ದಾರದ ಮೇಲೆ ಹರಿದ ಬದುಕಿನ ನಡಿಗೆ

ಚಿತ್ರ ವಿಮರ್ಶೆ

Team Udayavani, May 11, 2019, 3:00 AM IST

ಆಕೆಗೆ ತಾನು ಯಾರು, ಯಾಕಾಗಿ ಇಲ್ಲಿ ಬಂಧಿಯಾಗಿದ್ದೇನೆ, ತನ್ನ ಅಸ್ತಿತ್ವವೇನು ಎಂಬುದೇ ಗೊತ್ತಿರುವುದಿಲ್ಲ. ಆತನಿಗೆ ತಾನು ಸಿದ್ಧಗಂಗಾ ಮಠದಲ್ಲಿ ಬೆಳೆದಿದ್ದು ಅನ್ನೋದು ಬಿಟ್ಟರೆ ಮಿಕ್ಕಂತೆ ಆತನಿಗೆ ತನ್ನ ಯಾವ ವಿವರವೂ ತಿಳಿದಿರುವುದಿಲ್ಲ. ಒಂದರ್ಥದಲ್ಲಿ ಇಬ್ಬರು ಸಮಾನ ಮನಸ್ಕರು. ಅವರಿಬ್ಬರು ಕೋಣೆಯೊಂದರಲ್ಲಿ ಬಂಧಿಯಾಗುತ್ತಾರೆ. ಅಲ್ಲಿ ಅವರಿಬ್ಬರ ಮೂಲ ಅಸ್ತಿತ್ವದ ಹುಡುಕಾಟ ಶುರುವಾಗುತ್ತದೆ. ಒಂದರ್ಥದಲ್ಲಿ ಹರಿದ ಬದುಕಿಗೆ ಹೊಲಿಗೆ …

“ಸೂಜಿದಾರ’ ಚಿತ್ರ ಆರಂಭವಾಗುತ್ತಿದ್ದಂತೆ “ದೇಹದ ಮೇಲಿನ ದೊಡ್ಡ ಗಾಯವೆಂದರೆ ಅದು ಮನಸ್ಸು’ ಎಂಬ ಸಂಭಾಷಣೆ ಬರುತ್ತದೆ. ಅದೇ ಅಂಶದೊಂದಿಗೆ ನಿರ್ದೇಶಕರು “ಸೂಜಿದಾರ’ವನ್ನು ಪೋಣಿಸಿದ್ದಾರೆ. ಮನಸ್ಸಿಗಾಗುವ ಗಾಯ ಹಾಗೂ ಅದರಾಚೆಗಿನ ಪರಿಣಾಮವೇ ಈ ಚಿತ್ರದ ಮೂಲ ಅಂಶ. “ಸೂಜಿದಾರ’ ಒಂದು ಸೂಕ್ಷ್ಮ ಸಂವೇದನೆಯ ಚಿತ್ರ ಎಂಬುದರಲ್ಲಿ ಎರಡು ಮಾತಿಲ್ಲ. ಕನ್ನಡದಲ್ಲಿ ಇತ್ತೀಚೆಗೆ ಬರುತ್ತಿರುವ ಹೊಸ ಬಗೆಯ ಸಿನಿಮಾಗಳ ಸಾಲಿಗೆ ಸೇರುವ ಚಿತ್ರವಿದು.

ಹಾಗಾಗಿ, ಸಿನಿಮಾದ ನಿರೂಪಣೆಯಿಂದ ಹಿಡಿದು, ಪಾತ್ರ ಪೋಷಣೆಯವರಗೆ ಎಲ್ಲದರಲ್ಲೂ ಹೊಸತನ ಕಟ್ಟಿಕೊಡಲು ನಿರ್ದೇಶಕರು ಪ್ರಯತ್ನಿಸಿರೋದು ಎದ್ದು ಕಾಣುತ್ತದೆ. ನಿರ್ದೇಶಕರು ಚಿತ್ರದುದ್ದಕ್ಕೂ ಸಾಕಷ್ಟು ಸೂಕ್ಷ್ಮ ಅಂಶಗಳನ್ನು ಬಿಚ್ಚಿಡುತ್ತಲೇ ಸಾಗಿದ್ದಾರೆ. ಮುಖ್ಯವಾಗಿ ಈ ಸಿನಿಮಾವನ್ನು ಹೆಣ್ಣೊಬ್ಬಳ ಆಂತಃರ್ಯದ ಕಥೆ ಎನ್ನಬಹುದು.

