ರಹಸ್ಯ ಬೇಧಿಸಲು ಮೂರನೆಯ ಕಣ್ಣು ತೆರೆಯಿರಿ!

Team Udayavani, Sep 2, 2018, 11:11 AM IST

“ಯೂ ಆರ್‌ ದಿ ಕಿಲ್ಲರ್‌ ದೇವ್‌. ಯೂ ಆರ್‌ ದಿ ಕಿಲ್ಲರ್‌ …’ ಹಾಗೆ ತನ್ನ ಸ್ನೇಹಿತನೊಬ್ಬ ಅರಚುವವರೆಗೂ ದೇವ್‌ಗೆ ತಾನು ಅಷ್ಟೊಂದು ಮಂದಿಯನ್ನು ಕೊಂದಿರಬಹುದು ಎಂದು ಗೊತ್ತಿರುವುದಿಲ್ಲ. ದೇವ್‌ ಒಬ್ಬ ಅಂಡರ್‌ಕವರ್‌ ಕಾಪ್‌. ಅದೆಷ್ಟೋ ಪಾತಕಿಗಳನ್ನು ಮಟ್ಟ ಹಾಕಿರುತ್ತಾನೆ. ಅದೊಂದು ದಿನ ಅನಿರೀಕ್ಷಿತವಾಗಿ ಅವನ ತಮ್ಮನೇ ಕೊಲೆಯಾಗುತ್ತಾನೆ. ಬಹಳ ಪ್ರೀತಿಸುವ ತನ್ನ ಸಹೋದರ ಸತ್ತುಹೋಗಿದ್ದಾನೆ ಎಂದು ಅರಗಿಸಿಕೊಳ್ಳುವುದೇ ದೇವ್‌ಗೆ ಕಷ್ಟವಾಗುತ್ತದೆ.

ತನ್ನ ತಮ್ಮನನ್ನು ಕೊಂದವರ್ಯಾರು ಎಂದು ಹುಡುಕಹೊರಡುತ್ತಾನೆ ದೇವ್‌. ತನ್ನ ತಮ್ಮನಿಗೆ ಯಾರಾದರೂ ವೈರಿಗಳಿದ್ದಾರಾ ಅಥವಾ ತನ್ನ ವೈರಿಗಳೇ ಯಾರಾದರೂ ಅವನನ್ನು ಕೊಂದಿರಬಹುದಾ ಎಂದು ಒಬ್ಬೊಬ್ಬರನ್ನೇ ಬೆನ್ನತ್ತುತ್ತಿದ್ದಂತೆಯೇ, ಅವರೂ ಸಹ ಹೆಣವಾಗುತ್ತಿರುತ್ತಾರೆ. ಈ ಸರಣಿ ಕೊಲೆಗಳ ಹಿಂದೆ ಯಾರೋ ಇದ್ದಾರೆ ಎನ್ನುವಷ್ಟರಲ್ಲೇ, ಅವನ ಸ್ನೇಹಿತ ಬಂದು, ಈ ಕೊಲೆಗಳಿಗೆ ಕಾರಣ ನೀನೇ ಎಂದು ಎಚ್ಚರಿಸುತ್ತಾನೆ. ಅದಕ್ಕೆ ಸರಿಯಾಗಿ ಅವನಿಗೆ ಸಿ.ಪಿ.ಎಸ್‌ ಎಂಬ ವಿಚಿತ್ರ ರೋಗವಿರುತ್ತದೆ.

