ಜಿಲ್ಲೆಗೆ 10 ಕೋಟಿ ಹಣ ಬಿಡುಗಡೆ

•63 ಹಳ್ಳಿಗಳಲ್ಲಿ ಪ್ರವಾಹ; ಪರಿಹಾರ ಕಾರ್ಯಕ್ಕೆ ಸೂಚನೆ •ಪ್ರವಾಹ ಪರಿಸ್ಥಿತಿ ನಿಯಂತ್ರಣ ಮಾಡಿ

Team Udayavani, Aug 10, 2019, 10:12 AM IST

ಬಾಗಲಕೋಟೆ: ಜಿಪಂ ಸಭಾಭವನದಲ್ಲಿಂದು ಜಿಲ್ಲೆಯ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಮಾತನಾಡಿದರು.

ಬಾಗಲಕೋಟೆ: ಕೃಷ್ಣಾ, ಮಲಪ್ರಭಾ ಹಾಗೂ ಘಟಪ್ರಭಾ ತ್ರಿವಳಿ ನದಿಗಳ ಪ್ರವಾಹದಿಂದ ಜಿಲ್ಲೆಯ 63 ಗ್ರಾಮಗಳು ಪ್ರವಾಹಕ್ಕೆ ಒಳಗಾಗಿದ್ದು, ರಕ್ಷಣಾ ಕಾರ್ಯದಲ್ಲಿ ಹಗಲು, ರಾತ್ರಿ ಕೆಲಸ ನಿರ್ವಹಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದರು.

ಜಿಪಂ ಸಭಾಭವನದಲ್ಲಿಂದು ಜಿಲ್ಲೆಯ ಪ್ರವಾಹ ಪರಿಸ್ಥಿತಿ ನಿರ್ವಹಣೆ ಕುರಿತು ಜರುಗಿದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ದಿನೇ ದಿನೇ ಪ್ರವಾಹ ಹೆಚ್ಚಾಗುತ್ತಿದೆ. ಇಂಥ ಗಂಭೀರ ಸ್ಥಿತಿಯಲ್ಲಿ ಸಂತ್ರಸ್ತರಿಗೆ ನೆರವಾಗುವ ಕೆಲಸವಾಗಬೇಕು. ತಮಗೆ ದ್ರೋಹ ಮಾಡಿಕೊಳ್ಳಬಾರದು, ದೇವರು ಕ್ಷಮಿಸುವುದಿಲ್ಲವೆಂದು ಮುಖ್ಯಮಂತ್ರಿಗಳು ತಿಳಿಸಿದರು.

ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕೆ ಬಾಗಲಕೋಟೆ ಜಿಲ್ಲೆಗೆ 100 ಕೋಟಿ ರೂ. ಪರಿಹಾರ ನೀಡಲಾಗಿದ್ದು, ಈ ಪೈಕಿ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಈಗ ಸದ್ಯ ಜಿಲ್ಲಾಧಿಕಾರಿಗಳ ಖಾತೆಯಲ್ಲಿ 17.18 ಕೋಟಿ ರೂ. ಇದೆ. ಇನ್ನು ಹೆಚ್ಚಿನ ಅನುದಾನಕ್ಕೆ ಕೇಂದ್ರ ಸರಕಾರಕ್ಕೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.

ಜಿಲ್ಲೆಯಲ್ಲಿ ರಚನೆಯಾದ ಹೊಸ ತಾಲೂಕುಗಳಿಗೆ ಹೊಸ ತಹಶೀಲ್ದಾರ್‌, ಡಿಡಿಓ ಕೋಡ್‌, ವಾಹನ ವ್ಯವಸ್ಥೆಗೆ ಒದಗಿಸುವಂತೆ ತೇರದಾಳ ಶಾಸಕ ಸಿದ್ದು ಸವದಿ ಮತ್ತು ಹುನುಗಂದ ಶಾಸಕ ದೊಡ್ಡನಗೌಡ ಪಾಟೀಲ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡಾಗ ಶೀಘ್ರವೇ ಪರಿಹರಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