ಕಾಲನ ಕೈಗೊಂಬೆಯಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಂಡು, ಮತ್ತೆ ಅದನ್ನು ಹುಡುಕುವ ಪ್ರಯತ್ನದಲ್ಲಿರುವ ಹಾಗೂ ಆ ಪ್ರಯತ್ನದಲ್ಲಿ ಆಕೆಯನ್ನು ಸಮಾಜ ನೋಡುವ ರೀತಿಯನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ. ಕೆಲವು ಅಂಶಗಳನ್ನು ನಿರ್ದೇಶಕರು ಪರೋಕ್ಷವಾಗಿ ಹೇಳುತ್ತಾ ಹೋಗಿದ್ದಾರೆ.

ಉದಾಹರಣೆಗೆ ನಾಟಕದಲ್ಲಿ ಶ್ರೀರಾಮನ ಪಾತ್ರ ಮಾಡುವ ವ್ಯಕ್ತಿಯೊಬ್ಬನ ಮೂಲ ವ್ಯಕ್ತಿತ್ವ, ಕಳ್ಳನನ್ನು ಬದಲಿಸುತ್ತೇನೆಂಬ ಧೈರ್ಯದಿಂದ ಪ್ರೀತಿಗೆ ಬೀಳುವ ಕನಸು ಕಂಗಳ ಹುಡುಗಿ, ಒಂದು ದಿನ ಮಗಳು ಮನೆಗೆ ಬಾರದೇ ಹೋದರೆ ಬೇರೆಯೇ ಅರ್ಥ ಕಲ್ಪಿಸುವ ತಾಯಿ, ತನ್ನದಲ್ಲದ ತಪ್ಪಿಗೆ ತಲೆಮರೆಸಿಕೊಂಡಿರಬೇಕಾದ ಹುಡುಗನ ಅಸಹಾಯಕತೆ, ದುಗುಡ, ವೇದನೆ … ಹೀಗೆ ಹಲವು ಪದರಗಳೊಂದಿಗೆ ಕಥೆಯನ್ನು ಬಿಚ್ಚಿಡುತ್ತಾ ಹೋಗಿದ್ದಾರೆ.

ಇಲ್ಲಿ ನಿರ್ದೇಶಕರು ಯಾವ ಅಂಶವನ್ನೂ ತುಂಬಾ ಅತಿಯಾಗಿ, ವಿರಳವಾಗಿ ಹೇಳುವ ಗೋಜಿಗೆ ಹೋಗಿಲ್ಲ. ಆದರೆ, ಸೂಕ್ಷ್ಮ ಅಂಶಗಳೊಂದಿಗೆ ಕಟ್ಟಿಕೊಟ್ಟಿದ್ದಾರೆ. ಕೆಲವು ಪ್ರಶ್ನೆಗಳಿಗೆ ಉತ್ತರ ಹುಡುಕುವ ಜವಾಬ್ದಾರಿಯನ್ನು ಪ್ರೇಕ್ಷಕರಿಗೆ ಬಿಟ್ಟಿದ್ದಾರೆ. ಚಿತ್ರದ ಕೆಲವು ದೃಶ್ಯಗಳು ಆಗಾಗ ಮರುಕಳಿಸುತ್ತವೆ. ಆ ತರಹದ ಕೆಲವು ತಪ್ಪುಗಳನ್ನು ಬದಿಗಿಟ್ಟು ನೋಡಬೇಕಾಗುತ್ತದೆ.

