಅಧ್ಯಕ್ಷರಾಗಿ ತಮ ಕೆಲಸವನ್ನು ಪರಿಪೂರ್ಣಗೊಳಿಸಿದ್ದಾರೆ. ರಾಗಿಣಿಗೆ ಪಾತ್ರ ಸರಿಹೊಂದಿದೆ. ಕುಡುಕ ಹೆಂಡತಿಯಾಗಿ ಸೈ ಎನಿಸಿಕೊಂಡಿದ್ದಾರೆ.

ಶಿವರಾಜ್‌ ಕೆ.ಆರ್‌.ಪೇಟೆ ಒಳ್ಳೆಯ ಸ್ಕೋರ್‌ ಮಾಡಿದ್ದಾರೆ. ತಬಲನಾಣಿ ಹಾಸ್ಯಭರಿತ ಮಾತುಗಳಿಂದ ಇಷ್ಟವಾಗುತ್ತಾರೆ. ರಂಗಾಯಣ ರಘು, ಸಾಧುಕೋಕಿಲ, ಅಶೋಕ್‌,ಅವಿನಾಶ್‌, ಪ್ರಕಾಶ್‌ ಬೆಳವಾಡಿ ಸೇರಿದಂತೆ ಕಾಣುವ ಪಾತ್ರಗಳು ಅಧ್ಯಕ್ಷರ ಜೋಶ್‌ಗೆ ಕಾರಣವಾಗಿವೆ. ಹರಿಕೃಷ್ಣ ಸಂಗೀತದ ಹಾಡುಗಳಿಗಿಂತ ಹಿನ್ನೆಲೆ ಸಂಗೀತ ತಕ್ಕಮಟ್ಟಿಗೆ ಸಮಾಧಾನ ತರಿಸುತ್ತೆ. ಮೂರು ಮಂದಿಯ ಕೈಯಲ್ಲಿ ಕ್ಯಾಮೆರಾ ಕೆಲಸ ಆಗಿರುವುದರಿಂದಲೋ ಏನೋ, ಅಧ್ಯಕ್ಷರು ಒಂದೊಂದು ಸಲ ಒಂದೊಂದು ರೀತಿ ಕಾಣುತ್ತಾರೆ.

ಚಿತ್ರ: ಅಧ್ಯಕ್ಷ ಇನ್‌ ಅಮೆರಿಕ
ನಿರ್ಮಾಣ: ವಿಶ್ವಪ್ರಸಾದ್‌
ನಿರ್ದೇಶನ: ಯೋಗಾನಂದ್‌ ಮುದ್ದಾನ್‌
ತಾರಾಗಣ: ಶರಣ್‌, ರಾಗಿಣಿ, ಶಿವರಾಜ್‌ ಕೆ.ಆರ್‌.ಪೇಟೆ, ಸಾಧುಕೋಕಿಲ, ರಂಗಾಯಣ ರಘು, ಅಶೋಕ್‌, ಪ್ರಕಾಶ್‌ ಬೆಳವಾಡಿ ಇತರರು.

* ವಿಜಯ್‌ ಭರಮಸಾಗರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಮಕ್ಕಳಿಲ್ಲದ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬ ಎರಡು ಜೋಡಿ ಬಾಬಾ ಮಂದಿರಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಂತೆ, ದೈವಾನುಗ್ರಹವೆಂಬಂತೆ ಎರಡೂ ಕುಟುಂಬದಲ್ಲೂ...

  • "ಮೊದಲ ನೋಟಕ್ಕೆ ಇಷ್ಟವಾಗುವ ಹುಡುಗಿಯೊಬ್ಬಳ ಪ್ರೀತಿ ಪಡೆಯೋಕೆ ಅವನು ಒಂದು ಸುಳ್ಳು ಹೇಳುತ್ತಾನೆ. ಅದು ನೂರಾರು ಸುಳ್ಳುಗಳಾಗುತ್ತವೆ. ಅವನ ಪ್ರೀತಿಯೂ ಸಿಗುತ್ತದೆ....

  • ಅದು ಕರಾವಳಿಯ ಸುಂದರ ಪರಿಸರ. ಅಲ್ಲಿ ನಾಡು-ನುಡಿ-ಸಂಸ್ಕೃತಿಯ ಕಡೆಗೆ ಒಲವಿಟ್ಟುಕೊಂಡು ಇಂಜಿನಿಯರಿಂಗ್‌ ಓದುತ್ತಿರುವ ಹುಡುಗನ ಹೆಸರು ರಕ್ಷಿತ್‌ ಶೆಟ್ಟಿ. ಓದಿನಲ್ಲಿ...

  • ದೇವರು ಸಿಕ್ಕರೆ ತನ್ನ ಆಸೆ ಈಡೇರುತ್ತದೆ, ಮೊದಲು ದೇವರನ್ನು ಭೇಟಿಯಾಗಬೇಕು. ಹಾಗಾದರೆ ದೇವರು ಎಲ್ಲಿದ್ದಾರೆ... ಹುಡುಕಬೇಕು - ಮುಗ್ಧ ಬಾಲಕನ ಮನಸ್ಸಲ್ಲಿ ಈ ಆಲೋಚನೆ...

  • ಕಿರುತೆರೆಯಲ್ಲಿ "ಮಜಾ ಟಾಕೀಸ್‌' ಮೂಲಕ ಮೋಡಿ ಮಾಡಿದ್ದ ನಟ ಸೃಜನ್‌ ಲೋಕೇಶ್‌, ಈಗ ಹಿರಿತೆರೆಯಲ್ಲಿ ಮತ್ತೂಮ್ಮೆ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ. ಸೃಜನ್‌ ನಾಯಕ...

ಹೊಸ ಸೇರ್ಪಡೆ