Udayavni Special

ಸಾಂಗ್‌ ಆಫ್ ದಿ ಸ್ಪ್ಯಾರೋಸ್‌ : ಜೀವನೋತ್ಸಾಹವನ್ನು ನಮ್ಮೊಳಗೆ ಬಿತ್ತುವ ಚಿತ್ರ


Team Udayavani, Aug 30, 2021, 7:49 PM IST

ಸಾಂಗ್‌ ಆಫ್ ದಿ ಸ್ಪ್ಯಾರೋಸ್‌ : ಜೀವನೋತ್ಸಾಹವನ್ನು ನಮ್ಮೊಳಗೆ ಬಿತ್ತುವ ಚಿತ್ರ

ಬದುಕೆಂಬ ಹಕ್ಕಿ ಬೊಗಸೆಯಲ್ಲಿರುತ್ತದೆ. ಬೊಗಸೆ ತೆಗೆದರೆ ಹಕ್ಕಿ ಹಾರಿ ಹೋಗಬಹುದು. ಹಾಗಾಗದೇ ಉಳಿಸಿಕೊಳ್ಳುವುದೇ ಜಾಣ್ಮೆ ಎನ್ನುವುದೇ ಸಾಂಗ್‌ ಆಫ್ ಸ್ಪ್ಯಾರೋ ಚಿತ್ರದ ಒಟ್ಟೂ ಎಳೆ. ಜೀವನೋತ್ಸಾಹವನ್ನು ನಮ್ಮೊಳಗೆ ಬಿತ್ತುವ ಚಿತ್ರ.

ಮತ್ತೆ ಹೇಳಬಹುದಾದ ಮಾತೆಂದರೆ ಇದು ಸಂಪೂರ್ಣವಾಗಿ ನೂರಕ್ಕೆ ನೂರರಷ್ಟು ಎನ್ನಬಹುದಾದ ಮಜಿದ್‌ ಮಜಿದಿಯ ಸಿನಿಮಾ. ಸಾಂಗ್‌ ಆಫ್ ಸ್ಪ್ಯಾರೋಸ್‌ 2008 ರ ಸಿನಿಮಾ.

ಈಗಾಗಲೇ ತಿಳಿಸಿದಂತೆ ಇರಾನಿನ ಚಿತ್ರ ನಿರ್ದೇಶಕ ಮಜಿದ್‌ ಮಜಿದಿಯ ಕಥೆ ಮತ್ತು ಅದರಲ್ಲಿ ಬರುವ ಪಾತ್ರಗಳೆಲ್ಲ ಆಕಾಶ ಜೀವಿಯಾಗಿರುವುದಿಲ್ಲ, ಎಲ್ಲವೂ ಸುತ್ತಲಿನದ್ದೇ. ಪಾತ್ರಗಳೂ ಸಹ ತೀರಾ ಸರಳ ಮತ್ತು ಸಹಜ. ಈ ಸರಳ ಮತ್ತು ಸಹಜ ಪಾತ್ರಗಳಿಂದಲೇ ಬದುಕನ್ನು ನೋಡುವ ಕ್ರಮವೇ ಮಜಿದ್‌ ಮಜಿದಿಯ ಸಿನಿಮಾಗಳ ವಿಶೇಷ.

ಕ್ರೈಮ್‌ ಥ್ರಿಲ್ಲರ್‌ನ ರೋಚಕತೆ ಈ ಸಿನಿಮಾದಲ್ಲಿಲ್ಲ. ನಿಮ್ಮನ್ನು ಕುತೂಹಲದ ಸವಾರಿ ಮಾಡಿಸುವುದಿಲ್ಲ. ಆದರೆ, ಮೆಲ್ಲನೆ ನಿಮ್ಮ ಕೈಯನ್ನು ಹಿಡಿದು ಸಣ್ಣ ಕಾಲುದಾರಿಯಲ್ಲಿ ಕರೆದೊಯ್ಯುತ್ತದೆ.

