ಸರ್ಕಲ್‌ ಸುತ್ತುವ “ವಿಷ್ಣು’ ಪುರಾಣ!

ಚಿತ್ರ ವಿಮರ್ಶೆ

Team Udayavani, Sep 7, 2019, 3:05 AM IST

ಅದು ಬೆಂಗಳೂರು ಮಹಾನಗರದಲ್ಲಿರುವ ಜನಪ್ರಿಯ ಏರಿಯಾ. ಅದರ ಹೆಸರು “ವಿಷ್ಣು ಸರ್ಕಲ್‌’. ಇಂಥ ಏರಿಯಾದಲ್ಲಿ ವಿಷ್ಣುವರ್ಧನ್‌ ಅವರನ್ನು ತನ್ನ ನಡೆ-ನುಡಿ ಎಲ್ಲದರಲ್ಲೂ ಅನುಕರಿಸುವ, ಆರಾಧಿಸುವ ಅಭಿಮಾನಿಗಳ ಸಾಲಿನಲ್ಲಿ ಮೊದಲಿಗೆ ನಿಲ್ಲುವ ಹುಡುಗ ವಿಷ್ಣು. ಚಿತ್ರದ ಹೆಸರೇ “ವಿಷ್ಣು ಸರ್ಕಲ್‌’ ಎಂದ ಮೇಲೆ, ಅಲ್ಲೊಂದು ವಿಷ್ಣುವರ್ಧನ್‌ ಅವರ ಪುತ್ಥಳಿ, ಅದರ ಸುತ್ತ ನಡೆಯುವ ಒಂದಷ್ಟು ಘಟನೆಗಳು. ಅದರ ಜೊತೆಗೆ ಸೇರಿಕೊಂಡಿರುವ ವಿಷ್ಣುವರ್ಧನ್‌ ಅಭಿಮಾನಿಯೊಬ್ಬನ ಕಥೆ. ಇವಿಷ್ಟು ಚಿತ್ರದ ಹೈಲೈಟ್ಸ್‌ ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಇದು ಈ ವಾರ ತೆರೆಗೆ ಬಂದಿರುವ “ವಿಷ್ಣು ಸರ್ಕಲ್‌’ ಚಿತ್ರದಲ್ಲಿ ಕಾಣಸಿಗುವ ಅಂಶಗಳು.

“ವಿಷ್ಣು ಸರ್ಕಲ್‌’ ಟೈಟಲ್‌ ನೋಡಿ, ಚಿತ್ರದಲ್ಲಿ ಹೊಸದೇನಾದರೂ ಇರಬಹುದು ಎಂದುಕೊಂಡು ಹೋದರೆ ಅದು ಕೊನೆಯವರೆಗೂ ಭ್ರಮೆಯಾಗಿಯೇ ಇರುತ್ತದೆ. ಚಿತ್ರದ ಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ, ಎಲ್ಲೂ ಹೊಸತನವನ್ನು ಹುಡುಕುವಂತಿಲ್ಲ. ಅನೇಕ ಕಡೆಗಳಲ್ಲಿ ಚಿತ್ರದ ಕಥೆ ಹಳಿ ತಪ್ಪಿ ಸಾಗುವುದರಿಂದ, ಪ್ರೇಕ್ಷಕರಿಗೆ ಸರಳವಾದ ಅಂಶಗಳೂ ಅರ್ಥವಾಗುವುದಿಲ್ಲ. ಒಟ್ಟಾರೆ, ಸ್ಪಷ್ಟತೆಯಿಲ್ಲದೆ ಸರಳ ಕಥೆಯೊಂದನ್ನು ಅಚ್ಚುಕಟ್ಟಾಗಿ ತೋರಿಸುವ ಎಲ್ಲಾ ಅವಕಾಶಗಳನ್ನು ನಿರ್ದೇಶಕರು ವ್ಯರ್ಥ ಮಾಡಿದಂತಿದೆ. ಒಂದು ಹಂತದಲ್ಲಿ “ವಿಷ್ಣು’ ಎನ್ನುವ ನಾಮಬಲ ಇಲ್ಲದಿದ್ದರೆ, “ಸರ್ಕಲ್‌’ ದಾಟುವುದು ನೋಡುಗರಿಗೆ ಇನ್ನಷ್ಟು ತ್ರಾಸವಾಗುತ್ತಿತ್ತೇನೋ!