ಇದೇ ಸಂದರ್ಭದಲ್ಲಿ ಮುಧೋಳ ಶಾಸಕ ಗೋವಿಂದ ಕಾರಜೋಳ ಮಾತನಾಡಿ, ಪ್ರವಾಹ ಪೀಡಿತ ಪ್ರದೇಶಗಳಲ್ಲಿ ವಿದ್ಯುತ್‌ ಸಂಪರ್ಕ ಕಡಿತಗೊಂಡಿದ್ದು, ಟಿಸಿ ಬದಲಾವಣೆ, ಕಂಡಕ್ಟರ್‌ ಹಾಗೂ ಇನ್ಸಲೇಟರ್‌ಗಳಿಗಾಗಿ ಎಸ್‌ಸಿ ಹಾಗೂ ಇಇಗಳಿಗೆ ಅಧಿಕಾರ ವಿಕೇಂದ್ರೀಕರಣಕ್ಕೆ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದರು.

ಪ್ರವಾಹ ಪರಿಸ್ಥಿತಿ ಮನಗೊಂಡ ಮುಖ್ಯಮಂತ್ರಿಗಳು ಈ ಹಿಂದೆ ಹುಬ್ಬಳ್ಳಿ ಹೆಸ್ಕಾಂ ಎಂಡಿಗೆ ನೀಡಲಾದ ಅಧಿಕಾರವನ್ನು ಎಸ್‌.ಇ ಮತ್ತು ಇಇಗಳಿಗೆ ಸ್ಥಳದಲ್ಲಿಯೇ ಅಧಿಕಾರ ವಿಕೇಂದ್ರೀಕರಣಕ್ಕೆ ಆದೇಶ ನೀಡಿದರು.

ಶತಮಾನದ ಇತಿಹಾಸ ಇಂಥ ಜಲಾಪ್ರಳಯ ಜಿಲ್ಲೆಯಲ್ಲಿ ಸಂಭವಿಸಿದೆ. ಮುಧೋಳ ತಾಲೂಕಿನಲ್ಲಿ ಒಟ್ಟು 36 ಗ್ರಾಮಗಳ ಸ್ಥಳಾಂತರಕ್ಕೆ, ಭೂಮಿ ದರ ಖರೀದಿಗೆ ವೆಚ್ಚ ಹೆಚ್ಚಳಕ್ಕೆ ಕ್ರಮಕೈಗೊಳ್ಳಬೇಕು. ಲೇಔಟ್, ಕ್ರಿಯಾಯೋಜನೆ ಹಾಗು ಮೂಲಭೂತ ಸೌಕರ್ಯ ಒದಗಿಸಿಕೊಡುವಂತೆ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಂಡರು.

ಬಾಗಲಕೋಟೆ ಶಾಸಕ ಡಾ| ವೀರಣ್ಣ ಚರಂತಿಮಠ ಮಾತನಾಡಿ, ಕಿಲ್ಲಾದ 700 ಮನೆಗಳು ದ್ವೀಪದಂತಾಗಿದ್ದು, ಆ ಮನೆಗಳನ್ನು ಸಂಪೂರ್ಣವಾಗಿ ಸ್ಥಳಾಂತರ ಮಾಡಬೇಕಾಗಿದೆ. ಅಲ್ಲದೇ ಆಸರೆ ಮನೆಗಳಲ್ಲಿ ಕಸ, ಕಡ್ಡಿ, ಸ್ವಚ್ಛತೆ ಕಾಪಾಡಿ ಪುನರ್‌ ನವೀಕರಣಗೊಳಿಸಲು ಕ್ರಮಕ್ಕಾಗಿ ಮುಖ್ಯಮಂತ್ರಿಗಳಿಗೆ ಮನವಿ ಮಾಡಿಕೊಂಡರು.

ಇದೇ ಸಂದರ್ಭದಲ್ಲಿ ವಿಧಾನ ಪರಿಷತ್‌ ಸದಸ್ಯ ಎಸ್‌.ಆರ್‌.ಪಾಟೀಲ ಮಾತನಾಡಿ, ಆಲಮಟ್ಟಿ 3ನೇ ಹಂತದ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಕೇವಲ ಶೇ.20 ರಷ್ಟು ಕೆಲಸ ಮಾತ್ರ ಬಾಕಿ ಉಳಿದಿದೆ. ಪ್ರವಾಹ ಪರಿಸ್ಥಿತಿ ನಿರ್ವಹಣೆಯಲ್ಲಿ ಜಿಲ್ಲಾಧಿಕಾರಿಗಳು ಕೈಗೊಂಡ ಕ್ರಮಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು.