ಮುಖ್ಯವಾಗಿ ಈ ತರಹದ ಸಿನಿಮಾಗಳನ್ನು ತುಂಬಾ ಸಾವಧಾನದಿಂದ ನೋಡಬೇಕಾಗುತ್ತದೆ. ಅದಕ್ಕೆ ಕಾರಣ ಕಥೆ ತೆರೆದುಕೊಳ್ಳುವ ರೀತಿ. ಕಮರ್ಷಿಯಲ್‌ ಸಿನಿಮಾಗಳಂತೆ ಹೀರೋ ಅದ್ಧೂರಿ ಎಂಟ್ರಿ, ಕಲರ್‌ಫ‌ುಲ್‌ ಸಾಂಗ್‌, ಬ್ಯೂಟಿಫ‌ುಲ್‌ ಲೊಕೇಶನ್‌ … ಇವೆಲ್ಲವನ್ನು ಬಯಸುವವರಿಗೆ ಮತ್ತು ಕಮರ್ಷಿಯಲ್‌ ಸಿನಿಮಾಗಳಲ್ಲಿನ ಮನರಂಜನೆಯ ನಿರೀಕ್ಷೆಯಲ್ಲಿರುವ ಸಿನಿಪ್ರಿಯರಿಗೆ “ಸೂಜಿದಾರ’ ಹೆಚ್ಚೇನು ರುಚಿಸಲಿಕ್ಕಿಲ್ಲ.

ಬದಲಾಗಿ ಹೊಸ ಜಾನರ್‌ನ, ಸೂಕ್ಷ್ಮ ಅಂಶಗಳಿರುವ ಸಿನಿಮಾ ಕಣ್ತುಂಬಿಕೊಳ್ಳುವ ಮನಸ್ಸುಳ್ಳವರಿಗೆ “ಸೂಜಿ’ ಇಷ್ಟವಾಗಬಹುದು. ಇಲ್ಲಿ ನಿರ್ದೇಶಕರು ಯಾವ ಪಾತ್ರವನ್ನು ಹೆಚ್ಚು ಹೈಲೈಟ್‌ ಮಾಡಿಲ್ಲ. ಹಾಗೆ ಬಂದು ಹೀಗೆ ಹೋಗುತ್ತವೆ. ಆ ಅವಧಿಯಲ್ಲೇ ಹರಿದ ಬದುಕಿನ ಅನಾವರಣ. ಈ ಚಿತ್ರದ ಹೈಲೈಟ್‌ ಎಂದರೆ ಹರಿಪ್ರಿಯಾ. ಈ ಹಿಂದೆ ಅವರು ಮಾಡಿರುವ ಪಾತ್ರಗಳಿಗೆ ಹೋಲಿಸಿದರೆ ಸಂಪೂರ್ಣ ಭಿನ್ನವಾದ ಪಾತ್ರ “ಸೂಜಿದಾರ’ದಲ್ಲಿದೆ.

ಪದ್ಮಾ ಎಂಬ ಅಸಹಾಯಕ ಹೆಣ್ಣುಮಗಳ ಕಥಾನಕವನ್ನು ಹರಿಪ್ರಿಯಾ ನಟನೆಗಿಂತ ಹೆಚ್ಚಾಗಿ ತಮ್ಮ ಹಾವ-ಭಾವಗಳ ಮೂಲಕ ಕಟ್ಟಿಕೊಟ್ಟಿದ್ದಾರೆ. ಮಾತಿಗಿಂತ ಮೌನಕ್ಕೆ ಹೆಚ್ಚು ಅರ್ಥ. ಹರಿಪ್ರಿಯಾ ಪಾತ್ರದಲ್ಲಿ ಮೌನ ಹೆಚ್ಚು ಕೆಲಸ ಮಾಡಿದೆ. ಉಳಿದಂತೆ ಯಶ್‌ ಶೆಟ್ಟಿ ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅಮಾಯಕನೊಬ್ಬನ ವೇದನೆ, ತೊಳಲಾಟವನ್ನು ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಉಳಿದಂತೆ ಅಚ್ಯುತ್‌, ಚೈತ್ರಾ ಕೊಟ್ಟೂರು, ಸುಚೇಂದ್ರ ಪ್ರಸಾದ್‌ ಸೇರಿದಂತೆ ಇತರರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಚಿತ್ರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ಕಥೆಯ ಆಶಯಕ್ಕೆ ತಕ್ಕುದಾಗಿದೆ.

