ಬಾಲ್ಯದಲ್ಲೇ ಮದುವೆ; ವಯಸ್ಸಲ್ಲೇ ವಿಧವೆ!

Team Udayavani, Jul 12, 2019, 2:03 PM IST

ಬಾಗಲಕೋಟೆ: ಬಾಲ್ಯ ವಿವಾಹ, ಹೆಣ್ಣು ಭ್ರೂಣ ಹತ್ಯೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಜಾಗೃತಿ ಫಲಕ ಹಿಡಿದ ಮಕ್ಕಳು ಗಮನ ಸೆಳೆದರು.

ಬಾಗಲಕೋಟೆ: ಹಲವು ವರ್ಷಗಳಿಂದ ಮಹಿಳೆಯರು ಪೋಷಣೆಗೆ ಒಳಗಾಗುತ್ತಿದ್ದಾರೆ. ಬಾಲ್ಯ ವಿವಾಹದಂತಹ ಪಿಡುಗಿಗೆ ಬಲಿಯಾಗುತ್ತಿರುವುದು ದುರದೃಷ್ಟಕರ. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರು ಜಾಗೃತರಾಗಿ ಬಾಲ್ಯ ವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ವಿರೋಧಿಸಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸದಸ್ಯೆ ತೇಜಸ್ವಿನಿ ಹಿರೇಮಠ ಹೇಳಿದರು.

ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಗುರುವಾರ ಜಿಪಂ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಆಶ್ರಯದಲ್ಲಿ ನಡೆದ ಬಾಲ್ಯವಿವಾಹ ಮತ್ತು ಹೆಣ್ಣು ಭ್ರೂಣಹತ್ಯೆ ಕುರಿತು ಜಾಗೃತಿ ಜಾಥಾ ಮತ್ತು ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಿಂದಿನ ದಿನಗಳಲ್ಲಿ ಇಳಿವಯಸ್ಸಿನ ಹಿರಿಯರು ತಾವು ಇರುವುದರೊಳಗಾಗಿ ಮೊಮ್ಮಕ್ಕಳ ಮದುವೆ ಮಾಡಬೇಕೆಂಬ ಹಟದಿಂದ ಮುಂದಾಗುವ ಸಮಸ್ಯೆಗಳಿಗೆ ಕಿವಿಗೊಡಬಾರದು. ಚಿಕ್ಕ ವಯಸ್ಸಿನಲ್ಲಿಯೇ ಬಾಲ್ಯವಿವಾಹದಂತಹ ಪಿಡುಗಿಗೆ ಬಲಿ ಮಾಡಿದ್ದರಿಂದ ಯುವತಿಯರು ಚಿಕ್ಕ ವಯಸ್ಸಿನಲ್ಲಿಯೇ ವಿಧವೆಯೆಂಬ ಹಣೆಪಟ್ಟಿ ಕಟ್ಟಿಗೊಂಡು ಗೋಳು ಅನುಭವಿಸುತ್ತಿದ್ದಾರೆ ಎಂದರು.

ಇಂತಹ ವಿಧವೆಯರಿಗೆ ಸಮಾಜದಲ್ಲಿ ಮತ್ತು ಶುಭ ಕಾರ್ಯಗಳಲ್ಲಿ ಗೌರವ ದೊರೆಯದೇ ಇರುವುದರಿಂದ ಮನದಲ್ಲಿ ಕೊರಗುವಂತಾಗಿದೆ. ಇದಕ್ಕೆ ಪಾಲಕರು ಮಾಡಿದ ತಪ್ಪ್ಪು ಹಾಗೂ ಮಕ್ಕಳಿಗೆ ಶಿಕ್ಷಣ ಕೊಡದೇ ಇದ್ದುದು ಕಾರಣವಾಗಿದೆ. ಇಂದು ಮಹಿಳೆ ಅಬಲೆಯಲ್ಲ, ಸಬಲೆಯೆಂಬ ದಿಟ್ಟ ನಿರ್ಧಾರದಿಂದ ಅಲ್ಲಲ್ಲಿ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ. ವಿದ್ಯಾರ್ಥಿಗಳು ಸುಶಿಕ್ಷಿತರಾಗಿ ಬಾಲ್ಯವಿವಾಹದಂತಹ ಪಿಡುಗಿಗೆ ಬಲಿಯಾಗುವ ಸಹೋದರಿ ಸಮಾನರಾದ ಅನೇಕ ಮುಗ್ದ ಹೆಣ್ಣು ಮಕ್ಕಳನ್ನು ಈ ಪಿಡುಗಿನಿಂದ ರಕ್ಷಿಸಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಮಂಜುನಾಥ ಸುಳ್ಳೊಳ್ಳಿ, ಮಹಿಳೆಯರು ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ಸರಕಾರ ಮಹಿಳೆಯರಿಗಾಗಿ ಅನೇಕ ಯೋಜನೆ ಹಾಕಿಕೊಂಡಿದ್ದು, ಆ ಯೋಜನೆಗಳನ್ನು ಪ್ರತಿ ಗ್ರಾಮಗಳಿಗೆ ತೆರಳಿ, ಮನೆಮನೆಗೆ ತಲುಪಿಸುವ ಕಾರ್ಯ ನಮ್ಮದಾಗಿದೆ. ಇಲಾಖೆಯಿಂದ ಬೀದಿ ನಾಟಕ ಹಾಗೂ ಜನಪದ ಸಂಗೀತ ಕಲಾ ತಂಡಗಳಿಂದ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಜಾಗೃತಿ ಪೋಸ್ಟರ್‌ ಬಿಡುಗಡೆ ಮಾಡಲಾಯಿತು. ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಆರ್‌.ಎಸ್‌. ದಡ್ಡಿ, ಉಪ ಪ್ರಾಚಾರ್ಯ ಎಂ.ಬಿ. ದೊಡ್ಡಪ್ಪನವರ, ಸರ್ಚ್‌ ಸಂಸ್ಥೆಯ ಪ್ರತಿನಿಧಿಗಳಾದ ಕುಮಾರ ಬಿ.ಎನ್‌., ಶೈಲಜಾಕುಮಾರ, ದೈಹಿಕ ಶಿಕ್ಷಣ ಶಿಕ್ಷಕ ಬಿರಾದಾರ ಉಪಸ್ಥಿತರಿದ್ದರು.ಸಹಶಿಕ್ಷಕಿ ಕುಲಕರ್ಣಿ ಸ್ವಾಗತಿಸಿದರು. ಸಹ ಶಿಕ್ಷಕ ಪಿ.ಎಸ್‌.ಗಿರಿಯಪ್ಪನವರ ನಿರೂಪಿಸಿದರು.

