ಉಚಿತವಾಗಿ ಕೋವಿಡ್ 19 ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಆದೇಶ
Team Udayavani, Apr 9, 2020, 5:30 AM IST
ನವದೆಹಲಿ: ದೇಶಾದ್ಯಂತ ಕೋವಿಡ್ 19 ವೈರಸ್ ಸೋಂಕು ವ್ಯಾಪಕವಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಮತ್ತು ಖಾಸಗಿ ಲ್ಯಾಬ್‌ಗಳಲ್ಲಿ ಉಚಿತ ಪರೀಕ್ಷೆ ನಡೆಸಬೇಕು. ಕೇಂದ್ರ ಸರಕಾರ ಕೂಡಲೇ ಈ ಬಗ್ಗೆ ಸೂಕ್ತ ನಿರ್ದೇಶನ ಹೊರಡಿಸಬೇಕು ಎಂದು ಸುಪ್ರೀಂಕೋರ್ಟ್ ಇಂದು ಆದೇಶ ನೀಡಿದೆ.
ನ್ಯಾ.ಅಶೋಕ್ ಭೂಷಣ್ ಮತ್ತು ನ್ಯಾ.ಎಸ್.ರವೀಂದ್ರ ಭಟ್ ನೇತೃತ್ವದ ನ್ಯಾಯಪೀಠ ಈ ಆದೇಶ ನೀಡಿದ್ದು, ಖಾಸಗಿ ಲ್ಯಾಬ್‌ಗಳೂ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಸದ್ಯದ ಸಂಕಷ್ಟದ ಪರಿಸ್ಥಿತಿಯಲ್ಲಿ ಅವು ಕೊಂಚ ಉದಾರತೆ ತೋರಿಸಬೇಕು. ಜತೆಗೆ ಲ್ಯಾಬ್‌ಗಳೆಲ್ಲವೂ ನ್ಯಾಷನಲ್ ಎಕ್ರೆಡಿಷನ್ ಬೋರ್ಡ್ ಆಫ್ ಟೆಸ್ಟಿಂಗ್‌ನಿಂದ ಮಾನ್ಯತೆ ಪಡೆದಿರಬೇಕು ಎಂದಿದೆ.
ಇದಕ್ಕೂ ಮೊದಲು ನಡೆದಿದ್ದ ವಿಚಾರಣೆ ವೇಳೆ ಪರೀಕ್ಷೆ ನಡೆಸಲು ಅನುಮತಿ ಪಡೆದಿರುವ ಖಾಸಗಿ ಲ್ಯಾಬ್‌ಗಳು ನಿಗದಿಗಿಂತ ಹೆಚ್ಚಿನ ಶುಲ್ಕ ಪಡೆಯದಂತೆ ಗಮನಿಸಬೇಕು. ಇದರ ಜತೆಗೆ ಸಾರ್ವಜನಿಕರು ಪಾವತಿ ಮಾಡಿದ ಶುಲ್ಕವನ್ನು ಕ್ಲೇಮು ಮಾಡುವಂತೆ ಇರಬೇಕು ನ್ಯಾಯಪೀಠ ಸೂಚನೆ ನೀಡಿದೆ.
ರಕ್ಷಣೆ ನೀಡಿ: ವೈದ್ಯರು, ಆರೋಗ್ಯ ವೃತ್ತಿಪರರು ಕೋವಿಡ್ 19 ವೈರಸ್ ವಿರುದ್ಧದ ಹೋರಾಟದಲ್ಲಿ ಯೋಧರಾಗಿದ್ದಾರೆ. ಅವರಿಗೆ ಎಲ್ಲಾ ಸೌಲಭ್ಯ ಒದಗಿಸುವ ಮೂಲಕ ರಕ್ಷಿಸಬೇಕು ಎಂದು ಬುಧವಾರ ಸುಪ್ರೀಂಕೋರ್ಟ್ ಹೇಳಿದೆ. ಸಾಂಕ್ರಾಮಿಕ ರೋಗದ ನಡುವೆ ವೈದ್ಯರು ಮತ್ತು ಆರೋಗ್ಯ ಕಾರ್ಯಕರ್ತರಿಗೆ ರಕ್ಷಣಾತ್ಮಕ ಕಿಟ್‌ಗಳನ್ನು ಕೋರಿದ್ದ ಅರ್ಜಿ ವಿಚಾರಣೆ ವೇಳೆ ನ್ಯಾಯಪೀಠ ಈ ಸಲಹೆ ಮಾಡಿದೆ.