ಸಂತ್ರಸ್ತರ ಮಕ್ಕಳ ಶಿಕ್ಷಣಕ್ಕೆ ಒತ್ತು ಕೊಡಿ

•ಜಿಲ್ಲಾದ್ಯಂತ ಶಿಕ್ಷಕರ ದಿನ•ಸಿಎಂ ಪರಿಹಾರ ನಿಧಿಗೆ ನೆರವು-ಕೃತಜ್ಞತೆ ಸಲ್ಲಿಸಿದ ಸಚಿವ ಕಾರಜೋಳ

Team Udayavani, Sep 6, 2019, 10:49 AM IST

ಬಾಗಲಕೋಟೆ: ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಡಾ| ಸರ್ವಪಲ್ಲಿ ರಾಧಾಕೃಷ್ಣ ಅವರ ಭಾವಚಿತ್ರಕ್ಕೆ ಡಿಸಿಎಂ ಗೋವಿಂದ ಕಾರಜೋಳ ಪುಷ್ಪಾರ್ಚನೆಗೈದರು.

ಬಾಗಲಕೋಟೆ: ಜಿಲ್ಲೆಯ ಮೂರು ನದಿಗಳ ಪ್ರವಾಹದಿಂದ 195 ಗ್ರಾಮಗಳ ಜನರು ಸಂಕಷ್ಟದಲ್ಲಿದ್ದಾರೆ. ಅವರಿಗೆಲ್ಲ ಪುನರ್‌ ಬದುಕು ಕಲ್ಪಿಸಲು ಸರ್ಕಾರ ಮುಂದಾಗಿದೆ. ಇದಕ್ಕೆ ಎಲ್ಲರೂ ಕೈ ಜೋಡಿಸಬೇಕು. ಮುಖ್ಯವಾಗಿ ಪ್ರವಾಹದಿಂದ ಸಮಸ್ಯೆ ಎದುರಿಸಿದ ಸಂತ್ರಸ್ತರ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಲು ಶಿಕ್ಷಕರು ಹೆಚ್ಚಿನ ಮುತುವರ್ಜಿ ವಹಿಸಬೇಕು ಎಂದು ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ನಿರ್ದೇಶನ ನೀಡಿದರು.

ವಿದ್ಯಾಗಿರಿಯ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಗುರುವಾರ ಜಿಲ್ಲಾಡಳಿತ, ಜಿಪಂ, ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ತಜ್ಞರಾಗಿ, ರಾಷ್ಟ್ರಪತಿಗಳಾಗಿ ದೇಶದ ಸರ್ವತೋಮುಖ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ ಡಾ| ಸರ್ವಪಲ್ಲಿ ರಾಧಾಕೃಷ್ಣನ್‌ ಅವರ ಆದರ್ಶಗಳನ್ನು ಎಲ್ಲರೂ ಪಾಲಿಸಬೇಕು. ಗುರು-ಶಿಷ್ಯರ ನಡುವಿನ ಸಂಬಂಧ ಉತ್ತಮ ರೀತಿಯಿಂದ ಕೂಡಿರಬೇಕು. ದೇಶದಲ್ಲಿ ಮೊಟ್ಟಲ ಮೊದಲ ಬಾರಿಗೆ ಮಹಿಳೆಯರಿಗೆ ಶಿಕ್ಷಣ ನೀಡಿದ ಮೊದಲ ಶಿಕ್ಷಕಿ ಸಾವಿತ್ರಿಬಾ ಪುಲೆ ಅವರನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳುವುದು ಸೂಕ್ತ ಎಂದರು.

ರಾಜ್ಯದಲ್ಲಿ ಬರ ಒಂದು ಕಡೆಯಾದರೆ ಇನ್ನೊಂದು ಕಡೆ ನೆರೆ ಹಾವಳಿಯಿಂದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅವರ ಬದುಕು ಕಟ್ಟಿಕೊಡುವ ಕೆಲಸವಾಗಬೇಕಾಗಿದೆ. ಅದಕ್ಕಾರಿ ಎಲ್ಲರೂ ಕೈಜೋಡಿಸುವ ಅಗತ್ಯವಿದೆ. ಪ್ರವಾಹದಿಂದ ಜಿಲ್ಲೆಯ 195 ಗ್ರಾಮಗಳು ಪ್ರವಾಹ ಪೀಡಿತ ಪ್ರದೇಶಗಳಾಗಿದ್ದು, ಈ ಹಿನ್ನೆಲೆಯಲ್ಲಿ ಈ ಭಾಗದ ಶಿಕ್ಷಕರು ಹೆಚ್ಚಿನ ಶ್ರಮವಹಿಸಿ ವಿದ್ಯಾರ್ಥಿಗಳಿಗೆ ಹೆಚ್ಚಿನ ವಿದ್ಯಾಭ್ಯಾಸ ಮಾಡಿಸಲು ವಿನಂತಿಸಿದರು.

