ಬಹಿರಂಗ ಪ್ರಚಾರಕ್ಕೆ ತೆರೆ: ಜನತೆ ನಿರಾಳ

Team Udayavani, Apr 22, 2019, 11:53 AM IST

ಬಾಗಲಕೋಟೆ: 17ನೇ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ರವಿವಾರ ಸಂಜೆ ತೆರೆ ಬಿದ್ದಿದೆ. ಹದಿನೈದು ದಿನಗಳಿಂದ ರಾಜಕೀಯ ನಾಯಕರ, ಜಾತಿ-ಧರ್ಮ ಹಾಗೂ ವ್ಯಕ್ತಿಗತ ಟೀಕೆ-ನಿಂದನೆಯ ಮಾತು ಕೇಳಿ ಬೇಸರಿಸಿದ್ದ ಬಹುತೇಕರು, ನಿರಾಳರಾಗಿದ್ದಾರೆ ಎಂಬ ಮಾತು ಕೇಳಿ ಬರುತ್ತಿದೆ. ನಿಜ, ಕಳೆದ ಮಾರ್ಚ್‌ 28ರಿಂದ ಜಿಲ್ಲೆಯಲ್ಲಿ ಬಹುತೇಕ ಪ್ರಚಾರ ನಡೆದಿತ್ತು. ಮೊದಲ ವಾರ ಆಯಾ ತಾಲೂಕು ಕೇಂದ್ರಗಳಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರ, ಪ್ರಮುಖರ ಸಭೆ ನಡೆಸುತ್ತಿದ್ದ ಪಕ್ಷದ ನಾಯಕರು, ನಾಮಪತ್ರ ಸಲ್ಲಿಸುವ ಕೊನೆ ದಿನ ಮುಗಿದ ಬಳಿಕ ಬಹಿರಂಗ ಪ್ರಚಾರಕ್ಕೆ ಅತಿಹೆಚ್ಚು ಆದ್ಯತೆ ಕೊಟ್ಟರು.
ಪ್ರಚಾರಕ್ಕೆ ತಮ್ಮ ತಮ್ಮ ಪಕ್ಷಗಳ ಹಲವು ನಾಯಕರು ಬಂದು ಹೋದರೂ,ಯಾರೂ ಸ್ಥಳೀಯ ಗಂಭೀರ ಸಮಸ್ಯೆಗಳ ಬಗ್ಗೆ ಚಕಾರವೆತ್ತಲಿಲ್ಲ. ಕಾಂಗ್ರೆಸ್‌ನವರು ಮೋದಿ, ಶಾ, ಯಡಿಯೂರಪ್ಪ, ಅಭ್ಯರ್ಥಿ ಗದ್ದಿಗೌಡರ ವಿರುದ್ಧ ಮಾತನಾಡಿದರೆ, ಬಿಜೆಪಿಯವರು, ಸಿದ್ದರಾಮಯ್ಯ, ಸಿಎಂ ಕುಮಾರಸ್ವಾಮಿ, ರಾಹುಲ್‌ ಗಾಂಧಿ ಬಗ್ಗೆ ಮಾತನಾಡಿದರು. ಯಾವ ನಾಯಕರ ಬಾಯಲ್ಲೂ, ಬಾಗಲಕೋಟೆ ಕ್ಷೇತ್ರದಲ್ಲಿ ಸಮಸ್ಯೆಗಳೇನು, ಅದಕ್ಕೆ ನಾವು ಪರಿಹಾರ ಹೇಗೆ ಕಂಡುಕೊಳ್ಳುತ್ತೇವೆ, ಗೆದ್ದರೆ ಮುಂದಿನ ಐದು ವರ್ಷ ನಮ್ಮ ಆಡಳಿತ ಹೇಗಿರುತ್ತದೆ ಎಂದು ಹೇಳಲಿಲ್ಲ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ 14 ಜನ ಅಭ್ಯರ್ಥಿಗಳು ಕಣದಲ್ಲಿದ್ದರೂ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ನೇರ ಪೈಪೋಟಿ ನಡೆದಿದೆ.
ಈ ಅಭ್ಯರ್ಥಿಗಳು ತಮ್ಮ ಸಾಧನೆ, ಮುಂದಿನ ಕಾರ್ಯವೈಖ್ಯರಿ ಬಗ್ಗೆ ಜನರಿಗೆ ನೇರವಾಗಿ ಹೇಳುವ ಪ್ರಯತ್ನ ಮಾಡಲಿಲ್ಲ. ಕಾಂಗ್ರೆಸ್‌ ಅಭ್ಯರ್ಥಿ ವೀಣಾ, ಜಿಪಂ ಅಧ್ಯಕ್ಷೆಯಾಗಿದ್ದ ಅವಧಿಯಲ್ಲಿ ಮಾಡಿದ ಕಾರ್ಯಗಳು ಹೇಳಿಕೊಂಡರೆ, ಬಿಜೆಪಿ ಅಭ್ಯರ್ಥಿ ಗದ್ದಿಗೌಡರ, 15 ವರ್ಷ ಜಿಲ್ಲೆಯಲ್ಲಿ ಏನು ಮಾಡಿದೆ ಎಂದು ಕೆಲವೊಮ್ಮೆ ಹೇಳಿಕೊಂಡರು. ವಿಶೇಷ ಅಂದರೆ, ಕಾಂಗ್ರೆಸ್‌ನವರು ಮಾಧ್ಯಮಗಳ ಬಳಕೆಯಲ್ಲಿ ಹೆಚ್ಚು ಮುಂದಿದ್ದರೆ, ಬಿಜೆಪಿಯ ಅಭ್ಯರ್ಥಿ ಗದ್ದಿಗೌಡರ, ಒಂದೇ ಒಂದು ಸುದ್ದಿಗೋಷ್ಠಿಯನ್ನೂ ನಡೆಸದೇ, ಇಡೀ ಬಹಿರಂಗ ಪ್ರಚಾರ ಮುಗಿಸಿದರು ಎಂಬ ಮಾತು ಕೇಳಿಬಂತು.
ಈ ಬಾರಿ, ನೇರಾನೇರ ಪೈಪೋಟಿ ಎದುರಿಸುತ್ತಿರುವ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದ್ದರಿಂದ, ಇಬ್ಬರೂ ಅಭ್ಯರ್ಥಿಗಳ ಉಪ ಪಂಗಡಗಳ ಹೆಸರಿನಲ್ಲಿ ಜಾತಿ ರಾಜಕೀಯ ಜೋರಾಗಿ ನಡೆದಿದೆ. ಒಟ್ಟಾರೆ, ಪ್ರಸ್ತುತ ಲೋಕಸಭೆ ಚುನಾವಣೆಯ ಬಹಿರಂಗ ಪ್ರಚಾರ ಮುಗಿದರೆ ಸಾಕಪ್ಪಾ ಎಂಬ ಮನಸ್ಥಿತಿಗೆ ಅಭ್ಯರ್ಥಿಗಳೂ ಬಂದಂತಿತ್ತು. ಕಾರಣ, ಬಿಸಿಲಿನ ಝಳಕ್ಕೆ ಬೆಂಡಾಗಿದ್ದರು. ಕಾರ್ಯಕರ್ತರೂ, ನಿತ್ಯ ಪ್ರಚಾರ, ಓಡಾಟ, ಜನ ಸೇರಿಸಲು ಹೈರಾಣಾಗಿದ್ದಾರೆ.

