ನಿದ್ದೆಗೂ ಭಂಗ ತಂದ ಮಲಪ್ರಭೆ

Team Udayavani, Sep 8, 2019, 9:54 AM IST

ಬಾಗಲಕೋಟೆ: ಸಂಗಳ ಬಳಿ 40 ಅಡಿ ಅಗಲದ ನದಿಗೆ ಬ್ಯಾರೇಜ್‌ ಕಟ್ಟಿದ್ದು, ಬ್ಯಾರೇಜ್‌ ಕೆಳಗೆ ಕೇವಲ 8 ಅಡಿ ಉಳಿದ ನದಿ ಪಾತ್ರ.

ಬಾಗಲಕೋಟೆ: ಬೆಳಗಾವಿ-ಬಾಗಲಕೋಟೆ ಜಿಲ್ಲೆಯ ಜನರಿಗೆ ಜೀವನದಿ ಆಗಬೇಕಿದ್ದ ಮಲಪ್ರಭೆ ಈಗ ‘ಮಾಯಾಂಗಣಿ’ಯಾಗಿದೆ. ಈ ನದಿ ಯಾವಾಗ ಹರಿಯುತ್ತದೆ, ಯಾವಾಗ ಬತ್ತುತ್ತದೆ ಎಂಬುದೇ ತಿಳಿಯಲ್ಲ. ಇದು ತನ್ನ ಅಕ್ಕ-ಪಕ್ಕದ ಜನರಿಗೆ ನೆಮ್ಮದಿಯಿಂದ ನಿದ್ರಿಸಲೂ ಬಿಡುತ್ತಿಲ್ಲ.

ಹೌದು. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕಣಕುಂಬಿಯಲ್ಲಿ ಹುಟ್ಟಿ, ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಕೃಷ್ಣೆಯೊಂದಿಗೆ ಐಕ್ಯವಾಗುವ ಕೃಷ್ಣಾ ನದಿಯ ಉಪ ನದಿಯಾದ ಮಲಪ್ರಭೆ ಬಾಗಲಕೋಟೆ ಜಿಲ್ಲೆಯಲ್ಲಿ ಸುಮಾರು 162 ಕಿ.ಮೀ ಉದ್ದ ಹರಿದಿದೆ.

ರಾಮದುರ್ಗ ತಾಲೂಕಿನ ಸಂಗಳ ಬಳಿ ಬಾಗಲಕೋಟೆ ಜಿಲ್ಲೆಯನ್ನು ಸೇರುವ ಈ ನದಿ, ನೀರಿಗಿಂತ ಮರಳನ್ನೇ ಹೆಚ್ಚು ಕೊಡುತ್ತದೆ. ಹೀಗಾಗಿ ನದಿಯ ಒಡಲು ಒತ್ತುವುದರಿಂದ ಹಿಡಿದು, ಒಡಲ ಬಗೆದು ಮರಳು ತೆಗೆಯುವ ವ್ಯವಹಾರ ಹೆಚ್ಚು ನಡೆಯುತ್ತವೆ. ಹೀಗಾಗಿ ಹಲವು ವರ್ಷಗಳಿಂದ ತನ್ನೊಡಲ ಬಗೆಯಿಸಿಕೊಂಡು ಆಕ್ರೋಶಗೊಂಡಿರುವ ಮಲಪ್ರಭೆ, ತಿಂಗಳೊಳಗೆ ಎರೆಡೆರಡು ಬಾರಿ ರುದ್ರ ನರ್ತನ ಮಾಡಿ ಹರಿಯುತ್ತಿದೆ.

8 ಅಡಿಗಿಳಿದ ನದಿಯಗಲ: ಮಲಪ್ರಭಾ ನದಿ, ಉಗಮ ಸ್ಥಾನದಿಂದ ಕೂಡಲಸಂಗಮ ಸೇರುವವರೆಗೂ ಸರಾಸರಿ 40ರಿಂದ 60 ಅಡಿ ಅಗಲವಾಗಿದೆ. ಕೆಲವೆಡೆ 5 ಅಡಿ ಆಳವಿದ್ದರೆ, ಇನ್ನೂ ಕೆಲವೆಡೆ 10ರಿಂದ 15 ಅಡಿ ಆಳವಿದೆ. ಕನಿಷ್ಠ 40 ಅಡಿಗೂ ಅಗಲವಾಗಿದ್ದ ನದಿಯೀಗ, ಕೇವಲ 8 ಅಡಿಗೆ ಇಳಿದಿದೆ. ಹೀಗಾಗಿ ತನ್ನೊಡಲಲ್ಲಿ ಹರಿಯುವ ನೀರನ್ನು ಒತ್ತುವರಿ ಮಾಡಿದವರಿಗಷ್ಟೇ ಅಲ್ಲ, ಅಕ್ಕ-ಪಕ್ಕದ ಊರಿಗೂ ಅದು ನುಗ್ಗುತ್ತಿದೆ.