ಜಾಗೃತಿ ಜಾಥಾ ಬಾಲ್ಯವಿವಾಹ ಹಾಗೂ ಹೆಣ್ಣು ಭ್ರೂಣಹತ್ಯೆ ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸಲು ನಗರದ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಜಾಗೃತಿ ಜಾಥಾ ಬಾಲಕಿಯರ ಪ.ಪೂ. ಕಾಲೇಜಿನಿಂದ ಪ್ರಾರಂಭವಾಗಿ ಮರಳಿ ಕಾಲೇಜಿಗೆ ಮುಕ್ತಾಯಗೊಂಡಿತು. ಜಾಥಾದುದ್ದಕ್ಕೂ ವಿದ್ಯಾರ್ಥಿಗಳು ಜಾಗೃತಿ ಫಲಕ ಹಿಡಿದುಕೊಂಡು ಘೋಷಣೆ ಕೂಗುತ್ತಾ ಜಾಗೃತಿ ಮೂಡಿಸಿದರು.


ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ: ಪೌರತ್ವ ತಿದ್ದುಪಡಿ ಮಸೂದೆ ವಿರೋಧಿಸಿ ಜಮಾಅತ್‌ ಎ ಇಸ್ಲಾಮಿ ಹಿಂದ್‌ ಬಾಗಲಕೋಟೆ ನೇತೃತ್ವದಲ್ಲಿ ನೂರಾರು ಮುಸ್ಲಿಂ ಬಾಂಧವರು ಗುರುವಾರ ಪ್ರತಿಭಟನೆ...

  • ಅಮೀನಗಡ: ಗ್ರಾಮೀಣ ಪ್ರದೇಶದಲ್ಲಿರುವ ಸುಮಾರು 5 ಉಪಕೇಂದ್ರಗಳ ಸಾರ್ವಜನಿಕರಿಗೆ ಉಪಯುಕ್ತವಾದ ಆರೋಗ್ಯ ಸೇವೆ ಒದಗಿಸುವ ಗುಡೂರ(ಎಸ್‌.ಸಿ) ಗ್ರಾಮದ ಸರಕಾರಿ ಪ್ರಾಥಮಿಕ...

  • ಬಾಗಲಕೋಟೆ: ಜಿಲ್ಲೆಯಲ್ಲಿರುವ ಕೇಬಲ್‌ ಆಪರೇಟರ್‌ಗಳು ಪ್ರಧಾನ ಅಂಚೆ ಕಚೇರಿಯಲ್ಲಿ ನೋಂದಣಿ ಮಾಡಿಸುವುದು ಕಡ್ಡಾಯವಾಗಿದ್ದು, ನವೀಕರಣಗೊಳ್ಳದ ಕೇಬಲ್‌ ಆಪರೇಟರ್‌ಗಳ...

  • ಸಾವಳಗಿ: ಗ್ರಾಮೀಣ ಪ್ರದೇಶದ ರಸ್ತೆಗಳು ಅಭಿವೃದ್ಧಿ ಹೊಂದಿದ್ದರೆ ಮಾತ್ರ ಅಭಿವೃದ್ಧಿಯಾಗಲು ಸಾಧ್ಯ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ಚಿಕ್ಕಲಕ್ಕಿ, ಚಿಕ್ಕಲಕ್ಕಿಕ್ರಾಸ...

  • ಮಹಾಲಿಂಗಪುರ: ಪಟ್ಟಣದಲ್ಲಿ ನೂತವಾಗಿ ನಿರ್ಮಿಸುತ್ತಿರುವ ಬಸ್‌ ನಿಲ್ದಾಣದ ಕಾಮಗಾರಿಯ ಕಾರಣ ಬಸ್‌ ನಿಲುಗಡೆಗೆ ತೊಂದರೆಯಾಗುತ್ತಿದೆ. ಕಾರಣ ಕಾಮಗಾರಿಯ ಮುಕ್ತಾಯಗೊಳ್ಳುವರೆಗೂ...

ಹೊಸ ಸೇರ್ಪಡೆ