ಇದೇ ವೇಳೆ ಮುಧೋಳ ಮತ್ತು ಬಾಗಲಕೋಟೆ ತಾಲೂಕು ಶಿಕ್ಷಕರ ಸಂಘದಿಂದ ಸಂತ್ರಸ್ತರಿಗೆ ಸಿಎಂ ಪರಿಹಾರ ನಿಧಿಗೆ ನೆರವು ನೀಡಿದಕ್ಕಾಗಿ ಕೃತಜ್ಞತೆ ಸಲ್ಲಿಸಿದರು.

ಸಂಸದ ಪಿ.ಸಿ. ಗದ್ದಿಗೌಡರ ಮಾತನಾಡಿ, ಶಿಕ್ಷಣದಲ್ಲಿ ಅಪಾರ ಶಕ್ತಿ ಅಡಗಿದ್ದು, ಮಕ್ಕಳ ಅಭಿವೃದ್ಧಿ, ಜೀವನ ರೀತಿ-ನೀತಿ ಹಾಗೂ ಬೆಳವಣಿಗೆಗೆ ಶಿಕ್ಷಣದಿಂದ ಮಾತ್ರ ಸಾಧ್ಯ. ಉತ್ತಮ ಸಮಾಜ ನಿರ್ಮಾಣ ಹಾಗೂ ಬದಲಾವಣೆ ತರಲು ಶಿಕ್ಷಣ ಅವಶ್ಯವಾಗಿದ್ದು, ಪಾಲಕರು ತಮ್ಮ ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡಬೇಕು ಎಂದರು.

ಶಾಸಕ ಡಾ| ವೀರಣ್ಣ ಚರಂತಿಮಠ ಮಾತನಾಡಿ, ಶಿಕ್ಷಣದಲ್ಲಿ ಬದಲಾವಣೆ ತರುವ ನಿಟ್ಟಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರಲಾಗುತ್ತಿದೆ. ಶಿಕ್ಷಣ ನೀತಿಯಲ್ಲಿನ ವಿಷಯಗಳನ್ನು ಚರ್ಚೆಯಲ್ಲಿದ್ದು, ಅಭಿಪ್ರಾಯದ ನಂತರ ಜಾರಿಗೆ ತರಲಾಗುತ್ತಿದೆ. ಸರ್ಕಾರ ಶಿಕ್ಷಣಕ್ಕೆ ಎಲ್ಲ ರೀತಿಯ ಸೌಲಭ್ಯ ನಿಡುತ್ತಿದೆ. ಮಕ್ಕಳನ್ನು ಶಿಕ್ಷಣವಂತರನ್ನಾಗಿ ಮಾಡುವ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಈ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಉತ್ತಮವಾಗಿರಬೇಕು ಎಂದರು.

ಕೋಟೆಕಲ್-ಕಮತಗಿ ಹೊಳೆ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿ ಮಾತನಾಡಿ, ಶಿಕ್ಷಕರ ದಿನಾಚರಣೆಯಲ್ಲಿ ಮಕ್ಕಳ ಪಾಲಕರು ಸಹ ಪಾಲ್ಗೊಳ್ಳುವುದು ಅವಶ್ಯವಾಗಿದೆ. ಪ್ರಾಥಮಿಕ ಹಂತದಲ್ಲಿ ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗುವಂತಾಗಬೇಕು. ಈ ನಿಟ್ಟಿನಲ್ಲಿ ಶಿಕ್ಷಕರಿಗೆ ತರಬೇತಿ ಅವಶ್ಯವಾಗಿದೆ. ಶಿಕ್ಷಕರಿಗೆ ಮೊದಲು ಕಲಿಸುವ ವಿಷಯದ ಬಗ್ಗೆ ಪ್ರೀತಿ ಇರಬೇಕು. ಮಕ್ಕಳನ್ನು ಪ್ರೀತಿಯಿಂದ ಕಾಣಬೇಕು. ಕಲಿಸುವ ಮನೋಭಾವ ಹೊಂದಿರಬೇಕು ಎಂದು ತಿಳಿಸಿದರು.

