ಜಾಯವಾಡಗಿಯಲ್ಲಿ ಜಾತ್ರಾ ಸಂಭ್ರಮ

ಪವಾಡ ಪುರುಷ ಸೋಮನಾಥೇಶ್ವರ ಶಿವಶರಣ ಶಿವಪ್ಪ ಮುತ್ಯಾ ಜಾತ್ರೋತ್ಸವ

Team Udayavani, Apr 5, 2019, 10:36 AM IST

ಹೂವಿನಹಿಪ್ಪರಗಿ: ಸುಕ್ಷೇತ್ರ ಜಯವಾಡಗಿ ಗ್ರಾಮದ ಶ್ರೀ ಸೋಮನಾಥೇಶ್ವರ ದೇವಸ್ಥಾನದ ಹೊರ ನೋಟ.

ಹೂವಿನಹಿಪ್ಪರಗಿ: ಸಮಾಜದಲ್ಲಿದ್ದ ಮೌಡ್ಯದ ಕತ್ತಲನ್ನು ತೊಲಗಿಸಿ ಜಗತ್ತಿಗೆ ಶಾಂತಿ ದಯಪಾಲಿಸುವುದರ ಜತೆಗೆ ಭಕ್ತರಿಗೆ ಸದಾ ಸುಖ, ಸಮೃದ್ಧಿ ಕರಿಣಿಸುತ್ತಾ ಬಂದಿರುವ ಅವತಾರಿ ಪುರುಷರಾದ ಶ್ರೀ ಸೋಮನಾಥೇಶ್ವರ ಹಾಗೂ ಶ್ರೀ ಶಿವಶರಣ ಶಿವಪ್ಪ ಮುತ್ಯಾನವರು ಭಕ್ತರ ಹೃದಯದಲ್ಲಿ ನೆಲೆಸಿದ್ದಾರೆ.

ಬಸವನ ಬಾಗೇವಾಡಿ ತಾಲೂಕಿನ ಮುತ್ಯಾನ ಕಟ್ಟಿ ಎಂದೇ ಪ್ರಸಿದ್ಧಿ ಪಡೆದಿರುವ ಸುಕ್ಷೇತ್ರ ಜಾಯವಾಡಗಿ ಗ್ರಾಮ ಚಿಕ್ಕದಾಗಿದ್ದರೂ ಗುರು-ಶಿಷ್ಯರ ಪ್ರಭಾವದಿಂದ ಪ್ರಸಿದ್ಧಿ ಪಡೆದಿದೆ. ಕೀರ್ತಿ ಚಿಕ್ಕದಾದರೂ ಮೂರ್ತಿ ದೊಡ್ಡದು ಎಂಬ ಮಾತಿನಂತೆ ಜಾಯವಾಡಗಿ ಎಂಬ ಹೆಸರು ಗುರುವಿನ ಪ್ರಭಾವದಿಂದ ತನ್ನದೆಯಾದ ಶಕ್ತಿ ಬೀರಿದೆ. ಪ್ರತಿ ವರ್ಷ ಯುಗಾದಿಯಂದು ಸುತ್ತಲಿನ ಗ್ರಾಮದ ಜನರು ಸೇರಿ ಗುರು-ಶಿಷ್ಯರಾದ ಶ್ರೀ ಸೋಮನಾಥ ಹಾಗೂ ಶ್ರೀ ಶಿವಶರಣ ಶಿವಪ್ಪ ಮುತ್ಯಾನವರ ಜಾತ್ರೆಯನ್ನು ನಡೆಸಿಕೊಂಡು ಬಂದಿದ್ದಾರೆ. ಬೇಡಿದವರಿಗೆ ಬೇಡಿದ್ದನ್ನು ಕರುಣಿಸುವ ಹಾಗೂ ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ದೈವ ಇವರು.

ಬಡವರ ಆರೋಗ್ಯದ ಕೇಂದ್ರ: ಆದಿ ಕಾಲದಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹಲವು ವೈದ್ಯರ ಬಳಿಗೆ ಹೋದರೂ ರೋಗ ವಾಸಿಯಾಗದವರು ಶ್ರೀಕ್ಷೇತ್ರಕ್ಕೆ ಬಂದು ಗುಣಮುಖರಾಗಿದ್ದಾರೆ. ಇಲ್ಲಿ ಶ್ರೀ ಸೋಮನಾಥ ಹಾಗೂ ಶಿವಪ್ಪ ಮುತ್ಯಾ ತಮ್ಮನ್ನು ನಂಬಿ ಬಂದ ಭಕ್ತರಿಗೆ ಅವರ ಜ್ಞಾನದ ಶಕ್ತಿಯಿಂದ ಪ್ರಸಾದ ನೀಡಿ ಕಾಯಿಲೆ ವಾಸಿ ಮಾಡಿ ಬಡವರ ವೈದ್ಯರೆಂದು ಹೆಸರಾದರು.

