ನಿಲ್ಲದ ನೀರಿನ ಹಾಹಾಕಾರ; ಮುಂದೇನು ಗತಿ?

31 ಗ್ರಾಮಗಳಿಗೆ ನೀರು ಪೂರೈಕೆಗೆ ಕ್ರಮ10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟ್ಯಾಂಕರ್‌ ನೀರಿಗೆ ಬೇಡಿಕೆ

Team Udayavani, May 10, 2019, 1:29 PM IST

ಆಳಂದ: ಮಾದನಹಿಪ್ಪರಗಾ ಗ್ರಾಮಸ್ಥರು ಕುಡಿಯುವ ನೀರಿಗಾಗಿ ನಳದ ಎದುರು ಕೊಡಗಳೊಂದಿಗೆ ದಿನವಿಡಿ ನಿಲ್ಲುತ್ತಿದ್ದಾರೆ.

ಆಳಂದ: ಕುಡಿಯುವ ನೀರಿನ ಶಾಶ್ವತ ಕ್ರಮ ಆಗದೇ ಇರುವುದರಿಂದ ಬೇಸಿಗೆ ಬಂದರೆ ಸಾಕು ಹಳ್ಳಿಗಳಲ್ಲಿ ಪ್ರತಿವರ್ಷ ನೀರಿನ ಹಾಹಾಕಾರದ
ಪರಿಸ್ಥಿತಿ ಹೀಗೆ ಮುಂದುವರಿದರೇ ಮುಂದೇನು ಗತಿ ಎನ್ನುವಂತಾಗಿದೆ.

ಅತಿರಥ-ಮಹಾರಥರು ನೀರಿಗಾಗಿ ಕೊಡಗಳನ್ನು ಹಿಡಿದು ಬೀದಿಗಳಲ್ಲಿ ಓಡಾಡುವ ದೃಶ್ಯ ಸಾಮಾನ್ಯವಾಗಿದೆ. ಇದಕ್ಕೆ ಹೊರತಲ್ಲ ಎನ್ನುವಂತೆ ಮಹಿಳೆಯರು, ಮಕ್ಕಳು ದಿನವಿಡಿ ನೀರು ತರವಲ್ಲೇ ದಿನದೊಡುವ ಪರಿಸ್ಥಿತಿ ಕಂಡು ಬರುತ್ತಿದೆ.

ಸದ್ಯ ಆಯ್ದ ಗ್ರಾಮಗಳಲ್ಲಿ ಟ್ಯಾಂಕರ್‌ ಮೂಲಕ ನೀರು ಒದಗಿಸಲಾಗುತ್ತಿದೆ. ಇಲ್ಲೂ ಸಮರ್ಪಕ ನೀರು ಸಿಗುತ್ತಿಲ್ಲ. ಇನ್ನು ಅನೇಕ ಹಳ್ಳಿಗಳಿಗೆ ಟ್ಯಾಂಕರ್‌ ನೀರು ಪೂರೈಕೆಯ ಬೇಡಿಕೆ ಇದ್ದರೂ ಅಧಿಕಾರಿಗಳು ವಿಳಂಬ ನೀತಿ ಅನುಸರಿಸುತ್ತಿದ್ದಾರೆ.

ಪ್ರತಿವರ್ಷ ಮಳೆ ಕೊರತೆ ಎದುರಾಗಿ ಆವರಿಸುತ್ತಿರುವ ಭೀಕರ ಬರದಿಂದಾಗಿ ತಾಲೂಕಿನಲ್ಲಿ ಜೀವಜಲದ ಸಮಸ್ಯೆ ದಿನೇ ದಿನೇ ಹೆಚ್ಚುತ್ತಿದೆ. ದನಗಳಿಗೆ ವಿಶೇಷವಾಗಿ ಹೈನುಗಾರಿಕೆಗೆ ಮೇವಿನ ಅಭಾವ ಉಂಟಾಗಿದೆ. ಇದರಿಂದ ಪಶು ಪಾಲಕರು ಕಂಗಾಲಾಗಿದ್ದಾರೆ.

ನೀರಿಗಾಗಿ ಊರು ತೊರೆಯುವ ಕಾಲ ಬಂದಿದೆ. ಏನು ಮಾಡ್ಬೇಕು. ಸಾಕು ಸಾಕಾಗಿ ಹೋಗಿದೆ. ಕೊಡ ನೀರಿಗೂ ಊರ ಮುಂದಿನ ನಲ್ಲಿಯ ಮುಂದೆ ತಾಸು ಗಟ್ಟಲೇ ಕೆಲಸ-ಕಾರ್ಯ ಬಿಟ್ಟು ನಿಂತು ಸಾಕಾಗಿ ಹೋಗಿದೆ. ಸಮಸ್ಯೆ ನಿವಾರಿಸಲು ಯಾರೂ ಬಂದಿಲ್ಲ ಎಂದು ಹಿರೋಳಿ ಗ್ರಾಮದ ರಾಜಶೇಖರ ಬಸ್ಮೆಅಳಲು ತೋಡಿಕೊಂಡಿದ್ದಾರೆ.

