ಹೂವಿನಹಿಪ್ಪರಗಿ ಕೆರೆಗೆ 3 ದಿನದಲ್ಲಿ ನೀರು ಕೊಡದಿದ್ದರೆ ಕಚೇರಿಗೆ ಬೀಗ

ಕೆರೆಗಳನ್ನು ತುಂಬಿಸಲು ಅಭಿಯಂತರಗೆ ರೈತ ಮುಖಂಡರ ಮನವಿ

Team Udayavani, May 19, 2019, 4:02 PM IST

ಆಲಮಟ್ಟಿ: ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರ ಕಚೇರಿಯಲ್ಲಿ ಮುಳವಾಡ ಏತ ನೀರಾವರಿ ಯೋಜನೆಯಿಂದ ಕಾಲುವೆಗಳ ಮೂಲಕ ಕೆರೆಗಳನ್ನು ತುಂಬಿಸಲು ತಯಾರಿಸಿದ ನಕ್ಷೆಯಲ್ಲಿ ಮಾಹಿತಿ ನೀಡುತ್ತಿರುವ ಅಣೆಕಟ್ಟು ವೃತ್ತ ಪ್ರಭಾರಿ ಅಧೀಕ್ಷಕ ಅಭಿಯಂತರ ಎಸ್‌.ಬಿ. ಪಾಟೀಲ.

ಆಲಮಟ್ಟಿ: ಮುಳವಾಡ ಏತ ನೀರಾವರಿ ಯೋಜನೆ ವ್ಯಾಪ್ತಿಯ ಹೂವಿನಹಿಪ್ಪರಗಿ ಕೆರೆ ಸೇರಿದಂತೆ ವಿವಿಧ ಗ್ರಾಮಗಳ ಕೆರೆಗಳನ್ನು ತುಂಬಿಸಲು ಆಗ್ರಹಿಸಿ ರೈತ ಮುಖಂಡರು ಕೃಷ್ಣಾ ಭಾಗ್ಯ ಜಲ ನಿಗಮದ ಮುಖ್ಯ ಅಭಿಯಂತರ ಆರ್‌.ಪಿ. ಕುಲಕರ್ಣಿಯವರನ್ನು ಭೇಟಿಯಾಗಿ ಚರ್ಚಿಸಿದರು.

ಮುಳವಾಡ ಏತ ನೀರಾವರಿ ಯೋಜನೆಯ ಹಂತ-3ರಲ್ಲಿ ಬರುವ ದೇವರಹಿಪ್ಪರಗಿ ಮಾರ್ಗವಾಗಿ ಹೋಗುವ ನಾಗಠಾಣ ಬ್ರ್ಯಾಂಚ್ ಕಾಲುವೆ ಮೂಲಕ ಹೂವಿನಹಿಪ್ಪರಗಿ ಹೋಬಳಿಯ ಎಲ್ಲ ಕೆರೆಗಳನ್ನು ತುಂಬಿಸಲು ಸಂಬಂಧಿಸಿದ ಹಳ್ಳಗಳ ಮೂಲಕ ನೀರು ಹರಿಸಿ ಕೆರೆಗಳನ್ನು ತುಂಬಿಸಲು ವಿನಂತಿಸಿದರು.