ಇನ್ನು ಚಿತ್ರದಲ್ಲಿ ವಿಷ್ಣುವರ್ಧನ್‌ ಅಭಿಮಾನಿಯಾಗಿ ಗುರುರಾಜ್‌ ಜಗ್ಗೇಶ್‌ ಅವರ ಅಭಿನಯಲ್ಲಿ ಹೆಚ್ಚೇನು ನಿರೀಕ್ಷಿಸುವಂತಿಲ್ಲ. ಗುರುರಾಜ್‌ ತಮ್ಮ ಅಭಿನಯದಲ್ಲಿ ಸಾಕಷ್ಟು ಪಳಗಬೇಕಿದೆ. ಉಳಿದಂತೆ ಚಿತ್ರದ ಮೂವರು ನಾಯಕಿಯರು ತಮ್ಮ ಪಾತ್ರದ ಮೂಲಕ ಗಮನ ಸೆಳೆಯುತ್ತಾರೆ. ಹಿರಿಯ ನಟ ದತ್ತಣ್ಣ ಸೇರಿದಂತೆ ಅನೇಕರ ಪಾತ್ರಗಳಿಗೆ ಚಿತ್ರದಲ್ಲಿ ಸಮರ್ಥನೆ ಇಲ್ಲ. ದೊಡ್ಡ ಕಲಾವಿದರ ತಾರಾಗಣವಿದ್ದರೂ, ಪ್ರಾಮುಖ್ಯತೆ ಇಲ್ಲದ ಕಾರಣ ಬಹುತೇಕ ಪಾತ್ರಗಳು ಪ್ರೇಕ್ಷಕರ ಮನಸ್ಸಿನಲ್ಲಿ ಉಳಿಯುವುದಿಲ್ಲ.

ತಾಂತ್ರಿಕವಾಗಿ “ವಿಷ್ಣು ಸರ್ಕಲ್‌’ ಚೆನ್ನಾಗಿ ಮೂಡಿಬಂದಿದೆ. ಪಿ.ಎಲ್‌ ರವಿ ಛಾಯಾಗ್ರಹಣ ಚಿತ್ರದ ದೃಶ್ಯಗಳನ್ನು ಚೆನ್ನಾಗಿ ಕಟ್ಟಿಕೊಟ್ಟಿದೆ. ಸಂಕಲನ ಕಾರ್ಯ ಕೂಡ ಚೆನ್ನಾಗಿದೆ. ಒಳ್ಳೆಯ ಲೊಕೇಶನ್‌ಗಳು ದೃಶ್ಯಗಳನ್ನು ತೆರೆಮೇಲೆ ಅಂದಗಾಣಿಸಿವೆ. ಶ್ರೀವತ್ಸ ಸಂಗೀತದ ಒಂದೆರಡು ಹಾಡುಗಳು, ಪ್ರದೀಪ್‌ ವರ್ಮ ಹಿನ್ನೆಲೆ ಸಂಗೀತ ಅಲ್ಲಲ್ಲಿ ಗಮನ ಸೆಳೆಯುತ್ತದೆ. ಒಟ್ಟಾರೆ ಹೊಸದೇನೂ ನಿರೀಕ್ಷೆ ಇಲ್ಲದಿದ್ದರೆ, ಹೊಸಬರ ಬೆನ್ನು ತಟ್ಟುವ ಸಲುವಾಗಿ “ವಿಷ್ಣು ಸರ್ಕಲ್‌’ನಲ್ಲಿ ಕೂತು ಬರಬಹುದು.

