ಸರ್ಕಾರಿ ಆಸ್ಪತ್ರೆ ರೋಗಿಗಳಿಗೆ ಸಂಜೀವಿನಿ

•ಆಡಳಿತಾಧಿಕಾರಿ ಡಾ| ಗಾಯಿತ್ರಿ ಜನಪರ ಕಾಳಜಿ •ಖಾಸಗಿ ಆಸ್ಪತ್ರೆ ಮೀರಿಸುವಂತೆ ಸೌಲಭ್ಯ ಲಭ್ಯ

Team Udayavani, Aug 12, 2019, 10:28 AM IST

ಔರಾದ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹೊರ ನೋಟ.

ಔರಾದ: ಸಾರ್ವಜನಿಕ ಆಸ್ಪತ್ರೆಯೆಂದರೆ ಉತ್ತಮ ಚಿಕಿತ್ಸೆ ಸಿಗುವುದಿಲ್ಲ ಎಂದು ನಿರ್ಲಕ್ಷ್ಯ ಮಾಡುವ ಜನರಿಗೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಮಾದರಿಯಾಗಿದೆ. ಖಾಸಗಿ ಆಸ್ಪತ್ರೆಗೆ ಹೋಗುವ ರೋಗಿಗಳು ಕೂಡ ಪಟ್ಟಣದ ಸರಕಾರಿ ಆಸ್ಪತ್ರೆಗೆ ಬಂದು ಗುಣಮಟ್ಟದ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದು ಔರಾದ ತಾಲೂಕು ಕೇಂದ್ರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯ ನೈಜ ಕಥೆಯಾಗಿದೆ. ಸಾರ್ವಜನಿಕ ಆಸ್ಪತ್ರೆ ಎಂದರೆ ಬಡವರಿಗಾಗಿ ನಿರ್ಮಿಸಿರುವುದು ಎನ್ನುವ ಮನೋಭಾವ ಪಟ್ಟಣ ಹಾಗೂ ತಾಲೂಕಿನ ಜನರಲ್ಲಿ ಇತ್ತು. ವೈದ್ಯಾಧಿಕಾರಿಗಳ ಜನಪರ ಕಾಳಜಿಯಿಂದ ಉತ್ತಮ ನಿರ್ವಹಣೆ ಹಾಗೂ ಇನ್ನಿತರ ಜನಪರ ಕೆಲಸಗಳಿಂದ ಈ ಸಾರ್ವಜನಿಕ ಆಸ್ಪತ್ರೆಯಲ್ಲಿನ ಚಿಕಿತ್ಸೆ ಈಗ ಎಲ್ಲರಿಗೂ ಬೇಕಾಗಿದೆ.

ನುರಿತ ವೈದ್ಯರಿಲ್ಲ, ಸ್ವಚ್ಚತೆ ಇಲ್ಲ. ಆಸ್ಪತ್ರೆಗೆ ಬಂದವರಿಗೆ ಸಿಬ್ಬಂದಿ ಸರಿಯಾದ ರೀತಿಯಲ್ಲಿ ಚಿಕಿತ್ಸೆ ನೀಡುತ್ತಿಲ್ಲ ಎನ್ನುವ ಅಪವಾದ ತನ್ನದಾಗಿಸಿಕೊಂಡಿದ್ದ ಸಾರ್ವಜನಿಕ ಆಸ್ಪತ್ರೆಯೇ ಈಗ ಎಲ್ಲ ಸೌಕರ್ಯಗಳನ್ನು ಒಳಗೊಂಡು, ಖಾಸಗಿ ಆಸ್ಪತ್ರೆಗಿಂತಲು ಉತ್ತಮ ಚಿಕಿತ್ಸೆ ಒದಗಿಸುತ್ತಿದೆ. ಹೀಗಾಗಿ ಪಟ್ಟಣದ ಖಾಸಗಿ ಆಸ್ಪತ್ರೆಗೆ ಹೋಗುವ ಸಾಮಾನ್ಯರು ಹಾಗೂ ಶ್ರೀಮಂತರು ಕೂಡ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ.

