ಸ್ಕೌಟ್ಸ್‌,ಗೈಡ್ಸ್‌ ಸಂಸ್ಥೆಗೆ 10ಎಕರೆ ಜಮೀನು

ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಡೀಸಿ ಜೆ.ಮಂಜುನಾಥ್‌ ಭರವಸೆ • ಸಂಸ್ಥೆ ಚಟುವಟಿಕೆಗಳಿಗೆ ಉಪಯೋಗ

Team Udayavani, Aug 22, 2019, 4:22 PM IST

ಕೋಲಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯಿಂದ ರಾಷ್ಟ್ರಪತಿ, ರಾಜ್ಯಪಾಲರ ಪ್ರಶಸ್ತಿ ಪುರಸ್ಕಾರವನ್ನು ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಪ್ರದಾನ ಮಾಡಿದರು.

ಕೋಲಾರ: ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯ ತರಬೇತಿ ಶಿಬಿರಗಳನ್ನು ನಡೆಸಲು ಜಿಲ್ಲಾಡಳಿತದಿಂದ 5 ಅಥವಾ 10 ಎಕರೆ ಜಾಗ ಗುರುತಿಸಿ ನೀಡುವುದಾಗಿ ಜಿಲ್ಲಾಧಿಕಾರಿ ಜೆ.ಮಂಜುನಾಥ್‌ ಭರವಸೆ ನೀಡಿದರು.

ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಬುಧವಾರ ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಸಂಸ್ಥೆಯಿಂದ ರಾಷ್ಟ್ರಪತಿ, ರಾಜ್ಯಪಾಲರ ಪ್ರಶಸ್ತಿ ಪುರಸ್ಕಾರ ಪ್ರದಾನ ಮಾಡಿದ ಬಳಿಕ ಮಾತನಾಡಿದ ಅವರು, ಈಗಾಗಲೇ ಸ್ಕೌಟ್ಸ್‌ ಸಂಸ್ಥೆಯ ಸುಸಜ್ಜಿತ ಕಟ್ಟಡ ನಿರ್ಮಾಣಗೊಂಡಿದ್ದು, ಸದ್ಯದಲ್ಲೇ ಲೋಕಾರ್ಪಣೆಗೊಳ್ಳಲಿದೆ.

ಸ್ಕೌಟ್ಸ್‌-ಗೈಡ್ಸ್‌ನ ಅನೇಕ ಚಟುವಟಿಕೆಗಳನ್ನು ನಡೆಸಿಕೊಳ್ಳಲು ಜಾಗದ ಅವಶ್ಯಕತೆಯಿದ್ದು, ಅದನ್ನು ಗುರುತಿಸಿ 5 ರಿಂದ 10 ಎಕರೆ ಜಾಗವನ್ನು ನೀಡುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುವುದಾಗಿ ಹೇಳಿದರು.

ಮಕ್ಕಳ ಭವಿಷ್ಯ ರೂಪುಗೊಳ್ಳಲು ಬೇಕಾದ ಪ್ರಾಮಾಣಿಕತೆ, ದಯೆ, ನ್ಯಾಯ, ಶಿಸ್ತು,ದೈವ-ದೇಶ ಭಕ್ತಿ, ಶ್ರದ್ಧೆ, ಸಾತ್ವಿಕ, ನಡೆ, ನುಡಿ, ಸ್ನೇಹವನ್ನು ಕಲಿಸುವ ಸ್ಕೌಟ್ಸ್‌-ಗೈಡ್ಸ್‌ ಗೆ ಸೇರಲು ಪೋಷಕರು ಮಕ್ಕಳಿಗೆ ಸಲಹೆ ನೀಡಬೇಕು ಎಂದರು.

ಭಾರತದ ಪ್ರತಿಯೊಂದು ಮನೆಯಲ್ಲಿಯೂ ಸ್ಕೌಟ್ಸ್‌ ಮತ್ತು ಗೈಡ್ಸ್‌ ತರಬೇತಿ ಪಡೆದ ಮಕ್ಕಳು ಇರಬೇಕು ಎಂದು ಮಹಾತ್ಮಗಾಂಧೀಜಿ ಹೇಳಿದ್ದರು. ವಾಸ್ತವ ವ್ಯಕ್ತಿಯನ್ನು ಶ್ರೇಷ್ಠವಾಗಿಸುವ ಮಹಾನ್‌ ಸಂಸ್ಥೆ ಇದಾಗಿದ್ದು, ಸಾರ್ವಜನಿಕರೂ ಸಹ ಈ ಸಂಸ್ಥೆಗೆ ಸಾಧ್ಯವಾದಷ್ಟೂ ಸಹಾಯ ಮಾಡಬೇಕಿದೆ. ಎಲ್ಲ ಸೌಲಭ್ಯಗಳನ್ನು ಪಡೆದುಕೊಂಡು ರಾಜ್ಯ, ದೇಶದಲ್ಲೇ ಮಾದರಿಯಾಗಿ ಜಿಲ್ಲಾ ಸಂಸ್ಥೆ ಮುಂದುವರಿಯಬೇಕು ಎಂದರು.

