ಮಾರಾಟದ ಮನೆಯಲ್ಲಿ ಅನ್‌ಲಿಮಿಟೆಡ್‌ ಕಾಮಿಡಿ

ಚಿತ್ರ ವಿಮರ್ಶೆ

Team Udayavani, Nov 16, 2019, 5:01 AM IST

“ಮನುಷ್ಯನ ಕನಸುಗಳಿಗಿಂತ, ಅವನು ಕಟ್ಟಿರುವ ಗೋಡೆಗಳಿಗೇ ಬೆಲೆ ಜಾಸ್ತಿ…’ ಹೀಗೆ ಈ ಡೈಲಾಗ್‌ ಹೇಳುವ ವ್ಯಕ್ತಿ, ಬೆಚ್ಚಿಬೀಳುವ ಘಟನೆಯೊಂದಕ್ಕೆ ಕಾರಣನಾಗಿರುತ್ತಾನೆ. ಅದರ ಹಿಂದೆ ನೋವು, ಪಶ್ಚತ್ತಾಪವೂ ಇರುತ್ತೆ. ಆ ಭಯಾನಕ ಘಟನೆ ಬಗ್ಗೆ ತಿಳಿಯುವ ಆಸಕ್ತಿ ಇದ್ದರೆ, ಈ ಚಿತ್ರ ನೋಡಬೇಕು. ಇದು ತೆಲುಗಿನ “ಆನಂದೋ ಬ್ರಹ್ಮ’ ಚಿತ್ರದ ಅವತರಣಿಕೆ. ರೀಮೇಕ್‌ ಆಗಿದ್ದರೂ, ಇಲ್ಲಿ ಆ ಛಾಯೆ ಕಾಣದಂತೆ ಸಿನಿಮಾದುದ್ದಕ್ಕೂ ಭರಪೂರ ನಗುವಿನಲ್ಲೇ ಪ್ರೇಕ್ಷಕರನ್ನು ತೇಲಾಡಿಸಬೇಕೆಂಬ ನಿರ್ದೇಶಕರ ಪ್ರಯತ್ನ ಇಲ್ಲಿ ಸಾಕಾರಗೊಂಡಿದೆ.

ಇದು ಕಾಮಿಡಿ-ಹಾರರ್‌ ಚಿತ್ರ. ಹಾಗಾಗಿ, ಇಲ್ಲಿ ಹಾರರ್‌ ಫೀಲ್‌ಗಿಂತ ಹಾಸ್ಯದ ಪಾಲೇ ಹೆಚ್ಚು. ದೆವ್ವಗಳೆಂದ ಮೇಲೆ ಭಯ ಸಹಜ. ಆದರೆ, ಇಲ್ಲಿ ತೆರೆ ಮೇಲೆ ಇರೋರಿಗೂ, ತೆರೆ ಮುಂದೆ ಇರೋರಿಗೂ ಆತ್ಮಗಳು ಉಣಬಡಿಸುವ ಹಾಸ್ಯದೌತಣದ ಅನುಭವ ಅನನ್ಯ. ನಿರ್ದೇಶಕರು ಸಾಕಷ್ಟು ರಿಸ್ಕ್ನಲ್ಲಿಯೇ ಕೆಲಸ ಮಾಡಿದ್ದಾರೆ ಎಂಬುದಕ್ಕೆ ತೆರೆಮೇಲಿನ “ಸಾಹಸ’ ಗೊತ್ತಾಗುತ್ತೆ. ಅದೆಷ್ಟೇ ರಿಸ್ಕ್ ತಗೊಂಡಿದ್ದರೂ, ನೋಡುಗರ ಮೊಗದಲ್ಲಿ ಮೂಡುವ ನಗುವಿನ ಮುಂದೆ ಏನೂ ಇಲ್ಲ.