ಆಸ್ಪತ್ರೆಯ ಆಡಳಿತಾಧಿಕಾರಿಯಾಗಿ ಡಾ|ಗಾಯಿತ್ರಿ ಅವರು ಅಧಿಕಾರ ವಹಿಸಿಕೊಂಡ ದಿನದಿಂದ ಆಸ್ಪತ್ರೆಯಲ್ಲಿದ್ದ ಪ್ರತಿಯೊಂದು ಸಮಸ್ಯೆಗಳನ್ನು ಅರಿತು ಅವುಗಳಿಗೆ ಮುಕ್ತಿ ನೀಡಿದ್ದಾರೆ. ಅಲ್ಲದೆ ತಾಲೂಕು ಕೇಂದ್ರದ ಆಸ್ಪತ್ರೆಯಲ್ಲಿ ಇರಬೇಕಾದ ಸೌಲಭ್ಯಗಳನ್ನು ಕಠಿಣ ಪರಿಶ್ರಮದ ಮೂಲಕ ಮೇಲಾಧಿಕಾರಿಗಳ ಸಹಕಾರದಿಂದ ಒದಗಿಸಿದ್ದಾರೆ. ಸಾರ್ವಜನಿಕರೊಂದಿಗೆ ಹಾಗೂ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ಕುಟುಂಬ ಸದಸ್ಯರಂತೆ ನೋಡಕೊಂಡು ಚಿಕಿತ್ಸೆ ನೀಡುವಂತೆ ಸಿಬ್ಬಂದಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಹೀಗಾಗಿ ಆಸ್ಪತ್ರೆ ಅಲ್ಪ ಅವಧಿಯಲ್ಲೇ ಉತ್ತಮ ಸುಧಾರಣೆ ಕಂಡಿದೆ.

ದಿನಕ್ಕೆ ನಾಲ್ಕು ಬಾರಿ ಸ್ವಚ್ಚತೆ: ಬಡ ರೋಗಿಗಳ ಪಾಲಿಗೆ ಸಂಜೀವಿನಿ ಆಗಿರುವ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರತಿನಿತ್ಯ ನಾಲ್ಕು ಬಾರಿ ಸ್ವಚ್ಚತೆ ಮಾಡಲಾಗುತ್ತದೆ. ಇದರಿಂದ ಆಸ್ಪತ್ರೆಯಲ್ಲಿ ಈ ಹಿಂದಿನಂತೆ ದುರ್ವಾಸನೆ ಇಲ್ಲದಾಗಿದೆ. ಈಗ ಜನರು ನೆರೆಯ ಮಹಾರಾಷ್ಟ್ರದ ಉದಗೀರ ಮತ್ತು ಬೀದರ ಜಿಲ್ಲಾ ಕೇಂದ್ರಗಳಿಗೆ ಹೋಗುವುದನ್ನು ನಿಲ್ಲಿಸಿ ಇಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದು, ಇಲ್ಲಿ ಸಿಬ್ಬಂದಿ ಕೂಡ ಖಾಸಗಿ ಆಸ್ಪತ್ರೆಯ ವೈದ್ಯರಿಗಿಂತ ತಾವೇನೂ ಹಿಂದೆ ಇಲ್ಲ ಎನ್ನುವುದನ್ನು ತಮ್ಮ ಕಾಯಕದ ಮೂಲಕ ತೋರಿಸಿಕೊಟ್ಟಿದ್ದಾರೆ.

ಅಲ್ಲದೇ ಆಸ್ಪತ್ರೆಯ ಪ್ರತಿಯೊಂದು ಕಿಟಕಿಗಳು ಹಾಗೂ ಬಾಗಿಲುಗಳಿಗೆ ಹೊಸ ಪರದೆ ಅಳವಡಿಸಿದ್ದು, ರೋಗಿಗಳ ಹಾಸಿಗೆಯನ್ನು ಸಹ ಪ್ರತಿನಿತ್ಯ ಸ್ವಚ್ಛ ಮಾಡಲಾಗುತ್ತಿದೆ. ಆಸ್ಪತ್ರೆ ಕಟ್ಟಡ ನಿರ್ಮಾಣವಾದಾಗಿನಿಂದ ಆಸ್ಪತ್ರೆಯ ಬಾಗಿಲುಗಳು ಪರದೆಯನ್ನು ಕಂಡಿದ್ದಿಲ್ಲ. ಇದೀಗ ಅಧಿಕಾರಿಗಳ ಉತ್ತಮ ನಿರ್ವಹಣೆ ಯಿಂದ ಇದೆಲ್ಲ ಸಾಧ್ಯವಾಗಿದೆ. ಅಲ್ಲದೆ ರೋಗಿಯ ಜೊತೆಗೆ ಬಂದವರಿಗೆ ಬೆಳಗ್ಗೆ ಹಾಗೂ ಸಂಜೆ ಉಚಿತ ಚಹಾ ವ್ಯವಸ್ಥೆಯನ್ನು ಕೂಡ ಮಾಡಲಾಗಿದೆ ಎನ್ನುವುದು ಪಟ್ಟಣದ ಹಿರಿಯ ನಾಗರಿಕರ ಮಾತು.

