ಪ್ರಾಚೀನ ದೇಗುಲಗಳು ನಶಿಸಿದರೆ ಪರಂಪರೆ ನಾಶ

ಪ್ರಧಾನಿ ಮೋದಿ ಪ್ರಾಚೀನ ದೇಗುಲಗಳ ಪುನರುತ್ಥಾನಕ್ಕೆ ಪ್ರಾಮುಖ್ಯ ನೀಡಿದ್ದು ಶ್ಲಾಘನೀಯ: ಸ್ವಾಮೀಜಿ

Team Udayavani, Nov 17, 2019, 2:49 PM IST

ಆನಂದಪುರ: ಪ್ರಾಚೀನ ದೇಗುಲಗಳು ನಮ್ಮ ಸಂಸ್ಕೃತಿ ಮತ್ತು ಸಂಸ್ಕಾರದ ಪ್ರತೀಕವಾಗಿವೆ. ಸೂಕ್ತ ನಿರ್ವಹಣೆಯಿಲ್ಲದೆ ಪ್ರಾಚೀನ ದೇವಾಲಯಗಳು ನಶಿಸುತ್ತಿವೆ. ಪ್ರಾಚೀನ ದೇಗುಲಗಳು ನಶಿಸಿದರೆ ನಮ್ಮ ಪರಂಪರೆ, ಅಸ್ತಿತ್ವಕ್ಕೆ ಧಕ್ಕೆ ಉಂಟಾಗುತ್ತದೆ ಎಂದು ನವದೆಹಲಿ ಭಾರತೀಪೀಠಂನ ಶ್ರೀ ಸರ್ವಾನಂದ ಸರಸ್ವತಿ ಸ್ವಾಮೀಜಿ ತಿಳಿಸಿದರು.

ಸಮೀಪದ ಹೊಸಗುಂದಲ್ಲಿ ಶನಿವಾರ ಉಮಾಮಹೇಶ್ವರ ಟ್ರಸ್ಟ್‌ ವತಿಯಿಂದ ಮೂರು ದಿನಗಳ ಹೊಸಗುಂದ ಉತ್ಸವ ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ “ಶಿಥಿಲಾವಸ್ಥೆ ದೇಗುಲಗಳು ಮತ್ತೆ ಮೈದಳೆಯುವ ಬಗೆ’ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಪ್ರಕೃತಿ ನಡುವೆ ಇರುವ ಹೊಸಗುಂದ ದೇವಾಲಯವನ್ನು ಪುನರ್‌ ನಿರ್ಮಾಣ ಮಾಡಿರುವ ಧರ್ಮಸ್ಥಳದ ಧರ್ಮೋತ್ಥಾನ ಟ್ರಸ್ಟ್ ನ ಕೆಲಸ ನಿಜಕ್ಕೂ ಸ್ಮರಣೀಯ. ದೇಶದ ವಿಭಿನ್ನ ವಾಸ್ತುಶೈಲಿಯುಳ್ಳ ದೇವಾಲಯಗಳ ಅಧ್ಯಯನದ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಪ್ರಾಚೀನ ದೇವಾಲಯಗಳು ಮತ್ತು ಇತಿಹಾಸ ಪ್ರಸಿದ್ಧ ಕಾಶಿ, ಹರಿದ್ವಾರ ಸೇರಿದಂತೆ ಮಹತ್ವದ ಪ್ರಾಚೀನ ಸ್ಥಳಗಳ ಪುನರುತ್ಥಾನಕ್ಕೆ ಪ್ರಾಮುಖ್ಯತೆ ನೀಡಿದ್ದಾರೆ ಎಂದು ತಿಳಿಸಿದರು.

ಧಾರ್ಮಿಕ ಕೇಂದ್ರಗಳ ಸಂರಕ್ಷಣೆಯಿಂದ ಸಂಸ್ಕೃತಿ, ಮೌಲ್ಯಗಳ ಅರಿವು ಮೂಡಿಸಲು ಸಾಧ್ಯವಿದೆ. ಮುಂದಿನ ಪೀಳಿಗೆಗೆ ದೇಶದ ಇತಿಹಾಸದ ಬಗ್ಗೆ ಜಾಗೃತಿ ಮೂಡಬೇಕಿದೆ. ಐತಿಹಾಸಿಕ ದೇಗುಲಗಳ ಮಹತ್ವ ಅರಿತುಕೊಳ್ಳಬೇಕು ಎಂದು ತಿಳಿಸಿದರು.

ಧರ್ಮಸ್ಥಳ ಶ್ರೀ ಮಂಜುನಾಥೇಶ್ವರ ಧರ್ಮೋತ್ಥಾನ ಟ್ರಸ್ಟ್‌ ಪುನರುಜ್ಜೀವನಗೊಳಿಸಿರುವ ಪ್ರಾಚೀನ ದೇವಸ್ಥಾನಗಳ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಸಿಗಂದೂರು ಕ್ಷೇತ್ರದ ಧರ್ಮದರ್ಶಿ ಡಾ| ರಾಮಪ್ಪ, ಸಾವಿರ ವರ್ಷದ ಹಿಂದೆ ಅರಸರ ಆಳ್ವಿಕೆಯಲ್ಲಿ ಹೊಸಗುಂದದಲ್ಲಿ ಅತ್ಯಂತ ಶ್ರೀಮಂತ ಕಲೆ, ಸಂಸ್ಕೃತಿ ಬಿಂಬಿಸುತ್ತಿದ್ದನ್ನು ಪ್ರಾಚ್ಯವಸ್ತುಗಳ ದಾಖಲೆಗಳಿಂದ ತಿಳಿಯಬಹುದಾಗಿದೆ. ಅದೇ ರೀತಿಯಲ್ಲಿ ಹೊಸಗುಂದದಲ್ಲಿ ಮತ್ತೆ ಸಾಂಸ್ಕೃತಿಕ ಮಹತ್ವ ಕಾರ್ಯ ಆರಂಭಗೊಂಡಿರುವುದು ಅಭಿನಂದನೀಯ ಎಂದು ಹೇಳಿದರು.

