ಹಾಸ್ಟೆಲ್ ಗಳಿಗೆ ಉಚಿತ ನಿವೇಶನ: ಚರಂತಿಮಠ

ಎಸ್‌ಸಿ-ಎಸ್‌ಟಿ-ಬಿಎಂಸಿ, ಅಲ್ಪಸಂಖ್ಯಾತರ ವಸತಿ ನಿಲಯ ಕಟ್ಟಡಕ್ಕೆ ಜಾಗ ಉಚಿತ

Team Udayavani, Sep 19, 2019, 1:39 PM IST

ಬಾಗಲಕೋಟೆ: ಶಾಸಕ ಡಾ| ವೀರಣ್ಣ ಚರಂತಿಮಠ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬಾಗಲಕೋಟೆ: ನವನಗರದಲ್ಲಿ ಸರ್ಕಾರದ ವಿವಿಧ ಇಲಾಖೆಗಳ ವಸತಿ ನಿಲಯ ಕಟ್ಟಡಕ್ಕೆ ಉಚಿತ ನಿವೇಶನ ನೀಡಲು ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಿಂದ ನಿರ್ಣಯ ಕೈಗೊಳ್ಳಲಾಗಿದೆ. ಇದರಿಂದ ಹಲವು ವರ್ಷಗಳಿಂದ ಬಾಡಿಗೆ ಕಟ್ಟಡದಲ್ಲಿದ್ದ ಸರ್ಕಾರಿ ಹಾಸ್ಟೆಲ್ಗಳಿಗೆ ಸ್ವಂತ ಕಟ್ಟಡ ಹೊಂದಲು ಅನುಕೂಲವಾಗಲಿದೆ ಎಂದು ಶಾಸಕ ಡಾ|ವೀರಣ್ಣ ಚರಂತಿಮಠ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಸಿಎಂ, ಸಮಾಜ ಕಲ್ಯಾಣ, ಅಲ್ಪ ಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ವಸತಿ ನಿಲಯ ಕಟ್ಟಡಕ್ಕೆ ಈ ಹಿಂದೆ ಬಿಟಿಡಿಎದಿಂದ ಜಾಗೆ ಕಲ್ಪಿಸಬೇಕಾದಲ್ಲಿ ಶುಲ್ಕ ನಿಗದಿ ಮಾಡಲಾಗಿತ್ತು. ಹೀಗಾಗಿ ಅಷ್ಟೊಂದು ಹಣ ಪಾವತಿಸಲು, ಆಯಾ ಇಲಾಖೆಗಳಿಗೆ ಸಾಧ್ಯವಾಗದೇ, ಹಾಸ್ಟೇಲ್ಗಳು ಸ್ವಂತ ಕಟ್ಟಡ ಹೊಂದುವುದು ವಿಳಂಭವಾಗುತ್ತಿತ್ತು. ಈ ಕುರಿತು ಶನಿವಾರ ಬೆಂಗಳೂರಿನಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಅಧ್ಯಕ್ಷತೆಯಲ್ಲಿ ನಡೆದ ಬಿಟಿಡಿಎ ಸಭೆಯಲ್ಲಿ ಉಚಿತ ನಿವೇಶನ ನೀಡಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.

527 ಮೀಟರ್‌ಗೆ ಮುಳುಗಡೆ: ಆಲಮಟ್ಟಿ ಜಲಾಶಯದಲ್ಲಿ 519.60 ಮೀಟರ್‌ ನೀರು ನಿಲ್ಲಿಸಿದಾಗ, ಬಾಗಲಕೋಟೆ ನಗರವನ್ನು 523 ಮೀಟರ್‌ ವರೆಗೆ ಮುಳುಗಡೆ ಎಂದು ಘೋಷಿಸಿ, ಕಟ್ಟಡ ಸ್ವಾಧೀನಪಡಿಸಿಕೊಂಡು ಪುನರ್‌ವಸತಿ ಕಲ್ಪಿಸಲಾಗಿತ್ತು. ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಿದಾಗ, ನಗರವನ್ನು 527 ಮೀಟರ್‌ವರೆಗೆ ಮುಳುಗಡೆ ಪ್ರದೇಶವೆಂದು ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಅನುಮತಿ ನೀಡಲಾಗಿತ್ತು. ಆದರೆ, ಬಳಿಕ ಬಂದ ಕಾಂಗ್ರೆಸ್‌ ಸರ್ಕಾರ, ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಿದಾಗ, ನಗರವನ್ನು 525 ಮೀಟರ್‌ವರೆಗೆ ಮಾತ್ರ ಮುಳುಗಡೆ ಪ್ರದೇಶವನ್ನು ಘೋಷಿಸಿ, ನಿರ್ಣಯಗೊಂಡಿತ್ತು. ಇದರಿಂದ ಹಿನ್ನೀರ ಪ್ರದೇಶ ವ್ಯಾಪ್ತಿಯ ಜನರಿಗೆ ಮಲೇರಿಯಾ ಸಹಿತ ಹಲವು ರೀತಿಯ ಸಮಸ್ಯೆ ಉಂಟಾಗುತ್ತದೆ. ಹಿಂದೆ ಬಿಜೆಪಿ ಸರ್ಕಾರ ನಿರ್ಧರಿಸಿದಂತೆ, 527 ಮೀಟರ್‌ ವರೆಗೂ ಮುಳುಗಡೆ ಪ್ರದೇಶವೆಂದು ಪರಿಗಣಿಸಲು ಮೊನ್ನೆ ನಡೆದ ಸಭೆಯಲ್ಲಿ ಒತ್ತಾಯಿಸಿದ್ದು, ಈ ಕುರಿತು ಪ್ರಸ್ತಾವನೆ ಸಲ್ಲಿಸಲು ಸೂಚಿಸಿದ್ದಾರೆ. ಹೀಗಾಗಿ ಶೀಘ್ರವೇ ವಿಸೃತ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ವಿವರಿಸಿದರು.