ಚಿತ್ರದ ಕಥೆ ತೀರಾ ಸರಳ ಮತ್ತು ನೇರ. ಕರೀಮ್‌ ನದ್ದು (ರೇಝಾ ನಾಜಿ) ಬಡ ಕುಟುಂಬ. ಪತ್ನಿ, ಮಕ್ಕಳು ಎಲ್ಲರ ಹೊಟ್ಟೆಯನ್ನೂ ತುಂಬಿಸಬೇಕು. ತನ್ನ ಹಳ್ಳಿಯಲ್ಲಿ ಉಷ್ಟ್ರ ಪಕ್ಷಿಗಳನ್ನು ಸಾಕಿಕೊಂಡು ಪ್ರಾಮಾಣಿಕನಾಗಿ ಬದುಕುತ್ತಿದ್ದವ. ಹೆಚ್ಚಿನ ಲೋಭಿತನವಾಗಲೀ, ಅತಿಯಾಸೆಗಾಗಲೀ ಹತ್ತಿರ ಸುಳಿಯದಂತೆ ಬೇಲಿ ಹಾಕಿದ್ದ. ಅವನಾಯಿತು, ಅವನ ಧರ್ಮವಾಯಿತು, ಜೀವನವಾಯಿತು. ಇದ್ದದ್ದನ್ನು ಒಂದಿಷ್ಟು ಹಂಚಿಕೊಂಡು ಬದುಕುತ್ತಿದ್ದ. ಮನೆಯಲ್ಲಿ ಯಾವುದೇ ವಿಶೇಷ ಕಾರ್ಯಕ್ರಮ ಮಾಡಿದ್ದರೂ ಪಕ್ಕದ ಮನೆಗೆ ಅದರಲ್ಲಿ ಒಂದು ಭಾಗ ಕೊಟ್ಟು ಉಳಿದದ್ದನ್ನು ಸೇವಿಸುತ್ತಿದ್ದ. ಹಂಚಿ ತಿನ್ನುವುದರಲ್ಲಿ ಸುಖವಿದೆ ಎಂದುಕೊಂಡವ.

ಇಂಥವನು ಎದುರಾಗುವ ಸವಾಲುಗಳಿಗೆ ಒಡ್ಡಿಕೊಳ್ಳುತ್ತಾ ಅನಿವಾರ್ಯವಾಗಿ ದುಡಿಮೆಗೆಂದು ನಗರಕ್ಕೆ ಹೋದವ, ಅಲ್ಲಿನ ಅಗತ್ಯಕ್ಕೆ ತಕ್ಕಂತೆ ಹೇಗೆ ಹೊಂದಿಕೊಳ್ಳುತ್ತಾನೆ. ಆ ಮೂಲಕ ಹೇಗೆ ಅಪ್ರಾಮಾಣಿಕನೂ, ಲೋಭಿಯೂ, ಸ್ವಾರ್ಥಿಯೂ ಆಗುತ್ತಾನೆ. ಅವನಲ್ಲಿದ್ದ ಎಲ್ಲ ಮಾನವೀಯ ಗುಣಗಳೂ ತುಕ್ಕು ಹಿಡಿಯುತ್ತವೆ. ಎಲ್ಲವೂ ತನಗೇ ಎನ್ನುವ ಸ್ಥಿತಿಗೆ ಬಂದು, ಅಂತಿಮವಾಗಿ ತನ್ನೊಳಗಿನ ಬದಲಾವಣೆಯನ್ನು ಗಮನಿಸುತ್ತಾನೆ. ಅವನು ಹೆಚ್ಚು ಲಾಲಸೆಯಿಂದ ಕೂಡಿದಷ್ಟು ಕಷ್ಟಗಳು ಹೆಚ್ಚಾಗುತ್ತವೆ.

ಒಂದು ದಿನ ಅವೆಲ್ಲವನ್ನೂ ತ್ಯಜಿಸಿ ತನ್ನದೇನಿತ್ತೋ ಅದರಲ್ಲೇ (ಆರಂಭದ ನೈತಿಕತೆಯ ಕರೀಮ್‌) ಸುಖ ಪಡಲು ನಿರ್ಧರಿಸುತ್ತಾನೆ. ತದ ನಂತರ ಸಂತೋಷದ ಪರ್ವ ಆರಂಭವಾಗುತ್ತದೆ.

