ಮುಕ್ತಿಯೊಳು ದೇಶಭಕ್ತಿ

Team Udayavani, Aug 25, 2018, 11:33 AM IST

ಒಂದು ಕಡೆ ಹೊದ್ದು ಮಲಗಿರುವ ಬಡತನ ಮತ್ತು ದಾರಿದ್ರé. ಇನ್ನೊಂದು ಕಡೆ ತುಂಬಿ ತುಳುಕುತ್ತಿರುವ ಭ್ರಷ್ಟಾಚಾರ ಮತ್ತು ಶ್ರೀಮಂತಿಕೆಯ ದಬ್ಟಾಳಿಕೆ. ಇವೆರೆಡಕ್ಕೂ “ಮುಕ್ತಿ’ ಕೊಡಲು ಹೋರಾಟದ ಕಿಚ್ಚು ಹಚ್ಚುವ ಯೋಧನ ಮುಂದಾಲೋಚನೆ ಫ‌ಲಿಸುತ್ತಾ, ಇಲ್ಲವಾ? ಅದೇ “ಮುಕ್ತಿ’ಯೊಳಗಿನ ಗುಟ್ಟು. ಬಡತನ ಇಲ್ಲದ ಹಳ್ಳಿಗಳಿಲ್ಲ. ಭ್ರಷ್ಟತೆ ಕಾಣದ ಊರುಗಳಿಲ್ಲ. ಊರು-ಕೇರಿ ಅಂದಮೇಲೆ ಪುಂಡರು, ಸಮಯ ಸಾಧಕರು, ವಿದ್ಯಾವಂತರು, ದೇಶಪ್ರೇಮಿಗಳು, ಸಾಧಿಸುವ ಛಲವುಳ್ಳ ಮನಸ್ಸುಗಳು ಸಹಜ.

ಅಂಥದ್ದೇ ಪಾತ್ರಗಳ ಮೂಲಕ ನೈಜ ಚಿತ್ರಣ ಕಟ್ಟಿಕೊಟ್ಟಿರುವ ಸಣ್ಣ ಪ್ರಯತ್ನ ಇಲ್ಲಿದೆ. ಹಾಗಂತ, ಇಡೀ ಚಿತ್ರದುದ್ದಕ್ಕೂ ಎಲ್ಲವೂ ಸಾರ್ಥಕ ಅಂದುಕೊಳ್ಳುವಂತಿಲ್ಲ. ಇಲ್ಲಿ ವೀರ ಮರಣ ಹೊಂದಿದ ಯೋಧ ಹನುಮಂತಪ್ಪ ಕೊಪ್ಪದ್‌ ಅವರ ಆಶಯಗಳನ್ನು ತೋರಿಸಲಾಗಿದೆ. ಅಷ್ಟೇ ಅಲ್ಲ, ಅದನ್ನು ಸಾಕಾರಗೊಳಿಸುವ ಮೂಲಕ ಅವರ ಕನಸ್ಸನ್ನು ತೆರೆಯ ಮೇಲೆ ನನಸು ಮಾಡಿರುವುದೇ ನಿರ್ದೇಶಕರ ಹೆಚ್ಚುಗಾರಿಕೆ. 

ಅದನ್ನು ಹೊರತುಪಡಿಸಿದರೆ, “ಮುಕ್ತಿ’ಯಲ್ಲಿ ದೇಶಭಕ್ತಿ ಕಾಣಬಹುದು. ಆಳುವವರ ಶಕ್ತಿಯನ್ನೂ ನೋಡಬಹುದು. ಅಸಹಾಯಕರ ಯುಕ್ತಿಯನ್ನೂ ಮೆಚ್ಚಬಹುದು. ಇಲ್ಲಿ ಕಮರ್ಷಿಯಲ್‌ ಅಂಶಗಳಿಲ್ಲ. ಇಲ್ಲೊಂದು ಆಶಯವಿದೆ. ಆಳುವವರ ಮತ್ತು ಅಳುವವರ ನಡುವೆ ಹೋರಾಟವಿದೆ. ಸಮಾನ ಮನಸ್ಸುಗಳ ಸೂಕ್ಷ್ಮತೆ ಇದೆ. ಹಿಡಿಯಷ್ಟು ನೆಮ್ಮದಿ ಇದೆ, ಎದೆಭಾರವಾಗಿಸುವಷ್ಟು ದುಃಖ, ದುಮ್ಮಾನ ತುಂಬಿದೆ. ಅಲ್ಲಲ್ಲಿ ಭಾವುಕತೆ ಹೆಚ್ಚಿದೆ.

ಭಾವನಾತ್ಮಕ ಸಂಬಂಧಗಳ ಮಿಡಿತವಿದೆ. ಇವಿಷ್ಟರ ಸುತ್ತ ಸುತ್ತುವ ಕಥೆಯಲ್ಲಿ ಇನ್ನಷ್ಟು ಗಟ್ಟಿತನ ಇರಬೇಕಿತ್ತು. ಎಲ್ಲಕ್ಕಿಂತಲೂ ಹೆಚ್ಚಾಗಿ, ದ್ವಿತಿಯಾರ್ಧದಲ್ಲಿರುವ ಹಿಡಿತ ಮೊದಲರ್ಧದಲ್ಲಿ ಇರಬೇಕಿತ್ತು. ಆರಂಭದಲ್ಲಿ ತುಂಬಾ ನಿಧಾನ ಎನಿಸುವ ಚಿತ್ರ, ನೋಡುಗರ ತಾಳ್ಮೆ ಪರೀಕ್ಷಿಸುತ್ತದೆ. ಎಲ್ಲೋ ಒಂದೊಂದು ಕಡೆ ವಿನಾಕಾರಣ ಹಾಸ್ಯ ತೂರಿಬಂದು ಇನ್ನಷ್ಟು ತಾಳ್ಮೆಗೆಡಿಸುತ್ತದೆ. ದ್ವಿತಿಯಾರ್ಧದಲ್ಲಿ ಒಂದಷ್ಟು ಬಿಗಿಯಾದ ನಿರೂಪಣೆ ಇದೆ.