ಧರ್ಮಸ್ಥಳ ಧರ್ಮೋತ್ಥಾನ ಟ್ರಸ್ಟ್‌ ನಿರ್ದೇಶಕ ಹರೇರಾಮ್‌ ಶೆಟ್ಟಿ ಮಾತನಾಡಿ, ಪ್ರಾಚೀನ ದೇಗುಲಗಳ ಮೂಲ ಸ್ವರೂಪಕ್ಕೆ ಧಕ್ಕೆ ಬರದ ರೀತಿಯಲ್ಲಿ ಸಂರಕ್ಷಣೆ ಮಾಡುವ ಕಾರ್ಯ ಅತ್ಯಂತ ಮಹತ್ವದ್ದಾಗಿದೆ. ಧರ್ಮಸ್ಥಳ ಧಮೋತ್ಥಾನ ಟ್ರಸ್ಟ್‌ನಿಂದ ರಾಜ್ಯದಲ್ಲಿ 247 ಕ್ಕೂ ಹೆಚ್ಚು ಪ್ರಾಚೀನ ದೇಗುಲಗಳ ಜೀಣೋದ್ಧಾರ ಕಾರ್ಯ ಪೂರ್ಣಗೊಂಡಿದೆ. ಟ್ರಸ್ಟ್‌ ಯಾವುದೇ ಕಾರಣಕ್ಕೂ ಮೂಲ ಸ್ವರೂಪಕ್ಕೆ ಧಕ್ಕೆ ತರುವುದಿಲ್ಲ. ಯಥಾಸ್ಥಿತಿಯಲ್ಲಿ ದೇಗುಲ ಪುನರ್‌ ನಿರ್ಮಾಣ ಮಾಡುವ ಕಾರ್ಯ ನಡೆಸುತ್ತಿದ್ದೇವೆ ಎಂದು ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹೊಸಗುಂದ ಉಮಾಮಹೇಶ್ವರ ಸೇವಾ ಟ್ರಸ್ಟ್‌ ಮುಖ್ಯಸ್ಥ ಸಿ.ಎಂ.ಎನ್‌. ಶಾಸ್ತ್ರಿ, ಶ್ರೀ ಕ್ಷೇತ್ರ ಧರ್ಮಸ್ಥಳ ಧರ್ಮಾಧಿಕಾರಿ ಡಾ| ವೀರೇಂದ್ರ ಹೆಗಡೆ ಮಾರ್ಗದರ್ಶನ, ಶೃಂಗೇರಿಯ ಶಾರದಾ ಪೀಠದ ಜಗದ್ಗುರುಗಳ ದಿವ್ಯಾನುಗ್ರಹದೊಂದಿಗೆ ಹೊಸಗುಂದ ದೇವಸ್ಥಾನ ಪುನರುತ್ಥಾನ ಕಾರ್ಯ ಹಾಗೂ ಧಾರ್ಮಿಕ ಕಾರ್ಯಗಳನ್ನು ಕೈಗೊಳ್ಳಲಾಯಿತು ಎಂದರು.

ಪ್ರಾಚೀನ ದೇಗುಲಗಳ ಸಂರಕ್ಷಣೆಗೆ ಧಮೋತ್ಥಾನ ಟ್ರಸ್ಟ್‌ ನೇತೃತ್ವದಲ್ಲಿ ನಡೆಯುತ್ತಿರುವ ಮಹತ್ಕಾರ್ಯದ ಬಗ್ಗೆ ಜನರಿಗೆ ಅರಿವು ಮೂಡಿಸಲು ಛಾಯಾಚಿತ್ರ ಪ್ರದರ್ಶನ ಏರ್ಪಡಿಸಲಾಗಿದೆ. ಇದೇ ಮೊದಲ ಬಾರಿಗೆ ಹೊಸಗುಂದ ಉತ್ಸವ ನಡೆಸುತ್ತಿದ್ದು, ನಮ್ಮ ಕಲೆ, ಸಾಹಿತ್ಯ, ಸಂಸ್ಕೃತಿ ಹಾಗೂ ಪ್ರಾದೇಶಿಕ ಇತಿಹಾಸದ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ನಡೆದಿದೆ ಎಂದು ತಿಳಿಸಿದರು.

ಇತಿಹಾಸ ಸಂಶೋಧಕರಾದ ಶ್ರೀಪಾದ ಬಿಚ್ಚುಗತ್ತಿ, ಡಾ| ಸಾಮಕ್‌, ಡಾ| ಜಿ.ವಿ. ಕಲ್ಲಾಪುರ, ಪ್ರಾಚ್ಯವಸ್ತು ನಿರ್ದೇಶನಾಲಯದ ಮಾಜಿ ನಿರ್ದೇಶಕ ಡಾ| ಸಿದ್ದನ ಗೌಡ, ಜಾನಪದ ಅಕಾಡೆಮಿ ನಿಕಟಪೂರ್ವ ಅಧ್ಯಕ್ಷ ಬಿ. ಟಾಕಪ್ಪ, ಹೊಸೂರು ಗ್ರಾಪಂ ಅಧ್ಯಕ್ಷೆ ಕೃಷ್ಣವೇಣಿ ನಾಗಪ್ಪ, ಗಿರೀಶ್‌ ಕೋವಿ, ಹೆಡತ್ರಿ ಬಸವರಾಜ ಗೌಡ, ಸ್ವಾಮಿರಾವ್‌ ಇನ್ನಿತರರು ಇದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