ಹುಷಾರಾಗಿರಿ, ಕೈ ಮೀರುತ್ತಿದೆ ಕೋವಿಡ್!
ನವ ವಿವಾಹಿತನಿಗೆ ಸೋಂಕು ದೃಢ
Team Udayavani, Jun 21, 2020, 6:12 AM IST
ಬಾಗಲಕೋಟೆ: ನಿರ್ಬಂಧಿತ ಪ್ರದೇಶಗಳಿಂದ ಮುಕ್ತಿಯಾಗಿದ್ದ ಜಿಲ್ಲೆಯಲ್ಲಿ ಶನಿವಾರ ಮತ್ತೆ ಇಬ್ಬರಿಗೆ ಸೋಂಕು ಪತ್ತೆಯಾಗಿದ್ದು, ಜಿಲ್ಲೆಯ ಮೂರು ಪ್ರದೇಶಗಳನ್ನು ನಿರ್ಬಂಧಿತ ಪ್ರದೇಶಗಳೆಂದು ಘೋಷಿಸಲಾಗಿದೆ.
ಕಳೆದ ಜೂ. 1ರಿಂದ ಜಿಲ್ಲೆಯ ವಾಸಿಗಳಲ್ಲಿ ಸೋಂಕು ಪತ್ತೆಯಾಗಿರಲಿಲ್ಲ. ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶದಿಂದ ಬಂದವರಿಗೆ ಮಾತ್ರ ಕೋವಿಡ್ ಸೋಂಕು ತಗುಲಿತ್ತು. ಹೀಗಾಗಿ ಜಿಲ್ಲಾಡಳಿತವೂ ಅಲ್ಲಿನ ನಂಟಿನಿಂದ ಸೋಂಕು ತಗುಲಿದೆ ಎಂದು ಹೇಳಿ, ಸೋಂಕಿತರಿಗೆ ಚಿಕಿತ್ಸೆ ಮಾತ್ರ ಮುಂದುವರಿಸಿತ್ತು. ಆದರೆ, ಶನಿವಾರ ಜಿಲ್ಲೆಯ ಕಲಾದಗಿಯ 29 ವರ್ಷದ ನವ ವಿವಾಹಿತ ಪಿ-8300 (ಬಿಜಿಕೆ-116) ಹಾಗೂ ಗುಡೂರಿನ 50 ವರ್ಷದ ಮಹಿಳೆ ಪಿ-8301 ಸೋಂಕು ದೃಢಪಟ್ಟಿದೆ. ಇವರಿಬ್ಬರು ಕೆಮ್ಮು, ನೆಗಡಿ, ಜ್ವರದಿಂದ ಬಳುತ್ತಿದ್ದ ವೇಳೆ ಕೋವಿಡ್ ಪರೀಕ್ಷೆ ನಡೆಸಿದ್ದು ಸೋಂಕು ತಗುಲಿರುವುದು ದೃಢಪಟ್ಟಿದೆ.
ನವ ವಿವಾಹಿತ ಅಧಿಕಾರಿಗೆ ಸೋಂಕು: ಮೂಲತಃ ಕಲಾದಗಿಯ 29 ವರ್ಷದ ಯುವಕ, ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸಪೆಕ್ಟರ್ ಆಗಿ ನೇಮಕಾತಿಯಾಗಿದ್ದು, ಹಾವೇರಿಯಲ್ಲಿ ದೈಹಿಕ ಪರೀಕ್ಷೆಗೆ ಹೋದಾಗ, ಸೋಂಕು ತಗುಲಿರುವುದು ಗೊತ್ತಾಗಿದೆ. ಈತ ಜೂ.12ರಂದು ಬಾಗಲಕೋಟೆ ರೈಲ್ವೆ ನಿಲ್ದಾಣ ಮುಂಭಾಗ ಪ್ರದೇಶದ ಯುವತಿಯೊಂದಿಗೆ ಮದುವೆಯಾಗಿದ್ದ. ಈ ಮದುವೆಗೆ ಕಲಾದಗಿ ಮತ್ತು ಬಾಗಲಕೋಟೆಯ ಹಲವರು ಬಂದಿದ್ದರು. ಇದೀಗ ಮದುವೆಗೆ ಬಂದವರಿಗೂ ಆತಂಕ ಶುರುವಾಗಿದೆ. ಹೀಗಾಗಿ ಮದುವೆಯಲ್ಲಿ ಭಾಗವಹಿಸಿದ್ದವರ ಹುಡುಕಾಟ ನಡೆಸಲಾಗುತ್ತಿದೆ.
