ಮುಂಗಾರು ಹಂಗಾಮಿಗೆ ಕೂರಿಗೆ ಪೂಜೆ ಸಂಭ್ರಮ
ಕೂರಿಗೆಗೆ ಸೀರೆಯುಡಿಸಿ ಸಿಂಗಾರ! ಪೂಜೆ-ಭಕ್ಷ್ಯಗಳ ನೈವೇದ್ಯ ಸಮರ್ಪಣೆ! ಐದು ಮಂದಿ ಮುತ್ತೈದೆಯರಿಗೆ ಉಡಿ
Team Udayavani, May 31, 2021, 7:03 PM IST
ವರದಿ: ಮಲ್ಲಿಕಾರ್ಜುನ ಕಲಕೇರಿ
ಗುಳೇದಗುಡ್ಡ: ಮುಂಗಾರು ಬಂತೆಂದರೆ ವರುಣನ ಸಿಂಚನಕ್ಕೆ ಭೂತಾಯಿ ನಸುನಗುವ ಸಮಯ. ಭೂಮಿಯ ತುಂಬೆಲ್ಲ ಹಸಿರು ಆವರಿಸುವ ಕಾಲ ಆರಂಭ. ರೈತನ ಮೊಗದಲ್ಲಂತೂ ಎಲ್ಲಿಲ್ಲದ ಸಂತಸ. ಈ ಸಂತಸಕ್ಕೆ ಮತ್ತೂಂದು ಮೆರಗು ಎಂದರೆ ಕೂರಿಗೆ ಪೂಜೆ.
ಕೂರಿಗೆ ಪೂಜೆ ಮಾಡುವುದೆಂದರೆ ಗ್ರಾಮೀಣ ಪ್ರದೇಶಗಳಲ್ಲಿ ಹಬ್ಬದ ವಾತಾವರಣವೇ ಸೃಷ್ಟಿಯಾಗುತ್ತದೆ. ಮುಂಗಾರು ಆರಂಭವಾದರೆ ಸಾಕು ಬಿತ್ತನೆ ಕಾರ್ಯಕ್ಕೆ ಅಣಿಯಾಗುವ ಕಾಲವದು. ಈ ಸಮಯದಲ್ಲಿ ಬಿತ್ತಿದರೆ ಬೆಳೆ ಹುಲುಸಾಗಿ ಬರುತ್ತೆ. ಅಲ್ಲದೇ ಆ ಭೂ ತಾಯಿ ನಂಬಿದವರನ್ನು ಎಂದಿಗೂ ಕೈಬಿಡಲ್ಲ ಎಂಬುವುದು ವಾಡಿಕೆ. ಆ ಕಾರಣಕ್ಕಾಗಿಯೇ ರೈತರು ಮೊದಲು ಕೂರಿಗೆ ಪೂಜೆ ಮಾಡುತ್ತಾರೆ. ಈ ಕೂರಿಗೆ ಪೂಜೆ ಮಾಡದೇ ರೈತರು ಬಿತ್ತನೆ ಕೆಲಸಕ್ಕೆ ಮುಂದಾಗುವುದಿಲ್ಲ. ಅಡಿಗುಡ್ಡ ಪೂಜೆ: ನಮ್ಮದು ಪರಂಪರೆಗಳ ತಾಣ. ಇಲ್ಲಿ ಪ್ರತಿಯೊಂದು ಪ್ರದೇಶವೂ ತನ್ನದೇಯಾದ ವೈಶಿಷ್ಟತೆ, ಆಚರಣೆಗಳನ್ನು ಹೊಂದಿದೆ. ಈ ಆಚರಣೆಗಳು ಆಯಾ ಕಾಲ ಘಟ್ಟದಲ್ಲಿ ಅಭಿವ್ಯಕ್ತಗೊಳ್ಳುತ್ತವೆ.
ಕೂರಿಗೆ ಪೂಜೆಯೂ ರೈತರು ಸಂಭ್ರಮದಿಂದ ಆಚರಿಸುವ ಆಚರಣೆಗಳಲ್ಲೊಂದು. ಬಿತ್ತನೆ ಕಾರ್ಯ ಮಾಡುವ ಮುಂಚಿತವಾಗಿ ಮುಂಗಾರುಮಳೆ ಆರಂಭದ ದಿನದಂದು ಅಡಿಗುಡ್ಡ ಪೂಜೆ ಮಾಡುತ್ತಾರೆ. ತದ ನಂತರ ರೈತರು ತಾವು ತಂದ ಮೂರು ಕಟ್ಟಿಗೆಗಳನ್ನು ತಾಳು ಕೆತ್ತುವ ಮೂಲಕ ಹೊಸ ಕೂರಿಗೆ ತಯಾರಿಸುತ್ತಾರೆ. ಹೀಗೆ ಪದ್ಧತಿ ಪ್ರಕಾರ ಪೂಜೆಗೊಳ್ಳುವ ಕೂರಿಗೆಗೆ ರೈತರು ಸುಣ್ಣ-ಬಣ್ಣ ಹಚ್ಚುವುದರ ಮೂಲಕ ಅಲಂಕರಿಸುತ್ತಾರೆ.
