ನಿರೀಕ್ಷೆಗೆ ಹುಳಿ ಹಿಂಡಿದ ಫ‌ಸ್ಟ್‌ನೈಟ್‌ ಕಥೆ

ಚಿತ್ರ ವಿಮರ್ಶೆ

Team Udayavani, Jun 8, 2019, 3:00 AM IST

ಅವಳು ಸಾಫ್ಟ್ವೇರ್‌ ಇಂಜಿನಿಯರ್‌ ಹುಡುಗಿ ವೈಶಾಲಿ. ಮಾಡುವ ಕೆಲಸ ಸಾಫ್ಟ್ವೇರ್‌ ಆದ್ರೂ ಆಕೆಯ ನಡೆ-ನುಡಿ ಎರಡೂ ಬೋಲ್ಡ್‌ ಆ್ಯಂಡ್‌ ಖಡಕ್‌. ಇವನು ಕೂಡ ಸಾಫ್ಟ್ವೇರ್‌ ಹುಡುಗ ಕಾರ್ತಿಕ್‌. ಆದ್ರೆ ಸಾಫ್ಟ್ವೇರ್‌ನಂತೆಯೇ ಸೌಮ್ಯ ಸ್ವಭಾವ ಇವನದ್ದು. ವೈಶಾಲಿ – ಕಾರ್ತಿಕ್‌ ಇಬ್ಬರೂ ಪ್ರೀತಿಸಿ ಮದುವೆಯಾದರೂ, ಇಬ್ಬರದ್ದೂ ಎರಡು ವಿಭಿನ್ನ ಮತ್ತು ವಿರುದ್ಧ ವ್ಯಕ್ತಿತ್ವ ಹೊಂದಿರುವಂಥವರು.

ಇಬ್ಬರೂ ತಮ್ಮ ಮದುವೆಯ ಮೊದಲ ರಾತ್ರಿಯನ್ನು ಅವಿಸ್ಮರಣೀಯವಾಗಿಸಲು ಗೋವಾದ ಹೋಟೆಲ್‌ ಒಂದಕ್ಕೆ ಬರುತ್ತಾರೆ. ಹೀಗೆ ಬರುವ ಈ ಜೋಡಿಗೆ ಅಲ್ಲಿ ಒಂದೊಂದೆ ವಿಘ್ನಗಳು ಎದುರಾಗಲು ಶುರುವಾಗುತ್ತದೆ. ಸಂತೋಷ ಹುಡುಕಿಕೊಂಡು ಬಂದ ಜೋಡಿ ಅಲ್ಲಿ ಅನೇಕ ಪರಿಪಾಟಲುಗಳನ್ನು ಅನುಭವಿಸುತ್ತಾರೆ. ಕೊನೆಗೆ ಅಂದುಕೊಂಡಂತೆ ಈ ಜೋಡಿಯ ಮೊದಲ ರಾತ್ರಿ ಅವಿಸ್ಮರಣೀಯವಾಗುದೆಯಾ? ಅನ್ನೋದೆ ಚಿತ್ರದ ಕಥಾಹಂದರ.

“ಮಜ್ಜಿಗೆ ಹುಳಿ’ ಅಂದಾಕ್ಷಣ ಅನೇಕರಿಗೆ ಇದೊಂದು ಟೇಸ್ಟಿ ಆ್ಯಂಡ್‌ ಕ್ಯಾಚಿ ಟೈಟಲ್‌ ಎನಿಸದೆ ಇರದು. ಟೈಟಲ್‌ನಲ್ಲಿ ಇರುವಂತೇ ಟೇಸ್ಟಿ ಆ್ಯಂಡ್‌ ಕ್ಯಾಚಿ ಅಂಶಗಳು ಚಿತ್ರದಲ್ಲೂ ಇರಬಹುದು ಎಂಬ ನಿರೀಕ್ಷೆ ಇಟ್ಟುಕೊಂಡು ಥಿಯೇಟರ್‌ಗೆ ಬಂದರೆ, ಆಡಿಯನ್ಸ್‌ ಟೇಸ್ಟ್‌ಲೆಸ್‌ “ಮಜ್ಜಿಗೆ ಹುಳಿ’ ಸವಿಯಬೇಕಾಗುತ್ತದೆ. ಕೇವಲ ಒಂದು ರೂಮ್‌ನಲ್ಲಿ ರಾತ್ರಿ ಬೆಳಗಾಗುವುದರೊಳಗೆ ನಡೆಯುವ ಸನ್ನಿವೇಶಗಳು, ಅಲ್ಲಿಗೆ ಬರುವ ಹತ್ತಾರು ಪಾತ್ರಗಳ ಸುತ್ತ “ಮಜ್ಜಿಗೆ ಹುಳಿ’ ಕಥೆ ಸಾಗುತ್ತದೆ.