ಈ ನವ ವಿವಾಹತನೊಂದಿಗೆ ಪ್ರಾಥಮಿಕ ಹಂತದಲ್ಲಿ 21 ಹಾಗೂ ದ್ವಿತೀಯ ಹಂತದಲ್ಲಿ 32 ಜನರು ಬಂದಿದ್ದು, ಅವರ ಗಂಟಲು ಮಾದರಿ ಪಡೆದು ಕ್ವಾರಂಟೈನ್ ಮಾಡಲಾಗಿದೆ. ಯುವಕನ ಸ್ವಗ್ರಾಮ ಕಲಾದಗಿಯ ಏರಿಯಾ ಹಾಗೂ ಮದುವೆಯಾದ ಬಾಗಲಕೋಟೆಯ ರೈಲ್ವೆ ನಿಲ್ದಾಣ ಮುಂಭಾಗದ ಪ್ರದೇಶವನ್ನು ಜನ ಸಂಚಾರದಿಂದ ನಿರ್ಬಂಧಿತ ಪ್ರದೇಶವೆಂದು ಜಿಲ್ಲಾಡಳಿತ ಘೋಷಣೆ ಮಾಡಿದೆ.
ಆತಂಕ ಸೃಷ್ಟಿಸಿದ ಮಹಿಳೆ ಓಡಾಟ : ಇನ್ನು ಗುಡೂರಿನ 50 ವರ್ಷದ ಮಹಿಳೆಯೂ, ಕೆಮ್ಮು-ನೆಗಡಿ-ಜ್ವರದಿಂದ ಹುಬ್ಬಳ್ಳಿಯ ಕಿಮ್ಸ್‌ನಲ್ಲಿ ಗಂಟಲು ಮಾದರಿ ನೀಡಿದ್ದು ಕೋವಿಡ್ ಖಚಿತವಾಗಿದೆ. ಆದರೆ, ಗಂಟಲು ಮಾದರಿ ನೀಡಿ ತನ್ನೂರು ಗುಡೂರಿಗೆ ಬಂದಿದ್ದಾರೆ. ಹೀಗಾಗಿ ಅವರೊಂದಿಗೆ ಪ್ರಾಥಮಿಕ ಸಂಪರ್ಕಕ್ಕೆ ಬಂದ 12 ಜನರನ್ನೂ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಈ ಮಹಿಳೆ ಗುಡೂರಿನಿಂದ ಧಾರವಾಡದ ತಮ್ಮ ನೆಂಟರ ಮನೆಗೆ ಹೋಗಿದ್ದು, ಅಲ್ಲಿಂದ ಗಜೇಂದ್ರಗಡದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಿದ್ದಾರೆ. ಗುಡೂರಿನಲ್ಲಿ ಸಂಪರ್ಕಕ್ಕೆ ಬಂದವರ ಪತ್ತೆ ಮಾಡಿದ್ದು, ಧಾರವಾಡ ಹಾಗೂ ಗಜೇಂದ್ರಗಡದಲ್ಲಿ ಸಂಪರ್ಕಕ್ಕೆ ಬಂದವರ ಪತ್ತೆ ಮಾಡಲಾಗುತ್ತಿದೆ. ಇದೆಲ್ಲಕ್ಕಿಂತ ಮುಖ್ಯವಾಗಿ ಆ ಮಹಿಳೆ, ಗುಡೂರಿನಿಂದ ಧಾರವಾಡ, ಅಲ್ಲಿಂದ ಗಜೇಂದ್ರಗಡ, ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಹಾಗೂ ಹುಬ್ಬಳ್ಳಿಯಿಂದ ಪುನಃ ಗುಡೂರಿಗೆ ಮರಳಿದ್ದಾರೆ. ಈ ವೇಳೆ ಎಷ್ಟು ಜನ ಸಂಪರ್ಕಕ್ಕೆ ಬಂದಿದ್ದರು ಎಂಬುದೇ ಈಗ ಆತಂಕ ಸೃಷ್ಟಿಸಿದೆ ಎನ್ನಲಾಗಿದೆ. ಮಹಿಳೆ ವಾಸಿಸುತ್ತಿದ್ದ ಗುಡೂರಿನ ಮನೆ ಇರುವ ಪ್ರದೇಶವನ್ನೂ ಶನಿವಾರ ಕಂಟೇನ್ಮೆಂಟ್ ಝೋನ್ ಎಂದು ಘೋಷಿಸಿದ್ದು, ಪ್ರಾಥಮಿಕ ಸಂಪರ್ಕದಲ್ಲಿದ್ದವರ ಗಂಟಲು ದ್ರವ ತಪಾಸಣೆಗೆ ಕಳುಹಿಸಲಾಗಿದೆ.
ಕೈ ಮೀರುತ್ತಿದೆಯೇ ಕೋವಿಡ್: ಕೋವಿಡ್ ವೈರಸ್ ಮಹಾಮಾರಿ ಎಂದು ಗೊತ್ತಿದ್ದರೂ, ಒಬ್ಬರಿಂದ ಮತ್ತೂಬ್ಬರಿಗೆ ವೇಗವಾಗಿ ಹರಡುತ್ತಿದ್ದರೂ ಜಿಲ್ಲೆಯ ಜನರು ಮಾತ್ರ ಸೋಂಕಿನ ಕುರಿತು ಗಂಭೀರತೆ ವಹಿಸುತ್ತಿಲ್ಲ. ಜಿಲ್ಲಾಡಳಿತದ ಕಣ್ತಪ್ಪಿಸಿ ಬೇರೆ ರಾಜ್ಯದಿಂದ ಬರುವವರೂ ಹೆಚ್ಚುತ್ತಲೇ ಇದ್ದಾರೆ. ಸ್ಥಳೀಯರ ಜಾಗೃತಿ-ಎಚ್ಚರಿಕೆಯಿಂದ ಸಮುದಾಯದಲ್ಲಿ ಈ ಸೋಂಕು ಹಬ್ಬುವುದು ಕೊಂಚ ನಿಯಂತ್ರಣದಲ್ಲಿದೆ ಎನ್ನಲಾಗಿದೆ.
ಅಲ್ಲದೇ ಕ್ವಾರಂಟೈನ್‌ಲ್ಲಿರುವ ವ್ಯಕ್ತಿಗಳೂ ಸೋಂಕಿನ ಕುರಿತು ಗಂಭೀರತೆಯಿಂದ ವರ್ತಿಸುತ್ತಿಲ್ಲ. ಮುಧೋಳ ತಾಲೂಕಿನ ಬರಗಿಯ ಒಬ್ಬ ವ್ಯಕ್ತಿ ಕ್ವಾರಂಟೈನ್ ಕೇಂದ್ರದಿಂದ ಹೊರ ಹೋಗಿ ಸ್ನೇಹಿತರೊಂದಿಗೆ ಪಾರ್ಟಿ ಮಾಡಿ ಬಂದಿದ್ದ. ಆತನಿಗೆ ಎರಡು ದಿನಗಳ ಬಳಿಕ ಕೋವಿಡ್ ಖಚಿತವಾಗಿತ್ತು. ಇನ್ನು ಜಮಖಂಡಿ ತಾಲೂಕಿನ ಗ್ರಾಮವೊಂದರ ಇಬ್ಬರು ಯುವಕರೂ ಕ್ವಾರಂಟೈನ್ ಕೇಂದ್ರದಿಂದ ಹೊರ ಹೋಗಿದ್ದರು. ಅವರಿಗೂ ಈಗ ಸೋಂಕು ಖಚಿತವಾಗಿದ್ದು, ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರೆಲ್ಲ, ನಮಗೆಲ್ಲಿ ಸೋಂಕು ಬರುತ್ತದೆ, ಯಾವ ಲಕ್ಷಣವೂ ಇಲ್ಲ ಎಂಬ ನಿಸ್ಕಾಳಜಿಯಿಂದಲೇ ವರ್ತಿಸಿದ್ದಾರೆ.