ಹಾಗೆ ನೋಡಿದರೆ, ದ್ವಿತಿಯಾರ್ಧದಲ್ಲೇ ಹನುಮಂತಪ್ಪ ಕೊಪ್ಪದ್‌ ಅವರ ಆಶಯಗಳೇನು, ಅವರ ಕನಸು ನನಸಾಗುತ್ತದೆಯೋ ಇಲ್ಲವೋ ಎಂಬುದಕ್ಕೆ ಉತ್ತರ ಕೊಡುತ್ತಾ ಹೋಗುತ್ತಾರೆ ನಿರ್ದೇಶಕರು. ಮೊದಲೇ ಹೇಳಿದಂತೆ, ಇಲ್ಲಿ ಭ್ರಷ್ಟಸಮಾಜದೊಳಗೆ ನರಳುವ ಮನಸ್ಸುಗಳ ತಲ್ಲಣವನ್ನು ಸೂಕ್ಷ್ಮವಾಗಿ ತೋರಿಸುವ ಪ್ರಯತ್ನ ಮಾಡಲಾಗಿದೆ. ಕೆಲ ದೃಶ್ಯಗಳಿಗೆ ಇನ್ನಷ್ಟು ಕತ್ತರಿ ಬಿದ್ದಿದರೆ, ನೋಡುವ ಮನಸ್ಸುಗಳ ಒದ್ದಾಟಕ್ಕೊಂದು “ಮುಕ್ತಿ’ಯಾದರೂ ಸಿಗುತ್ತಿತ್ತು.

ಆದರೆ, ಅಂತಹ ಪ್ರಯತ್ನಕ್ಕೆ ನಿರ್ದೇಶಕರು ಮುಂದಾಗಿಲ್ಲ. ಆದರೆ, ಒಂದು ಹಳ್ಳಿ ಪರಿಸರ, ಭಾಷೆ, ಪಾತ್ರಗಳನ್ನು ಜೋಡಿಸಿಕೊಟ್ಟಿರುವ ಪ್ರಯತ್ನ ತಕ್ಕಮಟ್ಟಿಗೆ ಮೆಚ್ಚುಗೆಯಾಗುತ್ತೆ. ಉಳಿದಂತೆ, ಇನ್ನಷ್ಟು ಬಿಗಿ ನಿರೂಪಣೆ ಇದ್ದಿದ್ದರೆ, ಕೆಲವೆಡೆ ಅನಗತ್ಯ ಚಿತ್ರಣವನ್ನು ಕೈ ಬಿಟ್ಟಿದ್ದರೆ “ಮುಕ್ತಿ’ ಮೇಲೆ ಭಕ್ತಿ ಹೆಚ್ಚುತ್ತಿತ್ತು. ಅಂತಹ ಯಾವ ಗುಣಲಕ್ಷಣಗಳು ವಕೌಟ್‌ ಆಗಿಲ್ಲ. ವೀರ ಯೋಧ ಹನುಮಂತಪ್ಪ ಕೊಪ್ಪದ್‌ ಅವರ ಕನಸೇನಾಗಿತ್ತು ಅನ್ನುವುದರ ಬಗ್ಗೆ ಕುತೂಹಲವಿದ್ದರೆ, “ಮುಕ್ತಿ’ ದರ್ಶನ ಪಡೆಯಬಹುದು.

ನಕುಲ್‌ ಗೋವಿಂದ್‌ ಜೋಗಯ್ಯ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಲ್ಲಲ್ಲಿ ಭಾವುಕತೆ ಹೆಚ್ಚಿಸುವ ಮೂಲಕ ಒಬ್ಬ ಅಸಹಾಯಕ ವ್ಯಕ್ತಿಯಾಗಿ ಜೀವಿಸಿದ್ದಾರೆ. ರಘರಂಜನ್‌ ಪುಂಡನಾಗಿ ಗಮನಸೆಳೆದರೆ, ಭಾನುಶ್ರೀ ಅಮ್ಮನಾಗಿ, ಪತ್ನಿಯಾಗಿ ಗಮನಸೆಳೆಯುತ್ತಾರೆ. ಉಳಿದಂತೆ ಬೇಬಿ ಪವಿತ್ರಾ, ಶ್ರೀಧರ್‌, ಸತೀಶ, ದೀಪಿಕಾ ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಹೇಮಂತ್‌ಕುಮಾರ್‌ ಸಂಗೀತಕ್ಕಿನ್ನೂ ಸ್ವಾದ ಇರಬೇಕಿತ್ತು. ಸಿದ್ದು ಛಾಯಾಗ್ರಹಣದಲ್ಲಿ ಹಳ್ಳಿಯ ನೈಜ ಚಿತ್ರಣವಿದೆ.

ಚಿತ್ರ: ಮುಕ್ತಿ
ನಿರ್ದೇಶನ: ಕೆ.ಶಂಕರ್‌
ನಿರ್ಮಾಣ: ಸಿ.ಕೆ.ರಾಮಮೂರ್ತಿ
ತಾರಾಗಣ: ನಕುಲ್‌ ಗೋವಿಂದ್‌, ಭಾನುಶ್ರೀ, ರಘುರಂಜನ್‌, ಮೂರ್ತಿ, ಬೇಬಿ ಪವಿತ್ರ, ದೀಪಿಕಾ ಮುಂತಾದವರು

* ವಿಜಯ್‌ ಭರಮಸಾಗರ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