ಬಿ.ಕಾಂ ಪಾಸ್‌ ಆದ‌ವರ ಕಥೆ-ವ್ಯಥೆ

ಚಿತ್ರ ವಿಮರ್ಶೆ

Team Udayavani, Nov 16, 2019, 5:00 AM IST

ಬಿ.ಕಾಂ ಪಾಸಾಗೊದೇನೋ ಸುಲಭ. ಆದರೆ, ಪಾಸಾದ ನಂತರದ ಜೀವನದಲ್ಲಿ ಏನು ಮಾಡಬೇಕು? ಒಂದೋ ತಿಂಗಳ ಕೊನೆಗೆ ಸಂಬಳ ತರುವ ಕೆಲಸಕ್ಕೆ ಸೇರಬೇಕು. ಆದರೆ ಅಲ್ಲಿ ಇಂಟರ್‌ವ್ಯೂ ಪಾಸಾಗಬೇಕು. ಅದು ಪಾಸಾದ್ರೂ ಸಂಬಳ ಕಡಿಮೆ. ಕೆಲಸದ ಒತ್ತಡ, ಜಾಬ್‌ ಗ್ಯಾರೆಂಟಿ ಇರಲ್ಲ… ಹೀಗೆ ಹತ್ತಾರು ತಲೆನೋವು. ಅದಿಲ್ಲ ಅಂದ್ರೆ, ಒಂದಷ್ಟು ಬಂಡವಾಳ ಹೂಡಿ ಸ್ವಂತ ವ್ಯಾಪಾರ ಅಂಥ ಏನಾದ್ರೂ ಮಾಡಬೇಕು. ಆದರೆ ಅದಕ್ಕೂ ಬಂಡವಾಳ ಬೇಕು.

ಹತ್ತಾರು ಬಿಝಿನೆಸ್‌ ಐಡಿಯಾಗಳಲ್ಲಿ ಯಾವುದು ಮಾಡೋದು, ಯಾವುದು ಬಿಡೋದು ಅನ್ನೋ ಗೊಂದಲ. ಇದ್ಯಾವುದು ಬೇಡ ಅಂದ್ರೆ, ಶ್ರೀಮಂತ ಕುಟುಂಬದ ಹುಡುಗಿಯನ್ನ ಮದುವೆಯಾಗಿ ಲೈಫ್ನಲ್ಲಿ ಸೆಟ್ಲ ಆಗಬೇಕು. ಒಟ್ಟಿನಲ್ಲಿ ಏನೇ ಮಾಡೋದಾದ್ರೂ ಒಂದಷ್ಟು ಎಫ‌ರ್ಟ್‌ ಹಾಕಲೇಬೇಕು. ಜೊತೆಗೊಂದಷ್ಟು ಅದೃಷ್ಟ ಇರಲೇಬೇಕು. ಆದರೆ ಶುದ್ಧ ಸೋಮಾರಿಗಳಿಗೆ ಇಂಥದ್ದೊಂದು ಐಡಿಯಾ ಬಂದರೆ ಅವರೇನು ಮಾಡಬಹುದು?

ಇದನ್ನು ಒಂದಷ್ಟು ಹಾಸ್ಯಭರಿತವಾಗಿ ಹೇಳಿದರೆ, ಹೇಗಿರಬಹುದು? ನೋಡುವ ಕುತೂಹಲವಿದ್ದರೆ, ಈ ವಾರ ತೆರೆಗೆ ಬಂದಿರುವ “ನಮ್‌ ಗಣಿ ಬಿ.ಕಾಂ ಪಾಸ್‌’ ಚಿತ್ರವನ್ನು ನೋಡಬಹುದು. ಹೆಸರೇ ಹೇಳುವಂತೆ “ನಮ್‌ ಗಣಿ ಬಿ.ಕಾಂ ಪಾಸ್‌’ ಗಣೇಶ ಅಲಿಯಾಸ್‌ ಗಣಿ ಎನ್ನುವ ಬಿ.ಕಾಂ ಪಾಸ್‌ ಆದ ಸಾಮಾನ್ಯ ಹುಡುಗನ ಕಥೆ. ನಮ್ಮ ಸುತ್ತಮುತ್ತ ಪ್ರತಿನಿತ್ಯ ಕಾಣುವ ಕೇಳುವ ಕಥೆಯೇ ಚಿತ್ರದಲ್ಲೂ ಇರುವುದರಿಂದ ಕಥೆಯಲ್ಲಿ ಹೊಸತನ ಹುಡುಕುವಂತಿಲ್ಲ.

