ಜಹೊರಿ : ನಮ್ಮೊಳಗೇ ತಣ್ಣಗೆ ಪಯಣಿಸುವ ಚಿತ್ರ


ಅರವಿಂದ ನಾವಡ, Nov 22, 2021, 12:19 PM IST

1-j-1

ಅಲೆಮಾರಿಯನ್ನು ಕಂಡರೆ ಇಷ್ಟವಾಗುವುದು ಒಂದೇ ಕಾರಣಕ್ಕೆ. ಅವನು ಸ್ವತಂತ್ರ ಮತ್ತು ನೈಜ ಹೋರಾಟಗಾರ. ದಿನದ ಬದುಕಿನ ಹೋರಾಟದಲ್ಲಿ ಮುಳುಗಿಕೊಂಡು, ಎಲ್ಲ ಬಗೆಯ ಸಾಮಾಜಿಕ ಕಟ್ಟುಪಾಡುಗಳನ್ನು ಮೀರಿ ತನಗೆ ತೋಚಿದಂತೆ, ತನ್ನಿಷ್ಟದಂತೆ ಬದುಕುವುದೇ ಅವನ ಆದರ್ಶ.

ಇವನನ್ನು/ಇವಳನ್ನು ಭೌಗೋಳಿಕ ಬೇಲಿಯಾಗಲೀ, ಸಾಂಪ್ರದಾಯಿಕ ಬೇಲಿಯಾಗಲಿ ಇರದು. ಇವೆಲ್ಲವನ್ನೂ ಮೀರಿದ ಬದುಕು. ಅದನ್ನು ಬಯಸಿ ಪಡೆಯುವುದೇ ಜಹೊರಿ ಕಥೆಯ ಹೂರಣ. ಗೋವಾದ ಪಣಜಿಯಲ್ಲಿ ನಡೆಯುತ್ತಿರುವ 52 ನೇ ಭಾರತೀಯ ಅಂತಾರಾಷ್ಟ್ರೀಯ ಚಿತ್ರೋತ್ಸವ (ಇಫಿ)ದಲ್ಲಿ ವಿಶ್ವ ಸಿನಿಮಾ ವಿಭಾಗದಲ್ಲಿ ಪ್ರದರ್ಶಿತವಾದ ಸಿನಿಮಾ.

ಅರ್ಜೈಂಟೀನಾದ ಮಾರಿ ಅಲೆಸಾಂಡ್ರಿನಿ (Marí Alessandrini) ನ ಇದರ ನಿರ್ದೇಶಕಿ. ಜಿನಿವಾದಲ್ಲಿ ಸಿನಿಮಾದ ಶಿಕ್ಷಣ ಪಡೆದು ರೂಪಿಸಿದ ಮೊದಲ ಸಿನಿಮಾ. ಲೊಕೊರ್ನೊ ಚಿತ್ರೋತ್ಸವದಲ್ಲಿ ಭಾಗವಹಿಸಿ ಒಳ್ಳೆಯ ಪ್ರಶಂಸೆ ಗಿಟ್ಟಿಸಿದ ಚಿತ್ರ.

ಹದಿಮೂರು ವರ್ಷದ ಮೋರಾ (Lara Viaena Tortosa) ಅರ್ಜೈಂಟೀನಾ ಮತ್ತು ಚಿಲಿ ನಡುವಿನ ಗುಡ್ಡಗಾಡಿನಲ್ಲಿ ಬದುಕುತ್ತಿರುವ ಹುಡುಗಿ. ಸೋದರ ಹಿಮೇಕೊ, ಅಪ್ಪ ಅಮ್ಮ ಇದ್ದಾರೆ. ಹಿಮೇಕೋವಿಗೆ ತನ್ನದೇ ಆದ ಅಭಿಪ್ರಾಯ ಇನ್ನೂ ರೂಪುಗೊಳ್ಳದ ವಯಸ್ಸು. ಚಿಕ್ಕ ಪ್ರಾಯ. ಪೋಷಕರಿಬ್ಬರೂ ತನ್ನದೇ ಆದ ಆದರ್ಶದ ಹುಡುಕಾಟದಲ್ಲಿ ಕಳೆದು ಹೋಗಿದ್ದಾರೆ. ಅಮ್ಮನಿಗೆ ಮೋರಾಳನ್ನು ತನ್ನ ರೀತಿಯಲ್ಲಿ ರೂಪಿಸಬೇಕೆಂಬ ಹಠ, ತಂದೆಗೆ ತನ್ನ ರೀತಿಯಲ್ಲಾಗಲೀ ಎಂಬ ಬಯಕೆ. ಆ ದಿಸೆಯಲ್ಲಿ ಪ್ರಯತ್ನ. ಮನೆಯಲ್ಲೂ ಇಬ್ಬರ ಆದರ್ಶದ ಲೆಕ್ಕಾಚಾರಗಳಲ್ಲಿ ಮಕ್ಕಳು ಸಂಪೂರ್ಣ ಪುಡಿಯಾಗಿ ಹೋಗಿದ್ದಾರೆ.

