ಆಲಮಟ್ಟಿ ಜಲಾಶಯ ಭರ್ತಿಗೆ ಕ್ಷಣಗಣನೆ

Team Udayavani, Jul 15, 2019, 10:54 AM IST

ಆಲಮಟ್ಟಿ: ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಕಟ್ಟಡದ ಪಕ್ಕದಲ್ಲಿಯೇ ಮೀನು ಹಿಡಿಯುತ್ತಿರುವ ಮೀನುಗಾರರು.

ಆಲಮಟ್ಟಿ: ಕೃಷ್ಣಾ ಜಲಾನಯನ ಪ್ರದೇಶದಲ್ಲಿ ಮಳೆಯಾಗುತ್ತಿದ್ದು ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ತುಂಬಲು ಕ್ಷಣಗಣನೆ ಆರಂಭವಾಗಿದೆ.

ರಾಜ್ಯದಲ್ಲಿ ಸಮರ್ಪಕವಾಗಿ ಮಳೆಯಾಗದಿದ್ದರೂ ಕೂಡ ಕೃಷ್ಣೆಯ ಉಗಮ ಸ್ಥಾನ ಮಹಾಬಳೇಶ್ವರ ಸೇರಿದಂತೆ ಸಾಂಗ್ಲಿ ಹಾಗೂ ಸಾತಾರಾ ಜಿಲ್ಲೆಗಳು ಸೇರಿದಂತೆ ರತ್ನಗಿರಿ, ಕರಾಡಗಳಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ 2019 ಜುಲೈ 2ರ ರಾತ್ರಿಯಿಂದ ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಒಳಹರಿವು ಆರಂಭವಾಗಿತ್ತು.

ಕಳೆದ ಒಂದು ವಾರದಿಂದ ಲಕ್ಷಾಂತರ ಕ್ಯೂಸೆಕ್‌ ನೀರು ಜಲಾಶಯಕ್ಕೆ ಬರುತ್ತಿದ್ದು ಜು. 14ರ ವೇಳೆಗೆ ಜಲಾಶಯ ಭರ್ತಿಯಾಗುತ್ತಲಿತ್ತು. ಆದರೆ ನಾರಾಯಣಪುರ ಬಸವಸಾಗರ ಜಲಾಶಯಕ್ಕೆ ನೀರು ನಿತ್ಯ 45 ಸಾವಿರ ಕ್ಯೂಸೆಕ್‌ ನೀರನ್ನು ಕೆಪಿಸಿಎಲ್ ಮೂಲಕವಾಗಿ ನದಿ ಪಾತ್ರಕ್ಕೆ ಬಿಡಲಾಗುತ್ತಿದೆ. ಇದರಿಂದ ಇನ್ನೂ ಎರಡು ದಿನಗಳೊಳಗಾಗಿ ಭರ್ತಿಯಾಗುವ ನಿರೀಕ್ಷೆಯಲ್ಲಿ ಕೆಬಿಜೆಎನ್ನೆಲ್ ಅಧಿಕಾರಿಗಳಿದ್ದಾರೆ.

ರವಿವಾರ ಬೆಳಗ್ಗೆ ಮಾಹಿತಿಯಂತೆ 519.60 ಮೀ. ಗರಿಷ್ಠ ಎತ್ತರದ ಜಲಾಶಯದಲ್ಲಿ 517.30 ಮೀ. ಎತ್ತರವಾಗಿ ಗರಿಷ್ಠ 123.081 ಟಿಎಂಸಿ ಅಡಿ ಸಂಗ್ರಹ ಸಾಮರ್ಥ್ಯದ ಜಲಾಶಯದಲ್ಲಿ 88.248 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ. ಜಲಾಶಯಕ್ಕೆ 1,14,035 ಕ್ಯೂಸೆಕ್‌ ನೀರು ಹರಿದು ಬರುತ್ತಿದ್ದು 28,255 ಕ್ಯೂಸೆಕ್‌ ನೀರನ್ನು ಕೆಪಿಸಿಎಲ್ ಮೂಲಕ ನದಿ ಪಾತ್ರಕ್ಕೆ ಹರಿದು ಬಿಡಲಾಗುತ್ತಿತ್ತು.