ಕಳೆದ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಪಡೆದ ಜಿಲ್ಲಾ ಮಟ್ಟದ ಇಂದ್ರ ಸೂಳಿಕೇರಿ (ಪ್ರಥಮ), ವರ್ಷಾ ಪಾಟೀಲ (ದ್ವಿತೀಯ), ಸೃಷ್ಠಿ ಕಳ್ಳಿಮಠ, ಬಾಗಲಕೋಟೆ ತಾಲೂಕು ಮಟ್ಟದಲ್ಲಿ ಮಹಮ್ಮದ ಯೂನಿಸ್‌ ದಾಲಾಯತ (ಪ್ರಥಮ), ಸಂಗಮ್ಮ ಓಲೇಕಾರ (ದ್ವಿತೀಯ), ಆಶಾ ಕಟ್ಟಿಮನಿ (ತೃತೀಯ) ಸ್ಥಾನ ಪಡೆದಿದ್ದು, ಅವರಿಗೆ ಸರ್ಕಾರದಿಂದ ಉಚಿತ ಲ್ಯಾಪ್‌ಟ್ಯಾಪ್‌ ವಿತರಿಸಲಾಯಿತು.

ಜಿಪಂ ಅಧ್ಯಕ್ಷೆ ಬಾಯಕ್ಕ ಮೇಟಿ, ವಿಧಾನ ಪರಿಷತ್‌ ಸದಸ್ಯ ಹನಮಂತ ನಿರಾಣಿ, ತಾಪಂ ಸದಸ್ಯ ಚನ್ನನಗೌಡರ ಪರನಗೌಡರ, ಜಿಪಂ ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸುಜಾತಾ ಸಿಂಗಾಡಿ, ಜಿಲ್ಲಾಧಿಕಾರಿ ಆರ್‌. ರಾಮಚಂದ್ರನ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ, ಜಿಪಂ ಸಿಇಒ ಗಂಗೂಬಾಯಿ ಮಾನಕರ, ಡಯಟ್ ಪ್ರಾಚಾರ್ಯ ಬೆಟಗೇರಿ ಇದ್ದರು.

ಉತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು:

ಪ್ರಾಥಮಿಕ ವಿಭಾಗ: ಕಲಾಲ ಗಾಣಿಗೇರ, ಜಿ.ಎಸ್‌.ಕಟಗಿ, ಅಲ್ಲಾಭಕ್ಷ ಹಕೀಮ, ಕಸ್ತೂರಿಬಾಯಿ ಪತ್ತಾರ, ಲಕ್ಷ್ಮಣ ಈಳಗೇರ, ಜಿ.ಎಸ್‌. ಘಟ್ಟಿಗನೂರ, ಶಿವಪ್ರಸಾದ ಯಾದವಾಡ, ಎಸ್‌.ಎಸ್‌. ಹಲಗಲಿ, ಮಂಜುನಾಳ ಹೂಗಾರ, ಸುರೇಶ ತುಂಗಳ, ಶಂಕರಪ್ಪ ಮಿರ್ಜಿ. ಪ್ರೌಢಶಾಲೆ ವಿಭಾಗ: ಜಗದೀಶ ಬಾರಕೇರ, ನಿಜಗುಣಯ್ಯ ಘಂಟಿ, ಸಿ.ಬಿ. ಹೂಗಾರ, ಎಸ್‌.ಎಂ. ರಾಠೊಡ, ಬಿ.ಎಲ್. ಜಂಬಗಿ, ಶಶಿಧರ ಕುಂಬಾರ. ಅತ್ಯುತ್ತಮ ಮುಖ್ಯಾಧ್ಯಾಪಕ ಪ್ರಶಸ್ತಿಯನ್ನು ಎಸ್‌.ವಿ.ಜುನ್ನೂರ, ಬಿ.ಎಚ್. ಬೆನಕಟ್ಟಿ ಮತ್ತು 2019-20ನೇ ಸಾಲಿಗೆ ದಾಮೋದರ ಬಡಿಗೇರ ಅವರಿಗೆ ನೀಡಿ ಸನ್ಮಾನಿಸಲಾಯಿತು.
ರಾಜ್ಯದಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಬಿಜೆಪಿ ಸರ್ಕಾರ, ಅಕ್ಟೋಬರ್‌ನಲ್ಲಿ ಬಜೆಟ್ ಮಂಡಿಸಲಿದೆ. ಈ ಬಜೆಟ್‌ನಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುವುದು. ಅಲ್ಲದೇ ರೈತರಿಗೆ, ಅಲ್ಪಸಂಖ್ಯಾತರಿಗೆ ಹಾಗೂ ಹಿಂದುಳಿದವರ ಕಲ್ಯಾಣಕ್ಕಾಗಿ ಹೊಸ-ಹೊಸ ಯೋಜನೆ ರೂಪಿಸಲಾಗುತ್ತಿದೆ. • ಗೋವಿಂದ ಕಾರಜೋಳ, ಉಪ ಮುಖ್ಯಮಂತ್ರಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