ಒತ್ತಡದಲ್ಲಿರುವಾಗ ಅವನು ಏನು ಮಾಡುತ್ತಾನೋ ಅವನಿಗೇ ಗೊತ್ತಿರುವುದಿಲ್ಲ. ಇದು ಅವನೇ ಮಾಡಿದ ಕೊಲೆಗಳಾ ಅಥವಾ ಅವನ ರೋಗವನ್ನು ಮುಂದಿಟ್ಟುಕೊಂಡು ಬೇರೆ ಯಾರಾದರೂ ಕೊಲೆಗಳನ್ನು ಮಾಡುತ್ತಿರುತ್ತಾರಾ? ರಹಸ್ಯ ಗೊತ್ತಾಗಬೇಕಾದರೆ, “ತ್ರಾಟಕ’ ನೋಡಬೇಕು. “ತ್ರಾಟಕ’ ಒಂದು ಕ್ರೈಮ್‌ ಥ್ರಿಲ್ಲರ್‌. ಜೊತೆಗೆ ಮರ್ಡರ್‌ ಮಿಸ್ಟರಿ ಬೇರೆ. ಸಾಮಾನ್ಯವಾಗಿ ಮರ್ಡರ್‌ ಮಿಸ್ಟ್ರಿ ಚಿತ್ರಗಳಲ್ಲಿ ಕೊಲೆಗಳಾಗುತ್ತಾ ಹೋಗುತ್ತವೆ ಮತ್ತು ಒಬ್ಬ ತನಿಖಾಧಿಕಾರಿ ತನಿಖೆ ಮಾಡುತ್ತಾ ಹೋಗುತ್ತಾನೆ.

ಆದರೆ, ತನಿಖಾಧಿಕಾರಿಯೇ ಆ ಕೊಲೆಗಳ ಹಿಂದಿದ್ದರೆ? ಹಾಗಂತ ಅವನೇ ಕೊಲೆಗಾರ ಇರಬಹುದು ಎಂಬ ತೀರ್ಮಾನಕ್ಕೆ ಬರುವುದು ಕಷ್ಟ. ಇಲ್ಲಿ ಇನ್ನೂ ಒಂದಿಷ್ಟು ಕಾಣದ ಕೈಗಳಿವೆ. ಆದರೆ, ಆ ಕಾಣದ ಕೈ ಯಾರದ್ದು ಅಂತ ಗೊತ್ತಾಗಬೇಕಿದ್ದರೆ, ಚಿತ್ರದ ಕ್ಲೈಮ್ಯಾಕ್ಸ್‌ವರೆಗೂ ಕಾಯಬೇಕು. ಅಲ್ಲಿಯವರೆಗೂ ಶಿವಗಣೇಶ್‌, ಕೊಲೆಗಾರ ಯಾರು ಎಂದು ಹೇಳದೆ ಕೊನೆಯವರೆಗೂ ಸತಾಯಿಸಿಸುತ್ತಾರೆ. ಆ ಮಟ್ಟಿಗಿನ ಒಂದು ಚಿತ್ರಕಥೆ ಮಾಡಿಕೊಂಡಿದ್ದಾರೆ ನಿರ್ದೇಶಕ ಶಿವಗಣೇಶ್‌.

ಅಗಾಥಾ ಕ್ರಿಸ್ಟಿ ಅವರ ಮಿಸ್ಟ್ರಿ ಕಾದಂಬರಿಗಳನ್ನು ನೆನಪಿಸುವಂತಹ ಚಿತ್ರಕಥೆ ಇಲ್ಲಿದೆ. ಹಂತಹಂತವಾಗಿ ಕೊಲೆಗಾರನಷ್ಟೇ ಅಲ್ಲ, ಮೋಟಿವ್‌ ಸಹ ಬದಲಾಗುತ್ತಿರುತ್ತಾನೆ. ಕೊನೆಗೆ ಯಾರು ಕೊಲೆಗಾರ ಎಂದು ಗೊತ್ತಾದಾಗ ನಿಜಕ್ಕೂ ಪ್ರೇಕ್ಷಕ ಶಾಕ್‌ ಆಗುತ್ತಾನೆ. ಅದು ಗೊತ್ತಾಗಬೇಕಿದ್ದರೆ ನಾಯಕನ ತರಹ ನಿಮ್ಮ ತ್ರಾಟಕ ತೆರೆಯಬೇಕು (ಮೂರನೆಯ ಕಣ್ಣು ). ಶಿವಗಣೇಶ್‌ ಚಿತ್ರಕಥೆಯನ್ನು ಬಹಳ ಚೆನ್ನಾಗಿ ಮಾಡಿಕೊಂಡಿದ್ದಾರೆ ಎನ್ನುವುದು ನಿಜ. ಆದರೆ, ಅದೇ ಕೆಲವೊಮ್ಮೆ ಮೈನಸ್‌ ಆಗುವುದು ನಿಜ.