ರಾಮದುರ್ಗ ತಾಲೂಕಿನ ಸಂಗಳ ಬಳಿ ನದಿಯ ಪಾತ್ರ ನೋಡಿದರೆ ಒಂದು ಚಿಕ್ಕ ಹಳ್ಳವೂ ಈ ರೀತಿ ಇರಲ್ಲ ಎಂಬ ಭಾವನೆ ಮೂಡುತ್ತದೆ. 3 ಎಕರೆ ಹೊಲ ಇದ್ದವರೀಗ 8 ಎಕರೆ ಮಾಡಿಕೊಂಡಿದ್ದಾರೆ, ಇನ್ನೂ ಕೆಲವರು ಏಳು ಎಕರೆ ಪಿತ್ರಾರ್ಜಿತ ಆಸ್ತಿ ಇದ್ದವರು 11 ಎಕರೆ ಮಾಡಿಕೊಂಡಿದ್ದಾರೆ. ಇದನ್ನು ಸ್ವತಃ ನದಿ ಅಕ್ಕ-ಪಕ್ಕದ ಜನರೇ ಒಪ್ಪಿಕೊಳ್ಳುತ್ತಾರೆ. ಒಮ್ಮೆ ನೀರು ಬಂದು ಹೋದರೆ ಉತ್ತಮ ಬೆಳೆ ತೆಗೆಯಬಹುದೆಂಬ ಆಸೆಯಿಂದ ನದಿಯನ್ನೇ ಒತ್ತಿದ್ದಾರೆ. ಇದು ಪ್ರವಾಹ ಮತ್ತಷ್ಟು ಭೀಕರಗೊಳ್ಳಲು ಕಾರಣ ಎನ್ನುತ್ತಾರೆ ತಜ್ಞರು.

ಮೂರು ತಾಲೂಕಿನ ಜನರಿಗೆ ನಿದ್ರೆ ಇಲ್ಲ: ನಮ್ಮ ಜಿಲ್ಲೆಯಲ್ಲಿ ಮಲಪ್ರಭಾ ನದಿ ಬಾದಾಮಿ ತಾಲೂಕಿನ ಮೂಲಕ ಬಂದು ಗುಳೇದಗುಡ್ಡ, ಹುನಗುಂದ ತಾಲೂಕಿನಲ್ಲಿ ಹರಿಯುತ್ತದೆ. ಗುಳೇದಗುಡ್ಡ ತಾಲೂಕಿನಲ್ಲಿ ಸುಮಾರು 10 ಹಳ್ಳಿಯ ಜನರಿಗೆ ಪ್ರವಾಹ ಸಮಸ್ಯೆ ಆಗುತ್ತದೆ. ಆದರೆ, ಹುನಗುಂದ ತಾಲೂಕಿನಲ್ಲಿ 24, ಬಾದಾಮಿ ತಾಲೂಕಿನಲ್ಲಿ 43 ಹಳ್ಳಿಗಳು ಮಲಪ್ರಭಾ ನದಿ ಪ್ರವಾಹಕ್ಕೆ ತುತ್ತಾಗಿದ್ದವು. ವಾಸ್ತವದಲ್ಲಿ ಮಲಪ್ರಭಾ ನದಿಯ ಸರಾಸರಿ ಹರಿವಿನಿಂದ ಯಾವ ಹಾನಿಯೂ ಆಗಲ್ಲ. ಆದರೆ, ನದಿ ಒತ್ತುವರಿ ಆಗಿದ್ದರಿಂದ ಇಂತಹ ಪ್ರವಾಹ ಪರಿಸ್ಥಿತಿ ಪದೇ ಪದೇ ಎದುರಿಸುವಂತಾಗಿದೆ ಎಂದು ಸ್ವತಃ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರು ಈಚೆಗೆ ನಡೆಸಿದ ಸಭೆಯಲ್ಲೇ ಹೇಳಿದ್ದರು.

