ವಿಶ್ವರೂಪ ದರ್ಶನೋತ್ಸವ ಆಚರಣೆ

ನರಸಿಂಹ ಸರಸ್ವತಿ ಅವರಿಂದ ತ್ರಿವಿಕ್ರಮ ಭಾರತಿ ಯತಿವರ್ಯರಿಗೆ ವಿಶ್ವರೂಪ ದರ್ಶನ

Team Udayavani, May 16, 2019, 4:22 PM IST

ಆಲಮೇಲ: ಕುಮಸಗಿ ಗ್ರಾಮದಲ್ಲಿ ವಿಶ್ವರೂಪ ದರ್ಶನೋತ್ಸವದಲ್ಲಿ ಗಾಣಗಾಪುರದಿಂದ ಬಂದ ದತ್ತ ಪಾದುಕಾ ಪಲ್ಲಕ್ಕಿಯನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ಆಲಮೇಲ: ದ್ವಾಪರ ಯುಗದಲ್ಲಿ ಶ್ರೀಕೃಷ್ಣ ಪರಮಾತ್ಮ ಅರ್ಜುನನಿಗೆ ವಿಶ್ವರೂಪ ದರ್ಶನ ತೋರಿಸಿದ ಇತಿಹಾಸದಲ್ಲಿ ಮೊದಲನೆಯದಾದರೆ ಗಾಣಗಾಪುರದ ನರಸಿಂಹ ಸರಸ್ವತಿಯವರು ಕುಮಸಗಿಯ ತ್ರಿವಿಕ್ರಮ ಭಾರತಿ ಯತಿವರ್ಯರಿಗೆ ವಿಶ್ವರೂಪ ದರ್ಶನದ ಪವಾಡ ದಕ್ಷಿಣ ಭಾರತದ ಕುಮಸಗಿಯಲ್ಲಿ ಕಾಣುತ್ತೇವೆ ಎಂದು ಸಾಹಿತಿ ಸಿದ್ದಾರಾಮ ಉಪ್ಪಿನ ಹೇಳಿದರು.

ಕುಮಸಗಿ ಗ್ರಾಮದ ನರಸಿಂಹ ಸರಸ್ವತಿ ವಿಶ್ವರೂಪ ದರ್ಶನೋತ್ಸವ ಆಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಹಾಭಾರತ ಯುದ್ಧ ಪ್ರಸಂಗದಲ್ಲಿ ಶ್ರೀಕೃಷ್ಣನು ಅರ್ಜುನನಿಗೆ ವಿಶ್ವರೂಪ ತೋರಿಸಿದ್ದು ಬಿಟ್ಟರೆ ದಕ್ಷಿಣ ಭಾರತದಲ್ಲಿ 1390ರಲ್ಲಿ ವೈಶಾಖ ಶುದ್ಧ ದಶಮಿಯಂದು ಗಾಣಗಾಪುರದ ನರಸಿಂಹ ಸರಸ್ವತಿಯವರು ಕುಮಸಗಿಯ ತ್ರಿವಿಕ್ರಮ ಭಾರತಿ ಯತಿವರ್ಯರಿಗೆ ವಿಶ್ವರೂಪ ದರ್ಶನ ತೋರಿಸಿರುವ ಇತಿಹಾಸ ಇದೆ ಎಂದು ಹೇಳಿದರು.

ಧರ್ಮಧರ್ಶಿ ರಘುನಾಥ ಭಟ್ ಜೋಶಿ ಮಾತನಾಡಿ, 1390ರಲ್ಲಿ ಕುಮಸಗಿ ಗ್ರಾಮದಲ್ಲಿ ಗಾಣಗಾಪುರ ಪ್ರಸಿದ್ಧ ದತ್ತವತಾರಿ ಶ್ರೀಮನ್‌ ನರಸಿಂಹ ಸರಸ್ವತಿಯವರು ತ್ರಿವಿಕ್ರಮ ಭಾರತಿ ಯತಿವರ್ಯರಿಗೆ ಕರುಣಿಸಿದ ವಿಶ್ವರೂಪ ದರ್ಶನದ ಪವಾಡ ಕ್ಷೇತ್ರವಾದ ಈ ಸ್ಥಳವನ್ನು ವಿಶ್ವರೂಪ ದರ್ಶನದ ಭವ್ಯ ಮಂದಿರ ನಿರ್ಮಾಣಕ್ಕಾಗಿ 1 ಕೋಟಿ ರೂ. ಯೋಜನೆಯ ನೀಲ ನಕ್ಷೆ ತಯಾರಾಗಿ ಇಂದು ಬಿಡುಗಡೆಯಾಗಿದೆ. ದತ್ತ ಭಕ್ತರು ಈ ಕಾರ್ಯಕ್ಕೆ ಸಹಕರಿಸಬೇಕು ಎಂದು ಕೋರಿದರು.

ಗ್ರಂಥ ಲೋಕಾರ್ಪಣೆ: ಬರಹಗಾರ ಸಿದ್ದರಾಮ ಉಪ್ಪಿನ ಅವರು ಕನ್ನಡದಲ್ಲಿ ಬರೆದ ಕುಮಶಿ ವಿಶ್ವರೂಪ ದತ್ತ ಪಾದುಕಾ ಹಾಗೂ ಅಂಕೋಲಾದ ವಿಶ್ವಾಸ ಗೋಡಬೋಲೆ ಅವರು ಮರಾಠಿ ಭಾಷೆಯಲ್ಲಿ ಬರೆದ ವಿಶ್ವರೂಪ ದರ್ಶನ ಶ್ರೀಕ್ಷೇತ್ರ ಕುಮಸಿ ಗ್ರಂಥಗಳನ್ನು ಬೊಮ್ಮನಹಳ್ಳಿ ನರಸಿಂಹ ಮಹಾರಾಜರು ಲೋಕಾರ್ಪಣೆ ಮಾಡಿದರು.

ಗೊಲ್ಲಾಳೇಶ್ವರ ದರ್ಮಧರ್ಶಿ ಗೊಲ್ಲಾಳ ದೇವರಮನಿ, ಗಾಣಗಾಪುರದ ಸಂಸ್ಕೃತ ವಿದ್ವಾಂಸ ಗೋಪಾಲ ಭಟ್, ಪಂಡಿತ ದೀಕ್ಷಿತ, ಪಂಡಿತ ಸೋನಾಥ ಶಾಸ್ತ್ರೀ ಸಾನ್ನಿಧ್ಯ ವಹಿಸಿದ್ದರು. ಸಾಹಿತಿ ಡಿ.ಎನ್‌. ಅಕ್ಕಿ, ಶಂಕರ ಕುಲಕರ್ಣಿ, ಮುಂಬೈಯ ಶೇಖರ ಸಿಂಧೆ, ಶಿಕ್ಷಕಿ ಮಾಲತಿ ಕುಲಕರ್ಣಿ ಸೇರಿದಂತೆ ಅನೇಕರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