ಪ್ರೇಕ್ಷಕರನ್ನು ಗೊಂದಲಗೊಳಿಸುವ ನಿಟ್ಟಿನಲ್ಲಿ ಅವರು ಹಲವು ಟ್ವಿಸ್ಟ್‌ಗಳನ್ನು ಕೊಡುತ್ತಾ ಹೋಗುತ್ತಾರೆ. ಆದರೆ, ಆ ಟ್ವಿಸ್ಟ್‌ಗಳಿಗೆ ಸಮರ್ಪಕವಾದ ಸಮಜಾಯಿಷಿಗಳಿಲ್ಲ. ಕೆಲವೊಮ್ಮೆ ಸಮಜಾಯಿಷಿಗಳಿದ್ದರೂ ಅದು ಪ್ರೇಕ್ಷಕನ ಅರಿವಿಗೆ ಬರದಷ್ಟು ವೇಗವಾಗಿ ಮಾಯವಾಗುತ್ತದೆ. ಹಾಗಾಗಿ ಚಿತ್ರ ಮುಗಿದರೂ ಪ್ರೇಕ್ಷಕನನ್ನು ಕೆಲವು ಗೊಂದಲುಗಳು ಕಾಡುವುದು ಸಹಜ. ಅದು ಬಿಟ್ಟರೆ, ಈ ಚಿತ್ರದಲ್ಲಿ ತುಂಬಾ ತಪ್ಪುಗಳನ್ನು ಹುಡುಕುವುದು ಕಷ್ಟ.

ಇದೇ ಮೊದಲ ಬಾರಿಗೆ ನಾಯಕನಾಗಿ ನಟಿಸಿರುವ ರಾಹುಲ್‌ ಐನಾಪುರ, ಪಾತ್ರಕ್ಕೆ ತಕ್ಕಂತೆ ಸಾಧ್ಯವಾದಷ್ಟೂ ನಿರ್ಭಾವುಕರಾಗಿ ನಟಿಸಿದ್ದಾರೆ. ಇನ್ನು ಯಶವಂತ್‌ ಶೆಟ್ಟಿ, ಅಜಿತ್‌ ಜಯರಾಜ್‌ ಎಲ್ಲರೂ ತಮ್ಮ ಪಾತ್ರಗಳನ್ನು ಚೆನ್ನಾಗಿ ನಿಭಾಯಿಸಿದ್ದಾರೆ. 10 ವರ್ಷಗಳ ನಂತರ ಬಣ್ಣ ಹಚ್ಚಿರುವ ಹೃದಯ ಗಮನಸೆಳೆಯುತ್ತಾರೆ. ಚಿತ್ರದಲ್ಲಿ ಗಮನಸೆಳೆಯುವ ಮತ್ತೂಬ್ಬರೆಂದರೆ ಅದು ಛಾಯಾಗ್ರಾಹಕ ವಿನೋದ್‌ ಭಾರತಿ. ಕತ್ತಲಲ್ಲೇ ಬಹುತೇಕ ಚಿತ್ರ ನಡೆಯಲಿದ್ದು, ಇಡೀ ಪರಿಸರವನ್ನು ಬಹಳ ಚೆನ್ನಾಗಿ ಹಿಡಿದಿಟ್ಟಿದ್ದಾರೆ. ಅರುಣ್‌ ಸುರಧಾ ಅವರ ಸಂಗೀತದಲ್ಲಿ ಎರಡು ಹಾಡುಗಳು ಖುಷಿಕೊಡುತ್ತವೆ.