ಆದರೆ, ಚಿತ್ರಕಥೆ ಮತ್ತು ನಿರೂಪಣೆ ನೋಡುಗರಿಗೆ ಎಲ್ಲೂ ಬೋರ್‌ ಆಗದಂತೆ “ಗಣಿ’ ಕಥೆಯನ್ನು ತೆರೆದಿಡುತ್ತದೆ. ಚಿತ್ರದ ಮಧ್ಯದಲ್ಲಿ ಬರುವ ಅನಿರೀಕ್ಷಿತ ಕೆಲ ತಿರುವುಗಳು ನೋಡುಗರನ್ನು ಚಿತ್ರಮಂದಿರದಲ್ಲಿ ಆರಾಮವಾಗಿ ಕೂರಿಸುತ್ತವೆ. ಚಿತ್ರದ ಸಂಭಾಷಣೆ, ಅಲ್ಲಲ್ಲಿ ಬರುವ ಕಾಮಿಡಿ ಪ್ರೇಕ್ಷಕರ ತುಟಿಯಲ್ಲಿ ನಗು ಮೂಡಿಸುತ್ತವೆ. ಮೊದಲಾರ್ಧ ಕೊಂಚ ನಿಧಾನವಾಗಿ ಸಾಗುವ “ಗಣಿ’ ಕಥೆ ದ್ವಿತಿಯಾರ್ಧದಲ್ಲಿ ಅಷ್ಟೇ ವೇಗ ಪಡೆದುಕೊಳ್ಳುತ್ತದೆ.

ಸಾಮಾನ್ಯ ಕಥೆಯನ್ನು ಒಂದಷ್ಟು ಸಸ್ಪೆನ್ಸ್‌, ಕಾಮಿಡಿ, ಎಮೋಶನ್ಸ್‌ ಜೊತೆ ಹೊಸದಾಗಿ ಹೇಳುವಲ್ಲಿ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಯಶಸ್ವಿಯಾಗಿದ್ದಾರೆ. ಇನ್ನು ಚಿತ್ರದ ನಾಯಕನ ಪಾತ್ರದಲ್ಲೂ ಕಾಣಿಸಿಕೊಂಡಿರುವ ನಿರ್ದೇಶಕ ಅಭಿಷೇಕ್‌ ಶೆಟ್ಟಿ ಕೆಲ ದೃಶ್ಯಗಳನ್ನು ಹೊರತುಪಡಿಸಿದರೆ, ಬಹುತೇಕ ತಮ್ಮ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ನಾಯಕನ ಸ್ನೇಹಿತನ ಪಾತ್ರದಲ್ಲಿ ನಾಟ್ಯರಂಗ, ನಾಯಕಿಯಾಗಿ ಐಶಾನಿ ಶೆಟ್ಟಿ ಅಭಿನಯ ಗಮನ ಸೆಳೆಯುತ್ತದೆ. ಉಳಿದಂತೆ ಸುಧಾ ಬೆಳವಾಡಿ, ಮಂಜುನಾಥ ಹೆಗ್ಡೆ, ಶಂಕರ್‌ ಅಶ್ವಥ್‌ ಮೊದಲಾದ ಕಲಾವಿದರು ತಮಗೆ ಸಿಕ್ಕ ಅವಕಾಶದಲ್ಲಿ ತಮ್ಮ ಪಾತ್ರವನ್ನು ಚೆನ್ನಾಗಿ ನಿರ್ವಹಿಸಿದ್ದಾರೆ.

ಚಿತ್ರದಲ್ಲಿ ಹಾಡುಗಳು ಬಂದಿದ್ದು-ಹೋಗಿದ್ದು ಗೋತ್ತಾಗುವುದಿಲ್ಲ. ಹಾಗಾಗಿ ಯಾವ ಹಾಡುಗಳು ಕಿವಿಯಲ್ಲಿ ಉಳಿಯುವುದಿಲ್ಲ. ಅದನ್ನು ಹೊರತುಪಡಿಸಿದರೆ, ಚಿತ್ರದ ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಗಮನ ಸೆಳೆಯುತ್ತದೆ. ಮಂದಗತಿಯ ಸಂಕಲನ ಕಾರ್ಯ “ಗಣಿ’ ಓಟಕ್ಕೆ ಅಲ್ಲಲ್ಲಿ ಬ್ರೇಕ್‌ ಹಾಕಿದೆ. ಒಟ್ಟಾರೆ ಅತಿಯಾದ ನಿರೀಕ್ಷೆಯಿಟ್ಟುಕೊಳ್ಳದೆ ಥಿಯೇಟರ್‌ಗೆ ಹೋದರೆ, “ಗಣಿ’ ಒಂದು ಮಟ್ಟಿನ ಮನರಂಜನೆ ನೀಡುವುದರಲ್ಲಿ ಎರಡು ಮಾತಿಲ್ಲ.