ಮಜಿದ್‌ ಮಜಿದಿ ಹೆಚ್ಚಾಗಿ ತನ್ನ ಸಿನಿಮಾಗಳಲ್ಲಿ ಚರ್ಚಿಸುವುದು ಮಾನವೀಯ ಮೌಲ್ಯಗಳನ್ನು. ಆಧುನಿಕ ಬದಲಾವಣೆಗಳ ನಡುವೆ ಬದಲಾಗುವ ಮನುಷ್ಯ ಮತ್ತು ಅವನ ಮನಸ್ಥಿತಿಯನ್ನು ವಿವರಿಸುತ್ತಲೇ ಹಾಗೇ ಪ್ರಚೋದಿಸುವ ಬಾಹ್ಯ ಒತ್ತಡದ ಕುರಿತೂ ಪ್ರಸ್ತಾಪಿಸುವುದು, ಅಂತಿಮವಾಗಿ ಅದರಿಂದ ಮುಕ್ತಿ ಕೊಡುವ ಬಗೆಯೇ ಸೊಗಸಾದದ್ದು.

ಆದರೆ ಇದನ್ನು ಸುಖಾಂತವೆಂದು ನಾಟಕೀಯವಾಗಿ ಹೇಳುವಂತಿಲ್ಲ. ಕೆಲವು ಸಿನಿಮಾಗಳಲ್ಲಿನ ಹಾಗೆ ಸಿನಿಮಾದ ಮುಕ್ಕಾಲು ಭಾಗ ಇದ್ದ ಕಷ್ಟಗಳೆಲ್ಲಾ ಇನ್ನುಳಿದ ಕಾಲು ಭಾಗದಲ್ಲಿ ಮುಗಿದು, ಸಾಹುಕಾರನಾಗಿ, ಒಳ್ಳೆ ಹುಡುಗಿ ಸಿಕ್ಕು, ಕಾರು-ಬಂಗಲೆಯೆಲ್ಲ ಮುಗಿದು ಶುಭಂ ಹೇಳುವಂಥದ್ದಲ್ಲ. ಮಜಿದ್‌ ಮಜಿದಿಯ ಚಿತ್ರಗಳು ಸದಾ ಬದುಕಿನ ಬಗೆಗಿನ ಧನಾತ್ಮಕತೆಯನ್ನು ಬಿಂಬಿಸುತ್ತವೆ. ಕಷ್ಟಗಳ ನಡುವೆಯೂ ಇರುವ ಸ್ವಾವಲಂಬನೆಯ ದಾರಿ ಮತ್ತು ಸಂತಸದ ದಾರಿಯನ್ನು ತೋರಿಸುತ್ತವೆ.

ಈ ಸಿನಿಮಾದಲ್ಲೂ ಕರೀಮ್‌ ಹೇಗೆ ನಿಧಾನವಾಗಿ ಬಾಹ್ಯ ಒತ್ತಡಗಳಿಗೆ ಒಳಗಾಗುತ್ತಾ ತನ್ನ ನೈತಿಕತೆಯ ಬಣ್ಣವನ್ನು ಹೇಗೆ ಕಳೆದುಕೊಳ್ಳುತ್ತಾನೆ ಎಂಬುದನ್ನು ಹಾಗೂ ಕ್ರಮೇಣ ತನ್ನ ಗುರುತು ತನಗೇ ಸಿಗದಷ್ಟು ಹೇಗೆ ಬದಲಾಗುತ್ತಾನೆ ಎಂಬುದನ್ನೂ ಚೆನ್ನಾಗಿ ಹಲವು ಸನ್ನಿವೇಶಗಳಲ್ಲಿ (ಬೈಕ್‌ ಸೇವೆಯಲ್ಲಿ ಫ್ರಿಜ್‌ ಒಂದನ್ನು ದಾರಿ ತಪ್ಪಿ ಮನೆಗೆ ತರುವ, ಆಮೇಲೆ ಗೊಂದಲದಲ್ಲಿ ಸಿಲುಕುವ, ಮತ್ತೂಮ್ಮೆ ರಸವತ್ತಾದ ಅಡುಗೆ ಮಾಡಿ ಬೇರೆಯವರಿಗೆ ಕೊಡದಂತೆ ಹೇಳುವ, ಗುಜರಿ ಸಾಮಾನುಗಳೆಲ್ಲಾ ಇರಲಿ ಎಂದು ತಂದು ರಾಶಿ ಹಾಕಿಕೊಂಡು, ಪಕ್ಕದ ಮನೆಯವಳು ಒಂದು ಬಾಗಿಲನ್ನು ಕೇಳಿದಾಗ ಕಂಜೂಸು ಮಾಡುವ ಹೀಗೆ ಹಲವು ಸನ್ನಿವೇಶಗಳು) ಕಟ್ಟಿ ಕೊಡುತ್ತಾನೆ. ಭಾವನೆಗಳನ್ನು ಕಟ್ಟಿಕೊಡಲು ಬಳಸುವ ರೂಪಕಗಳು ಮಜಿದ್‌ ಮಜಿದಿಯದ್ದು ಅದ್ಭುತ.