ಈ ವಿಭಾಗದಿಂದ ಇನ್ನಷ್ಟು

  • ಬಾಗಲಕೋಟೆ/ಗುಳೇದಗುಡ್ಡ: ಸತತ ಮುನ್ನಡೆ ಕಾಯ್ದುಕೊಂಡು ಪಿ.ಸಿ.ಗದ್ದಿಗೌಡರ ಅವರು ಗೆಲುವು ಸಾಧಿಸುತ್ತಿದ್ದಂತೆ ಬಿಜೆಪಿ ಕಾರ್ಯಕರ್ತರ ಹರ್ಷೋದ್ಗಾರ ಮುಗಿಲುಮುಟ್ಟಿತು....

  • ಬಾಗಲಕೋಟೆ: ಪ್ರಸಕ್ತ ಲೋಕಸಭೆ ಚುನಾವಣೆಯಲ್ಲಿ ಬಾಗಲಕೋಟೆ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮತ ಗಳಿಕೆಯಲ್ಲಿ ಬಡ್ತಿ ಪಡೆದಿದೆ. ಕಳೆದ ಲೋಕಸಭೆ ಚುನಾವಣೆ ಹಾಗೂ ಕಳೆದ...

  • ಬಾಗಲಕೋಟೆ: ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ 4ನೇ ಬಾರಿಗೆ ಜಯಗಳಿಸಿದ ಬಿಜೆಪಿಯ ಪಿ.ಸಿ. ಗದ್ದಿಗೌಡರ, ತಮ್ಮ ದಾಖಲೆಯನ್ನು ತಾವೇ ಮುರಿದಿದ್ದಾರೆ. ಹೌದು, ಈ ವರೆಗಿನ...

  • ಬಾಗಲಕೋಟೆ: ಸತತ ಮೂರು ಬಾರಿಯ ಸೋಲಿನ ಕಹಿ ಮರೆಯಲು ಹಲವು ತಂತ್ರಗಾರಿಕೆ ನಡೆಸಿದ್ದ ಕಾಂಗ್ರೆಸ್‌ ಈ ಬಾರಿಯೂ ಸೋಲು ಸುಣ್ಣವಾಗಿದೆ. ಬಾಗಲಕೋಟೆ ಲೋಕಸಭೆ ಕ್ಷೇತ್ರವನ್ನು...

  • ಮುಧೋಳ: ತಾಲೂಕಿನಲ್ಲಿ ಕುಡಿಯುವ ನೀರಿನ ತೊಂದರೆಯಾಗದಂತೆ ನಿಗಾ ವಹಿಸಬೇಕು ಎಂದು ಶಾಸಕ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ತಾಕೀತು ಮಾಡಿದರು. ಬುಧವಾರ ಸ್ಥಳೀಯ...

ಹೊಸ ಸೇರ್ಪಡೆ