
Krishna River ಒಂದು ಟಿಎಂಸಿ ನೀರು ಮಾತ್ರ; 15 ದಿನ ಯಾವುದೆ ಸಮಸ್ಯೆ ಇಲ್ಲ
Team Udayavani, Jun 1, 2023, 6:23 PM IST

ರಬಕವಿ-ಬನಹಟ್ಟಿ: ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗುತ್ತಿದ್ದು, ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶಗಳಲ್ಲಿ ಮಳೆಯಾಗಿ ಕೃಷ್ಣಾ ನದಿಗೆ ನೀರು ಬರಬೇಕು, ಇಲ್ಲವೆ ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಕೃಷ್ಣಾ ನದಿಗೆ ಒಂದೆರಡು ಟಿಎಂಸಿ ನೀರನ್ನು ಬಿಟ್ಟರೆ ಮಾತ್ರ ಮುಂದಿನ ದಿನಗಳಲ್ಲಿ ಕೃಷ್ಣಾ ನದಿ ತೀರದ ಜನ ಮತ್ತು ಜಾನುವಾರುಗಳಿಗೆ ನೀರಿನ ಸಮಸ್ಯೆಯಾಗುವುದಿಲ್ಲ.
ಕೃಷ್ಣಾ ನದಿಯಲ್ಲಿ ಸದ್ಯ ಇರುವ ನೀರು ಕೇವಲ ಇಪ್ಪತ್ತು ದಿನಗಳವರೆಗೆ ಮಾತ್ರ ಬರುತ್ತದೆ. ಮುಂದಿನ ದಿನಗಳಲ್ಲಿ ಜಮಖಂಡಿ, ರಬಕವಿ ಬನಹಟ್ಟಿ, ತೇರದಾಳ ಆಥಣಿ, ರಾಯಬಾಗ ತಾಲ್ಲೂಕಿನ ಬಹುತೇಕ ನಗರ ಮತ್ತು ಗ್ರಾಮೀಣ ಭಾಗದಲ್ಲಿ ನೀರಿನ ಹಾಹಾಕಾರ ಉಂಟಾಗಲಿದೆ. ಕಳೆದ ವರ್ಷ ಕೃಷ್ಣಾ ನದಿಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಇತ್ತು. ಇದರಿಂದಾಗಿ ಯಾವುದೆ ಸಮಸ್ಯೆ ಉಂಟಾಗಿರಲಿಲ್ಲ ಎಂದು ಹಿಪ್ಪರಗಿ ಜಲಾಶಯದ ಕಾರ್ಯಪಾಲಕ ಎಂಜಿನಿಯರ್ ಶ್ರೀನಾಥ ಜಿ. ತಿಳಿಸಿದರು. ವಿಧಾನ ಸಭೆಯ ಚುನಾವಣೆಯ ಪೂರ್ವದಲ್ಲಿ ಕೃಷ್ಣಾ ನದಿಗೆ ಎರಡು ಟಿಎಂಸಿ ನೀರನ್ನು ಬಿಡಲಾಗಿತ್ತು. ಅದು ಇಲ್ಲಿಯವರೆಗೆ ಬಂದಿದೆ.
ಈ ಭಾಗದಲ್ಲಿ ನೀರಿನ ಕೊರತೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳು, ಜನಪ್ರತಿನಿಧಿಗಳು ಸೂಕ್ತ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ಭಾಗದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಬಿಸಿಲಿನ ತಾಪಮಾನ ಇರುವುದರಿಂದ ಕೃಷ್ಣಾ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.
ತೆರವುಗೊಂಡ ಸೇತುವೆ
ನದಿಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದ್ದರಿಂದ ಸೇತುವೆ ತೆರವುಗೊಂಡಿದೆ. ಇದರಿಂದಾಗಿ ರಬಕವಿ ಬನಹಟ್ಟಿ ಹಾಗೂ ಅಥಣಿ ತಾಲ್ಲೂಕಿನ ಜನರಿಗೆ ಅನುಕೂಲಕವಾಗಿದೆ.
ಇನ್ನೂ ಹದಿನೈದು ದಿನಗಳವರೆಗೆ ಯಾವುದೆ ಸಮಸ್ಯೆ ಇಲ್ಲ
ಕೃಷ್ಣಾ ನದಿ ತೀರದ ಜನರಿಗೆ ಇನ್ನೂ ಹದಿನೈದು ದಿನಗಳವರೆಗೆ ನೀರಿನ ಯಾವುದೆ ಸಮಸ್ಯೆ ಉಂಟಾಗುವುದಿಲ್ಲ. ಬಾಗಲಕೋಟೆ ಜಿಲ್ಲಾಧಿಕಾರಿಗಳು ಕೂಡಾ ಅಧಿಕಾರಿಗಳ ಸಭೆಯನ್ನು ಕರೆದು ನೀರಿನ ಅಭಾವ ಮತ್ತು ಪ್ರವಾಹದ ಕುರಿತು ಮುಂಜಾಗ್ರತ ಕ್ರಮಗಳನ್ನು ತೆಗೆದುಕೊಳ್ಳುವಂತೆ ತಿಳಿಸಿದ್ದಾರೆ. ತಾಲ್ಲೂಕು ಆಡಳಿತ ಕೂಡಾ ಸಜ್ಜಾಗಿದ್ದು, ನೀರಿನ ತೊಂದರೆಯಾದರೆ ನೀರು ಪೂರೈಕೆಗೆ ಎಲ್ಲ ರೀತಿಯ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ.
-ಡಾ.ಡಿ.ಎಚ್. ಹೂಗಾರ, ತಹಶೀಲ್ದಾರ್ ರಬಕವಿ ಬನಹಟ್ಟಿ.
ಟಾಪ್ ನ್ಯೂಸ್