ಚಿತ್ರ: ನಮ್‌ ಗಣಿ ಬಿ.ಕಾಂ ಪಾಸ್‌
ನಿರ್ದೇಶನ: ಅಭಿಷೇಕ್‌ ಶೆಟ್ಟಿ
ನಿರ್ಮಾಣ: ನಾಗೇಶ್‌ ಕುಮಾರ್‌ ಯು.ಎಸ್‌
ತಾರಾಗಣ: ಅಭಿಷೇಕ್‌ ಶೆಟ್ಟಿ, ಐಶಾನಿ ಶೆಟ್ಟಿ, ನಾಟ್ಯರಂಗ, ಸುಧಾ ಬೆಳವಾಡಿ, ಮಂಜುನಾಥ ಹೆಗ್ಡೆ, ರಚನಾ ದಶರಥ ಮತ್ತಿತರರು

* ಜಿ.ಎಸ್‌ ಕಾರ್ತಿಕ ಸುಧನ್‌


ಈ ವಿಭಾಗದಿಂದ ಇನ್ನಷ್ಟು

  • ಆತ ಒಳ್ಳೆಯ ಹುಡುಗ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡೇ ಶಿಕ್ಷಣ ಮುಗಿಸಿದ ಆತನಿಗೆ ಸರ್ಕಾರಿ ನೌಕರಿಯೂ ಸಿಗುತ್ತದೆ. ಅದೆಷ್ಟೋ ಹುಡುಗಿಯರು ಪ್ರೀತಿ, ಪ್ರೇಮ,...

  • "ನಾನು ಹೋಗಲ್ಲ, ಹೋಗೋಕು ಆಗಲ್ಲ. ಹೋಗೋ ಮಾತೇ ಇಲ್ಲ...' ಆ ಆತ್ಮ ರೋಷದಿಂದ ಅಷ್ಟೇ ಆರ್ಭಟದಿಂದ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಭವ್ಯ ಬಂಗಲೆಯಲ್ಲೊಂದು ಘಟನೆ ನಡೆದಿರುತ್ತೆ....

  • ಕನ್ನಡದ ಜನಪ್ರಿಯ ಕೃತಿ, ಡಾ. ಕೆ ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು' ಪ್ರಕಟಣೆಗೊಂಡು ಐವತ್ತು ವರ್ಷಗಳು ಗತಿಸಿದೆ. ಇದೇ ಸಂದರ್ಭದಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳು'...

  • ನೀವೇನಾದರೂ ಬೆಂಗಳೂರಿಗರಾಗಿದ್ದರೆ, ಅಥವಾ ಬೆಂಗಳೂರಿನಲ್ಲಿ ಒಂದು ರೌಂಡ್‌ ಹಾಕಿ ಬಂದಿದ್ದರೆ, "ಕನ್ನಡ್‌ ಗೊತ್ತಿಲ್ಲ' ಎಂಬ ಈ ಪದವನ್ನು ಖಂಡಿತಾ ಒಮ್ಮೆಯಾದರೂ,...

  • ಅದೊಂದು ಐವರ ತಂಡ. ತಮ್ಮದೇ ಆದ ಜಗತ್ತಿನಲ್ಲಿ ಒಂದೊಂದು ಜಂಜಾಟದಲ್ಲಿರುವ ಈ ಸ್ನೇಹಿತರು ಅದೆಷ್ಟೋ ವರ್ಷಗಳ ನಂತರ ಜೊತೆಯಾಗಿ, ಒಂದು ದಟ್ಟ ಕಾನನದೊಳಗೆ ನಿಗೂಢವಾಗಿರುವ...

ಹೊಸ ಸೇರ್ಪಡೆ