ಮಲೆನಾಡಲ್ಲಿ ಪ್ರೀತಿಯ ಅಂದ-ಚೆಂದ

ಚಿತ್ರ ವಿಮರ್ಶೆ

Team Udayavani, Oct 26, 2019, 5:02 AM IST

“ನನ್ನ ಮುಟ್ಟಿದರೆ ಕೆಟ್ಟದಾಗುತ್ತೆ…’ ಹೀಗಂತ ಚಿಕ್ಕವಳಿರುವಾಗ ಆಕೆ ಆಗಾಗ ಹೇಳುತ್ತಿರುತ್ತಾಳೆ. ಹಾಗಾಗಿ ಬಾಲ್ಯದ ಗೆಳೆಯ ಸೇರಿದಂತೆ ಯಾರೂ ಆಕೆಯನ್ನು ಮುಟ್ಟೋದಿಲ್ಲ. ಅದಕ್ಕೊಂದು ಬಲವಾದ ಕಾರಣವಿದೆ. ಕಾರಣ ತಿಳಿದುಕೊಳ್ಳೋಕೆ ಬರೋಬ್ಬಜಿ ಎರಡು ತಾಸು ತಾಳ್ಮೆ ಕಳೆದುಕೊಳ್ಳದೆ ಕೂರಬೇಕು. ಕೊನೆಗೆ ಆ ಕಾರಣಕ್ಕೆ ಉತ್ತರ ಸಿಗುತ್ತೆ. ಆ ಉತ್ತರ ತಿಳಿದುಕೊಳ್ಳುವ ಆತುರ, ಕಾತುರ, ಕುತೂಹಲವೇನಾದರೂ ಇದ್ದರೆ, ಈ ಚಿತ್ರದೊಳಗಿರುವ “ಅಂದ’ ಸವಿಯಬಹುದು. ಇಲ್ಲಿ ಕಥೆಯ ಆಶಯ ಚೆನ್ನಾಗಿದೆ. ಆದರೆ, ಅದನ್ನು ಮತ್ತಷ್ಟು ಪರಿಣಾಮಕಾರಿಯಾಗಿ ತೋರಿಸಬಹುದಿತ್ತು.

ಒಂದು ಸಂದೇಶ ತಿಳಿಸುವುದಕ್ಕೋಸ್ಕರ ನಿರ್ದೇಶಕರು ಒಂದಷ್ಟು ದೃಶ್ಯಗಳನ್ನು ಜೋಡಿಸಿಕೊಂಡು ಹೋಗಿದ್ದಾರಷ್ಟೇ. ಮೊದಲರ್ಧ ಏನಾಗುತ್ತೆ ಅಂತ ತಿಳಿದುಕೊಳ್ಳುವ ಹೊತ್ತಿಗೆ ಮಧ್ಯಂತರ ಬರುತ್ತೆ. ದ್ವಿತಿಯಾರ್ಧವೂ ಹಾಗೆ ಸಾಗಿ, ಕೊನೆಯ ಇಪ್ಪತ್ತು ನಿಮಿಷಕ್ಕೊಂದು ಟ್ವಿಸ್ಟ್‌ ಬರುತ್ತೆ. ಅದೇ ಚಿತ್ರದ ಹೈಲೈಟ್‌. ಇಲ್ಲಿ ಇನ್ನಷ್ಟು ಬಿಗಿಯಾದ ನಿರೂಪಣೆಯ ಅಗತ್ಯವಿತ್ತು. ಆರಂಭದಲ್ಲಿ ಚಿತ್ರ ನಿಧಾನವೆನಿಸಿದರೂ, ಸುಂದರ ತಾಣಗಳು ಅದನ್ನು ಮರೆಮಾಚಿಸುತ್ತವೆ. ಕಥೆಯ ಸಾರಾಂಶ ಪರವಾಗಿಲ್ಲ. ಅದನ್ನು ಇನ್ನಷ್ಟು ಗಟ್ಟಿಯಾಗಿ ಕಟ್ಟಿಕೊಡಲು ಸಾಧ್ಯವಿತ್ತು. ವಿನಾಕಾರಣ ಹಾಸ್ಯ ದೃಶ್ಯಗಳು ಎದುರಾದರೂ, ಅಷ್ಟೊಂದು ಪರಿಣಾಮಕಾರಿ ಎನಿಸುವುದಿಲ್ಲ.

