ಮುಸುರೆಯಿಂದ ಜೈವಿಕ ಗೊಬ್ಬರ ತಯಾರಿ

Team Udayavani, Nov 22, 2019, 11:04 AM IST

ಬಾಗಲಕೋಟೆ: ಜಿಲ್ಲೆಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಧ್ಯಾಹ್ನದ ಬಿಸಿಯೂಟ ತಯಾರಿಕೆ ಹಾಗೂ ಮಕ್ಕಳು ಊಟ ಮಾಡಿದ ಬಳಿಕ ಉಳಿಯುವ ಮುಸುರೆಯಿಂದ ಜೈವಿಕ ಗೊಬ್ಬರ ತಯಾರಿಸಲು ಎಲ್ಲ ಶಾಲೆಗಳಲ್ಲಿ ಘಟಕ ಅಳವಡಿಸಲುಜಿಪಂ ಸಿಇಒ ಗಂಗೂಬಾಯಿ ಮಾನಕರ ಸೂಚಿಸಿದ್ದಾರೆ.

ತಾಲೂಕಿನ ತುಳಸಿಗೇರಿಯ ಕುವೆಂಪು ಶತಮಾನೋತ್ಸವ ಸರಕಾರಿ ಮಾದರಿ ಪ್ರಾಥಮಿಕ ಶಾಲಾ ಆವರಣದಲ್ಲಿ ಜೈವಿಕ ಗೊಬ್ಬರ ತಯಾರಿಸುವ ಘಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಶಾಲೆಯ ಪ್ರತಿಯೊಬ್ಬ ಮಕ್ಕಳು ಬಿಸಿಯೂಟದ ನಂತರ ಉಳಿದ ಆಹಾರ ಪದಾರ್ಥವನ್ನು ಈ ಪೈಪ್‌ ಕಾಂಪೋಸ್ಟ್‌ನಲ್ಲಿ ತಪ್ಪದೇ ಹಾಕಬೇಕು. ತುಂಬಿದ ತಕ್ಷಣ ಮೂರು ತಿಂಗಳು ಬಿಟ್ಟಾಗ ಜೈವಿಕ ಗೊಬ್ಬರ ತಯಾರಾಗುತ್ತದೆ. ಇದನ್ನು ಶಾಲಾ ಆವರಣದಲ್ಲಿ ಬೆಳೆಸಲಾದ ಗಿಡ, ಸಸಿಗಳಿಗೆ ಹಾಕಲು ಬಳಸಬೇಕು. ಬಿಸಿಯೂಟದ ನಂತರ ಉಳಿದ ಯಾವುದೇ ಪದಾರ್ಥವನ್ನು ವೆಸ್ಟ್‌ ಮಾಡದೇ ಜೈವಿಕ ಗೊಬ್ಬರ ತಯಾರಿಕೆಗೆ ಬಳಸುವಂತೆ ತಿಳಿಸಿದರು.

ಇಂತಹ ಜೈವಿಕ ಗೊಬ್ಬರ ಘಟಕವನ್ನು ಗ್ರಾಮ ಪಂಚಾಯತ ವತಿಯಿಂದ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗುತ್ತಿದೆ. ಕೇವಲ ಶಾಲಾ ಆವರಣದಲ್ಲಿ ಮಾತ್ರ ಅಲ್ಲದೇ ಮನೆಯ ಆವರಣದಲ್ಲಿಯೂ ಘಟಕ ಸ್ಥಾಪಿಸಬಹುದಾಗಿದೆ. ಘಟಕ ಸ್ಥಾಪನೆಗೆ ಒಂದು ಗುಂಡಿಯನ್ನು ತೋಡಿ ಅದರೊಳಗೆ ಒಂದು ಪೈಪ್‌ ಇಟ್ಟು ಬೆಲ್ಲದ ನೀರು, ಸಗಣೆ ನೀರು ಹಾಗೂ ಸ್ವಲ್ಪ ಮಣ್ಣು ಹಾಕಬೇಕು. ನಂತರ ಮನೆಯಲ್ಲಿ ಉಳಿದ ವೆಸ್ಟ್‌ ಹಸಿ ಪದಾರ್ಥಗಳನ್ನು ಹಾಕಿದರೆ ಸಾಕು ಜೈವಿಕ ಗೊಬ್ಬರ ತಯಾರಿಸಬಹುದಾಗಿದೆ ಎಂದರು.

ರೈತರು ತಮ್ಮ ಜಮೀನುಗಳಲ್ಲಿ ಜೈವಿಕ ಗೊಬ್ಬರ ತಯಾರಿಸುವ ಘಟಕ ಸ್ಥಾಪಿಸಿ ಬಂದಂತಹ ಗೊಬ್ಬರವನ್ನು ಜಮೀನುಗಳಿಗೆ ಬಳಸುವುದರ ಮೂಲಕ ಹಾಗೂ ಪ್ಯಾಕ್‌ ಮಾಡಿ ಬೇರೆಯವರಿಗೆ ಮಾರಬಹುದಾಗಿದೆ. ಜಿಲ್ಲೆಯಲ್ಲಿರುವ ಎಲ್ಲ ಶಾಲಾ ಕಾಲೇಜುಗಳಲ್ಲಿ ಜೈವಿಕ ಘಟಕ ಸ್ಥಾಪನೆಗೆ ಆಯಾ ವ್ಯಾಪ್ತಿಯ ಗ್ರಾಮ ಪಂಚಾಯತ್‌ಗಳಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು.