ಇಲ್ಲಿ ನಗುವೊಂದೇ ಪ್ರಧಾನ. ಮಿಕ್ಕಿದ್ದು ಸಮಾಧಾನ. ಕಾಮಿಡಿ-ಹಾರರ್‌ ಸಿನಿಮಾಗಳು ಬಂದಿವೆಯಾದರೂ, ಹೇಳಿಕೊಳ್ಳುವಷ್ಟು ನಗುವಿಗೆ ಕಾರಣವಾಗಿರಲಿಲ್ಲ. ಇಲ್ಲಿ ನಗುವಿಗೆ ಹೆಚ್ಚು ಜಾಗವಿದೆ. ಹಾಗಾಗಿ, ಆರಂಭದಿಂದ ಅಂತ್ಯದವರೆಗೂ ನಗುವಿನ ಹೂರಣ ಹೊರತು ಬೇರೇನೂ ಇಲ್ಲ. ಮನರಂಜನೆಯ ಕೊರತೆ ಇಲ್ಲದಂತೆ ಚಿತ್ರ ಮಾಡಿರುವ ನಿರ್ದೇಶಕರು, ಆರಂಭದಲ್ಲಿ ಇನ್ನಷ್ಟು ಚಿತ್ರಕಥೆಯ ಜೊತೆಗೆ ವೇಗಕ್ಕೆ ಒತ್ತು ಕೊಡಬೇಕಿತ್ತು. ಇಲ್ಲಿ ಒಟ್ಟಿಗೆ ನಾಲ್ವರು ಹಾಸ್ಯ ನಟರರನ್ನು ನೋಡುವ ಅವಕಾಶವಿದೆ.

ಅವರಿದ್ದರೆ ಕೇಳಬೇಕೆ. ಪ್ರತಿಯೊಬ್ಬರಲ್ಲೂ ನಗಿಸುವ ಗುಣ ಹೇರಳವಾಗಿದೆ. ಎಲ್ಲರೂ ಜಿದ್ದಿಗೆ ಬಿದ್ದವರಂತೆ, ನಗಿಸುವಲ್ಲಿ ಯಶಸ್ವಿ. ಇಂತಹ ಚಿತ್ರಗಳಿಗೆ ಮಾತುಗಳ ಜೊತೆಗೆ ಹಾವ-ಭಾವ ಮುಖ್ಯ. ಅದು ಸಾಧ್ಯವಾಗಿರುವುದಕ್ಕೆ ಇಲ್ಲಿ ಅಪ್ಪಟ ಮನರಂಜನೆ ಸಿಕ್ಕಿದೆ. ನಗಿಸುವ ಗುಣಗಳು ಹೇರಳವಾಗಿರುವುದರಿಂದ, ಕೊಟ್ಟ ಕಾಸಿಗೆ ಮೋಸವಿಲ್ಲ. ನೋಡುಗರು ನಗದಿರಲು ಸಾಧ್ಯವೂ ಇಲ್ಲ. ಅಷ್ಟರ ಮಟ್ಟಿಗೆ ನಿರೂಪಣೆ, ಸಂಭಾಷಣೆ ಮತ್ತು ಹಿನ್ನೆಲೆ ಸಂಗೀತ ದೃಶ್ಯಗಳಿಗೆ ಸಾಥ್‌ ಕೊಟ್ಟಿವೆ.

ಎಲ್ಲಕ್ಕಿಂತಲೂ ಹೆಚ್ಚಾಗಿ ಇಲ್ಲಿ ದೆವ್ವಗಳನ್ನೇ ಹೆದರಿಸುವ ಹಾಸ್ಯ ನಟರ ಹಾವ-ಭಾವ ಚಿತ್ರದ ಆಕರ್ಷಣೆ. ವಿಶೇಷವೆಂದರೆ ಒಂದೇ ಮನೆಯಲ್ಲಿ ನಡೆಯುವ ಕಥೆಯಲ್ಲಿ ಸಣ್ಣದ್ದೊಂದು ಭಯ, ದೊಡ್ಡಮಟ್ಟದ ನಗು, ಮರುಕ ಹುಟ್ಟಿಸುವ ಘಟನೆ, ಕಾಡುವ ನೋವು ಇವೆಲ್ಲವನ್ನೂ ಕಾಣಬಹುದು. ಎಲ್ಲವನ್ನೂ ಅಷ್ಟೇ ಹದವಾಗಿ ಬೆರಸಿರುವುದರಿಂದ ಆ ಮನೆಯಲ್ಲಿ ಎಲ್ಲವೂ ರುಚಿಸುತ್ತವೆ. ಕಥೆ ತೀರಾ ಸಿಂಪಲ್‌. ಚಿತ್ರಕಥೆ ಮತ್ತು ಸಂಭಾಷಣೆ ಇಲ್ಲಿ ಜೀವಾಳ. ಪ್ರತಿ ಪಾತ್ರಗಳ ಅಭಿನಯ ಇಲ್ಲಿನ ಜೀವಾಳ. ಅದು ಶ್ರವಣ ನಿವಾಸ.