ನಮಗೆ ಎಷ್ಟು ದಕ್ಕಬೇಕೋ ಅಷ್ಟೇ ದಕ್ಕುವುದು, ಅದನ್ನು  ಹೊರತುಪಡಿಸಿದಂತೆ ಏನೂ ಸಿಗದು ಎನ್ನುವುದನ್ನು ಮಕ್ಕಳು ಮಾರುಕಟ್ಟೆಗೆ ಹೂವಿನ ಕುಂಡಗಳ ಜತೆ ತರುವ ಗೋಲ್ಡ್‌ ಫಿಶ್‌ ಗಳಿದ್ದ ಬಕೀಟು ತೂತಾಗಿ ನೀರು ಸೋರುತಿದ್ದಾಗ ಅವುಗಳನ್ನು ಬದುಕಿಸಲು ಪಡುವ ಸಾಹಸ. ಕೊನೆಗೆ ಗಡಿಬಿಡಿಯಲ್ಲಿ ಬಕೀಟು ಒಡೆದು ಮೀನುಗಳೆಲ್ಲಾ ರಸ್ತೆ ಮೇಲೆ ಬಿದ್ದು ವಿಲ ವಿಲ ಒದ್ದಾಡುತ್ತಿದ್ದಾಗ ಅನಿವಾರ್ಯವಾಗಿ ಮಕ್ಕಳು ಮೀನನ್ನು ಬದುಕಿಸಲು ಹತ್ತಿರದ ಚರಂಡಿಗೆ ತಳ್ಳುವುದು, ಒಂದು ಮೀನನ್ನು ಪ್ಲಾಸ್ಟಿಕ್‌ ಕವರಿನಲ್ಲಿ ನೀರಿನೊಂದಿಗೆ ತಂದು ತಮ್ಮ ಊರಿನ ಕೊಳಕ್ಕೆ ಬಿಡುವುದು. ಅದರಲ್ಲೇ ತೃಪ್ತಿ ಪಡುವುದು. ಇಡೀ ಸನ್ನಿವೇಶವೇ ಎಷ್ಟೊಂದು ಸೊಗಸು.

ತನ್ನೊಳಗಿನ ತನ್ನದಲ್ಲದ ಗುರುತುಗಳನ್ನು ಕಳಚಿಕೊಳ್ಳುವ ಕರೀಮ ಮತ್ತೆ ಬದುಕುವುದು ತನ್ನತನದೊಂದಿಗೆ. ಅಂದರೆ ಇದ್ದದ್ದರಲ್ಲೇ ಕಷ್ಟಪಡುವ, ಎಲ್ಲರೊಂದಿಗೆ ಸಂತೋಷದಿಂದ ಇರುವ, ಲೋಭಿಯಾಗದ ಕರೀಮನನ್ನು ಮತ್ತೆ ಹುಡುಕಿಕೊಳ್ಳುತ್ತಾನೆ. ಅದಕ್ಕೆ ಬಳಸಿರುವ ಸನ್ನಿವೇಶವೂ ಬಹಳ ಚೆನ್ನಾಗಿದೆ. ಕಾಲು ಮುರಿದುಕೊಂಡು ಗೋಡೆಗೆ ಒರಗಿ ಕುಳಿತಾಗ, ಮಕ್ಕಳು ಅವನ ಕಾಲಿನ ಬ್ಯಾಂಡೇಜ್‌ ಮೇಲೆ ಚಿತ್ರ ಬಿಡಿಸುತ್ತಾರೆ. ಆಗ ಮನೆಯೊಳಗೆ ಪಕ್ಷಿಯೊಂದು ಹೊರಗೆ ಹೋಗಲು ಪ್ರಯತ್ನಿಸುತ್ತಾ ಕಿಟಕಿಗೆ ಬಡಿದುಕೊಳ್ಳುತ್ತಿರುತ್ತದೆ. ಆಗ ಮೆಲ್ಲಗೆ ತಾನೇ ತೆವಳಿಕೊಂಡು ಹೋಗಿ ಬಾಗಿಲು ತೆರೆಯುತ್ತಾನೆ. ಹಕ್ಕಿ ಹಾರಿ ಹೋಗುತ್ತದೆ. ಇತ್ತ ಕಳೆದು ಹೋದ ಉಷ್ಟ್ರ ಪಕ್ಷಿ ವಾಪಸು ಬರುತ್ತದೆ. ಇವನ ಕಷ್ಟ ಕಳೆಯುತ್ತದೆ.