ಚಿತ್ರ: ತ್ರಾಟಕ
ನಿರ್ಮಾಣ: ರಾಹುಲ್‌ ಐನಾಪುರ್‌
ನಿರ್ದೇಶನ: ಶಿವಗಣೇಶ್‌
ತಾರಾಗಣ: ರಾಹುಲ್‌ ಐನಾಪುರ್‌, ಅಜಿತ್‌ ಜಯರಾಜ್‌, ಯಶವಂತ್‌ ಶೆಟ್ಟಿ, ಹೃದಯ, ಭವಾನಿ ಪ್ರಕಾಶ್‌ ಮುಂತಾದವರು

* ಚೇತನ್‌ ನಾಡಿಗೇರ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಇದು ಪಾಸಿಟಿವ್‌ ರೌಡಿಸಂ ... ಹೀಗೆ ಹೇಳುತ್ತಲೇ ಮುದ್ದಣ್ಣ ಸಮಾಜದ ದುಷ್ಟರ ವಿರುದ್ಧ ಸಮರ ಸಾರುತ್ತಾನೆ. ಮೇಲ್ನೋಟಕ್ಕೆ ಮುದ್ದಣ್ಣ ಒಬ್ಬ ಗ್ಯಾಂಗ್ಸ್‌ಸ್ಟಾರ್‌....

  • ಸಾಮಾನ್ಯವಾಗಿ ಕೈಕೊಟ್ಟು ಹೋದ ಹುಡುಗಿ ಬಗ್ಗೆ, ಲವ್‌ ಫೇಲ್ಯೂರ್‌ ಆದ ಹುಡುಗರ ಬಗ್ಗೆ ಕಥೆ ಹೇಳುವ ಲೆಕ್ಕವಿಲ್ಲದಷ್ಟು ಸಿನಿಮಾಗಳನ್ನು ನೀವು ನೋಡಿರುತ್ತೀರಿ....

  • "ಚಿನ್ನಾ, ಜೀವನದಲ್ಲಿ ಎದ್ದು-ಬಿದ್ದು ನಿಂತಿರೋ ಜೀವ ಇದು. ಬಲಿಪಾಡ್ಯಮಿ ನನ್ನದೇ, ದೀಪಾವಳಿಯೂ ನನ್ನದೇ...' "ಚಿಕ್ಕಂದಿನಿಂದಲೂ ನನಗೆ ಹೊಡೆದಾಟ ಅಂದರೆ ಇಷ್ಟ ಇಲ್ಲ....

  • ಮಕ್ಕಳಿಲ್ಲದ ಬಡ ಕುಟುಂಬ ಮತ್ತು ಶ್ರೀಮಂತ ಕುಟುಂಬ ಎರಡು ಜೋಡಿ ಬಾಬಾ ಮಂದಿರಲ್ಲಿ ಪ್ರಾರ್ಥನೆ ಮುಗಿಸಿ ಹೊರಬರುತ್ತಿದ್ದಂತೆ, ದೈವಾನುಗ್ರಹವೆಂಬಂತೆ ಎರಡೂ ಕುಟುಂಬದಲ್ಲೂ...

  • "ಮೊದಲ ನೋಟಕ್ಕೆ ಇಷ್ಟವಾಗುವ ಹುಡುಗಿಯೊಬ್ಬಳ ಪ್ರೀತಿ ಪಡೆಯೋಕೆ ಅವನು ಒಂದು ಸುಳ್ಳು ಹೇಳುತ್ತಾನೆ. ಅದು ನೂರಾರು ಸುಳ್ಳುಗಳಾಗುತ್ತವೆ. ಅವನ ಪ್ರೀತಿಯೂ ಸಿಗುತ್ತದೆ....

ಹೊಸ ಸೇರ್ಪಡೆ