ಜಾನುವಾರುಗಳ ರೋಗಕ್ಕೂ ಮದ್ದು: ಜಾಯವಾಡಗಿ ಗ್ರಾಮದ ಸುತ್ತಮುತ್ತಲಿನ ಗ್ರಾಮದ ರೈತರು ತಮ್ಮ ಜಾನುವಾರುಗಳಿಗೆ ಕಾಲು, ಬಾಯಿ ಬೆನೆ ಹಾಗೂ ಇತರೆ ರೋಗಗಳು ಬಂದರೆ ಶ್ರೀಕ್ಷೇತ್ರದ ದೇವಾಲಯಕ್ಕೆ ಬಂದು ಮೂರು ಸುತ್ತು ಪ್ರದಕ್ಷಣೆ ಹಾಕಿ, ತುಪ್ಪವನ್ನು ಏರೆದರೆ ಸಾಕು. ಭಕ್ತಿಯಿಂದ ಪ್ರಸಾದ ಹಚ್ಚಿದರೆ ಬಂದಿರುವ ರೋಗ ಕಡಿಮೆಯಾಗುತ್ತದೆ ಪ್ರತೀತಿ ಇಂದಿಗೂ ಇದೆ.

ಭಾವೈಕ್ಯ ತಾಣ: ಗುರು-ಶಿಷ್ಯರ ಸಮ್ಮಿಲನ ಶ್ರೀಕ್ಷೇತ್ರ ಜಾಯವಾಡಗಿಯಲ್ಲಿ ಹಿಂದೂಗಳು ಅಷ್ಟೇ ಅಲ್ಲದೇ ಮುಸ್ಲಿಂ ಬಾಂಧವರು ಬಂದು ಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಮುಸ್ಲಿಂರೂ ಭೇಟಿ ನೀಡಿ ದೇವಾಲಯಕ್ಕೆ ತುಪ್ಪವನ್ನು ಸುರಿದು ತಮ್ಮ ಬೇಡಿಕೆಗಳನ್ನು ಭಗವಂತನಲ್ಲಿ ಬೇಡಿಕೊಳ್ಳುತ್ತಾರೆ. ಅಲ್ಲದೇ ತಮ್ಮ ಮನೆಯಲ್ಲಿ ಯಾರಿಗಾದರೂ ಅನಾರೋಗ್ಯ ಕಾಡುತ್ತಿದ್ದರೆ ದೇವಾಲಯದಿಂದ ತುಪ್ಪವನ್ನು ತೆಗೆದುಕೊಂಡು ಹೋಗಿ ಹಚ್ಚಿದರೆ ಸಾಕು ರೋಗ ಕಡಿಮೆಯಾಗುತ್ತದೆ ಎಂಬ ನಂಬಿಕೆ ಇಂದಿಗೂ ಇದೆ.

ಪಂಚ ಗ್ರಾಮದ ದೇವಸ್ಥಾನ ಕಮಿಟಿ
ಜಾಯವಾಡಗಿ, ಕಾನ್ನಾಳ, ಬ್ಯಾಕೋಡ, ಸೋಲವಾಡಗಿ ಹಾಗೂ ಪಕ್ಕದ ಮುದ್ದೇಬಿಹಾಳ ತಾಲೂಕಿನ ಅಗಸಬಾಳ ಗ್ರಾಮದವರು ದೇವಸ್ಥಾನದ ಕಮಿಟಿಯಲ್ಲಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ದೇವಸ್ಥಾನದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ದೇವಸ್ಥಾನಕ್ಕೆ ವಿಜಯಪುರ, ಬಾಗಲಕೋಟೆ, ಕಲಬುರಗಿ, ಯಾದಗಿರಿ ಸೇರಿದಂತೆ ಮಹಾರಾಷ್ಟ್ರದ ಭಕ್ತರು ಜಾತ್ರೆಗೆ ಆಗಮಿಸುತ್ತಾರೆ.

ಜಾತ್ರೆಯಲ್ಲಿಂದು
ಏ.5ರಂದು ಯುಗಾದಿ ಅಮಾವಾಸ್ಯೆ ದಿನ ಕಾನ್ನಾಳ ಗ್ರಾಮದ ಸದ್ಭಕ್ತರಿಂದ ಕಳಸದ ಆಗಮನ. ಜಾಯವಾಡಗಿ ಗ್ರಾಮಸ್ಥರಿಂದ ನಂದಿಕೋಲ ಮೆರವಣಿಗೆಯೊಂದಿಗೆ ಮಧ್ಯಾಹ್ನ 12ಗಂಟೆಗೆ ಕಳಸವು ಶಿಖರಕ್ಕೆರುವುದು. ನಂತರ ಅನ್ನಸಂತರ್ಪಣೆ, ರಾತ್ರಿ 10:30ಗಂಟೆಗೆ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಎಂಬ ಸಾಮಾಜಿಕ ನಾಟಕ ಪ್ರದರ್ಶನ ನಡೆಯಲಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