ಚಿತ್ರದ ಎಳೆ ಚೆನ್ನಾಗಿದ್ದರೂ, ಅದನ್ನು ಚಿತ್ರಕಥೆ ಮತ್ತು ದೃಶ್ಯ ರೂಪದಲ್ಲಿ ನಿರೂಪಿಸುವಲ್ಲಿ ನಿರ್ದೇಶಕರು ಸೋತಿದ್ದಾರೆ. ಹೀಗಾಗಿ ಚಿತ್ರದಲ್ಲಿ ಬರುವ ಬಹುತೇಕ ಪಾತ್ರಗಳು, ಅವುಗಳ ಸಂಭಾಷಣೆ, ದೃಶ್ಯ ಸಂಯೋಜನೆ ಪ್ರೇಕ್ಷಕರನ್ನು ರಂಜಿಸುವುದಕ್ಕಿಂತ, ಕಿರಿಕಿರಿ ಉಂಟು ಮಾಡುವುದೇ ಜಾಸ್ತಿ. ಹಾಗಾಗಿ ಯಾವುದೇ ಮನರಂಜನೆಯ ಸಿನಿ “ಮಸಾಲ’ ಅಂಶಗಳಿಲ್ಲದ “ಮಜ್ಜಿಗೆ ಹುಳಿ’ ಪ್ರೇಕ್ಷಕರಿಗೆ ರುಚಿಸೋದು ಕಷ್ಟ.

ಇನ್ನು ಚಿತ್ರದಲ್ಲಿ ನಾಯಕಿ ರೂಪಿಕಾ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ. ನಾಯಕ ದೀಕ್ಷಿತ್‌ ಅಭಿನಯದಲ್ಲಿ ಇನ್ನೂ ಪಳಗಬೇಕಿದೆ. ಉಳಿದಂತೆ ಸುಚೇಂದ್ರ ಪ್ರಸಾದ್‌, ಮಿಮಿಕ್ರಿ ದಯಾನಂದ್‌, ರಮೇಶ್‌ ಭಟ್‌, ಮೋಹನ್‌ ಜುನೇಜಾ, ತರಂಗ ವಿಶ್ವ, ಕೆಂಪೇಗೌಡ, ಕುರಿ ಸುನೀಲ…, ಶಂಕರ ನಾರಾಯಣ್‌, ಯತಿರಾಜ್‌ ಹೀಗೆ ಬೃಹತ್‌ ಕಲಾವಿದರ ದಂಡೇ ಚಿತ್ರದಲ್ಲಿದ್ದರೂ, ಯಾವ ಪಾತ್ರಗಳೂ ನೋಡುಗರಿಗೆ ಅಂದುಕೊಳ್ಳುವ ಮಟ್ಟಿಗೆ ಖುಷಿ ನೀಡುವುದಿಲ್ಲ.

ತಾಂತ್ರಿಕವಾಗಿ ಹೇಳುವುದಾದರೆ, ಚಿತ್ರದ ಛಾಯಾಗ್ರಹಣ ಮತ್ತು ಸಂಕಲನ ಕಾರ್ಯ ಚೆನ್ನಾಗಿದೆ. ಸಂಗೀತ ಮತ್ತು ಹಿನ್ನೆಲೆ ಸಂಗೀತವನ್ನು ಇನ್ನೂ ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದಿತ್ತು. ಉಳಿದ ಯಾವುದೇ ತಾಂತ್ರಿಕ ಕೆಲಸಗಳು ಗಮನ ಸೆಳೆಯುವುದಿಲ್ಲ. ಒಂದೇ ಮಾತಿನಲ್ಲಿ ಹೇಳುವುದಾದರೆ, ಹೆಚ್ಚು ರಿಸ್ಕ್ ತೆಗೆದುಕೊಳ್ಳಲು ತಯಾರಿಲ್ಲದ ನಿರ್ದೇಶಕ ರವೀಂದ್ರ ಕೊಟಕಿ ಟೇಸ್ಟ್‌ ಮತ್ತು ಟ್ವಿಸ್ಟ್‌ ಎರಡೂ ಇಲ್ಲದ “ಮಜ್ಜಿಗೆ ಹುಳಿ’ಯನ್ನು ಅರ್ಜೆಂಟಾಗಿ ಪ್ರೇಕ್ಷಕರಿಗೆ ಉಣಬಡಿಸಿದ್ದಾರೆ.

