ನೆರೆಹಾನಿ ಪರಿಹಾರಕ್ಕೆ ಒಟ್ಟಾಗಿ ಕೆಲಸ ಮಾಡಿ

ಮಳೆ ಪ್ರಮಾಣ ಕಡಿಮೆಯಾದ ನಂತರ ಇನ್ನೊಂದು ಸುತ್ತಿನ ಪರಿಶೀಲನೆ: ಹಾಲಪ್ಪ

Team Udayavani, Aug 10, 2019, 3:17 PM IST

ಸಾಗರ: ಎಸಿ ದರ್ಶನ್‌, ಶಾಸಕ ಹಾಲಪ್ಪ ಅವರು ಮಳೆ ಹಾನಿಯ ಕುರಿತು ಅಧಿಕಾರಿಗಳ ಜೊತೆಗೆ ಪರಿಶೀಲನಾ ಸಭೆ ನಡೆಸಿದರು.

ಸಾಗರ: ಅತಿವೃಷ್ಟಿ ಸಂದರ್ಭದಲ್ಲಿ ಎಲ್ಲಾ ಇಲಾಖೆಗಳು ಪರಸ್ಪರ ಒಟ್ಟಾಗಿ ಕೆಲಸ ಮಾಡುವ ಮೂಲಕ ನೆರೆಯಿಂದ ಹಾನಿಗೊಳಗಾದ ಜನರ ನೋವಿಗೆ ಸ್ಪಂದಿಸುವ ಕೆಲಸ ಮಾಡಬೇಕು. ಒಬ್ಬರ ಜವಾಬ್ದಾರಿಯನ್ನು ಇನ್ನೊಬ್ಬರಿಗೆ ವರ್ಗಾಯಿಸುವ ಕೆಲಸ ಮಾಡಬಾರದು ಎಂದು ಶಾಸಕ ಎಚ್. ಹಾಲಪ್ಪ ತಿಳಿಸಿದರು.

ನಗರದ ಉಪ ವಿಭಾಗಾಧಿಕಾರಿಗಳ ಸಭಾಂಗಣದಲ್ಲಿ ಶುಕ್ರವಾರ ಅತಿಯಾದ ಮಳೆಯಿಂದ ಆದ ಹಾನಿಯ ಕುರಿತು ಕರೆಯಲಾಗಿದ್ದ ವಿವಿಧ ಅಧಿಕಾರಿಗಳ ಜೊತೆಗಿನ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮೊದಲ ಹಂತದಲ್ಲಿ ನಷ್ಟದ ಅಂದಾಜು ತಯಾರು ಮಾಡಿ ಉಪ ವಿಭಾಗಾಧಿಕಾರಿಗಳಿಗೆ ನೀಡಬೇಕು. ಮಳೆ ಪ್ರಮಾಣ ಕಡಿಮೆಯಾದ ನಂತರ ಇನ್ನೊಂದು ಸುತ್ತಿನಲ್ಲಿ ಸಮಗ್ರ ಹಾನಿ ಅಧ್ಯಯನ ನಡೆಸುವಂತೆ ಸೂಚನೆ ನೀಡಿದರು.

ತಾಲೂಕಿನ ಆನಂದಪುರದ ಕೆಂಜಿಗಾಪುರ ಮತ್ತು ಎಡಜಿಗಳೇಮನೆ ಗ್ರಾಪಂನ ಮೂರುಕಟ್ಟೆ ಗ್ರಾಮದಲ್ಲಿ ಎರಡು ಜೀವಹಾನಿಯಾಗಿದೆ. ನೂರಾರು ಮನೆಗಳು ಬಿದ್ದಿದ್ದು, ರಸ್ತೆ, ಸೇತುವೆ, ಮೋರಿ ಕೊಚ್ಚಿ ಹೋಗಿದೆ. ಶಾಲಾ ಕಟ್ಟಡ, ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಇಂತಹ ಸಂದರ್ಭದಲ್ಲಿ ಚುನಾಯಿತ ಪ್ರತಿನಿಧಿಗಳು ಮತ್ತು ಅಧಿಕಾರಿ ನೌಕರ ವರ್ಗ ಸಂತ್ರಸ್ತ ಜನರ ಕಣ್ಣೀರು ಒರೆಸುವ ಸಾರ್ಥಕ ಕೆಲಸ ಮಾಡಬೇಕಾಗಿದೆ ಎಂದರು.