ಕೆಲವು ದೃಶ್ಯಗಳ ಡೈಲಾಗ್‌ನಲ್ಲಿ ಪಂಚ್‌ ಇದೆ. ಅದು ಬಿಟ್ಟರೆ, ಹೆಚ್ಚೇನೂ ನಿರೀಕ್ಷಿಸುವಂತಿಲ್ಲ. ಇಡೀ ಸಿನಿಮಾ ನೋಡಿದವರಿಗೆ ಮಲೆನಾಡಲ್ಲೇ ಕುಳಿತ ಅನುಭವ ಆಗುತ್ತೆ ಎಂಬುದೊಂದೇ ಸಮಾಧಾನ. ಹಸಿರು ಕಾನನ, ಬೆಟ್ಟ, ಹರಿಯೋ ನೀರು, ಮಂಜು ಮುಸುಕಿದ ಗುಡ್ಡದ ಸಾಲುಗಳು ಒಂದಷ್ಟು ಖುಷಿಕೊಡುತ್ತವೆ ಅಂದರೆ, ಅದು ಛಾಯಾಗ್ರಾಹಕರ ಕೈಚಳಕ. ಇನ್ನು, ಚಿತ್ರದ ಎರಡು ಹಾಡುಗಳು ವೇಗಕ್ಕೊಂದು ಹೆಗಲು ಕೊಟ್ಟಂತಿವೆ. ಸಿನಿಮಾದಲ್ಲಿ ಹೊಡಿ, ಬಡಿ, ಕಡಿ ಅಂಶಗಳಿಲ್ಲದೆ, ಅಲ್ಲಲ್ಲಿ ಮಾತಿನ ಕಚಗುಳಿ ನಡುವೆ ನೋಡಿಸಿಕೊಂಡು ಹೋಗುತ್ತಲೇ ಸಣ್ಣದ್ದೊಂದು ಭಾವುಕತೆಗೂ ಕಾರಣವಾಗುತ್ತೆ. ಅದೇ ಸಿನಿಮಾದ ಟೆಸ್ಟು ಮತ್ತು ಟ್ವಿಸ್ಟು. ಅದನ್ನು ತಿಳಿಯುವ ಕುತೂಹಲವಿದ್ದರೆ, ಹೊಸಬರ “ಅಂದ’ವನ್ನು ಕಾಣಬಹುದು.

ಅವಳು ಅಮ್ಮು. ಅವನು ಮೋಹನ. ಇಬ್ಬರೂ ಚೈಲ್ಡ್‌ವುಡ್‌ ಫ್ರೆಂಡ್ಸ್‌. ಆಕೆ ಆಗಾಗ ಇನ್ನಿಲ್ಲದ ಸುಳ್ಳುಗಳ ಕಂತೆ ಕಟ್ಟುವ ಹುಡುಗಿ. ತನ್ನ ಹುಡುಗಿ ಹೇಳಿದ್ದೇ ನಿಜ ಎಂದುಕೊಳ್ಳುವ ಹುಡುಗ ಅವನು. ಅದು ದೊಡ್ಡವರಾದ ಮೇಲೂ ಮುಂದುವರೆಯುತ್ತಲೇ ಇರುತ್ತೆ. ಈ ನಡುವೆ, ಆಕೆ ಆಗಾಗ ಅವನಿಂದ ಕಾಣೆಯಾಗುತ್ತಲೇ ಇರುತ್ತಾಳೆ. ಪುನಃ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ಅಲ್ಲೊಂದು ಸುಳ್ಳಿನ ಸರಮಾಲೆ ಪೋಣಿಸಿ, ಅವನನ್ನು ನಂಬಿಸುತ್ತಿರುತ್ತಾಳೆ. ಆದರೆ, ಆಕೆ ಯಾಕೆ ಆಗಾಗ ಕಾಣೆಯಾಗುತ್ತಾಳೆ, ಚಿಕ್ಕಂದಿನಿಂದಲೂ ಅವನಿಗೆ ಸುಳ್ಳನ್ನು ಹೇಳುವುದೇಕೆ ಎಂಬುದೇ ಚಿತ್ರದ ಗುಟ್ಟು.