ಮಕ್ಕಳೊಂದಿಗೆ ಬಿಸಿ ಊಟ ಸೇವನೆ: ನಂತರ ತುಳಸಿಗೇರಿಯ ಮಾದರಿ ಶಾಲೆಯ ಊಟದ ಕೋಣೆಗೆ ಭೇಟಿ ನೀಡಿ ಆಹಾರ ಪದಾರ್ಥ ಪರಿಶೀಲಿಸಿ ಉತ್ತಮ ಗುಣಮಟ್ಟದ ಆಹಾರವನ್ನು ತಯಾರಿಸಿ ಮಕ್ಕಳಿಗೆ ಬಳಸಲು ಬಿಸಿಯೂಟ

ಅಡುಗೆಯವರಿಗೆ ತಿಳಿಸಿದರು. ಅಲ್ಲದೇ ಶಾಲಾ ಆವರಣದಲ್ಲಿ ಪರಿಸರವನ್ನು ವೀಕ್ಷಿಸಿ ಹರ್ಷ ವ್ಯಕ್ತಪಡಿಸಿದರು. ಅಲ್ಲದೇ ಮಧ್ಯಾಹ್ನದ ಬಿಸಿಯೂಟವನ್ನು ಮಕ್ಕಳೊಂದಿಗೆ ಸವಿದರು. ಇದೇ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯ ಸಿ.ಎ. ಸಣ್ಣಪ್ಪನವರ ಮಾತನಾಡಿ ತುಳಸಿಗೇರಿ ಶಾಲೆಯಲ್ಲಿ ಅಂದಾಜು 1000ಕ್ಕೂ ಹೆಚ್ಚು ಗಿಡಗಳನ್ನು ಬೆಳೆಸಲಾಗಿದೆ. ವಿವಿಧ ಔಷಧಿ ಸಸಿಗಳನ್ನು ಸಹ ಬೆಳೆಸಲಾಗಿದೆ. ಶಾಲಾ ಪ್ರಾರಂಭದಿಂದ 2 ವರ್ಷ ಶಿಕ್ಷಕರ, ಎಸ್‌ಡಿಎಂಸಿ ಅಧ್ಯಕ್ಷರ ಹಾಗೂ ಸದಸ್ಯರ ಜನ್ಮದಿನದ ನಿಮಿತ್ತ ಅವರ ಹೆಸರಿನಲ್ಲಿ ಗಿಡಗಳನ್ನು ಬೆಳೆಸಲಾಗುತ್ತಿತ್ತು. ಈಗ ಮಕ್ಕಳ ಜನ್ಮದಿನದ ಸವಿನೆನಪಿಗಾಗಿ ಮಕ್ಕಳ ಹೆಸರಿನಲ್ಲಿಯೂ ಸಹ ಗಿಡಗಳನ್ನು ಬೆಳೆಸಲಾಗುತ್ತಿದೆ ಎಂದು ತಿಳಿಸಿದರು.

ಶಾಲೆಗೆ ವಿದೇಶಿಗರು ಭೇಟಿ: ಶಾಲೆಯಲ್ಲಿ ಹೈಟೆಕ್‌ ಶೌಚಾಲಯ ನಿರ್ಮಿಸಲಾಗಿದೆ. ಈ ಶಾಲೆಗೆ ಏಶಿಯಾ, ಆಸ್ಟ್ರೇಲಿಯಾ ಹಾಗೂ ಪ್ರಾನ್ಸ ದೇಶದ ಪ್ರವಾಸಿಗಳು ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಎಸ್‌.ಎಸ್‌. ದಾಸರ ಹಾಗೂ ನಾರಾಯಣ ದಾಸರ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಶಾಲಾ ಆವರಣದಲ್ಲಿ ವಿವಿಧ ತರಹದ ಗಿಡಗಳನ್ನು ಹಾಗೂ ರಸ್ತೆಗಳನ್ನು ನಿರ್ಮಿಸಿಕೊಟ್ಟಿದ್ದಾರೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ತುಳಸಿಗೇರಿ ಗ್ರಾಮ ಪಂಚಾಯತ ಅಧ್ಯಕ್ಷೆ ವಿಜಯಾ ಲದ್ದಿ, ಜಿಲ್ಲಾ ಅಕ್ಷರ ದಾಸೋಹ ಅಧಿಕಾರಿ ಎನ್‌.ವೈ. ಕುಂದರಗಿ, ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿ ಸ್ವಪ್ನಾ ನಾಯಕ ಹಾಗೂ ಗ್ರಾಮದ ಶಿಕ್ಷಣ ಪ್ರೇಮಿ ಓಬಳಪ್ಪ ದೊಡಮನಿ ಉಪಸ್ಥಿತರಿದ್ದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