ಜಾನುವಾರುಗಳಿಗೆ ಮೇವು, ಗೋಶಾಲೆ ಹಾಗೂ ಆರೋಗ್ಯ ಕೇಂದ್ರ ತೆರೆಯಲು ಕ್ರಮ ಕೈಗೊಳ್ಳಲು ತಿಳಿಸಿದರು.

ಜಿಲ್ಲಾಧಿಕಾರಿ ಆರ್‌.ರಾಮಚಂದ್ರನ್‌ ಮಾತನಾಡಿ, ಜಿಲ್ಲೆಯ ಪ್ರವಾಹ ಪರಿಸ್ಥಿತಿ ನಿಯಂತ್ರಣಕ್ಕಾಗಿ ಜಿಲ್ಲಾ ಮಟ್ಟದ ಅಧಿಕಾರಿಗಳ ವಾಟ್ಸ್‌ ಆ್ಯಪ್‌ಗ್ರೂಪ್‌ ಮಾಡಲಾಗಿದ್ದು, ಇದರಿಂದ ಕ್ಷಣ ಕ್ಷಣಕ್ಕೂ ಮಾಹಿತಿ, ಕ್ರಮ, ಕೋಯ್ನಾ, ಹಿಡಕಲ್, ನವಿಲುತೀರ್ಥ, ಆಲಮಟ್ಟಿ ಜಲಾಶಯಗಳ ನೀರಿನ ಸ್ಥಿತಿಗತಿಗಳ ಬಗ್ಗೆ ಮಾಹಿತಿಗಳನ್ನು ಅಪ್‌ಡೆಟ್ ಮಾಡಲಾಗುತ್ತಿದೆ. ಇದರಿಂದ ಪರಿಹಾರ ಕಾರ್ಯದ ಬಗ್ಗೆ ವಾಟ್ಸಪ್‌ ಗ್ರೂಪ್‌ನಿಂದಲೇ ಮಾಹಿತಿ ಪಡೆಯಲಾಗುತ್ತಿದೆ ಎಂದರು.

ಗುರುವಾರ ನಾಗರಾಳ, ನೆಲವಗಿ ಗ್ರಾಮಗಳು ನಡುಗಡ್ಡೆಯಾಗಿದ್ದು, ಆ ಗ್ರಾಮಗಳಲ್ಲಿನ 2 ಸಾವಿರ ಜನರನ್ನು ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ಮಲಪ್ರಭಾ ನದಿಯ ಪ್ರವಾಹ ಹೆಚ್ಚಾಗಿದ್ದು, ಬಾದಾಮಿ ತಾಲೂಕಿನಲ್ಲಿ ಹಲವು ಗ್ರಾಮಗಳಿಗೆ ನೀರು ಆವರಿಸಿದ್ದು, ಅಲ್ಲಿ 30 ಪರಿಹಾರ ಕೇಂದ್ರಗಳನ್ನು ಹಾಗೂ ಹುನಗುಂದ ತಾಲೂಕಿನಲ್ಲಿ 11 ಹಾಗೂ ಕೂಡಲಸಂಗಮದಲ್ಲಿ ವಿಶೇಷ ಕೇಂದ್ರಗಳನ್ನು ತೆರೆಯಲಾಗಿದೆ. ಅಲ್ಲದೇ 6 ಲಕ್ಷ ಪಡಿತರದಾರರಿಗೆ ಪ್ರವಾಹ ಪ್ರದೇಶವಾರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಎಸ್‌ಎಂಎಸ್‌ ಕಳುಹಿಸಲಾಗುತ್ತಿದೆ ಎಂದು ತಿಳಿಸಿದರು. ಸಭೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ಸಿದ್ದು ಸವದಿ, ದೊಡ್ಡನಗೌಡ ಪಾಟೀಲ, ಜಿ.ಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ತುಷಾರ ಗಿರಿನಾಥ, ಮುಖ್ಯಮಂತ್ರಿಗಳ ಸಲಹೆಗಾರ ಲಕ್ಷ್ಮೀ ನಾರಾಯಣ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಅಪರ ಜಿಲ್ಲಾಧಿಕಾರಿ ದುರ್ಗೇಶ ರುದ್ರಾಕ್ಷಿ ಉಪಸ್ಥಿತರಿದ್ದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