ಅಮರ ಪ್ರೇಮಕಾವ್ಯ

ಚಿತ್ರ ವಿಮರ್ಶೆ

Team Udayavani, Jun 1, 2019, 3:13 AM IST

“50 ಕೋಟಿಗೆ ನಿನ್ನ ಪ್ರೀತೀನಾ ಮಾರಿಬಿಟ್ಟೆ ….’ ಹೀಗೆ ಹೇಳಿ ಜೋರಾಗಿ ನಗುತ್ತಾನೆ ಅಮರ್‌. ಒಳ್ಳೆ ಹುಡುಗ ಅಮರ್‌ ಯಾಕೆ ಹೀಗೆ ಮಾಡಿಬಿಟ್ಟ ಎಂಬ ಪ್ರಶ್ನೆ ನಾಯಕಿ ಹಾಗೂ ಪ್ರೇಕ್ಷಕರ ಮನದಲ್ಲಿ ಕಾಡಲಾರಂಭಿಸುತ್ತದೆ. ಏನೋ ಕಾರಣವಿಲ್ಲದೇ, ಈ ತರಹ ಮಾಡೋ ಹುಡುಗ ಅಮರ್‌ ಅಲ್ಲ ಎಂದು ಸಮಾಧಾನ ಹೇಳುತ್ತಲೇ ಸೀಟಿಗೆ ಒರಗುವ ಪ್ರೇಕ್ಷಕನಿಗೆ ಮುಂದೆ ಒಂದೊಂದೇ ಸನ್ನಿವೇಶಗಳು ಸಮಾಧಾನ ಹೇಳುತ್ತಾ ಹೋಗುತ್ತವೆ.

ಆ ಸಮಾಧಾನಕರ ಅಂಶಗಳು ಯಾವುವು ಎಂಬ ಕುತೂಹಲವಿದ್ದರೆ ನೀವು “ಅಮರ್‌’ ಸಿನಿಮಾ ನೋಡಬಹುದು. ರೆಬೆಲ್‌ಸ್ಟಾರ್‌ ಅಂಬರೀಶ್‌ ಪುತ್ರ ಅಭಿಷೇಕ್‌ “ಅಮರ್‌’ ಚಿತ್ರದ ಮೂಲಕ ನಾಯಕ ನಟರಾಗಿ ಅದ್ಧೂರಿಯಾಗಿ ಲಾಂಚ್‌ ಆಗಿದ್ದಾರೆ. ಸಹಜವಾಗಿಯೇ ಈ ಸಿನಿಮಾ ಮೇಲೆ ಸಾಕಷ್ಟು ನಿರೀಕ್ಷೆ ಇತ್ತು. ಅಂಬಿ ಪುತ್ರನ ಲಾಂಚ್‌ ಸಿನಿಮಾ ಹೇಗಿರಬಹುದೆಂಬ ಕುತೂಹಲವನ್ನು “ಅಮರ್‌’ ತಣಿಸಿದೆ. ಒಬ್ಬ ಹೊಸ ಹುಡುಗನ ಲಾಂಚ್‌ಗೆ ಏನು ಬೇಕೋ ಅವೆಲ್ಲವನ್ನು ಈ ಸಿನಿಮಾದಲ್ಲಿ ನೀಟಾಗಿ ಕಟ್ಟಿಕೊಟ್ಟಿದ್ದಾರೆ.

ಒಂದು ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಸಿನಿಮಾಕ್ಕೆ ಏನು ಬೇಕೋ ಆ ಎಲ್ಲಾ ಅಂಶಗಳಿಂದ “ಅಮರ್‌’ ತುಂಬಿದೆ. ಜೊತೆಗೆ ನಾಗಶೇಖರ್‌ ತಮ್ಮ ಎಂದಿನ ಶೈಲಿಯನ್ನೂ ಬಿಟ್ಟುಕೊಟ್ಟಿಲ್ಲ. ಅದು ಲೊಕೇಶನ್‌ನಿಂದ ಹಿಡಿದು ಸೆಂಟಿಮೆಂಟ್‌ವರೆಗೂ. ಹಾಗಾಗಿ, “ಅಮರ್‌’ನಲ್ಲಿ ಆ ಅಂಶಗಳಿಗೆ ನಾಗಶೇಖರ್‌ ಸ್ವಲ್ಪ ಹೆಚ್ಚಿನ ಜಾಗವನ್ನೇ ನೀಡಿದ್ದಾರೆ. ಒಬ್ಬ ಹೊಸ ಹೀರೋನಾ ಇಮೇಜ್‌ ಬಿಲ್ಡ್‌ ಮಾಡೋದು ಸುಲಭದ ಕೆಲಸವಲ್ಲ.