855ರ ಬದಲು 1100 ಮನೆ: ಆಲಮಟ್ಟಿ ಜಲಾಶಯವನ್ನು 524.256 ಮೀಟರ್‌ಗೆ ಎತ್ತರಿಸಿದಾಗ ನಗರದ ಕಿಲ್ಲಾ ಪ್ರದೇಶ ನಡುಗಡ್ಡೆಯಾಗುತ್ತದೆ. ಹೀಗಾಗಿ ಈ ಪ್ರದೇಶವನ್ನು ಸ್ಥಳಾಂತರಿಸಲು ಬಿಜೆಪಿ ಸರ್ಕಾರದಲ್ಲಿ ಒಪ್ಪಿಗೆ ನೀಡಲಾಗಿತ್ತು. ಆದಾದ ಬಳಿಕ ಯಾವುದೇ ಪ್ರಕ್ರಿಯೆ ನಡೆಯಲಿಲ್ಲ. ಕಾಂಗ್ರೆಸ್‌ ಸರ್ಕಾರದಲ್ಲಿ ಎರಡು ಬಾರಿ ಅನುಮತಿ ಸಿಕ್ಕಿರಲಿಲ್ಲ. ಈ ಕುರಿತು ಚರ್ಚೆ, ಮಾಡಲಾಗಿದೆ ಎಂದರು.

ವಿಧಿ 370 ರದ್ದತಿ; ಐತಿಹಾಸಿಕ ತಪ್ಪಿನ ತಿದ್ದುಪಡಿ ಕುರಿತು ಜನ ಜಾಗೃತಿ ಸಭೆಯನ್ನು ಸೆ. 20ರಂದು ಬಿವಿವಿ ಸಂಘದ ನೂತನ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದೆ. ರಾಷ್ಟ್ರೀಯ ಏಕತಾ ಅಭಿಯಾನದ ಒಂದು ರಾಷ್ಟ್ರ -ಒಂದು ಸಂವಿಧಾನ ಕಾರ್ಯಕ್ರಮದಡಿ ಈ ಸಭೆ ನಡೆಯಲಿದೆ ಎಂದು ಹೇಳಿದರು.

ಅಂದು ಬೆಳಗ್ಗೆ 11:30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸರ್ಕಾರದ ಕೃಷಿ ಸಮಿತಿ ಅಧ್ಯಕ್ಷರೂ ಆಗಿರುವ ಸಂಸದ ಪಿ.ಸಿ. ಗದ್ದಿಗೌಡರ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದು, ಬೃಹತ್‌ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ ಗೌರವ ಅತಿಥಿಯಾಗಿ ಭಾಗವಹಿಸುವರು. ಈ ಕಾರ್ಯಕ್ರಮದಲ್ಲಿ ಬಿಜೆಪಿ ಆರ್ಥಿಕ ಪ್ರಕೋಷ್ಟದ ರಾಜ್ಯ ಸಂಚಾಲಕ ವಿಶ್ವನಾಥ ಭಟ್ ಅವರು ವಿಶೇಷ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎಂದು ವಿವರಿಸಿದರು.

ಅಂದು ಕಾರ್ಯಕ್ರಮಕ್ಕೂ ಮುಂಚೆ ನಗರದ ವಕೀಲರು, ವೈದ್ಯರು, ಗಣ್ಯ ವ್ಯಕ್ತಿಗಳು ಸೇರಿದಂತೆ ಐದು ಜನ ಪ್ರಮುಖರ ಮನೆಗೆ ತೆರಳಿ, 370 ವಿಧಿ ರದ್ದತಿ ಕುರಿತು ಮಾಹಿತಿ ನೀಡಲಾಗುವುದು. ಬಿಜೆಪಿ ರಾಜ್ಯ ಘಟಕದ ನಿರ್ದೇಶನದ ಮೇರೆಗೆ ಈ ವಿಶೇಷ ಕಾರ್ಯಕ್ರಮ ನಡೆಯಲಿದ್ದು, ಜಿಲ್ಲೆಯ ಪಕ್ಷದ ಪ್ರಮುಖರು, ಕಾರ್ಯಕರ್ತರು, ವಿವಿಧ ಘಟಕಗಳ ಪದಾಧಿಕಾರಿಗಳು ಭಾಗವಹಿಸುವಂತೆ ಮನವಿ ಮಾಡಿದರು.

ಬಿವಿವಿ ಸಂಘದ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಅಶೋಕ ಸಜ್ಜನ, ವೈದ್ಯಕೀಯ ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಸಿದ್ದಣ್ಣ ಶೆಟ್ಟರ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