ತನ್ನ ಹೆತ್ತವರು ಸಾವನ್ನಪ್ಪಿದ ಹಿನ್ನೆಲೆಯಲ್ಲಿ ದುಬೈನಲ್ಲಿ ವಾಸಿಸುವ ಮಗ ಇಂಡಿಯಾಗೆ ಬಂದು ತನ್ನ ಮನೆ ಮಾರಾಟ ಮಾಡಲು ಮುಂದಾಗುತ್ತಾನೆ. ಅಲ್ಲೊಂದಷ್ಟು ಕಾಣದ ಕೈಗಳು, ಮನೆಯಲ್ಲಿ ದೆವ್ವಗಳಿವೆ ಎಂಬ ಸುದ್ದಿ ಹಬ್ಬಿಸಿ, 5 ಕೋಟಿ ಬೆಲೆ ಬಾಳುವ ಮನೆಯನ್ನು 1 ಕೋಟಿಗೆ ಫಿಕ್ಸ್‌ ಮಾಡುತ್ತವೆ. ಆಗ ಅಲ್ಲಿ ಮಜವಾದ ಡ್ರಾಮ ಶುರುವಾಗುತ್ತೆ. ಅದೇ ಚಿತ್ರದ ಸಸ್ಪೆನ್ಸ್‌. ಆ ಮನೆಯಲ್ಲಿ ನಿಜಕ್ಕೂ ದೆವ್ವಗಳಿವೆಯಾ?

ಇದ್ದರೂ ಆ ಆತ್ಮಗಳು ಯಾಕೆ ಅಲ್ಲಿವೆ, ಆ ಮನೆಗೆ ಹೋದವರನ್ನು ಅವು ಬೆಚ್ಚಿಬೀಳಿಸುತ್ತವೆಯಾ, ಇಲ್ಲವೋ ಎಂಬ ಕುತೂಹಲವಿದ್ದರೆ, ಚಿತ್ರ ನೋಡಬೇಕು. ಸಾಧುಕೋಕಿಲ ಅವರು ಎಂದಿಗಿಂತಲೂ ತುಸು ಹೆಚ್ಚಾಗಿಯೇ ನಗಿಸುವ ಮೂಲಕ ಇಷ್ಟವಾಗುತ್ತಾರೆ. ಚಿಕ್ಕಣ್ಣ ಕೂಡ ವಿಶೇಷ ಗಮನ ಸೆಳೆಯುತ್ತಾರೆ. ಇಡೀ ಸಿನಿಮಾದಲ್ಲಿ ರವಿಶಂಕರ್‌ಗೌಡ ಅವರ ಪಾತ್ರದಲ್ಲಿ ಒಂದು ರೀತಿಯ ಮಜ ಅಡಗಿದ್ದರೆ, “ಕುರಿ’ ಪ್ರತಾಪ್‌ ಪಾತ್ರದಲ್ಲಿ ಹೊಸತನ ತುಂಬಿದೆ. ಇವರಿಬ್ಬರೂ ನಗಿಸುವಲ್ಲಿ ಜಿದ್ದಿಗೆ ಬಿದ್ದವರಂತೆ ನಟಿಸಿದ್ದಾರೆ.

ಹಾಗಾಗಿ, ಆ ಮನೆಯ ಆಕರ್ಷಣೆ ಇವರೆನ್ನಬಹುದು. ಉಳಿದಂತೆ ಆತ್ಮಗಳಾಗಿ ಶಿವರಾಮ್‌, ಶ್ರುತಿಹರಿಹರನ್‌, ಗಿರಿ ಮತ್ತು ಬೇಬಿ ಅಶ್ವಿ‌ತ ಇಷ್ಟವಾಗುತ್ತಾರೆ. ರಾಜೇಶ್‌ ನಟರಂಗ ಯಾರೂ ಊಹಿಸದ ಪಾತ್ರ ನಿರ್ವಹಿಸಿ ಸೈ ಎನಿಸಿಕೊಳ್ಳುತ್ತಾರೆ. “ನೀನಾಸಂ’ ಅಶ್ವತ್ಥ್ ಸೇರಿದಂತೆ ತೆರೆ ಮೇಲೆ ಮೂಡುವ ಪ್ರತಿ ಪಾತ್ರಕ್ಕೂ ವಿಶೇಷತೆ ಇದೆ. ಹಾರರ್‌ ಕಾಮಿಡಿ ಚಿತ್ರಗಳಿಗೆ ಹಿನ್ನೆಲೆ ಸಂಗೀತ ಮತ್ತು ಹಾಡು ಜೀವಾಳವಾಗಿರಬೇಕು. ಅದನ್ನು ಅಭಿಮನ್‌ ರಾಯ್‌ ನೀಗಿಸಿದ್ದಾರೆ. ಸುರೇಶ್‌ ಬಾಬು ಅವರ ಛಾಯಾಗ್ರಹಣ ಕೂಡ ನಗುವಿನ ಸೌಂದರ್ಯ ಹೆಚ್ಚಿಸಿದೆ.

