ಪ್ರಜಾಪ್ರಭುತ್ವ ಮೌಲ್ಯ ಪ್ರತಿಬಿಂಬಿಸಿದ ಶಾಲಾ ಸಂಸತ್‌ ಚುನಾವಣೆ

ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದ ಚುನಾವಣಾ ಪ್ರಕ್ರಿಯೆ

Team Udayavani, Jul 10, 2019, 3:26 PM IST

ಆಲಮಟ್ಟಿ: ಮಂಜಪ್ಪ ಹರ್ಡೇಕರ ಸ್ಮಾರಕ ಪ್ರೌಢಶಾಲೆಯಲ್ಲಿ ಜರುಗಿದ ಶಾಲಾ ಸಂಸತ್‌ ಚುನಾವಣೆಯಲ್ಲಿ ಮತದಾನ ಮಾಡಲು ಸರತಿ ಸಾಲಿನಲ್ಲಿ ನಿಂತಿದ್ದ ವಿದ್ಯಾರ್ಥಿಗಳು.

ಆಲಮಟ್ಟಿ: ಸರದಿಯಲ್ಲಿ ಆಗಮಿಸುತ್ತಿರುವ ಮತದಾರರು, ಮತದಾರರ ಗುರುತಿನ ಚೀಟಿ ಪರಿಶೀಲಿಸುತ್ತಿರುವ ಮತಗಟ್ಟೆ ಅಧಿಕಾರಿಗಳು ಭದ್ರತೆಗಾಗಿ ನಿಯೋಜನೆಗೊಂಡಿರುವ ಭದ್ರತಾ ಸಿಬ್ಬಂದಿಗಳು ಶಾಂತಿಯುತ ಮತದಾನ.

ಹೌದು ಈಗ ಯಾವುದಪ್ಪ ಚುನಾವಣೆ ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಶಾಸಕರುಗಳು ರಾಜೀನಾಮೆ ನೀಡುತ್ತಿರುವ ವೇಳೆಯಲ್ಲಿ ಎಂದು ಹುಬ್ಬೇರಿಸಬೇಡಿ. ಇದು ಸ್ಥಳೀಯ ಮಂಜಪ್ಪ ಹರ್ಡೇಕರ ಅವರ ಸ್ಮಾರಕ ಪಪೂ ಮಹಾವಿದ್ಯಾಲಯ ಪ್ರೌಢಶಾಲೆಯಲ್ಲಿ ಶಾಲಾ ಸಂಸತ್‌ಗಾಗಿ ನಡೆದ ಚುನಾವಣೆ ದೃಶ್ಯ.

ಚುನಾವಣೆ ಆಯೋಗದ ನಿಯಮದಂತೆ ಜು. 3ರಂದು ಚುನಾವಣೆ ಅಧಿಸೂಚನೆ ಹೊರಡಿಸಿ ಅದರನ್ವಯ ಒಟ್ಟು 8 ಹುದ್ದೆಗಳಾಗಿ ನಡೆಯುವ ಚುನಾವಣೆಗಾಗಿ ನಾಮಪತ್ರ ಸಲ್ಲಿಸಲು ಹಾಗೂ ನಾಮಪತ್ರ ವಾಪಸ್‌ ಪಡೆಯಲು ನಾಮಪತ್ರ ಪರಿಶೀಲನೆ ಜು. 4 ನಿಗದಿಪಡಿಸಿ ಜು. 5ರಂದು ಪ್ರಚಾರಕ್ಕೆ ಕೊನೆ ದಿನ ಹಾಗೂ ಜು. 6ರಂದು ಮತದಾನ ಜು. 8ರಂದು ಮತಎಣಿಕೆ ಹೀಗೆ ದಿನಾಂಕಗಳನ್ನು ನಿಗದಿಪಡಿಸಲಾಗಿತ್ತು.

ಮೊಬೈಲ್ನಲ್ಲಿ ಮತಯಂತ್ರವನ್ನು ಡೌನ್‌ಲೋಡ್‌ ಮಾಡಿಕೊಂಡು ಅಭ್ಯರ್ಥಿಗಳ ಹೆಸರು ಸಹಿತ ಮತಯಂತ್ರದ ಸಹಾಯದಿಂದ ವಿದ್ಯಾರ್ಥಿಗಳು ಮೊಬೈಲ್ನಲ್ಲಿಯೇ ಮತದಾನ ಮಾಡುವುದು ಮಕ್ಕಳಿಗೆ ಹೊಸ ಅನುಭವ ನೀಡಿತು.

ಒಟ್ಟು 8ಹುದ್ದೆಗಳಲ್ಲಿ 1 ಪ್ರಧಾನ ಮಂತ್ರಿಸ್ಥಾನಕ್ಕೆ 4ಅಭ್ಯರ್ಥಿಗಳು, 1ಮಹಿಳಾ ಪ್ರಧಾನಿ ಅಭ್ಯರ್ಥಿಗೆ 2 ಅಭ್ಯರ್ಥಿಗಳು, 1 ಉಪ ಪ್ರಧಾನ ಮಂತ್ರಿ ಸ್ಥಾನಕ್ಕೆ 2 ಅಭ್ಯರ್ಥಿಗಳು, ಪ್ರವಾಸ ಮಂತ್ರಿ ಸ್ಥಾನಕ್ಕೆ 2 ಅಭ್ಯರ್ಥಿ, ಆರೋಗ್ಯಮಂತ್ರಿ ಸ್ಥಾನಕ್ಕೆ 2, ಕ್ರೀಡಾ ಮಂತ್ರಿ ಸ್ಥಾನಕ್ಕೆ 2, ಸಾಂಸ್ಕೃತಿಕ ಮಂತ್ರಿ ಸ್ಥಾನಕ್ಕೆ 2, ಹಣಕಾಸು ಮಂತ್ರಿ ಸ್ಥಾನಕ್ಕೆ 2 ಅಭ್ಯರ್ಥಿಗಳು ಸರ್ಧಿಸಿದ್ದರು.