ಆಕೆಗೊಂದು ಖಾಯಿಲೆ ಇರುತ್ತೆ. ಅದು ಏನು, ಯಾವ ಕಾರಣಕ್ಕೆ ಅವಳನ್ನು ಅದು ಆವರಿಸಿಕೊಂಡಿರುತ್ತೆ ಎಂಬುದನ್ನು ನಿರ್ದೇಶಕರು ಕೊನೆಯವರೆಗೂ ಸಸ್ಪೆನ್ಸ್‌ನಲ್ಲಿಟ್ಟು ಕ್ಲೈಮ್ಯಾಕ್ಸ್‌ನಲ್ಲಿ ಬಿಚ್ಚಿಡುತ್ತಾರೆ. ಆ ಸತ್ಯವೇ ಸಿನಿಮಾದ ಸತ್ವ. ನಾಯಕ ಜೈ ಸಿಕ್ಕ ಪಾತ್ರವನ್ನು ನೀಟಾಗಿ ನಿಭಾಯಿಸಿದ್ದಾರೆ. ಭಾವುಕ ಸನ್ನಿವೇಶದಲ್ಲಿನ್ನೂ ಪಳಗಬೇಕಿದೆ. ಅನೂಷ ಪಾತ್ರವನ್ನು ಜೀವಿಸಿದ್ದಾರೆ. ಗ್ಲಾಮರ್‌ಗೂ, ಗ್ರಾಮರ್‌ಗೂ ಹೊಂದಿಕೊಂಡಿದ್ದಾರೆ. ಉಳಿದಂತೆ ಹರೀಶ್‌ ರೈ, ಶ್ರೀಧರ್‌ ಕೂಡ ಇರುವಷ್ಟು ಸಮಯ ಇಷ್ಟವಾಗುತ್ತಾರೆ. ವಿಕ್ರಮ್‌ ವರ್ಮನ್‌ ಸಂಗೀತದ ಎರಡು ಹಾಡು ಗುನುಗುವಂತಿವೆ. ಗುರುಕಿರಣ್‌ ಹಿನ್ನೆಲೆ ಸಂಗೀತ ಪೂರಕವಾಗಿದೆ. ಹರೀಶ್‌ ಎನ್‌.ಸೊಂಡೇಕೊಪ್ಪ ಛಾಯಾಗ್ರಹಣ ಮಲೆನಾಡ ಅಂದವನ್ನು ಹೆಚ್ಚಿಸಿದೆ.

ಚಿತ್ರ: ಅಂದವಾದ
ನಿರ್ಮಾಣ: ಡಿ.ಆರ್‌.ಮಧು ಜಿ. ರಾಜ್‌
ನಿರ್ದೇಶನ: ಚಲ
ತಾರಾಗಣ: ಜೈ, ಅನುಷಾ ರಂಗನಾಥ್‌, ಹರೀಶ್‌ ರೈ, ಶ್ರೀಧರ್‌, ಮಂಜಯ್ಯ, ರೇಖಾ ಸಾಗರ್‌, ರೋಜಾ ಇತರರು.

* ವಿಭ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