ಈ ವೇಳೆ ಮಾತನಾಡಿದ ಅಖಂಡ ಕರ್ನಾಟಕ ರೈತ ಸಂಘದ ರಾಜ್ಯ ಕಾರ್ಯದರ್ಶಿ ಅರವಿಂದ ಕುಲಕರ್ಣಿ, ಮುಳವಾಡ ಏತ ನೀರಾವರಿ ಯೋಜನೆ ನೀರು ಹರಿಸುವ ವಿಷಯದಲ್ಲಿ ಅಧಿಕಾರಿಗಳೇ ಜಿಲ್ಲೆಯ ರೈತರುಗಳ ನಡುವೆ ನೀರಿಗಾಗಿ ಗೊಂದಲ ಮೂಡಿಸುತ್ತಿದ್ದಾರೆ. ಹೂವಿನಹಿಪ್ಪರಗಿ ಕೆರೆ ಹಾಗೂ ಸುತ್ತಲಿರುವ ಕೆರೆಗಳನ್ನು ಮಸಬಿನಾಳ ಮುಖ್ಯ ಸ್ಥಾವರದಿಂದ ನೀರು ಹರಿಸಿ ಕೆರೆ ತುಂಬಿಸಬೇಕು ಎಂದು ಈ ಭಾಗದ ರೈತರು ಹಲವಾರು ಬಾರಿ ಮನವಿ ಹಾಗೂ ಪ್ರತಿಭಟನೆ ಮಾಡಲಾಗಿತ್ತು.

ಈಗ ಶನಿವಾರದಿಂದ ಕಾಳುವೆಗೆ ನೀರು ಹರಿಸಲು ಆರಂಭಿಸಿದ್ದಾರೆ. ಆದರೆ ಪ್ರತಿಭಟನೆ ಹಾಗೂ ಮನವಿ ಮಾಡಿದ ರೈತರನ್ನು ಕಡೆಗಣಿಸಿ ಕಾಲುವೆಯ ತುತ್ತತುದಿ ರೈತರಿಗೆ ನೀರು ಕೊಡಲು ಹೊರಟಿದ್ದಾರೆ. ಮೊದಲು ಹೂವಿನಹಿಪ್ಪರಗಿ ಕೆರೆಗೆ ಮೂರು ದಿನಗಳೊಳಗಾಗಿ ನೀರು ಕೊಡಬೇಕು ಇಲ್ಲದಿದ್ದರೆ ಕೃಷ್ಣಾಭಾಗ್ಯಜಲನಿಗಮದ ಮುಖ್ಯ ಅಭಿಯಂತರರ ಕಚೇರಿಗೆ ಬೀಗ ಮುದ್ರೆ ಹಾಕಲಾಗುವುದು ಎಂದು ಎಚ್ಚರಿಸಿದರು.

ಮುಳವಾಡ ಏತ ನೀರಾವರಿ ಯೋಜನೆಯ ಹಂತ-1 ಹಾಗೂ 2ರ ವ್ಯಾಪ್ತಿ ಕಾಲುವೆಗಳನ್ನು ನಂಬಿದ ರೈತರು ತಮ್ಮ ಜಮೀನುಗಳಲ್ಲಿ ಬಿತ್ತನೆ ಮಾಡಿದ್ದರು. ಆದರೆ 2018ರ ಡಿಸೆಂಬರ್‌ ವೇಳೆಗೆ ಆಕಸ್ಮಿಕವಾಗಿ ಬಳೂತಿಯ ಮುಖ್ಯ ಸ್ಥಾವರದಲ್ಲಿ ಬೆಂಕಿ ಅವಘಡದಿಂದ ಕಾಲುವೆಗೆ ನೀರು ಹರಿಸಲಿಲ್ಲ ಎಂದರು.