ನೀರು ಇಂಗಲೂ ಬಿಡಲಿಲ್ಲ: ಕಳೆದ ಆಗಸ್ಟ್‌ ತಿಂಗಳಲ್ಲಿ ಮಲಪ್ರಭಾ ನದಿಯಲ್ಲಿ ಪ್ರವಾಹ ಬಂದಾಗ ನೂರಾರು ಹಳ್ಳಿಗರ ಬದುಕಿನ ದೈನಂದಿನ ಸಾಮಗ್ರಿ ಕೊಚ್ಚಿಕೊಂಡು ಹೋಗಿತ್ತು. ಅದಷ್ಟೇ ಅಲ್ಲ ಲಕ್ಷಾಂತರ ಮೆಟ್ರಿಕ್‌ನಷ್ಟು ಮರಳು ನದಿ ಪಾತ್ರದ ಹೊಲ, ಗ್ರಾಮಗಳಲ್ಲಿ ಗುಡ್ಡೆಯಂತೆ ಬಿದ್ದಿತ್ತು. ಇದು, ಮರಳು ಅಕ್ರಮದಾತರ ಕಣ್ಣಿಗೆ ಬಿದ್ದಿದ್ದೇ ತಡ, ನದಿಯ ಒಡಲಿನಲ್ಲಿ ನೀರು ಇಂಗಲೂ ಬಿಡಲಿಲ್ಲ. ರಾತ್ರೋರಾತ್ರಿ ಮರಳು ತುಂಬಿಕೊಂಡು ಹೋದರು. ಇದು ಪೊಲೀಸ್‌ ಇಲಾಖೆ ಗಮನಕ್ಕೆ ಬಂದಾಗ ಬಿಗಿಗೊಳಿಸುವ ಪ್ರಯತ್ನ ನಡೆಯಿತಾದರೂ, ತಳಮಟ್ಟದ ಅಕ್ರಮಕ್ಕೆ ಬ್ರೇಕ್‌ ಹಾಕಲು ಆಗಲಿಲ್ಲ.

ನಡೆದಿಲ್ಲ ನದಿಗಳ ಸರ್ವೇ: ಇದೇ 40 ವರ್ಷಗಳ ಹಿಂದೆ ನದಿಗಳ ಅಗಲ ಎಷ್ಟಿತ್ತು, ಈಗ ಎಷ್ಟಿದೆ. ಯಾವ ಭಾಗದಲ್ಲಿ ಒತ್ತುವರಿಯಾಗಿದೆ. ನದಿ ಒತ್ತುವರಿ ಮಾಡಿದವರು ಯಾರು, ಒತ್ತುವರಿ ತೆರವುಗೊಳಿಸಿ, ಮುಂದಿನ ಪೀಳಿಗೆಗೂ ಜಲಮೂಲವಾದ ನದಿಗಳ ಉಳಿವಿಗೆ ಈವರೆಗೆ ಚಿಂತನೆ, ಹೋರಾಟ ಅಥವಾ ಕಾಳಜಿ ನಡೆದಿಲ್ಲ. ಕನಿಷ್ಠ ಪಕ್ಷ ನದಿಗಳ ಒತ್ತುವರಿ ಕುರಿತು ಸರ್ವೇ ಕೂಡ ನಡೆದಿಲ್ಲ.

ನದಿಯ ಉಳಿವಿಗೆ ಸರ್ವೇ ನಡೆಸುವ ಜತೆಗೆ, ಒತ್ತುವರಿ ತೆರವುಗೊಳಿಸಿದರೆ, ನೀರು ಸರಾಗವಾಗಿ ಹರಿದು ಹೋಗುತ್ತದೆ. ಅಕ್ಕಪಕ್ಕದ ಹೊಲ-ಗದ್ದೆಯಾಗಲಿ, ಗ್ರಾಮಕ್ಕಾಗಲಿ ನೀರು ನುಗ್ಗುವುದು ಕಡಿಮೆಗೊಳ್ಳುತ್ತದೆ. ಅಪಾಯ ಮಟ್ಟ ಮೀರಿ ಹರಿಯುವ ಸಂದರ್ಭವೂ ಕೊಂಚ ಕಡಿಮೆಯಾಗುತ್ತದೆ. ಒಂದು ವೇಳೆ ಅಪಾರ ಮಳೆ ಬಂದು, ನದಿ ಸಾಮರ್ಥ್ಯಕ್ಕಿಂತ ಹೆಚ್ಚಿನ ನೀರು ಬಂದಾಗ ಮಾತ್ರ ಪ್ರವಾಹ ಬರುವುದು ಸಾಮಾನ್ಯ. ಕೇವಲ 20 ಸಾವಿರ ಕ್ಯೂಸೆಕ್‌ ನೀರು ಹರಿದು ಬಂದರೂ ಅದು ಗ್ರಾಮಗಳಿಗೆ ನುಗ್ಗಿ, ಹೊಲ-ಗದ್ದೆಯ ಬೆಳೆ ಹಾನಿಯಾಗುವ ಸಂದರ್ಭ ಸದ್ಯಕ್ಕಿದೆ. ಈ ನಿಟ್ಟಿನಲ್ಲಿ ಗಂಭೀರ ಚಿಂತನೆ ನಡೆಯಲಿ ಎಂಬುದು ಪ್ರಜ್ಞಾವಂತರ ಒತ್ತಾಯ.

 

•ಶ್ರೀಶೈಲ ಕೆ. ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