ಎಂದಿಗೂ ಮಜಿದ್‌ ಮಜಿದಿ ಸರಳ ಮತ್ತು ನೇರವಾದ ಕಥೆಯನ್ನು ನಿರೂಪಿಸಿದರೂ ಬದುಕಿನ ಹಾಗೆಯೇ ಹತ್ತಾರು ಎಳೆಗಳಿರುತ್ತವೆ, ಅರ್ಥದ ಪದರಗಳಿರುತ್ತವೆ. ಸಾಂಗ್‌ ಆಫ್ ಸ್ಪ್ಯಾರೋ ಸಹ ಅಂಥದ್ದೇ ಒಂದು ಅದ್ಭುತ ಚಿತ್ರ.

ಮತ್ತೂಂದು ಸಂಗತಿಯೆಂದರೆ, ಮಜಿದ್‌ ಮಜಿದಿಯ ಚಿತ್ರಗಳಲ್ಲಿ ಮಕ್ಕಳಿರಲೇಬೇಕು. ಮಕ್ಕಳಿಲ್ಲದ ಚಿತ್ರಗಳೇ ಇಲ್ಲ. ಕುಟುಂಬ, ಮಕ್ಕಳು ಹೀಗೆ.. ಬಹುತೇಕ ಸಿನಿಮಾಗಳಲ್ಲಿ ಇದು ಸಾಮಾನ್ಯ. ಮಜಿದ್‌ ಮಜಿದಿ ಈ ಮೂಲಕ ಮೌಲ್ಯಗಳನ್ನು ಒಂದು ತಲೆಮಾರಿನಿಂದ ಮತ್ತೂಂದು ತಲೆಮಾರಿಗೆ ವರ್ಗಾಯಿಸುವ ಕೆಲಸವನ್ನು ತಮ್ಮ ಸಿನಿಮಾದ ಮೂಲಕ ಸದ್ದಿಲ್ಲದೇ ಮಾಡುತ್ತಿದ್ದಾರೆ.

ಈ ಚಿತ್ರದಲ್ಲೂ ನಟಿಸಿರುವ ಮಕ್ಕಳ ಅಭಿನಯ ಕೆಲವು ಸನ್ನಿವೇಶಗಳಲ್ಲಿ (ಅದರಲ್ಲೂ ಗೋಲ್ಡ್‌ ಫಿಶ್‌ ರಸ್ತೆಯಲ್ಲಿ ಒದ್ದಾಡುತ್ತಿರುವಾಗ) ಕಣ್ಣು ಹನಿಗೂಡುತ್ತದೆ.

ರೇಝಾ ನಾಜಿ, ಮಾರ್ಯಂ ಅಕ್ಬಾರಿ, ಕಮ್ರಾನ್‌ ದೇಗನ್‌, ಹಮೀದ್‌ ಆಘಾಸಿ ಮತ್ತಿತರರು ಇದರಲ್ಲಿ ಅಭಿನಯಿಸಿದ್ದಾರೆ. ಮಜಿದ್‌ ಮಜಿದಿ ನಿರ್ದೆಶಿಸಿದ ಈ ಚಿತ್ರಕ್ಕೆ ಹೊಸೇನ್‌ ಅಲ್ಜಾದೆ ಮ್ಯೂಸಿಕ್ ನೀಡಿದ್ದಾರೆ.

