ಕೋವಿಡ್ 19 ಸೋಂಕಿನಿಂದ ಸಿಬಿಐ ಮಾಜಿ ನಿರ್ದೇಶಕ ರಂಜಿತ್ ಸಿನ್ಹಾ ನಿಧನ
ರೈಲ್ವೆ ರಕ್ಷಣಾ ಪಡೆ ಮತ್ತು ದೆಹಲಿ ಹಾಗೂ ಪಾಟ್ನಾದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
Team Udayavani, Apr 16, 2021, 12:49 PM IST
ನವದೆಹಲಿ:ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ಸಿಬಿಐ ಮಾಜಿ ಮುಖ್ಯಸ್ಥ ರಂಜಿತ್ ಸಿನ್ನಾ(68ವರ್ಷ) ಶುಕ್ರವಾರ(ಏಪ್ರಿಲ್ 16) ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಎಂದು ವರದಿ ತಿಳಿಸಿದೆ. ದೇಶದ ಉನ್ನತ ತನಿಖಾ ಸಂಸ್ಥೆಯಾದ ಸಿಬಿಐನಲ್ಲಿ ಸಿನ್ಹಾ ಇದ್ದಾಗ ಅತೀ ಹೆಚ್ಚು ವಿವಾದಕ್ಕೊಳಗಾಗಿದ್ದ ವ್ಯಕ್ತಿಯಾಗಿದ್ದರು.
ಗುರುವಾರ ರಾತ್ರಿ ಸಿನ್ಹಾ ಅವರಿಗೆ ಕೋವಿಡ್ 19 ಸೋಂಕು ದೃಢಪಟ್ಟಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಮುಂಜಾನೆ 4.30ಕ್ಕೆ ನಿಧನರಾಗಿರುವುದಾಗಿ ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ರಂಜಿತ್ ಸಿನ್ನಾ 1974ರ ಬ್ಯಾಚ್ ನ ಬಿಹಾರ್ ಕೇಡರ್ ನ ಐಪಿಎಸ್(ಇಂಡಿಯನ್ ಪೊಲೀಸ್ ಸರ್ವೀಸ್) ಅಧಿಕಾರಿಯಾಗಿದ್ದರು. 2012ರಲ್ಲಿ ಸಿಬಿಐ ಮುಖ್ಯಸ್ಥರಾಗಿ ನೇಮಕವಾಗುವ ಮುನ್ನ ಸಿನ್ಹಾ ಅವರು ಇಂಡೋ-ಟಿಬೆಟ್ ಬಾರ್ಡರ್ ಪೊಲೀಸ್(ಐಟಿಬಿಪಿ) ನ ಮುಖ್ಯಸ್ಥರಾಗಿದ್ದರು. ರೈಲ್ವೆ ರಕ್ಷಣಾ ಪಡೆ ಮತ್ತು ದೆಹಲಿ ಹಾಗೂ ಪಾಟ್ನಾದಲ್ಲಿ ಕೇಂದ್ರ ತನಿಖಾ ಸಂಸ್ಥೆಯ ಹಿರಿಯ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು.
ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ಪಬ್ಲಿಕ್ ಅಡ್ಮಿನಿಸ್ಟ್ರೇಷನ್ ನಲ್ಲಿ ಎಂ ಫಿಲ್ ಪಡೆದಿದ್ದರು. ರಂಜಿತ್ ಸಿನ್ಹಾ ಅವರು ಅಗಾಧವಾಗಿ ಓದುತ್ತಿದ್ದರು. ಮತ್ತು ನಿರಂತರವಾಗಿ ವಿವಿಧ ಪತ್ರಿಕೆ, ಮ್ಯಾಗಜಿನ್ಸ್ ಗಳಲ್ಲಿ ಪೊಲೀಸ್ ಇಲಾಖೆಗೆ ಸಂಬಂಧಿಸಿದ ಲೇಖನಗಳನ್ನು ಬರೆಯುತ್ತಿದ್ದರು ಎಂದು ವರದಿ ತಿಳಿಸಿದೆ.