ಪೂಜೆ ಮಾಡುವ ಸಮಯದಲ್ಲಿ ಅದಕ್ಕೆ ಸೀರೆಯನ್ನುಡಿಸಿ ಮದುಮಗಳಂತೆ ಅಲಂಕರಿಸುತ್ತಾರೆ. ನೈವೇದ್ಯಕ್ಕಾಗಿ ಹುಗ್ಗಿ- ಹೋಳಿಗೆ, ಅನ್ನ-ಸಾಂಬಾರು ಸೇರಿದಂತೆ ನಾನಾ ತರಹದ ಅಡುಗೆ ಮಾಡಿ ನೈವೇದ್ಯ ಅರ್ಪಿಸುತ್ತಾರೆ. ಇದೇ ಸಂದರ್ಭದಲ್ಲಿ ಐದು ಮಂದಿ ಮುತ್ತೈದೆಯರಿಗೆ ಉಡಿ ತುಂಬಲಾಗುತ್ತದೆ. ನಂತರ ಎಲ್ಲರೂ ಪ್ರಸಾದ ಸ್ವೀಕರಿಸುತ್ತಾರೆ.
ಕೂರಿಗೆಯನ್ನು ಊರಿನ ಮುಖ್ಯ ರಸ್ತೆ ಮುಖಾಂತರ ತಮ್ಮ ತಮ್ಮ ಹೊಲಗಳಿಗೆ ಬಿತ್ತನೆಗೆ ತೆಗೆದುಕೊಂಡು ಹೋಗುತ್ತಾರೆ. ಮುಂಗಾರು ಆರಂಭವಾದರೆ ಸಾಕು ಗುಳೇದಗುಡ್ಡ ತಾಲೂಕಿನ ನಾಗರಾಳ ಎಸ್. ಪಿ.,ಕೋಟೆಕಲ್, ಕೆಲವಡಿ, ಹಾನಾಪೂರ, ತೋಗುಣಶಿ, ಆಸಂಗಿ, ಲಾಯದಗುಂದಿ, ಹಳದೂರ, ಅಲ್ಲೂರ, ಪಾದನಕಟ್ಟಿ ಸೇರಿದಂತೆ ನಾನಾ ಗ್ರಾಮಗಳಲ್ಲಿನ ರೈತರು ಕೂರಿಗೆ ಪೂಜೆ ಸಲ್ಲಿಸಿಯೇ ಕೃಷಿ ಕೆಲಸಕ್ಕೆ ಮುಂದಾಗುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
ಇದು ಗುಂಡಿಯೋ ! ಗುಂಡೊಯೊಳಗೊಂದು ರಸ್ತೆಯೋ ? ಹುಣಸೂರಿನ ಸಂಪರ್ಕ ರಸ್ತೆಯ ದುಸ್ಥಿತಿ
ಮೂಳೂರು ತೊಟ್ಟಂ ಪರಿಸರದ ಕಡಲ್ಕೊರೆತ ಪ್ರದೇಶಕ್ಕೆ ಜಿಲ್ಲಾಧಿಕಾರಿ, ಶಾಸಕರ ಭೇಟಿ ; ಪರಿಶೀಲನೆ
ಚಿಂಚೋಳಿ ತಾಲೂಕಿನಲ್ಲಿ ಭಾರಿ ಮಳೆ : ಜನಜೀವನ ಅಸ್ತವ್ಯಸ್ತ
ಬಿಲ್ ತುಂಬದ ಗ್ರಾ. ಪಂಚಾಯತ್ :ವಾರದಿಂದ ಗ್ರಾಮದಲ್ಲಿ ಬೆಳಗದ ಬೀದಿ ದೀಪ, ಗ್ರಾಮಸ್ಥರ ಹಿಡಿಶಾಪ
ಅಭಿಮಾನಿಯ ಟೀ ಅಂಗಡಿಯಲ್ಲಿ ಚಹಾ ಸವಿದ ಶಿವಣ್ಣ : 5 ವರ್ಷದ ಕನಸು – ನನಸು