ಶಾಲೆಯಲ್ಲಿ ಲಿಂಗ ಅಸಮಾನತೆಯಿಂದ ಮೋರಾ ಕುಗ್ಗಿ ಹೋಗುತ್ತಾಳೆ. ಗುಡ್ಡಗಾಡು ಪ್ರದೇಶದ ಮಕ್ಕಳಿಗೆಂದೇ ಸ್ವಲ್ಪ ದೂರದಲ್ಲಿರುವ ವಸತಿ ಶಾಲೆಗೆ ಮೋರಾ ಮತ್ತು ಹಿಮೇಕೋ ಸೇರುತ್ತಾರೆ. ಆದರೆ ಅಲ್ಲಿನ ನಿಯಮಗಳು, ಲಿಂಗ ಅಸಮಾನತೆಯ ಧೋರಣೆಗಳು ಮೋರಾಳಿಗೆ ಇಷ್ಟವಾಗುವುದಿಲ್ಲ. ಸ್ವತಂತ್ರಗಳಾಗಿ ಬದುಕಬೇಕೆಂದು ಬಯಸುವ ತಾನು ಈ ನಿಯಮಗಳಲ್ಲಿ ಏಕೆ ಬಂಧಿಯಾಗಬೇಕೆಂದು ಸದಾ ಯೋಚಿಸುತ್ತಿರುತ್ತಾಳೆ. ಗೌಚೊವಿನಂತಾಗಬೇಕು ಎಂದು ಬಯಸುತ್ತಿರುತ್ತಾಳೆ. ಗೌಚೊ ಎನ್ನುವುದು ಅರ್ಜೈಂಟೀನಾದ ಜಾನಪದ ನಾಯಕ. ಎಲ್ಲವನ್ನೂ ಮೀರಿದ (ಲಿಂಗ, ಜಾತಿ, ಭೌಗೋಳಿಕ, ನಿಯಮ) ಶೂರ, ಧೀರ ಕುದುರೆ ಸವಾರ. ಪಾಶ್ಚಾತ್ಯರಲ್ಲಿ ಕೌಬಾಯ್ ಇದ್ದ ಹಾಗೆ.
ಒಮ್ಮೆ ಶಾಲೆಯಲ್ಲಿ ತನ್ನ ಸಹಪಾಠಿಯೊಬ್ಬ ‘ನೀನು ಹುಡುಗಿ’ ಎಂದು ಛೇಡಿಸಿ, ಮತ್ತೇನೋ ಹೇಳಿದಾಗ ಸಿಟ್ಟಿಗೆದ್ದು ಶಾಲೆಯಲ್ಲೇ ಅವನಿಗೆ ಹೊಡೆಯಲು ಮುಂದಾಗುತ್ತಾಳೆ. ಇದು ಮುಖ್ಯೋಪಾಧ್ಯಾಯರ ಬಳಿಗೆ ಹೋಗಿ, ಅವಳಿಗೆ ದೊಡ್ಡದೊಂದು ಘಂಟೆಯ ಕೆಳಗೆ ದಿನವಿಡೀ ಬಿಸಿಲಿನಲ್ಲಿ ಕುಳಿತುಕೊಳ್ಳುವ ಶಿಕ್ಷೆ ವಿಧಿಸಲಾಗುತ್ತದೆ. ಇದು ಅವಮಾನ ಮತ್ತು ಸಿಟ್ಟನ್ನು ತರಿಸುತ್ತದೆ. ‘ಈ ಘಂಟೆ ಇದ್ದರೆ ತಾನೆ ಸಮಸ್ಯೆ’ ಎಂದುಕೊಂಡು ಮೋರಾ ಘಂಟೆಯನ್ನೇ ಕೆಳಗಿಳಿಸಿ ಹತ್ತಿರದ ಗಿಡಗಳ ಮಧ್ಯೆ ಮುಚ್ಚಿಡುತ್ತಾಳೆ. ಇದರಿಂದ ಮುಖ್ಯೋಪಾಧ್ಯಾಯರು ಮನೆಗೆ ಕಳಿಸುತ್ತಾರೆ. ಇಲ್ಲಿಯೂ ಅವಳು ನಿಯಮವನ್ನು ಹೇಗೆ ಇಲ್ಲವಾಗಿಸುವುದು ಎಂದೇ ಯೋಚಿಸುತ್ತಾಳೆ. ಅವಳ ದೃಷ್ಟಿಯಲ್ಲಿ ಈ ಘಂಟೆ ಎಲ್ಲದಕ್ಕೂ ಕಾರಣ ಮತ್ತು ಸಾಕ್ಷ್ಯವಾಗುತ್ತಿದೆ ಎನಿಸುತ್ತದೆ.