ಕಥೆಯ ಹಂಗು ತೊರೆದು ತೆರೆಮೇಲೆ ಅದಕ್ಕಾಗಿ ಒಂದಷ್ಟು ಸಮಯ ಮೀಸಲಿರಿಸಬೇಕು. ಆ ಕೆಲಸವನ್ನು ನಾಗಶೇಖರ್‌ “ಅಮರ್‌’ ಚಿತ್ರದಲ್ಲೂ ಮಾಡಿದ್ದಾರೆ. ಅಭಿಷೇಕ್‌ ಅವರ ಇಮೇಜ್‌ ಬಿಲ್ಡ್‌ ಮಾಡೋದಕ್ಕಾಗಿಯೇ ಚಿತ್ರದಲ್ಲಿ ಮೊದಲರ್ಧವನ್ನು ಮೀಸಲಿಟ್ಟಿದ್ದಾರೆ. ಹಾಗಾಗಿ, ಇಲ್ಲಿ ಕಥೆಯನ್ನು ಹೆಚ್ಚು ಬಯಸುವಂತಿಲ್ಲ. ಕಥೆಯ ಜಾಗವನ್ನು ಸುಂದರ ತಾಣಗಳು ತುಂಬುತ್ತವೆ.

ಯಾವುದೋ ಸುಂದರ ತಾಣದ ಮಧ್ಯೆ ನೀವು ನಿಂತು ಹಾಯಾಗಿ ಕೈ ಚಾಚಿದಂತೆ ಭಾಸವಾಗುವ ಮಟ್ಟಕ್ಕೆ ಪ್ರಕೃತಿ ಸೌಂದರ್ಯವನ್ನು ಕಟ್ಟಿಕೊಡಲಾಗಿದೆ. ಹಾಗಂತ ಇಡೀ ಸಿನಿಮಾವನ್ನು ಪ್ರಕೃತಿ ಸೌಂದರ್ಯವೊಂದೇ ಮುಂದುವರೆಸಿಕೊಂಡು ಹೋಗಲು ಸಾಧ್ಯವಿಲ್ಲ. ಆ ಅರಿವು ನಾಗಶೇಖರ್‌ಗೆ ಆಗಿ, ಕಥೆಯನ್ನು ಬಿಚ್ಚಿಟ್ಟಿದ್ದಾರೆ. ಕಥೆಯ ಬಗ್ಗೆ ಹೇಳುವುದಾದರೆ “ಅಮರ್‌’ ಒಂದು ಔಟ್‌ ಅಂಡ್‌ ಔಟ್‌ ಲವ್‌ಸ್ಟೋರಿ.

ಯಾವುದಕ್ಕೂ ತಲೆಕೆಡಿಸಿಕೊಳ್ಳದ, ಕಷ್ಟ ಎಂದು ಬಂದವರಿಗೆ ಸಹಾಯ ಮಾಡುವ ಒಬ್ಬ ಹುಡುಗ ಹಾಗೂ ಸಿಕ್ಕಾಪಟ್ಟೆ ಶ್ರೀಮಂತ ಹುಡುಗಿಯ ನಡುವಿನ ಲವ್‌ಸ್ಟೋರಿ. ಕಥೆಯ ಬಗ್ಗೆ ಹೇಳುವುದಾದರೆ ತೀರಾ ಹೊಸತೆನಿಸದ ಕಥೆಯಾದರೂ ಅದನ್ನು ಹೊಸ ರೀತಿಯಲ್ಲಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಈ ಮಧ್ಯೆ ಕಮರ್ಷಿಯಲ್‌ ಅಂಶಗಳು ಕೂಡಾ ಆಗಾಗ ನೆನಪಾಗಿ ಚಿತ್ರದಲ್ಲಿ ಚಿಕ್ಕಣ್ಣ, ಸಾಧುಕೋಕಿಲ ಅವರ ಕಾಮಿಡಿ ಟ್ರ್ಯಾಕ್‌ಗಳು ಕೂಡಾ ಲವ್‌ಸ್ಟೋರಿಯ ಪಕ್ಕದಲ್ಲಿಯೇ ಬಂದು ನಿಲ್ಲುತ್ತವೆ.

ಚಿತ್ರದ ಕೆಲವು ದೃಶ್ಯಗಳಿಗೆ ಕತ್ತರಿ ಹಾಕಿ, ಸಿನಿಮಾದ ವೇಗವನ್ನು ಇನ್ನಷ್ಟು ಹೆಚ್ಚಿಸುವ ಅವಕಾಶವಿತ್ತು. ಹೀಗೆ ಸಣ್ಣಪುಟ್ಟ ತಪ್ಪುಗಳನ್ನು ಬದಿಗಿಟ್ಟು ನೋಡುವುದಾದರೆ “ಅಮರ್‌’ ಒಬ್ಬ ಹೊಸ ಹುಡುಗನ ಲಾಂಚ್‌ಗೆ ಹೇಳಿಮಾಡಿಸಿದಂತಿದೆ. ಒಂದು ಅದ್ಧೂರಿ ಸಿನಿಮಾವನ್ನು ಕಣ್ತುಂಬಿಕೊಳ್ಳುವ ಆಸೆ ಇದ್ದರೆ “ಅಮರ್‌’ಗೆ ಹೋಗಬಹುದು.