ಸ್ಕೌಟ್ಸ್‌-ಗೈಡ್ಸ್‌ನಲ್ಲಿ ರಾಜ್ಯದ ಸುಮಾರು 6.5 ಲಕ್ಷ ವಿದ್ಯಾರ್ಥಿಗಳು, 20 ಸಾವಿರಕ್ಕೂ ಹೆಚ್ಚು ಶಿಕ್ಷಕರು ಪಾಲ್ಗೊಂಡಿದ್ದು, 1940 ರಿಂದ ಅನೇಕ ಚಟುವಟಿಕೆಗಳನ್ನು ಸರಾಗವಾಗಿ ನಡೆಸಿಕೊಂಡು ಬರುತ್ತಿರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ಭಾರತ್‌ ಸ್ಕೌಟ್ಸ್‌ ಮತ್ತು ಗೈಡ್ಸ್‌ ಜಿಲ್ಲಾ ಉಪಾಧ್ಯಕ್ಷ ಡಿ.ಎಲ್.ನಾಗರಾಜ್‌, ಮಾತನಾಡಿ ಮಕ್ಕಳ ಭವಿಷ್ಯದ ಬಗ್ಗೆ ಕನಸು ಕಂಡಿರುವ ಈ ಸಂಸ್ಥೆಗೆ ಗ್ರಾಪಂ, ತಾಪಂ, ಜಿಪಂ ಮತ್ತು ಕೈಗಾರಿಕೆಗಳಿಂದ ಅನುದಾನ ಕೊಡುವ ಅವಕಾಶವಿದ್ದು, ಜಿಲ್ಲಾಧಿಕಾರಿಗಳು ಮನಸ್ಸು ಮಾಡಿ ಕೊಡಿಸಬೇಕು ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಅಧ್ಯಕ್ಷ ಕೆ.ವಿ.ಶಂಕರಪ್ಪ, ಮುಂದಿನ ಸಾಲಿನಲ್ಲಿ ಇದೇ ಕಾರ್ಯಕ್ರಮವನ್ನು ಸ್ವಂತ ಕಟ್ಟಡದಲ್ಲಿ ನಡೆಸುವ ವಾಗ್ಧಾನ ಮಾಡಿದರು. ಶಿಬಿರ ನಿವೇಶನ ಇದ್ದಿದ್ದರೆ ನಮ್ಮ ಸಂಸ್ಥೆಯು ಇಂದು ರಾಜ್ಯದಲ್ಲೇ ನಂ.1 ಸ್ಥಾನದಲ್ಲಿ ಇರುತ್ತಿತ್ತು ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಗೈಡ್ಸ್‌ ಜಿಲ್ಲಾ ಆಯುಕ್ತೆ ಜಯಶ್ರೀ ಮಾತನಾಡಿ, ಜಿಲ್ಲೆಯಲ್ಲಿ 1940 ರಿಂದಲೂ ಜಿಲ್ಲೆಯಲ್ಲಿ ಪರಿಸರ ಕಾಳಜಿಯಂಥ ಸಾಮಾಜಿಕ ಕಾರ್ಯಕ್ರಮಗಳನ್ನು ನಡೆಸುತ್ತಾ ಮಕ್ಕಳಿಗೆ ಪಠ್ಯೇತರ ಚಟುವಟಿಕೆಗಳ ಮೂಲಕ ವ್ಯಕ್ತಿತ್ವ ವಿಕಸನ ಕಾರ್ಯಕ್ರಮವನ್ನು ಮಾಡಿ ತಮ್ಮ ಜೀವನವನ್ನು ಕಲ್ಪಿಸುವಂತೆ ಮಾಡಲಾಗುತ್ತಿದೆ ಎಂದರು. ಇದೇ ವೇಳೆ ಸ್ಕೌಟ್ಸ್‌ಗೈಡ್‌ ವಿಭಾಗದಲ್ಲಿ ಜಿಲ್ಲೆಯ 197 ವಿವಿಧ ಶಾಲಾ ಮಕ್ಕಳಿಗೆ ಪ್ರಶಸ್ತಿ ನೀಡಿ ಪುರಸ್ಕರಿಸ ಲಾ ಯಿತು. ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಕೌಟ್ಸ್‌ ಮತ್ತು ಗೈಡ್‌ನ‌ ಚಂದ್ರಶೇಖರ್‌, ಜಿಲ್ಲಾ ಕಾರ್ಯದರ್ಶಿ ಜನಾರ್ಧನ್‌, ಜಂಟಿ ಕಾರ್ಯದರ್ಶಿ ಉಮಾ ಭಾಸ್ಕರರೆಡ್ಡಿ, ಇಂಚರ ನಾರಾಯಣಸ್ವಾಮಿ, ಮಂಜುನಾಥ್‌ ಇತರರು ಇದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