ತನ್ನದೇ ಪಟಾಗೊನಿಯ ಪ್ರದೇಶದಲ್ಲಿ ವಾಸಿಸುತ್ತಿದ್ದ ವೃದ್ಧ ಕುದುರೆ ಸವಾರ ನಜರೇನೋ ಬಹಳ ಇಷ್ಟವಾಗುತ್ತಾನೆ ಮೋರಾಳಿಗೆ. ಅವನದು ಸ್ವತಂತ್ರ ಬದುಕು. ಇಟಲಿಯ ಅವನ ಪತ್ನಿ ಒಂದು ದಿನ ತನ್ನ ಮೂಲವನ್ನು ಹುಡುಕಿಕೊಂಡು ಹೊರಟು ಹೋದಳು. ಅಂದಿನಿಂದ ತಾನಾಯಿತು, ತನ್ನ ಕುದುರೆ ಆಯಿತು. ಅದರೊಂದಿಗೇ ಬದುಕು ಕಳೆಯುತ್ತಿದ್ದಾನೆ. ಒಂದು ದಿನ ಜೋರಾದ ಗಾಳಿಯ ಅಬ್ಬರದ ಮಧ್ಯೆ ಕುದುರೆ ತನ್ನ ಹಗ್ಗವನ್ನು ಕಡಿದುಕೊಂಡು ನಾಗಾಲೋಟದಿಂದ ಓಡಿ ಎಲ್ಲೋ ಕಣ್ಮರೆಯಾಗುತ್ತದೆ. ನಜರೇನೊ ಬೆಳಗ್ಗೆ ತನ್ನ ಕುದುರೆ ಇಲ್ಲದ್ದನ್ನು ಕಂಡು ಬೇಸರಗೊಂಡು ಅದರ ಹುಡುಕಾಟಕ್ಕೆ ಹೊರಡುತ್ತಾನೆ.

