ನೆರೆ-ಬರ ಹೊಡೆತಕ್ಕೆ ರೈತ ತತ್ತರ

ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ ಕೃಷ್ಣೆ ತೀರದ ರೈತರ ಪರಿಸ್ಥಿತಿ

Team Udayavani, Aug 14, 2019, 11:13 AM IST

ಆಲಮಟ್ಟಿ: ಕೃಷ್ಣೆ ನೆರೆ ಹಾವಳಿಯಿಂದ ಅರಳದಿನ್ನಿಯ ರೈತರ ಜಮೀನಿನಲ್ಲಿ ಬೆಳೆಗಳು ಜಲಾವೃತಗೊಂಡಿವೆ.

ಶಂಕರ ಜಲ್ಲಿ
ಆಲಮಟ್ಟಿ:
ಉತ್ತರ ಕರ್ನಾಟಕ ಕೆಲ ಜಿಲ್ಲೆಗಳ ಮಳೆ ಅಭಾವದಿಂದ ಬಿತ್ತನೆ ಮಾಡಿದ ಬೆಳೆಗಳು ಕಮರುವಂತಾಗಿದ್ದರೆ, ಕೃಷ್ಣಾ ನದಿ ದಡದಲ್ಲಿರುವ ರೈತರಿಗೆ ನೆರೆ ಹಾವಳಿಯಿಂದ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.

ಉಕ ಜಿಲ್ಲೆಗಳ ಬರಗಾಲದ ಬವಣೆ ನೀಗಿಸಲು ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಬೃಹತ್‌ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯ ಹಾಗೂ ಯಾದಗಿರಿ ಜಿಲ್ಲೆಯ ನಾರಾಯಣಪುರದಲ್ಲಿ ಬಸವಸಾಗರ ಜಲಾಶಯಗಳನ್ನು ನಿರ್ಮಿಸಲಾಗಿದೆ. ಆದರೆ ಅವಳಿ ಜಿಲ್ಲೆಯ ಅಣೆಕಟ್ಟು ನಿರ್ಮಿಸಿದ್ದರೂ ಕೂಡ ಕೃಷ್ಣೆಯನ್ನು ನಂಬಿದ ರೈತರಿಗೆ ಕೆಲ ವರ್ಷಗಳಿಂದ ಒಂದಿಲ್ಲೊಂದು ಸಮಸ್ಯೆಗಳುಂಟಾಗಿ ಹಾನಿ ಅನುಭವಿಸುವಂತಾಗಿದೆ.

ಈ ಭಾಗದಲ್ಲಿ ಇತ್ತೀಚೆಗೆ ಸ್ವಲ್ಪ ಪ್ರಮಾಣದಲ್ಲಿ ಮಳೆಯಾಗಿದ್ದರಿಂದ ರೈತರು ವರುಣನ್ನು ನಂಬಿ ಬಿತ್ತನೆ ಮಾಡಿದ್ದಾರೆ. ಇಂಥ ಸ್ಥಿತಿಯಲ್ಲಿ ವರುಣನು ಮತ್ತೆ ಮುನಿಸಿಕೊಳ್ಳುತ್ತಿರುವ ಪರಿಣಾಮವಾಗಿ ಬೆಳೆಗಳು ಸಸಿಯ ಹಂತದಲ್ಲಿಯೇ ಬಾಡುವಂತಾಗಿದೆ.

ಕಳೆದ ಕೆಲ ದಿನಗಳಿಂದ ಮಹಾರಾಷ್ಟ್ರದ ಧೂಮ, ವಾರಣಾ, ಉರ್ಮೋದಿ, ತರಾಳಿ, ಕೊಯ್ನಾ, ಯವತಿ ಮಸೋಳಿ, ಪಂಚಗಂಗಾ, ದೂಧಗಂಗಾ ರಾಜ್ಯದ ಘಟಪ್ರಭಾ, ಮಲಪ್ರಭಾ ನದಿಗಳ ಉಗಮ ಸ್ಥಾನ ಹಾಗೂ ಜಲಾನಯನ ಪ್ರದೇಶದಲ್ಲಿ ವ್ಯಾಪಕವಾಗಿ ಮಳೆ ಸುರಿಯುತ್ತಿದ್ದು ಎಲ್ಲ ನದಿಗಳು ತುಂಬಿ ಹರಿದು ಕೃಷ್ಣೆ ಒಡಲು ಸೇರುತ್ತವೆ.

ಆಲಮಟ್ಟಿ ಲಾಲ್ ಬಹಾದ್ದೂರ್‌ ಶಾಸ್ತ್ರಿ ಜಲಾಶಯಕ್ಕೆ ಘಟಪ್ರಭಾ ಹಾಗೂ ಮಹಾರಾಷ್ಟ್ರದಲ್ಲಿ ಉಗಮವಾಗುವ ನದಿಗಳ ನೀರು ವ್ಯಾಪಕವಾಗಿ ಹರಿದು ಬರುತ್ತಿರುವದರಿಂದ ಕೃಷ್ಣಾ ನದಿ ಎರಡೂ ದಡದಲ್ಲಿರುವ ಗ್ರಾಮಗಳ ರೈತರ ಜಮೀನಿನಲ್ಲಿ ನೀರು ನುಗ್ಗಿ ಜಲಾವೃತವಾಗಿವೆ. ಅಲ್ಲದೇ ವಿಜಯಪುರ, ಬಾಗಲಕೋಟೆ ಹಾಗೂ ಯಾದಗಿರಿ ಜಿಲ್ಲೆಗಳ ಸುಮಾರು 20ಕ್ಕೂ ಅಧಿಕ ಗ್ರಾಮಗಳಲ್ಲಿ ನೀರು ನುಗ್ಗಿ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತಾಗಿದೆ.