ಮೊದಲ ಬಾರಿಗೆ ನಾಯಕರಾಗಿ ನಟಿಸಿರುವ ಅಭಿಷೇಕ್‌ ಲವಲವಿಕೆಯಿಂದ ನಟಿಸಿದ್ದಾರೆ. ಮೊದಲ ಬಾರಿ ನಟಿಸುವ ಕೆಲವು ನಟರ ಕಣ್ಣಲ್ಲಿ ಕಾಣುವ ಅಂಜಿಕೆ, ಭಯ ಅವರಲ್ಲಿ ಕಾಣುವುದಿಲ್ಲ. ಆ ಮಟ್ಟಿಗೆ ಆ್ಯಕ್ಟೀವ್‌ ಆಗಿ ನಟಿಸಿದ್ದಾರೆ. ಆ್ಯಕ್ಷನ್‌ ಸೇರಿದಂತೆ ಇತರ ದೃಶ್ಯಗಳಲ್ಲಿ ಹೆಚ್ಚು ಗಮನ ಸೆಳೆಯುವ ಅಭಿಷೇಕ್‌ ಲವ್‌, ಸೆಂಟಿಮೆಂಟ್‌ ದೃಶ್ಯಗಳಲ್ಲಿ ಇನ್ನೊಂದಿಷ್ಟು ಪ್ರಯತ್ನಿಸಬೇಕಿದೆ. ಅದು ಬಿಟ್ಟರೆ ಅಭಿಷೇಕ್‌ ಭರವಸೆ ಮೂಡಿಸಿದ್ದಾರೆ.

ನಾಯಕಿ ತಾನ್ಯಾ ಹೋಪ್‌ ಸಖತ್‌ ಬೋಲ್ಡ್‌ ಆಗಿ ಕಾಣಿಸಿಕೊಳ್ಳುವ ಜೊತೆಗೆ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರದಲ್ಲಿ ದರ್ಶನ್‌ ಗೆಸ್ಟ್‌ ಅಪಿಯರೆನ್ಸ್‌ ಮಾಡಿದ್ದಾರೆ. ಉಳಿದಂತೆ ದೇವರಾಜ್‌, ಸುಧಾರಾಣಿ, ಸಾಧುಕೋಕಿಲ, ಚಿಕ್ಕಣ್ಣ ನಟಿಸಿದ್ದಾರೆ. ಚಿತ್ರದ ಹಾಡುಗಳು ಪ್ಲಸ್‌ ಆದರೆ, ಛಾಯಾಗ್ರಹಣ ಮತ್ತೂಂದು ತೂಕ. ಛಾಯಾಗ್ರಾಹಕ ಸತ್ಯಹೆಗ್ಡೆ ಪ್ರಕೃತಿ ಸೊಬಗನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಅಂದಹಾಗೆ, ಚಿತ್ರ ಮುಗಿದ ನೀವು ಎದ್ದು ಬರುವಾಗ ನಿಮಗೊಂದು ಸರ್‌ಪ್ರೈಸ್‌ ಇದೆ. ಅದೇನೆಂಬುದನ್ನು ಚಿತ್ರಮಂದಿರದಲ್ಲೇ ನೋಡಿ.

ಚಿತ್ರ: ಅಮರ್‌
ನಿರ್ಮಾಣ: ಸಂದೇಶ್‌
ನಿರ್ದೇಶನ: ನಾಗಶೇಖರ್‌
ತಾರಾಗಣ: ಅಭಿಷೇಕ್‌, ತಾನ್ಯಾ ಹೋಪ್‌, ಸುಧಾರಾಣಿ, ದೇವರಾಜ್‌, ಸಾಧುಕೋಕಿಲ, ಚಿಕ್ಕಣ್ಣ ಮತ್ತಿತರರು.

* ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌...

  • ಆಕೆ ಶ್ರೀಮಂತ ಬಿಝಿನೆಸ್‌ಮ್ಯಾನ್‌ವೊಬ್ಬನ ಪತ್ನಿ. ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನದಲ್ಲಿದ್ದ ಆ ಬಿಝಿನೆಸ್‌ ಮ್ಯಾನ್‌ಗೆ ಮೋಡಿ ಮಾಡಿ, ಆತನ ಪತ್ನಿಯಾದವಳಾಕೆ....

  • ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ...

  • "ಕಿಕ್‌ ಏರ್‌ ಬೇಕು ಅಂದ್ರೆ ಕ್ವಾಟ್ರಾ ಬೇಕು... ಒಂಟಿನ ಮುಟ್ಬೇಕು ಅಂದ್ರೆ ಮೀಟ್ರಾ ಬೇಕು...' ಇಂಥದ್ದೊಂದು ಮಾಸ್‌ ಡೈಲಾಗ್‌ ಹೇಳಿ ಮುಗಿಸುವಷ್ಟರಲ್ಲಿ, "ಒಂಟಿ'ಯನ್ನು...

  • ಆತ ಖಡಕ್‌ ಪೊಲೀಸ್‌ ಆಫೀಸರ್‌. ಬಿಹಾರದ ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌. ಗೂಂಡಾಗಳಿಗೆ ಗುಂಡೇಟು ಮದ್ದು ಎಂದು ಭಾವಿಸಿದ...

ಹೊಸ ಸೇರ್ಪಡೆ