ನಷ್ಟದ ಅಂದಾಜು ತಯಾರಿಸುವಾಗ ಸ್ವಲ್ಪ ವಿಶಾಲ ಹೃದಯ ಹೊಂದಿರಬೇಕು. ಅಧಿಕಾರದ ಚೌಕಟ್ಟಿನಲ್ಲಿ ನಷ್ಟದ ಅಂದಾಜು ತಯಾರು ಮಾಡಿದರೆ ಇದರಿಂದ ಸಂತ್ರಸ್ತರಿಗೆ ಅನ್ಯಾಯವಾಗುತ್ತದೆ. ಕೇಂದ್ರ ಮತ್ತು ರಾಜ್ಯದಲ್ಲಿ ನಮ್ಮದೇ ಸರ್ಕಾರ ಇರುವುದರಿಂದ ಹೆಚ್ಚಿನ ಅನುದಾನ ತಂದು ಸಂತ್ತಸ್ತರಿಗೆ ಕೊಡುವ ಜೊತೆಗೆ ಹಾನಿಯಾಗಿರುವ ಕಾಮಗಾರಿಗಳನ್ನು ಪುನರ್‌ ನಿರ್ಮಾಣ ಮಾಡಲು ಸಾಧ್ಯವಾಗುತ್ತದೆ. ತಾಲೂಕಿನಲ್ಲಿ ಮಳೆಗಾಲ ಸಂದರ್ಭದಲ್ಲಿ ಅಕೇಶಿಯಾ ಸೇರಿದಂತೆ ಯಾವುದೆ ಮರ ಕಡಿತಲೆಗೆ ಅವಕಾಶ ಕಲ್ಪಿಸಬೇಡಿ. ನಾನು ಹೊಸನಗರ ಶಾಸಕನಾಗಿದ್ದಾಗ ಜುಲೈನಿಂದ ಅಕ್ಟೋಬರ್‌ವರೆಗೆ ಮರ ಕಡಿತಲೆಗೆ ನಿಷೇಧ ಹೇರಿದ್ದೆ. ಸಾಗರ ತಾಲೂಕಿನಲ್ಲಿಯೂ ಈ ಬಗ್ಗೆ ಕ್ರಮ ಕೈಗೊಳ್ಳಿ ಎಂದು ತಿಳಿಸಿದರು.

ಸಹಾಯಕ ಆಯುಕ್ತ ದರ್ಶನ್‌ ಪಿ.ವಿ. ಮಾತನಾಡಿ, ಪರಿಹಾರ ಕಾರ್ಯ ಕೈಗೊಳ್ಳಲು ಹಣದ ಕೊರತೆ ಇಲ್ಲ. ಸರ್ಕಾರ ಎಷ್ಟು ಬೇಕಾದರೂ ಹಣ ಕೊಡಲು ಸಿದ್ಧವಿದೆ. ಜೀವಹಾನಿಯಾದ ಸಂದರ್ಭದಲ್ಲಿ ತಕ್ಷಣ ವರದಿ ನೀಡಿದರೆ ಸಂತ್ರಸ್ತ ಕುಟುಂಬಕ್ಕೆ ಆರ್ಥಿಕ ಸಹಕಾರ ನೀಡಲು ಅನುಕೂಲವಾಗುತ್ತದೆ. ಕೆರೆಕಟ್ಟೆಗಳು ಒಡೆಯುವ ಸ್ಥಿತಿ ಇದ್ದರೆ ಅದಕ್ಕೆ ಮರಳಿನ ಚೀಲ ಹಾಕುವ ಮೂಲಕ ಮುಂಜಾಗ್ರತೆ ವಹಿಸಿ. ಇದರಿಂದ ಕೆರೆದಂಡೆ ಒಡೆದು ಜಮೀನಿಗೆ ನೀರು ಹೋಗುವುದನ್ನು ತಪ್ಪಿಸಬಹುದು. ಸುತ್ತಲೂ ನೀರು ಆವರಿಸಿದ್ದರೂ ಮನೆಯಲ್ಲಿಯೇ ಇರುತ್ತೇವೆ ಎನ್ನುವವರಿಗೆ ಬುದ್ಧಿಮಾತು ಹೇಳಿ ಹೊರಗೆ ಕರೆದುಕೊಂಡು ಬಂದು ಪುನರ್ವಸತಿ ಕಲ್ಪಿಸಿ. ಒಂದೊಮ್ಮೆ ಅವರು ಮನೆಬಿಟ್ಟು ಬರಲು ಒಪ್ಪದೆ ಇದ್ದಲ್ಲಿ ಪ್ರಾಣಹಾನಿ ತಪ್ಪಿಸುವ ಸಲುವಾಗಿ ಒತ್ತಾಯಪೂರ್ವಕವಾಗಿ ಅವರನ್ನು ಪುನರ್ವಸತಿ ಕೇಂದ್ರಕ್ಕೆ ಕರೆದೊಯ್ಯುವ ಬಗ್ಗೆ ಗಮನ ಹರಿಸಿ ಎಂದು ಸೂಚನೆ ನೀಡಿದರು.