ಇನ್ನು ನೂತನವಾಗಿ ನಿರ್ಮಿಸಲಾಗಿರುವ ಕಾಲುವೆಯ ಕೂಡಗಿ ಬಳಿ ರೈಲ್ವೆ ಹಳಿ ಕ್ರಾಸಿಂಗ್‌ ಕಾಮಗಾರಿಯನ್ನು ರೈಲ್ವೆ ಇಲಾಖೆ ಅಧಿಕಾರಿಗಳ ವಿಳಂಬ ಧೋರಣೆಯಿಂದ ರೈತರು ನಾಡಿನ ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ಮಾಡಿದ್ದರ ಪರಿಣಾಮ ಸ್ವಾಮೀಜಿಯವರ ನೇತೃತ್ವದಲ್ಲಿ ಬಳೂತಿಯ ಮುಖ್ಯ ಸ್ಥಾವರದ ದುರಸ್ಥಿಗೆ ಸಂಬಂಧಿಸಿದವರನ್ನು ಭೇಟಿಯಾಗಿ ಬರಗಾಲದಿಂದ ಹಾಗೂ ಬೇಸಿಗೆಯ ಬಿಸಿಲಿನ ತಾಪದಿಂದ ಬಸವಳಿದಿರುವ ಜನತೆಯ ನೋವಿನ ಕುರಿತು ಸಮಗ್ರವಾಗಿ ಚರ್ಚಿಸಿದ್ದರ ಪರಿಣಾಮವಾಗಿ ಶನಿವಾರದಿಂದ ಕಾಲುವೆೆಗೆ ನೀರು ಹರಿಸಲು ಆರಂಭಿಸಲಾಗಿದೆ. ಆದ್ದರಿಂದ ಮೊದಲು ಮಸಬಿನಾಳ ಮುಖ್ಯಸ್ಥಾವರ (ಜಾಕ್‌ವೆಲ್)ನಿಂದ ನೀರು ಪೂರೈಸಬೇಕು ಎಂದು ಹೇಳಿದರು.

ಇದಕ್ಕೆ ಶಾಂತವಾಗಿಯೇ ಉತ್ತರಿಸಿದ ಮುಖ್ಯ ಅಭಿಯಂತರ ಆರ್‌.ಪಿ. ಕುಲಕರ್ಣಿ, ಜಲಾಶಯದಲ್ಲಿ ನೀರಿನ ಸಂಗ್ರಹ ಕಡಿಮೆಯಾಗುತ್ತಿದ್ದು ಇದನ್ನು ಗಮನದಲ್ಲಿರಿಸಿಕೊಂಡು ಸರ್ಕಾರದ ಸೂಚನೆಯಂತೆ ಎಲ್ಲ ಕಾಲುವೆಗಳನ್ನು ತುಂಬಿಸಲಾಗುವುದು. ಇದರಲ್ಲಿ ಅನುಮಾನ ಬೇಡ ಹಾಗೂ ಈಗಲೇ ಬೇಕೆಂದು ಹಠಮಾರಿ ಧೋರಣೆ ಸರಿಯಲ್ಲ, ನಿಯಮದಂತೆ ಕೆರೆಗಳನ್ನು ತುಂಬಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಅಣೆಕಟ್ಟು ವೃತ್ತ ಪ್ರಭಾರಿ ಅಧೀಕ್ಷಕ ಅಭಿಯಂತರ ಎಸ್‌.ಬಿ. ಪಾಟೀಲ, ಕರಭಂಟನಾಳದ ಶಿವಕುಮಾರ ಸ್ವಾಮೀಜಿ, ಸಿದ್ದಲಿಂಗಯ್ಯ ಹಿರೇಮಠ, ಕೂಡಗಿ ಎನ್‌ಟಿಪಿಸಿ ಪಿಎಸೈ ಬಸವರಾಜ ಅವಟಿ, ರಮೇಶ ಕೋರಿ, ಚಂದ್ರಶೇಖರ ಮುಳವಾಡ, ರೇವಣಸಿದ್ದಪ್ಪ ನಂದಿಹಾಳ, ಸಿದ್ದರಾಮ ಅಂಗಡಗೇರಿ, ಸದಾಶಿವ ಭರಟಗಿ, ಹೊನಕೇರಪ್ಪ ತೆಲಗಿ, ಕೃಷ್ಣಪ್ಪ ಭಮರೆಡ್ಡಿ, ಅರ್ಜುನ ಹಾವಗೊಂಡ, ಈರಣ್ಣ ದೇವರಗುಡಿ, ಶಾಂತಗೌಡ ಬಿರಾದಾರ, ಹನುಮಂತರಾಯ ಗುಣಕಿ, ಪ್ರವೀಣ ಸಿಂಧೆ, ಪೀರಾಜಿ ತರ್ಪೆ, ಹರಿಬಾ ಪಾವನೆ ಮೊದಲಾದವರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