ಚಿತ್ರ: ಸೂಜಿದಾರ
ನಿರ್ಮಾಣ: ಸಚ್ಚೀಂದ್ರನಾಯಕ್‌-ಅಭಿಜಿತ್‌
ನಿರ್ದೇಶನ: ಮೌನೇಶ್‌ ಬಡಿಗೇರ್‌
ತಾರಾಗಣ: ಹರಿಪ್ರಿಯಾ, ಯಶ್‌ ಶೆಟ್ಟಿ, ಸುಚೇಂದ್ರ ಪ್ರಸಾದ್‌, ಚೈತ್ರಾ ಕೊಟ್ಟೂರು, ಅಚ್ಯುತ್‌ ಕುಮಾರ್‌ ಮತ್ತಿತರರು.

* ರವಿಪ್ರಕಾಶ್‌ ರೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಸಾಮಾನ್ಯವಾಗಿ ಹುಡುಗರು ಲವ್‌ ಫೇಲ್ಯೂರ್‌ ಆದ್ರೆ, ಫ್ಯಾಮಿಲಿ ಪ್ರಾಬ್ಲಂ ಅಥವಾ ಇನ್ನೇನಾದ್ರೂ ಬೇಸರವಾದರೆ ಆದ್ರೆ ಹಳೆಯದನ್ನೆಲ್ಲ ಮರೆಯಲು ಕೈಯಲ್ಲಿ ಬಾಟಲ್‌...

  • ಆಕೆ ಶ್ರೀಮಂತ ಬಿಝಿನೆಸ್‌ಮ್ಯಾನ್‌ವೊಬ್ಬನ ಪತ್ನಿ. ಮೊದಲ ಪತ್ನಿಯನ್ನು ಕಳೆದುಕೊಂಡು ಒಂಟಿತನದಲ್ಲಿದ್ದ ಆ ಬಿಝಿನೆಸ್‌ ಮ್ಯಾನ್‌ಗೆ ಮೋಡಿ ಮಾಡಿ, ಆತನ ಪತ್ನಿಯಾದವಳಾಕೆ....

  • ಕಾಯಿಲೆಯ ಕೊನೆ ಹಂತದಲ್ಲಿ ನೀವು ಸಂಪೂರ್ಣವಾಗಿ ನಿಮ್ಮನ್ನೇ ಮರೆತಿರುತ್ತೀರಿ ವೈದ್ಯರು ಹೀಗೆ ಹೇಳುವಾಗ ಆಕೆಗೆ ಇಡೀ ಜಗತ್ತೇ ಕುಸಿದಂತಾಗುತ್ತದೆ. ಮಗಳ ಮುಖ ಕಣ್ಣ...

  • "ಕಿಕ್‌ ಏರ್‌ ಬೇಕು ಅಂದ್ರೆ ಕ್ವಾಟ್ರಾ ಬೇಕು... ಒಂಟಿನ ಮುಟ್ಬೇಕು ಅಂದ್ರೆ ಮೀಟ್ರಾ ಬೇಕು...' ಇಂಥದ್ದೊಂದು ಮಾಸ್‌ ಡೈಲಾಗ್‌ ಹೇಳಿ ಮುಗಿಸುವಷ್ಟರಲ್ಲಿ, "ಒಂಟಿ'ಯನ್ನು...

  • ಆತ ಖಡಕ್‌ ಪೊಲೀಸ್‌ ಆಫೀಸರ್‌. ಬಿಹಾರದ ಗೂಂಡಾಗಳ ಎದೆಯಲ್ಲಿ ನಡುಕ ಹುಟ್ಟಿಸಿದ ಎನ್‌ಕೌಂಟರ್‌ ಸ್ಪೆಷಲಿಸ್ಟ್‌. ಗೂಂಡಾಗಳಿಗೆ ಗುಂಡೇಟು ಮದ್ದು ಎಂದು ಭಾವಿಸಿದ...

ಹೊಸ ಸೇರ್ಪಡೆ