“ಈ ಜಗತ್ತೇ ಒಂದು ಕನಸು, ಈ ಜಗತ್ತು ಒಂದು ಸುಳ್ಳು’ ಎಂದು ಕೊನೆಯ ಎರಡು ಸನ್ನಿವೇಶಗಳಿಗಿಂತ ಮೊದಲು ಮಕ್ಕಳೊಂದಿಗೆ ಹಾಡುತ್ತಾ ಹೋಗುವ ಕರೀಮನನ್ನು ನೋಡುವಾಗ ಜಗತ್ತು ಮತ್ತು ಬದುಕು ಎರಡೂ ಸುಂದರವಾಗಿ ಕಾಣುತ್ತವೆ.

ನಿಜವಾಗಲೂ ನಮ್ಮೊಳಗೆ ಜೀವನ ಪ್ರೀತಿಯನ್ನು ಬೆಳೆಸುವಂಥ ಚಲನಚಿತ್ರವಿದು. ಹಲವಾರು ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಭಾಗವಹಿಸಿ ಜನಮನ್ನಣೆ ಪಡೆದಿದೆ. ಕರೀಮ್‌ ಪಾತ್ರಧಾರಿ ರೇಝಾ ನಾಜಿಯವರಿಗೆ ಏಷ್ಯಾ ಫೆಸಿಫಿಕ್‌ ಸ್ಕ್ರೀನ್‌ ಪ್ರಶಸ್ತಿ, ಬರ್ಲಿನ್‌ ಸಿನಿಮೋತ್ಸವದ ಸಿಲ್ವರ್‌ ಬೇರ್‌ ಪ್ರಶಸ್ತಿ ಇತ್ಯಾದಿ ಹಲವು ಪ್ರಶಸ್ತಿಗಳು ಅತ್ಯುತ್ತಮ ನಟನೆಗೆ ಬಂದಿದೆ. ಫ‌ಜ್ರ್ ಸಿನಿಮೋತ್ಸವದಲ್ಲಿ ಅತ್ಯುತ್ತಮ ನಿರ್ದೇಶನಕ್ಕೆ ಪ್ರಶಸ್ತಿ ಲಭಿಸಿದೆ. ಆಸ್ಕರ್‌ ಪ್ರಶಸ್ತಿಗೂ ಇರಾನ್‌ ದೇಶದಿಂದ ನಾಮ ನಿರ್ದೇಶನ ಗೊಂಡಿತ್ತು.

 

-ಅರವಿಂದ ನಾವಡ

ಟಾಪ್ ನ್ಯೂಸ್

ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ

ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ

ಮೈಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಮೈಶುಗರ್ ಕಾರ್ಖಾನೆ ಖಾಸಗೀಕರಣ ನಿರ್ಧಾರದಿಂದ ಹಿಂದೆ ಸರಿದ ರಾಜ್ಯ ಸರ್ಕಾರ

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವೀಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ಮಡಿಕೇರಿ: ವಿಷ ಸೇವಿಸಿ ನಾಲ್ಕು ದಿನದ ಬಳಿಕ ಸಾವಿಗೀಡಾದ ಗ್ರಾಮ ಪಂಚಾಯತ್ ಸದಸ್ಯೆ.!

ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ: ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

ದೇಶವಾಸಿಗಳನ್ನು ಭಿಕ್ಷುಕರನ್ನಾಗಿಸಿದ್ದಾರೆ: ಪಿಎಂ ಮೋದಿ ವಿರುದ್ಧ ಕಾಂಗ್ರೆಸ್ ಟ್ವೀಟಾಸ್ತ್ರ

14

ಕನ್ನಡದ ಹಿರಿಯ ನಟ ಶಂಕರ್ ರಾವ್ ವಿಧಿವಶ

ರೈತರಿಂದ ರೈಲು ತಡೆ, ಪ್ರತಿಭಟನೆ; ಉತ್ತರಪ್ರದೇಶದ ಹಲವೆಡೆ ರೈಲು ಸಂಚಾರ ವ್ಯತ್ಯಯ

ರೈತರಿಂದ ರೈಲು ತಡೆ, ಪ್ರತಿಭಟನೆ; ಉತ್ತರಪ್ರದೇಶದ ಹಲವೆಡೆ ರೈಲು ಸಂಚಾರ ವ್ಯತ್ಯಯ

halapp-acgar

ವಿಜಯಪುರ: ಭೂಕಂಪದ ಆತಂಕ ಬೇಡವೆಂದ ಸಚಿವ ಹಾಲಪ್ಪ ಆಚಾರ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಸತ್ಯಕಥೆಯ ನದಿಯಾ, ಚಿತ್ರಕಥೆಯ ಒಸಾಮಾ ಹೇಳುವುದು ತಾಲಿಬಾನಿಯ ಕ್ರೌರ್ಯ ಜಗತ್ತನ್ನೇ