ಔರಾದ ತಾಲೂಕು ಕೇಂದ್ರವಾಗಿ ಹಲವು ದಶಕಗಳು ಕಳೆದಿವೆ. ಆದರೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಐಸಿಯು ವಿಭಾಗ ವನ್ನು ಈಗ ಆರಂಭಿಸಲಾಗಿದೆ. ಕುಟುಂಬ ಕಲ್ಯಾಣ ಮಕ್ಕಳ ಶಸ್ತ್ರಚಿಕಿತ್ಸೆ ಸೌಲಭ್ಯವನ್ನು ಎರಡು ತಿಂಗಳ ಹಿಂದೆ ಆರಂಭಿಸಲಾಗಿದೆ. ಡಯಾಲಸಿಸ್‌ ಕೇಂದ್ರ ಆರಂಭ, ಸ್ಟೋನ್‌ ಸ್ಕಾ ್ಯನಿಂಗ್‌ ಸೇವೆ ಆರಂಭಿಸಲಾಗಿದೆ. ಪ್ರತಿವರ್ಷ ಬೇಸಿಗೆ ಕಾಲದಲ್ಲಿ ಆಸ್ಪತ್ರೆಯಲ್ಲಿ ನೀರಿಲ್ಲದೇ ಶಸ್ತ್ರ ಚಿಕಿತ್ಸೆಯನ್ನು ನಿಲ್ಲಿಸಲಾಗುತ್ತಿತ್ತು ಆಸ್ಪತ್ರೆ ಆವರಣದಲ್ಲಿ ಕೊಳವೆ ಬಾವಿ ಕೊರೆದು ಆಸ್ಪತ್ರೆಯಲ್ಲಿನ ದಶಕದ ಸಮಸ್ಯೆಗೆ ಡಾ| ಗಾಯತ್ರಿ ದೇವಿ ಆಡಳಿತಾವಧಿಯಲ್ಲಿ ಮುಕ್ತಿ ನೀಡಲಾಗಿದೆ.

ಗೃಹ ರಕ್ಷಕ ಸಿಬ್ಬಂದಿ ನೇಮಕ: ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಡಿ ಗ್ರೂಪ್‌ ನೌಕರರ ಮೇಲೆ ಹಲ್ಲೆ ನಡೆದಾಗ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯರು ಹಾಗೂ ಸಿಬ್ಬಂದಿ ರಕ್ಷಣೆಗಾಗಿ ಪೊಲೀಸರ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ ಪಟ್ಟಣದ ಪಿಎಸ್‌ಐ ನಾನಾಗೌಡ, ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಶಿವಕುಮಾರ ಘಾಟೆ ಮತ್ತು ಆರೋಗ್ಯ ಇಲಾಖೆಯ ಅಧಿಕಾರಿಗಳು ಆಸ್ಪತ್ರೆಗೆ ಗೃಹ ರಕ್ಷಕ ಸಿಬ್ಬಂದಿಯನ್ನು ನೇಮಕ ಮಾಡಿದ್ದಾರೆ.

ಸ್ಥಳಾವಕಾಶದ ಕೊರತೆ: ಸಾರ್ವಜನಿಕ ಆಸ್ಪತ್ರೆಗೆ ಬರುವ ರೋಗಿಗಳ ಸಬಂಧಿಕರು ಹಾಗೂ ಆಸ್ಪತ್ರೆಯ ಸಿಬ್ಬಂದಿಗೆ ವಾಹನ ನಿಲ್ಲಿಸಲು ಸೂಕ್ತ ಸ್ಥಳಾವಕಾಶವಿಲ್ಲದಾಗಿದೆ. ಆದರೂ ಆರೋಗ್ಯ ಕವಚ ಸೇರಿದಂತೆ ತುರ್ತು ಸಮಯದಲ್ಲಿ ರೋಗಿಗಳಿಗೆ ಚಿಕಿತ್ಸೆಗೆ ಸಮಸ್ಯೆಯಾಗಬಾರದೆಂದು ಇರುವ ಸ್ಥಳದಲ್ಲಿಯೇ ಸಿಬ್ಬಂದಿ ನೇಮಿಸಿ ವಾಹನ ನಿಲ್ಲಿಸುವ ಕೆಲಸ ನಡೆಯುತ್ತಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