ಕಳೆದ ಕೆಲ ದಿನಗಳಿಂದ ಗಡಿ ಭಾಗದ ರಾಜಾಪುರ ಬ್ಯಾರೇಜ್‌, ಹಿಪ್ಪರಗಿ ಬ್ಯಾರೇಜ್‌ಗಳಿಗೆ ಕೃಷ್ಣೆ ನೀರು ವ್ಯಾಪಕವಾಗಿ ಹರಿದು ಬರುತ್ತಿದೆ. ಬ್ಯಾರೇಜುಗಳಿಂದ ನೀರು ಹೊರ ಹೋಗಲು ಗೇಟುಗಳ ಪ್ರಮಾಣ ಕಡಿಮೆಯಿದ್ದು ಬ್ಯಾರೇಜುಗಳ ಹಿಂಭಾಗ ಹಾಗೂ ಮುಂಭಾಗದ ಗ್ರಾಮಗಳಲ್ಲಿ ನೀರು ನುಗ್ಗಿದ್ದರಿಂದ ಕೃಷ್ಣಾ ನದಿ ದಡದಲ್ಲಿರುವ ರೈತರ ಬೆಳೆಗಳು ಜಲಾವೃತವಾಗಿವೆ.

ಇನ್ನಷ್ಟು ನೀರು: ಆಲಮಟ್ಟಿಯಿಂದ ಕೂಗಳತೆಯಲ್ಲಿರುವ ಅರಳದಿನ್ನಿ ಗ್ರಾಮದ ರೈತರ ಜಮೀನುಗಳಲ್ಲಿರುವ ಬೆಳೆಗಳನ್ನು ಶಾಸ್ತ್ರಿ ಜಲಾಶಯದಿಂದ 5,70,991 ಕ್ಯೂಸೆಕ್‌ ನೀರನ್ನು ಜಲಾಶಯದ ಗೇಟುಗಳ ಮೂಲಕ ಬಿಟ್ಟಿದ್ದು ಎಲ್ಲ ಬೆಳೆಗಳು ಜಲಾವೃತಗೊಂಡು ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿ ಮಾಡಲಾಗಿರುವ ನೂತನ ಬಡಾವಣೆಯ ಜಾಗೆಯಲ್ಲಿಯೂ ನೀರು ನುಗ್ಗಿದೆ.

ಸ್ಮಶಾನದಲ್ಲಿ ನೀರು: ಆಲಮಟ್ಟಿ ಪುನರ್ವಸತಿ ಕೇಂದ್ರವಾಗಿದ್ದು ಪಟ್ಟಣದಲ್ಲಿ ಮೃತರಾದರೆ ಅವರ ಅಂತ್ಯಸಂಸ್ಕಾರ ನೆರವೇರಿಸಲು ರಾಷ್ಟ್ರೀಯ ಹೆದ್ದಾರಿ13ಕ್ಕೆ ಸಮೀಪದಲ್ಲಿ ಕೃ.ಮೇ.ಯೋ.ಯಿಂದ ಸ್ಮಶಾನ ಜಾಗೆ ನೀಡಿದ್ದಾರೆ. ಅದರ ಸುತ್ತಲೂ ನೀರು ಆವರಿಸಿದೆ. ಇನ್ನು ವಿಶೇಷವೆಂದರೆ ಇನ್ನೂವರೆಗೆ ಅದರಲ್ಲಿ ಅಂತ್ಯಸಂಸ್ಕಾರ ನಡೆದಿಲ್ಲ.

ಇನ್ನು ಜಲಾಶಯಕ್ಕೆ ಎಡ ಬದಿಯಲ್ಲಿರುವ ಮೊಘಲ್ ಉದ್ಯಾನದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯುತ್ತಿದ್ದು ಮೂರ್ನಾಲ್ಕು ಉದ್ಯಾನಗಳು, ಲೇಸರ್‌ ಶೋ, ಸಂಗೀತ ನೃತ್ಯ ಕಾರಂಜಿ ಕೇಂದ್ರ ಸ್ಥಾನಗಳಲ್ಲಿ ವ್ಯಾಪಕ ನೀರು ಹರಿದು ಹೋಗುತ್ತಿದೆ. ಅಲ್ಲದೇ ಲೇಸರ್‌ ಶೋ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರರ ಟ್ರ್ಯಾಕ್ಟರ್‌ ಕೂಡ ನೀರಿನಲ್ಲಿಯೇ ಇದೆ.

ಜಲಚರಗಳ ಕಾಟ: ಕೃಷ್ಣಾ ನದಿ ದಡದಲ್ಲಿರುವ ಅರಳದಿನ್ನಿ, ಯಲಗೂರ, ಕಾಶಿನಕುಂಟಿ, ಬೂದಿಹಾಳ ಪಿ.ಎನ್‌, ಮಸೂತಿ, ಮುದೂರ ಸೇರಿದಂತೆ ಎರಡೂ ಬದಿಯಲ್ಲಿ ಸುಮಾರು 50ಕ್ಕೂ ಅಧಿಕ ಗ್ರಾಮಗಳ ರೈತರ ಜಮೀನಿನಲ್ಲಿ ಮೊಸಳೆಗಳು, ದೊಡ್ಡ ಪ್ರಮಾಣದ ಹಾವುಗಳು ಸೇರಿದಂತೆ ಅನೇಕ ವಿಷ ಜಂತುಗಳು ಹರಿದಾಡುತ್ತಿದ್ದು ಭಯ ಆವರಿಸುವಂತಾಗಿದೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