ಸತ್ಯಕಥೆಯ ನದಿಯಾ, ಚಿತ್ರಕಥೆಯ ಒಸಾಮಾ ಹೇಳುವುದು ತಾಲಿಬಾನಿಯ ಕ್ರೌರ್ಯ ಜಗತ್ತನ್ನೇ

Watch: ಫ್ಲೈಯಿಂಗ್‌ ಎಲಿಫೆಂಟ್ಸ್ : ವನ್ಯಜೀವಿ ಸಂರಕ್ಷಣೆಯ ಪರಿಣಾಮಕಾರಿ ಕಿರುಚಿತ್ರ

Watch: ಫ್ಲೈಯಿಂಗ್‌ ಎಲಿಫೆಂಟ್ಸ್ : ವನ್ಯಜೀವಿ ಸಂರಕ್ಷಣೆಯ ಪರಿಣಾಮಕಾರಿ ಕಿರುಚಿತ್ರ

ಮಕ್ಕಳ ಕಳ್ಳ ಸಾಗಾಣಿಕೆ;  ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”

ಶಿಶುಕಾಮ/ಮಕ್ಕಳ ಕಳ್ಳ ಸಾಗಾಣಿಕೆ; ಸತ್ಯ ಘಟನೆ ಆಧರಿತ ಚಿತ್ರ “ಐ ಯಾಮ್ ಆಲ್ ಗರ್ಲ್ಸ್”

MUST WATCH

udayavani youtube

ಅಕಾಲಿಕ ಮಳೆಗೆ ನೆಲಕ್ಕಚ್ಚಿದ ಭತ್ತದ ಪೈರುಗಳು : ಸಂಕಷ್ಟದಲ್ಲಿ ರೈತರು

udayavani youtube

ವಿಶೇಷ ಚೇತನ ಅಭಿಮಾನಿಯೊಬ್ಬನನ್ನು ಕಾಣಲು ಬಂದ ರಿಯಲ್ ಸ್ಟಾರ್ ಉಪೇಂದ್ರ!

udayavani youtube

ಅರರೆ… ಬಾಳೆ ಕಾಯಿ ಶ್ಯಾವಿಗೆ.. ರುಚಿ ಬಾಯಿಗೆ, ಉತ್ತಮ ಆರೋಗ್ಯಕ್ಕೆ

udayavani youtube

ದಾಂಡೇಲಿ : ಜನಮನ ಸೂರೆಗೊಂಡ ದನಗರ ಗೌಳಿ ನೃತ್ಯ

udayavani youtube

ಭತ್ತದ ಕೃಷಿ ಭರಪೂರ ಲಾಭ ತಂದು ಕೊಡುತ್ತಾ ?

ಹೊಸ ಸೇರ್ಪಡೆ

19

ಗ್ರಾಮದಲ್ಲಿ ಸಮರ್ಪಕ ಚರಂಡಿ ನಿರ್ಮಾಣಕ್ಕೆ ಒತ್ತಾಯ

ಸತ್ಕಾರ ಪುರುಷ ಸಕ್ಕರೆ ಕರಡೀಶ ಚಿತ್ರೀಕರಣಕ್ಕೆ ಚಾಲನೆ

ಸತ್ಕಾರ ಪುರುಷ ಸಕ್ಕರೆ ಕರಡೀಶ ಚಿತ್ರೀಕರಣಕ್ಕೆ ಚಾಲನೆ

ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ

ಶ್ರೀಲಂಕಾದ ಮೊದಲ ಟೆಸ್ಟ್ ನಾಯಕ ಬಂದುಲಾ ವರ್ಣಾಪುರ ನಿಧನ

18

2 ಲಕ್ಷ ಹೊಸ ರೈತರಿಗೆ ಬಡ್ಡಿ ರಹಿತ ಸಾಲ ವಿತರಣೆ

ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್‌..

ನಂಬಿದ ಕಂದಮ್ಮಗಳಿಗೆ ಕರಿಕಂಬಳಿ ನೆರಳಾದೀತಲೇ ಪರಾಕ್‌..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.