ಸಮಸ್ಯೆ ಇರುವ 43 ಗ್ರಾಮಗಳ ಪೈಕಿ 31 ಗ್ರಾಮಗಳಲ್ಲಿ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗಿದೆ. ಟ್ಯಾಂಕರ್‌ ಬೇಡಿಕೆಯ 28 ಹಳ್ಳಿಗಳ ಪೈಕಿ 22 ಹಳ್ಳಿಗಳಲ್ಲಿ ನೀರು ಪೂರೈಕೆ ಕಾರ್ಯ ನಡೆದಿದೆ. ಅಗತ್ಯವಾಗಿರುವ 52 ಟ್ಯಾಂಕರ್‌ ಪೈಕಿ 44 ಟ್ಯಾಂಕರ್‌ ಬಳಸಿ ಪ್ರತಿದಿನ ಬೇಡಿಕೆಯ 159 ಟ್ರಿಪ್‌ ಪೈಕಿ 135 ಟ್ರಿಪ್‌ ನೀರು ಒದಗಿಸಲಾಗುತ್ತಿದೆ.

ಖಾಸಗಿ ನೀರು ಖರೀದಿ: 17 ಗ್ರಾಮದ ಬೇಡಿಕೆ ಪೈಕಿ 11 ಕಡೆ ಬಾಡಿಗೆ ಆಧಾರದ ಮೇಲೆ ನೀರು ಒದಗಿಸಲಾಗುತ್ತಿದೆ. ಇನ್ನು 22 ಖಾಸಗಿ ನೀರು ಪಡೆಯುವ ಯೋಜನೆಯಲ್ಲಿ 16 ಕಡೆ ಜಲಮೂಲಗಳಿಂದ ನೀರು ಪಡೆದು ಟ್ಯಾಂಕರ್‌ನಿಂದ ಒದಗಿಸಲಾಗುತ್ತಿದೆ. ಹೊಸದಾಗಿ ಮಾಡಿಯಾಳ, ಹಡಲಗಿ, ಚಿಂಚೋಳಿ, ಮಮದಾಪುರ ತಾಂಡಾ, ಬೋಳಣಿ, ಮುನ್ನೊಳ್ಳಿ, ಸಂಗೋಳಗಿ ಬಿ. ಸೇರಿದಂತೆ 10ಕ್ಕೂ ಹೆಚ್ಚು ಗ್ರಾಮಗಳಲ್ಲಿ ಟ್ಯಾಂಕರ್‌ ನೀರಿನ ಬೇಡಿಕೆಯಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮುಂದಿನ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ
ಗಮನಕ್ಕೆ ತರಲಾಗುವುದು ಎಂದು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಎಇಇ ಸಂಗಮೇಶ ಬಿರಾದಾರ ತಿಳಿಸಿದ್ದಾರೆ.

ಹೋರಾಟದ ಎಚ್ಚರಿಕೆ
ಪಟ್ಟಣದಲ್ಲಿ ಮೂರ್‍ನಾಲ್ಕು ದಿನಕೊಮ್ಮೆ ನೀರು ಪೂರೈಸಲಾಗುತ್ತಿದೆ. ಆದರೆ, ಹಲವಾರು ವರ್ಷಗಳಿಂದ ಕಲುಷಿತ ನೀರು ಸೇವಿಸಿ ಅನೇಕ ನಾಗರಿಕರು ಅನಾರೋಗ್ಯಕ್ಕೆ ತುತ್ತಾದ ಉದಾಹರಣೆಗಳಿವೆ. ನೀರು ಶುದ್ಧೀಕರಿಸಿ
ಪೂರೈಸದೇ ಇದ್ದಲ್ಲಿ ನಾಗರಿಕರೊಂದಿಗೆ ಹೋರಾಟ ಕೈಗೊಳ್ಳಲಾಗುವುದು ಎಂದು ಯುವ ಕಾರ್ಯಕರ್ತ ದೌಲಪ್ಪ ವಣದೆ ಎಚ್ಚರಿಸಿದ್ದಾರೆ.

ಮಹಾದೇವ ವಡಗಾಂವ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