ಚಿತ್ರ: ಮಜ್ಜಿಗೆ ಹುಳಿ
ನಿರ್ಮಾಣ: ರಾಮಚಂದ್ರ ಎಸ್‌
ನಿರ್ದೇಶನ: ರವೀಂದ್ರ ಕೊಟಕಿ
ತಾರಾಗಣ: ದೀಕ್ಷಿತ್‌ ವೆಂಕಟೇಶ್‌, ರೂಪಿಕಾ, ಸುಚೇಂದ್ರ ಪ್ರಸಾದ್‌, ಮಿಮಿಕ್ರಿ ದಯಾನಂದ್‌, ರಮೇಶ್‌ ಭಟ್‌, ಮೋಹನ್‌ ಜುನೇಜಾ, ತರಂಗ ವಿಶ್ವ, ಕೆಂಪೇಗೌಡ ಮತ್ತಿತರರು.

* ಜಿ.ಎಸ್‌.ಕಾರ್ತಿಕ ಸುಧನ್‌

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಆತ ಕೋಪಿಷ್ಠ. ಕೋಪವೇ ಆತನ ವೀಕ್‌ನೆಸ್‌ ಎಂದರೆ ತಪ್ಪಲ್ಲ. ಆದರೆ, ಒಳ್ಳೇ ಹುಡುಗ, ತಾಯಿ ಮುದ್ದಿನ ಮಗ. ಊರ ಮಂದಿಗೆ ನೆಚ್ಚಿನ ಸಿಂಗ. ಈ ಸಿಂಗನ ಸಂಗದೇ ಕೆಟ್ಟವರಿಲ್ಲ. ಆದರೆ,...

  • "ಹಲೋ ನಿಮ್‌ ನಿಜವಾದ ಹೆಸರು ನಂದಿನಿ ಅಲ್ಲ ತಾನೇ?ಯಾಕೆಂದರೆ ಆ ಹೆಸರಿನ ಹುಡುಗಿಯರೇ ಹುಡುಗರಿಗೆ ಹುಚ್ಚು ಹಿಡಿಸಿರೋದು...' ಚಿತ್ರದ ನಾಯಕ, ಮೊದಲ ಸಲ ನಾಯಕಿಯನ್ನು ನೋಡಿದ...

  • ಅವನ ಹೆಸರು ಸೂರ್ಯ. ಹೆಸರಿಗೆ ತಕ್ಕಂತೆ ಎಲ್ಲರೂ ಸೂರ್ಯನಿಗೆ ಆಕರ್ಷಿತರಾಗುತ್ತಾರೆ. ಇವಳ ಹೆಸರು ಭಾರ್ಗವಿ ನಡೆ-ನುಡಿಯಲ್ಲಿ ಭೂಮಿಯ ಗುಣದವಳು. ಇಷ್ಟು ಹೇಳಿದ ಮೇಲೆ...

  • ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌...

  • ಆಕೆ ಶ್ರೀಮಂತ ಬಿಝಿನೆಸ್‌ಮ್ಯಾನ್‌ವೊಬ್ಬನ ಪತ್ನಿ. ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನದಲ್ಲಿದ್ದ ಆ ಬಿಝಿನೆಸ್‌ ಮ್ಯಾನ್‌ಗೆ ಮೋಡಿ ಮಾಡಿ, ಆತನ ಪತ್ನಿಯಾದವಳಾಕೆ....

ಹೊಸ ಸೇರ್ಪಡೆ