ಚಿತ್ರ: ವಿಷ್ಣು ಸರ್ಕಲ್‌
ನಿರ್ಮಾಣ: ತಿರುಪತಿ ಪಿಕ್ಚರ್‌ ಪ್ಯಾಲೇಸ್‌
ನಿರ್ದೇಶನ: ಲಕ್ಷ್ಮೀ ದಿನೇಶ್‌
ತಾರಾಗಣ: ಗುರುರಾಜ್‌ ಜಗ್ಗೇಶ್‌, ದಿವ್ಯಾ ಗೌಡ, ಸಂಹಿತಾ ವಿನ್ಯಾ, ದತ್ತಣ್ಣ, ಸುಚಿತ್ರಾ, ಅರುಣಾ ಬಾಲರಾಜ್‌, ಹನುಮಂತೇ ಗೌಡ ಇತರರು.

* ಜಿ.ಎಸ್‌ ಕಾರ್ತಿಕ ಸುಧನ್‌


ಈ ವಿಭಾಗದಿಂದ ಇನ್ನಷ್ಟು

  • ಆತ ಒಳ್ಳೆಯ ಹುಡುಗ. ತಾನಾಯಿತು ತನ್ನ ಕೆಲಸವಾಯಿತು ಎಂದುಕೊಂಡೇ ಶಿಕ್ಷಣ ಮುಗಿಸಿದ ಆತನಿಗೆ ಸರ್ಕಾರಿ ನೌಕರಿಯೂ ಸಿಗುತ್ತದೆ. ಅದೆಷ್ಟೋ ಹುಡುಗಿಯರು ಪ್ರೀತಿ, ಪ್ರೇಮ,...

  • "ನಾನು ಹೋಗಲ್ಲ, ಹೋಗೋಕು ಆಗಲ್ಲ. ಹೋಗೋ ಮಾತೇ ಇಲ್ಲ...' ಆ ಆತ್ಮ ರೋಷದಿಂದ ಅಷ್ಟೇ ಆರ್ಭಟದಿಂದ ಈ ಡೈಲಾಗ್‌ ಹೇಳುವ ಹೊತ್ತಿಗೆ, ಆ ಭವ್ಯ ಬಂಗಲೆಯಲ್ಲೊಂದು ಘಟನೆ ನಡೆದಿರುತ್ತೆ....

  • ಕನ್ನಡದ ಜನಪ್ರಿಯ ಕೃತಿ, ಡಾ. ಕೆ ಶಿವರಾಮ ಕಾರಂತರ "ಮೂಕಜ್ಜಿಯ ಕನಸುಗಳು' ಪ್ರಕಟಣೆಗೊಂಡು ಐವತ್ತು ವರ್ಷಗಳು ಗತಿಸಿದೆ. ಇದೇ ಸಂದರ್ಭದಲ್ಲಿ ಕಾರಂತರ "ಮೂಕಜ್ಜಿಯ ಕನಸುಗಳು'...

  • ನೀವೇನಾದರೂ ಬೆಂಗಳೂರಿಗರಾಗಿದ್ದರೆ, ಅಥವಾ ಬೆಂಗಳೂರಿನಲ್ಲಿ ಒಂದು ರೌಂಡ್‌ ಹಾಕಿ ಬಂದಿದ್ದರೆ, "ಕನ್ನಡ್‌ ಗೊತ್ತಿಲ್ಲ' ಎಂಬ ಈ ಪದವನ್ನು ಖಂಡಿತಾ ಒಮ್ಮೆಯಾದರೂ,...

  • ಅದೊಂದು ಐವರ ತಂಡ. ತಮ್ಮದೇ ಆದ ಜಗತ್ತಿನಲ್ಲಿ ಒಂದೊಂದು ಜಂಜಾಟದಲ್ಲಿರುವ ಈ ಸ್ನೇಹಿತರು ಅದೆಷ್ಟೋ ವರ್ಷಗಳ ನಂತರ ಜೊತೆಯಾಗಿ, ಒಂದು ದಟ್ಟ ಕಾನನದೊಳಗೆ ನಿಗೂಢವಾಗಿರುವ...

ಹೊಸ ಸೇರ್ಪಡೆ