ಅಂತಿಮವಾಗಿ ಶಾಲೆಗೆ ಹೊರಡುವ ಹಿಮೇಕೊ ಮತ್ತು ಮೋರಾ ಶಾಲೆಯ ಬಳಿ ಬಂದಾಗ ಮೋರಾ ತನ್ನ ನಿರ್ಧಾರವನ್ನು ಪ್ರಕಟಿಸುತ್ತಾಳೆ. ತಾನು ಶಾಲೆಗೆ ಬರುವುದಿಲ್ಲವೆಂದು, ನಜರೇನೋವನ್ನು ನೋಡಿಕೊಳ್ಳುವುದಾಗಿ ಹೇಳುತ್ತಾಳೆ. ಹಿಮೇಕೋ ಶಾಲೆಯನ್ನು ಸೇರುತ್ತಾಳೆ. ನಜರೇನೋವನ್ನು ಹುಡುಕಿಕೊಂಡು ಬರುವ ಮೋರಾಳಿಗೆ ಅವನ ಕೊನೆಯ ದಿನಗಳು ಸಮೀಪಿಸಿರುವುದು ಅರ್ಥವಾಗುತ್ತದೆ. ಕುದುರೆಯನ್ನು ಹುಡುಕಿಕೊಂಡು ಬರುವೆ ಎಂದಾಗ ನಜರೇನೊ, ಬೇಡ, ಇಲ್ಲೇ ಇರು ಎಂದು ಹೇಳಿದ ಕೆಲವೇ ಕ್ಷಣಗಳಲ್ಲಿ ಇಲ್ಲವಾಗುತ್ತಾನೆ.
ಮೋರಾಳ ಒಳಗಿನ ಸ್ವತಂತ್ರಗೊಳ್ಳುವ ಬಯಕೆಯನ್ನು ನಜರೇನೋ ಹೊರತುಪಡಿಸಿದಂತೆ ಇನ್ಯಾರೂ ಅರ್ಥ ಮಾಡಿಕೊಂಡಿರುವುದಿಲ್ಲ. ನಜರೇನೋ ಹೆಣದ ಮೇಲೆ ಕಲ್ಲುಗಳನ್ನು ಇಟ್ಟು ಕುದುರೆ ಹುಡುಕುತ್ತಾ ಹೋಗುವಾಗ ಕುದುರೆ ವಾಪಸು ಸಿಗುತ್ತದೆ. ನಜರೇನೋ ಮನೆಗೆ ಬಂದು, ಕತ್ತಿಯಿಂದ ತನ್ನ ಉದ್ದ ಕೂದಲನ್ನು ಕತ್ತರಿಸಿ (ಲಿಂಗದ ಗುರುತೂ ಆದಂತದ್ದು) ಕೊಂಡು, ಕುದುರೆಯನ್ನು ಏರುತ್ತಾಳೆ. ಕುದುರೆ ತನ್ನಷ್ಟಕ್ಕೇ ದಾರಿಯಲ್ಲಿ ಸಾಗುತ್ತದೆ.
ಲಿಂಗ, ಜನಾಂಗೀಯ, ಪ್ರಾದೇಶಿಕತೆ ಇತ್ಯಾದಿಯೊಳಗಿನ ವೈವಿಧ್ಯತೆಯನ್ನು ಬಲವಾಗಿ ಪ್ರತಿಪಾದಿಸುವ ಚಿತ್ರ ಎಲ್ಲೂ ಸಹ ಒಂದು ನಿರ್ದಿಷ್ಟತೆಯನ್ನಾಗಲೀ, ಏಕರೂಪತೆಯನ್ನಾಗಲಿ ಇಷ್ಟಪಡುವುದಿಲ್ಲ. ಜತೆಗೆ ಬಲವಾಗಿ ವಿರೋಧಿಸುತ್ತದೆ. ಉದಾಹರಣೆಗೆ ಆ ಪಟಾಗೊನಿಯಾ ಪ್ರದೇಶಕ್ಕೆ ಇಬ್ಬರು ಕ್ರೈಸ್ತ ಕಾರ್ಯಕರ್ತರು ಬರುತ್ತಾರೆ. ನದಿಯ ಬಳಿ ಹಲವರನ್ನು ಧಾರ್ಮಿಕ ಕ್ರಿಯೆಗಳಲ್ಲಿ ತೊಡಗಿಕೊಂಡದ್ದನ್ನು ಕಾಣುವ ಮೋರಾ ತನ್ನ ತಮ್ಮನೊಂದಿಗೆ ನೋಡಿ ಯಾಕೆ ಹೀಗೆ ಎಂದು ಕೇಳಿಕೊಳ್ಳುತ್ತಾಳೆ.