ಆ. 15ರವರೆಗೂ ಇದೇ ರೀತಿ ಮಳೆ ಮುಂದುವರಿಯುವ ಮುನ್ಸೂಚನೆ ಇರುವುದರಿಂದ ಯಾವುದೇ ಇಲಾಖೆಯ ಅಧಿಕಾರಿಗಳು ರಜೆ ಹಾಕುವಂತಿಲ್ಲ. ರಜೆ ಹಾಕಿ ಹೋದವರು ಪುನಃ ಕರ್ತವ್ಯಕ್ಕೆ ಹಾಜರಾಗಬೇಕು. ಹಾನಿ ಸಂಭವಿಸಿದಾಗ ನೀವು ಸೂಕ್ತ ನಿಗಾ ವಹಿಸದೆ ಹೋದಲ್ಲಿ ನಿಮ್ಮನ್ನು ಮೊದಲು ಅಮಾನತ್ತು ಮಾಡುವ ಜೊತೆಗೆ ಕ್ರಿಮಿನಲ್ ಪ್ರಕರಣ ದಾಖಲಿಸುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಕೆ ನೀಡಿದ ಅವರು, ರಕ್ಷಣಾ ಕಾರ್ಯದ ಸಂದರ್ಭದಲ್ಲಿ ಸಬೂಬು ಹೇಳಬೇಡಿ. ಅಗತ್ಯ ಸಂದರ್ಭ ಬಂದರೆ ಗೋಶಾಲೆ, ಗಂಜಿಕೇಂದ್ರ ಸ್ಥಾಪನೆಗೆ ಎಲ್ಲ ರೀತಿಯ ಸಹಕಾರ ನೀಡಲಾಗುತ್ತದೆ. ಕೃಷಿ ಮತ್ತು ತೋಟಗಾರಿಕೆ ಬೆಳೆ ಹಾನಿ ಸಂಬಂಧ ತಕ್ಷಣ ಅಂದಾಜು ನಷ್ಟದ ಪಟ್ಟಿ ಮಾಡಿ ಸಲ್ಲಿಸಬೇಕು. ಸಾಂಕ್ರಾಮಿಕ ರೋಗ ಹರಡದಂತೆ ಅಗತ್ಯ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಬೀಸನಗದ್ದೆಯಲ್ಲಿ ದೋಣಿ ವ್ಯವಸ್ಥೆ ಮಾಡಲಾಗಿದ್ದು, ತಾಲೂಕಿನ ಕೆಲವು ಕಡೆಗಳಲ್ಲಿ ನೆರೆ ಪರಿಸ್ಥಿತಿ ಇರುವುದರಿಂದ ಶನಿವಾರ ಎನ್‌ಡಿಆರ್‌ಎಫ್‌ ತಂಡ ಬರಲಿದೆ. ಅವರ ಜೊತೆ ಸ್ಥಳೀಯ ಅಗ್ನಿಶಾಮಕ ದಳವೂ ಸೇರಿಕೊಂಡು ಸಂಕಷ್ಟದಲ್ಲಿರುವವರನ್ನು ಪಾರು ಮಾಡಬೇಕು. ರಕ್ಷಣಾ ಸಾಮಗ್ರಿಗಳು ಅಗತ್ಯವಿದ್ದಲ್ಲಿ ನನ್ನ ಗಮನಕ್ಕೆ ತಂದರೆ ತಕ್ಷಣ ಪೂರೈಸುವುದಾಗಿ ಭರವಸೆ ನೀಡಿದರು.