ಆದರೆ ರವಿವಾರ ಸಂಜೆ ವೇಳೆಗೆ ಜಲಾಶಯದಲ್ಲಿ 517.55 ಮೀ.ಎತ್ತರದಲ್ಲಿ ನೀರು ಸಂಗ್ರಹವಾಗಿದ್ದು ಜಲಾಶಯಕ್ಕೆ ಹರಿದು ಬರುತ್ತಿರುವ ನೀರಿನಲ್ಲಿ ಇಳಿಕೆಯಾಗಿ 1,08,948 ಕ್ಯೂಸೆಕ್‌ ನೀರು ಹರಿದು ಬರುತ್ತಿದೆ. ಅದರರಲ್ಲಿ 33 ಸಾವಿರ ಕ್ಯೂಸೆಕ್‌ ನೀರನ್ನು ವಿದ್ಯುತ್‌ ಉತ್ಪಾದನಾ ಘಟಕಗಳ ಮೂಲಕ ನದಿಗೆ ನೀರು ಬಿಡಲಾಗುತ್ತಿದೆ.

ಭದ್ರತಾ ವೈಫಲ್ಯ: ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಉಗ್ರರ ಹಿಟ್ ಲಿಸ್ಟ್‌ನಲ್ಲಿರುವುದರಿಂದ ಜಲಾಶಯದ ಭದ್ರತೆಗಾಗಿ ರಾಜ್ಯ ಕೈಗಾರಿಕಾ ಭದ್ರತಾ ಪಡೆ ನಿಯೋಜನೆ ಮಾಡಲಾಗಿದೆ. ಭದ್ರತಾ ಪಡೆಗೆ ಗಸ್ತು ವಾಹನ, ನೀರಿನಲ್ಲಿ ಹೋಗಲು ಸುಸಜ್ಜಿತ ಬೋಟ್ ವ್ಯವಸ್ಥೆ ಸೇರಿದಂತೆ ಕಿ.ಮೀ.ಗಳ ಅಂತರದಲ್ಲಿಯೇ ಹೊಡೆದುರುಳಿಸಬಲ್ಲ ಅತ್ಯಾಧುನಿಕ ಶಸ್ತ್ರಾಗಳು ಇವೆ. ಇಷ್ಟೆಲ್ಲ ವ್ಯವಸ್ಥೆಯನ್ನು ಸರ್ಕಾರ ಕಲ್ಪಿಸಿದ್ದರೂ ಅದನ್ನು ಪಾಲಿಸಬೇಕಾದ ಭದ್ರತಾ ಪಡೆ ಸಿಬ್ಬಂದಿಗಳು ಮಾತ್ರ ದಿವ್ಯ ನಿರ್ಲಕ್ಷ್ಯ ತಾಳಿದ್ದರ ಪರಿಣಾಮ ಜಲಾಶಯದಿಂದ 500 ಮೀ. ಜಲಾಶಯದ ಹಿಂಭಾಗ ಹಾಗೂ 500 ಮೀ. ಮುಂಭಾಗ ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಿದ್ದರೂ ಕೂಡ ಮೀನುಗಾರರ ವೇಷದಲ್ಲಿ ಯಾರಾದರೂ ದುಷ್ಕರ್ಮಿಗಳು ಬಂದರೆ ಗತಿಯೇನು? ಮೀನುಗಾರರು ಮಾತ್ರ ಜಲಾಶಯದ ಕಟ್ಟಡಕ್ಕೆ ಹೊಂದಿಕೊಂಡೇ ಮೀನು ಹಿಡಿಯುತ್ತಿದ್ದರೂ ಕೂಡ ಅಧಿಕಾರಿಗಳ ಬೇಜವಾಬ್ದಾರಿತನಕ್ಕೆ ನಾಗರಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮೀನುಗಾರರ ಬಲೆಯನ್ನು ಸಾಕಷ್ಟು ಬಾರಿ ತುಂಡರಿಸಲಾಗಿದೆಯಲ್ಲದೇ ಅವರಿಗೆ ಹಲವಾರು ಬಾರಿ ಎಚ್ಚರಿಕೆ ನೀಡಿದ್ದರೂ ಕೂಡ ಮತ್ತೆ ನಿಷೇಧಿತ ಪ್ರದೇಶದಲ್ಲಿ ಆಗಮಿಸುತ್ತಿದ್ದಾರೆ. ಆದ್ದರಿಂದ ನುರಿತ ಈಜುಗಾರರ ತಂಡ ರಚಿಸಿಕೊಂಡು ನೂತನ ಮಾದರಿಯ ದೋಣಿ ವ್ಯವಸ್ಥೆ ಮಾಡಿಕೊಂಡು ಅಂಥವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು.
ಈರಪ್ಪ ವಾಲಿ,
ಕೈಗಾರಿಕಾ ಭದ್ರತಾ ಪಡೆ ಮೇಲ್ವಿಚಾರಣೆ ಹೊತ್ತಿರುವ ಪಿಎಸೈ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