ಇದು ನಿರ್ದೇಶಕಿಯ ಬಾಲ್ಯದ ಘಟನೆಗಳಿಂದಲೂ ಪ್ರೇರಿತವಾದಂತಿದೆ. ತನ್ನ ಉದ್ದೇಶವಾದ ಸರ್ವ ಸ್ವತಂತ್ರತೆಯ ಪರಿಕಲ್ಪನೆಯನ್ನು ಪ್ರತಿಪಾದಿಸಲು ನಿರ್ದೇಶಕಿ ಕೆಲವೊಮ್ಮೆ ನಾಟಕೀಯ ತಿರುವು, ಪಾತ್ರಗಳನ್ನು ನೀಡಿದರೂ ಎಲ್ಲೂ ತುರುಕಿದಂತೆ ಎನಿಸುವುದಿಲ್ಲ. ಉದಾಹರಣೆಗೆ ಇಬ್ಬರು ಕ್ರೈಸ್ತ ಕಾರ್ಯಕರ್ತರು ಬೈಬಲ್ ಹಿಡಿದುಕೊಂಡು ಪಟಾಗೊನಿಯಾ ಪ್ರದೇಶದ ರಸ್ತೆಯೊಂದರಲ್ಲಿ ಹಾಡು ಹೇಳಿಕೊಂಡು ಬರುತ್ತಾರೆ. ಇವರರು ಯಾಕೆ ಬಂದರು ಎಂದುಕೊಳ್ಳುವಾಗ ಆ ಪಾತ್ರವನ್ನು ಬೆಳೆಸಿ ಅವರು ಧಾರ್ಮಿಕ ಏಕರೂಪತೆಯನ್ನು ಪ್ರತಿಪಾದಿಸುವವರು ಎನ್ನುತ್ತಾರೆ.

ಮತ್ತೊಂದು ಕೌಬಾಯ್ ರೂಪದ ಮಹಿಳೆಯೊಬ್ಬಳು ಕಾಣಿಸಿಕೊಳ್ಳುತ್ತಾಳೆ. ಅವಳು ಯಾರೆಂದು ಯೋಚಿಸುವಾಗ ಮತ್ತೊಂದು ಸನ್ನಿವೇಶದಲ್ಲಿ ಮೂಲ ಸಂಸ್ಕೃತಿಯ ಕಾವಲುಗಾರಳೆಂದು ಬಿಂಬಿಸಲಾಗುತ್ತದೆ. ಶಾಲೆಯಿಂದ ಮನೆಗೆ ಬರುವಾಗ ಪಿಟೀಲಿನ ಸಂಗೀತ, ಸಾಯುತ್ತಿರುವ ಕುರಿ, ಗೌಚೋ ಮಾದರಿಯ ಒಬ್ಬ ಯುವಕ, ಒಂದು ಕುದುರೆಯನ್ನು ಕಂಡು ಹತ್ತಿರ ಬರುತ್ತಾಳೆ. ಅವನು ಸಂಗೀತ ನುಡಿಸಿ, ಸಾಯುತ್ತಿರುವ ಕುರಿಯ ಕಾಲನ್ನು ಕಟ್ಟಿ ಮೋರಾಳ ಸಹಾಯದಿಂದ ತನ್ನ ಕುದುರೆಗೆ ಏರಿಕೊಂಡು ಹೋಗುತ್ತಾನೆ. ಆಗ ತನ್ನ ಕೈಯಲ್ಲಿದ್ದ ಮೀನುಗಳನ್ನು ಅವಳಿಗೆ ಕೊಡುಗೆಯಾಗಿ ಕೊಟ್ಟು, ನೀನು ಎಂದಾದರೂ ನನ್ನ ಮನೆಗೆ ಬಾ, ನನ್ನ ಮನೆ ಬಾಗಿಲು ಸದಾ ತೆರೆದಿರುತ್ತದೆ ಎಂದು ಹೇಳಿ ಹೋಗುತ್ತಾನೆ. ಇದೂ ಸಹ, ಮೋರಾಳಲ್ಲಿದ್ದ ಬಯಕೆಯನ್ನು ಹೊರ ಹಾಕುವ ನೆವ ಎಂದು ತೋರಿಸುತ್ತದೆ. ಹಾಗೆಯೇ ನಜರೇನೋ ತನ್ನ ಮನೆಗೆ ವಾಪಸು ಬರುವಾಗ ಹಗ್ಗದಲ್ಲಿ ನೆಲಹಾಸು, ಪ್ಯಾಂಟುಗಳು ಒಣಗುತ್ತಿರುತ್ತವೆ. ಅದನ್ನು ಕಂಡು ಪತ್ನಿ ಬಂದಿದ್ದಾಳೆಂದು ಕಿಟಕಿಯಲ್ಲಿ ನೋಡುವಾಗ ಪತ್ನಿ ಹಾಡುತ್ತಾ ತನ್ನ ಕಡೆಗೇ ನೋಡುತ್ತಿರುವವಳಂತೆ ಭಾಸವಾಗುತ್ತದೆ. ಇವನನ್ನೂ ನೆರಳಿನ ನೆಲೆಯಲ್ಲೇ ತೋರಿಸುತ್ತಾ ವರ್ತಮಾನ ಮತ್ತು ಭೂತಕಾಲವೆರಡೂ ಒಂದೇ ತೆರನಾದದ್ದು ಗೌಚೋಗಳಿಗೆ ಎನ್ನುವುದನ್ನು ಸಂಕೇತಿಸುವಂತೆ ತೋರುತ್ತದೆ. ಈ ಕಲಾತ್ಮಕ ಅಭಿವ್ಯಕ್ತಿ ಇಷ್ಟವಾಯಿತು.