ಮತದಾರರು ತಮ್ಮ ಮತ ಚಲಾಯಿಸಲು ಗುರುತಿ ಚೀಟಿಯಂತೆ ಆಧಾರ್‌ ಕಾರ್ಡ್‌ ಬಳಸಲಾಯಿತು. ಮತ ಚಲಾಯಿಸಿದ ಮತದಾರರಿಗೆ ಬೆರಳಿಗೆ ಶಾಯಿ ಹಚ್ಚಲಾಯಿತು. ಅಲ್ಲದೇ ವಿದ್ಯಾರ್ಥಿನಿಯರಿಗಾಗಿಯೇ ಸಖೀ ಮತಗಟ್ಟೆ ಆರಂಭಿಸಿ ಅದನ್ನು ಶಿಕ್ಷಕಿಯರಾದ ಎಸ್‌.ಎಂ. ಸಜ್ಜನ, ಜಗದೇವಿ.ಕೆ, ದೀಪಾ ಚಲಮಿ ಮತಗಟ್ಟೆ ಅಧಿಕಾರಿ ಹಾಗೂ ಪ್ರಿಸೈಡಿಂಗ್‌ ಅಧಿಕಾರಿಗಳಾಗಿ ಕರ್ತವ್ಯ ನಿರ್ವಹಿಸಿದರಲ್ಲದೇ ಅವರ ಭದ್ರತೆಗಾಗಿ ಗೈಡ್ಸ್‌ ವಿದ್ಯಾರ್ಥಿನಿಯರನ್ನು ನೇಮಕ ಮಾಡಲಾಗಿತ್ತು.

•ಪುರುಷರಿಗಾಗಿ ಸ್ಕೌಟ್ಸ್‌: 8 ಹುದ್ದೆಗಳಿಗೆ 19 ಉಮೇದುದಾರರು ಈ ಚುನಾವಣೆಯಲ್ಲಿ ಆಯ್ಕೆ ಬಯಸಿ ಸ್ಪರ್ಧಾಕಣದಲ್ಲುಳಿದು ಬಿರುಸಿನ ಪ್ರಚಾರದೊಂದಿಗೆ ಮತ ಯಾಚಿಸಿದರು.

ಪ್ರಧಾನ ಮಂತ್ರಿ, ಉಪ ಪ್ರಧಾನಿ, ಮಹಿಳಾ ಪ್ರತಿನಿಧಿ ಹುದ್ದೆಗಾಗಿ ಜರುಗಿದ ಚುನಾವಣೆಯಲ್ಲಿ ಶೇ. 92 ಮತದಾನವಾಯಿತು. ಶಾಲಾ ಸ್ಕೌಟ್ಸ್‌ ಅಧಿಕಾರಿ ಎಂ.ಎಚ್. ಬಳಬಟ್ಟಿ ನೇತೃತ್ವದಲ್ಲಿ ಸ್ಕೌಟ್ಸ್‌ ವಿದ್ಯಾರ್ಥಿಗಳು ಮುಂಜಾಗೃತಾ ಕ್ರಮವಾಗಿ ಯಾವುದೇ ತೊಂದರೆವಾಗದಂತೆ ಬಿಗಿ ಬಂದೊಬಸ್ತ್ ನಡೆಸಿದರು. ಒಬ್ಬ ಮತದಾರ ಒಟ್ಟು 8 ಮತ ಚಲಾಯಿಸಿ ತಮ್ಮ ಹಕ್ಕನ್ನು ಸಾಬೀತುಪಡಿಸಿದರು.

ಮತಗಟ್ಟೆ ಅಧಿಕಾರಿಯಾಗಿ ಯು.ಎ. ಹಿರೇಮಠ, ಎನ್‌.ಎಸ್‌. ಬಿರಾದಾರ, ಮಹೇಶ ಗಾಳಪ್ಪಗೋಳ, ಜಿ.ಎಂ. ಹಿರೇಮಠ, ಕಾರ್ಯ ನಿರ್ವಹಿಸಿದರು.

ಮುಖ್ಯ ಚುನಾವಣಾಧಿಕಾರಿಯಾಗಿ ಮುಖ್ಯೋಪಾಧ್ಯಾಯ ಎಸ್‌.ಐ. ಗಿಡ್ಡಪ್ಪಗೋಳ ಕಾರ್ಯ ನಿರ್ವಹಿಸಿದರು. ಒಟ್ಟಾರೆ ಸಾರ್ವತ್ರಿಕ ಚುನಾವಣೆಯಂತೆ ಶಾಲಾ ಸಂಸತ್‌ ಚುನಾವಣೆ ನಡೆದು ಮಕ್ಕಳಲ್ಲಿ ಪ್ರಜಾಪ್ರಭುತ್ವದ ಮೌಲ್ಯಗಳನ್ನು ಬಿಂಬಿಸುವಂತಾಗಿತ್ತು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