ಕೋವಿಡ್ ವಿಷಯದಲ್ಲಿ ಜಿಲ್ಲೆಯ ಜನರು ನಿರ್ಲಕ್ಷ್ಯ ವಹಿಸುವುದು ಬಿಟ್ಟು ಇನ್ನಷ್ಟು ಜಾಗೃತರಾಗಬೇಕಿದೆ. ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳಲೇಬೇಕಿದೆ. ಕೆಮ್ಮು-ನೆಗಡಿ-ಜ್ವರದಂತಹ ಲಕ್ಷಣಗಳು ಕಂಡರೆ ತಕ್ಷಣ ತಪಾಸಣೆಗೆ ಒಳಪಡಬೇಕು ಎಂಬುದು ಆರೋಗ್ಯ ಇಲಾಖೆಯ ಮನವಿ. ಇದಕ್ಕೆ ಜನರು ಗಂಭೀರತೆಯಿಂದ ಸ್ಪಂದಿಸಿದರೆ ಕೋವಿಡ್ ನಿಯಂತ್ರಣ ಸಾಧ್ಯ ಎಂಬ ಮಾತುಗಳು ಕೇಳಿ ಬರುತ್ತಿವೆ.
ನೇರವಾಗಿ ಹಳ್ಳಿಗೆ ಬಂದಿದ್ದರು : ಗುಳೇದಗುಡ್ಡ ತಾಲೂಕಿನ ರಾಗಾಪುರದ ಐದು ಜನರಿರುವ ಒಂದು ಕುಟುಂಬದವರು ಪುಣೆಯಿಂದ ನೇರವಾಗಿ ತಮ್ಮೂರಿಗೆ ಬಂದಿದ್ದರು. ಊರಿಗೆ ಬಂದು ಮನೆ ಸ್ವಚ್ಛತೆಯಲ್ಲಿ ತೊಡಗಿದ್ದಾಗ ನಾವು ಬೆಳಗಾವಿಯ ಸಾಲಹಳ್ಳಿಯಿಂದ ಬಂದಿದ್ದೇವೆ ಎಂದು ಗ್ರಾಮಸ್ಥರಿಗೆ ತಪ್ಪು ಮಾಹಿತಿ ನೀಡಿದ್ದರು. ಬಳಿಕ ಅಧಿಕಾರಿಗಳು ಅವರ ಮನೆಗೆ ಭೇಟಿ ನೀಡಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ಅವರ ಗಂಟಲು ಮಾದರಿ ಪರೀಕ್ಷೆಗೆ ಕಳುಹಿಸಿದಾಗ ಐದು ಜನರ ಕುಟುಂಬದಲ್ಲಿ ಇಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿದೆ. ಇನ್ನು ಮೂವರಲ್ಲಿ ಓರ್ವ ಗರ್ಭಿಣಿ ಇದ್ದು ಅವಳ ಗಂಟಲು ಮಾದರಿಯನ್ನೂ ಪರೀಕ್ಷೆಗೆ ಕಳುಹಿಸಿದ್ದು ವರದಿ ಬರಬೇಕಿದೆ.
-ಶ್ರೀಶೈಲ ಕೆ. ಬಿರಾದಾರ