ಕೆಲವೊಮ್ಮೆ ಕ್ಲುಪ್ತ ಸನ್ನಿವೇಶಗಳು, ಕೆಲವು ದಿಢೀರನೆ (ಕಥೆಯ ಎಳೆಯಿಂದ ಹೊರತಾದಂತೆ ತೋರುವ) ಪಾತ್ರಗಳು ಬರುವುದರಿಂದ ಕೊಂಚ ಗೊಂದಲವಾದರೂ, ನಾಜೂಕಾಗಿ ಕಥೆ ಹೇಳಿದ್ದಾರೆ ಮಾರಿ ಅಲೆಸಾಂಡ್ರಿನಿ. ತನ್ನ ಮೊದಲ ಸನ್ನಿವೇಶದಲ್ಲೆ (ಮೋರಾ ಬೆಟ್ಟದಲ್ಲಿ ಒಂದು ಪುಟ್ಟ ಜೀವಿಯನ್ನು ಬೆನ್ನತ್ತಿಕೊಂಡು ಹೋಗುತ್ತಾಳೆ. ಹಿನ್ನೆಲೆ ಸಂಗೀತ ಜಾನಪದ ಶೈಲಿಯ ಬೀಟ್ಸ್ ಗೆ ಹೋಲುವಂತೆ ಜೋರಾಗುತ್ತದೆ. ಆ ಜೀವಿ ಕೈಗೆ ಸಿಗದೇ ಒಂದು ಬಿಲವನ್ನು ಹೊಕ್ಕುತ್ತದೆ. ಮೋರಾ ಬಿಲದ ಮಣ್ಣನ್ನು ಕೈಯಿಂದ ಅಗೆಯುತ್ತಾಳೆ) ತನ್ನ ಕಥೆಯ ನೆಲೆಯನ್ನು ಹೇಳಿಬಿಡುತ್ತಾರೆ. ವಿವಿಧ ಹೇರಿಕೆಗಳಿಂದ (ಸಂಸ್ಕೃತಿ, ನಿಯಮಗಳು ಇತ್ಯಾದಿ) ಬಂಧಿತವಾಗಿರುವ ಒಂದು ಜೀವ ತನ್ನ ಮೂಲ ನೆಲೆಯನ್ನು ಹುಡುಕುತ್ತಾ ಹೊರಡುವುದೇ ಜಹೊರಿಯ ತಿರುಳು. ಕಥೆಯಲ್ಲಿ ಜಹೊರಿ ನಜರೇನೊವಿನ ಕುದುರೆಯ ಹೆಸರು.