ಚಿತ್ರ: ಮನೆ ಮಾರಾಟಕ್ಕಿದೆ
ನಿರ್ಮಾಣ: ಎಸ್‌.ವಿ.ಬಾಬು
ನಿರ್ದೇಶನ: ಮಂಜು ಸ್ವರಾಜ್‌
ತಾರಾಗಣ: ಸಾಧುಕೋಕಿಲ, ಚಿಕ್ಕಣ್ಣ, ರವಿಶಂಕರ್‌ಗೌಡ, ಕುರಿ ಪ್ರತಾಪ್‌, ರಾಜೇಶ್‌, ಶಿವರಾಂ, ಶ್ರುತಿಹರಿಹರನ್‌, ಗಿರಿ ಇತರರು.

* ವಿಜಯ್‌ ಭರಮಸಾಗರ


ಈ ವಿಭಾಗದಿಂದ ಇನ್ನಷ್ಟು

  • ಆತ ಒಳ್ಳೆಯ ಹುಡುಗ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡೇ ಶಿಕ್ಷಣ ಮುಗಿಸಿದ ಆತನಿಗೆ ಸರ್ಕಾರಿ ನೌಕರಿಯೂ ಸಿಗುತ್ತದೆ. ಅದೆಷ್ಟೋ ಹುಡುಗಿಯರು ಪ್ರೀತಿ, ಪ್ರೇಮ,...

  • "ನಾನು ಹೋಗಲ್ಲ, ಹೋಗೋಕು ಆಗಲ್ಲ. ಹೋಗೋ ಮಾತೇ ಇಲ್ಲ...' ಆ ಆತ್ಮ ರೋಷದಿಂದ ಅಷ್ಟೇ ಆರ್ಭಟದಿಂದ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಭವ್ಯ ಬಂಗಲೆಯಲ್ಲೊಂದು ಘಟನೆ ನಡೆದಿರುತ್ತೆ....

  • ಕನ್ನಡದ ಜನಪ್ರಿಯ ಕೃತಿ, ಡಾ. ಕೆ ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು' ಪ್ರಕಟಣೆಗೊಂಡು ಐವತ್ತು ವರ್ಷಗಳು ಗತಿಸಿದೆ. ಇದೇ ಸಂದರ್ಭದಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳು'...

  • ನೀವೇನಾದರೂ ಬೆಂಗಳೂರಿಗರಾಗಿದ್ದರೆ, ಅಥವಾ ಬೆಂಗಳೂರಿನಲ್ಲಿ ಒಂದು ರೌಂಡ್‌ ಹಾಕಿ ಬಂದಿದ್ದರೆ, "ಕನ್ನಡ್‌ ಗೊತ್ತಿಲ್ಲ' ಎಂಬ ಈ ಪದವನ್ನು ಖಂಡಿತಾ ಒಮ್ಮೆಯಾದರೂ,...

  • ಅದೊಂದು ಐವರ ತಂಡ. ತಮ್ಮದೇ ಆದ ಜಗತ್ತಿನಲ್ಲಿ ಒಂದೊಂದು ಜಂಜಾಟದಲ್ಲಿರುವ ಈ ಸ್ನೇಹಿತರು ಅದೆಷ್ಟೋ ವರ್ಷಗಳ ನಂತರ ಜೊತೆಯಾಗಿ, ಒಂದು ದಟ್ಟ ಕಾನನದೊಳಗೆ ನಿಗೂಢವಾಗಿರುವ...

ಹೊಸ ಸೇರ್ಪಡೆ