ತಾಪಂ ಉಪಾಧ್ಯಕ್ಷ ಅಶೋಕ ಬರದವಳ್ಳಿ, ಜಿಪಂ ಸದಸ್ಯ ರಾಜಶೇಖರ ಗಾಳಿಪುರ, ನಗರಸಭೆ ಸದಸ್ಯ ಟಿ.ಡಿ. ಮೇಘರಾಜ್‌, ಎಎಸ್‌ಪಿ ಯತೀಶ್‌ ಎನ್‌., ಪೌರಾಯುಕ್ತ ಎಸ್‌. ರಾಜು, ತಹಶೀಲ್ದಾರ್‌ ಚಂದ್ರಶೇಖರ್‌ ಮತ್ತಿತರರು ಇದ್ದರು.

ದರೋಡೆಗೆ ಬಂದವರೆಂಬ ಅನುಮಾನ!: ಇತ್ತೀಚೆಗೆ ಒಬ್ಬರು, ನಮ್ಮನ್ನು ತೆರವುಗೊಳಿಸಲು ಬಂದವರೆಂದು ಮನೆಯಿಂದ ಕಳುಹಿಸಿ ದರೋಡೆ ಮಾಡುವ ಸಾಧ್ಯತೆ ಇದೆ ಎಂದು ಆತಂಕ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ನೆರೆ ಪರಿಹಾರ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಕಡ್ಡಾಯವಾಗಿ ತಮ್ಮ ಗುರುತಿನ ಕಾರ್ಡ್‌ ಹೊಂದಿರಬೇಕು ಎಂದು ಎಸಿ ದರ್ಶನ್‌ ತಾಕೀತು ಮಾಡಿದರು. ತಕ್ಷಣ ಮಧ್ಯ ಪ್ರವೇಶಿಸಿ ಶಾಸಕ ಹಾಲಪ್ಪ, ಗ್ರಾಮೀಣ ಭಾಗದಲ್ಲಿ ಕಂದಾಯ ಇಲಾಖೆಯ ವಿಎ, ಆರ್‌ಐ ಪರಿಚಿತರಾಗಿರುತ್ತಾರೆ. ಅಲ್ಲಿ ಸಮಸ್ಯೆಯಾಗುವುದಿಲ್ಲ. ಆದರೆ ನಗರ ಪ್ರದೇಶದಲ್ಲಿ ಅಧಿಕಾರಿಗಳ ಗುರುತಿನ ಕಾರ್ಡ್‌ ಅನಿವಾರ್ಯವಾಗಬಹುದು ಎಂದರು.

ಹೊಸನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದಿರುವ ಬಗ್ಗೆ ನಿಮಗೆ ಕರೆ ಮಾಡಿ ನಾನು ಎಸಿ ಎಂದು ಹೇಳಿದರೂ ನಮಗೆ ಸಂಬಂಧವಿಲ್ಲ ಎಂದು ಫೋನ್‌ ಕಟ್ ಮಾಡುತ್ತೀರಿ ಎಂದು ಎಸಿ ದರ್ಶನ್‌ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಈ ಸಂದರ್ಭದಲ್ಲಿ ಮಾತನಾಡಿದ ಎನ್‌ಎಚ್ ಅಧಿಕಾರಿ ಪೀರ್‌ಪಾಶಾ, ರಾಷ್ಟ್ರೀಯ ಹೆದ್ದಾರಿಯಲ್ಲಿ ಮರ ಬಿದ್ದರೆ ಅದನ್ನು ತೆರವುಗೊಳಿಸುವ ಜವಾಬ್ದಾರಿ ಅರಣ್ಯ ಇಲಾಖೆಯವರದ್ದು ಎಂದರು.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