ಇನ್ನಷ್ಟು ಬಿಗಿಯಾದ ಸಂಕಲನಕ್ಕೆ ಅವಕಾಶವಿತ್ತು. ತನ್ನ ಮೊದಲ ಸಿನಿಮಾದಲ್ಲೇ ಮೋರಾ ಪಾತ್ರದಲ್ಲಿ ಲಾರಾಳ ಅಭಿನಯವನ್ನು ಮೆಚ್ಚಲೇಬೇಕು. ಜತೆಗೆ ವಿಶಿಷ್ಟವೆನಿಸುವ ಜಾನಪದ ಸಂಗೀತದ ಹದವನ್ನು ಮಿಶ್ರಣ ಮಾಡಿರುವುದರಿಂದ ವಿಶೇಷವೆನಿಸುತ್ತದೆ. ತಮ್ಮ ಚೊಚ್ಚಲ ಚಿತ್ರದಲ್ಲಿ ದೊಡ್ಡದೇನನ್ನೋ ಹೇಳಲು ಹೊರಟಿರುವುದು ಶ್ಲಾಘನಾರ್ಹ ಪ್ರಯತ್ನ. ನಮ್ಮ ಮೂಲವನ್ನೂ ಒಮ್ಮೆ ಹೊಕ್ಕುವಂತೆ, ಹೊಕ್ಕಲು ಪ್ರೇರೇಪಿಸುವಂತೆ ಇದೆ ಚಿತ್ರ.

ಟಾಪ್ ನ್ಯೂಸ್

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

1-asasas

Naxal ಬಾಧಿತ ಮತಗಟ್ಟೆಗಳ ಭದ್ರತೆಗೆ ಹೆಚ್ಚುವರಿ ಆದ್ಯತೆ: ಮುಲ್ಲೈ ಮುಗಿಲನ್‌

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ

D. K. Shivakumar: ಡೆತ್‌, ಬರ್ತ್‌ ಯಾವ ಟ್ಯಾಕ್ಸೂ ಇಲ್ಲ; ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Nalkane Ayama Movie Review

Nalkane Ayama Movie Review; ದೆವ್ವದ ಕಾಟದ ಹಿಂದೊಂದು ಅಸಲಿ ಆಟ!

O2 movie review

O2 movie review; ಸುಂದರ ಬೀದಿಯ ತಣ್ಣನೆಯ ಗಾಳಿಯಂತೆ…

scam kannada movie review

Scam review; ವ್ಯವಸ್ಥೆಯ ಹಿಂದಿನ ಘೋರ ದರ್ಶನ

appa i love you movie review

Appa I Love You Review; ತಂದೆ-ಮಗನ ಭಾವ ಲಹರಿ

Bharjari gandu movie review

Bharjari Gandu Review; ಹಳ್ಳಿ ಅಡ್ಡದಲ್ಲಿ ಭರ್ಜರಿ ಆ್ಯಕ್ಷನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-weweew

Congress; ತಮ್ಮ ಆಸ್ತಿ ಉಳಿಕೆಗೆ ರಾಜೀವ್‌ರಿಂದ ಉತ್ತರಾಧಿಕಾರ ಕಾಯ್ದೆ ರದ್ದು: ಪಿಎಂ

yogi-3

Congress ಬಂದರೆ ತಾಲಿಬಾನ್‌ ಶೈಲಿ ಆಡಳಿತ: ಯೋಗಿ

supreem

WhatsApp ಮೂಲಕ ವಕೀಲರಿಗೆ ಎಲ್ಲ ಮಾಹಿತಿ: ಸುಪ್ರೀಂ ಕೋರ್ಟ್‌

jairam ramesh

Wealth redistribution ಬಗ್ಗೆ ಕೈ ಪ್ರಣಾಳಿಕೆಯಲ್ಲಿ ಎಲ್ಲಿದೆ?: ಜೈರಾಂ

1-wqewq-eqw

Modi ಕೈ ಬಲಪಡಿಸಲು, ದ.ಕ. ಸಮಗ್ರ ಸುಧಾರಣೆಗಾಗಿ ಬಿಜೆಪಿಗೆ ಮತ ನೀಡಿ: ಚೌಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.