ಜೀವ ರಕ್ಷಕರಾದ ಸೈನಿಕರು-ಪೊಲೀಸರು

• ರಕ್ಷಣಾ ಕಾರ್ಯಾಚರಣೆಗೆ ಬಂದಿದ್ದ 251 ಸೈನಿಕರು • ಸೇನಾ ಹೆಲಿಕಾಪ್ಟರ್‌ನಿಂದ 19 ಜನರ ರಕ್ಷಣೆ

Team Udayavani, Aug 13, 2019, 11:34 AM IST

ಬಾಗಲಕೋಟೆ : ಪಟ್ಟದಕಲ್ಲನ ದೇವಾಲಯಗಳ ಮೇಲೆ ಆಶ್ರಯ ಪಡೆದಿದ್ದ 272 ಜನರ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಎನ್‌ಡಿಆರ್‌ಎಫ್‌ ಸೈನಿಕರು.

ಬಾಗಲಕೋಟೆ: ವರ್ಷದ ಆರು ತಿಂಗಳು ಬಹುತೇಕ ನೀರಿನೊಂದಿಗೆ ಬದುಕುವ ಮುಳುಗಡೆ ಜಿಲ್ಲೆಯ ಜನರಿಗೀಗ ನೀರೆಂದರೆ ಭಯ. ತಮ್ಮ ಬದುಕಿನಲ್ಲಿ ಎಂದೂ ಕಂಡರಿಯದಂತಹ ನೀರು ಈ ಬಾರಿ ಕಂಡರಲ್ಲದೇ, ಲಕ್ಷಾಂತರ ಜನರು ಸಂಕಷ್ಟಕ್ಕೂ ಸಿಲುಕಿದರು. ಇಂತಹ ಸಂಕಷ್ಟದ ಸಮಯದಲ್ಲಿ ಭಾರತೀಯ ಸೈನಿಕರು, ಜಿಲ್ಲೆಯ ಪೊಲೀಸರು, ಅಗ್ನಿ ಶಾಮಕ, ಹೋಮ್‌ ಗಾರ್ಡ್‌ ಸೇರಿದಂತೆ ಹಲವರು ಪ್ರಾಣದ ಹಂಗು ತೊರೆದು ಜನರನ್ನು ರಕ್ಷಣೆ ಮಾಡಿದ್ದಾರೆ.

ಹೌದು, ಇತಿಹಾಸದಲ್ಲೇ ಮೊದಲ ಬಾರಿಗೆ ಆರು ಲಕ್ಷ ಕ್ಯೂಸೆಕ್‌ ನೀರು ಕೃಷ್ಣೆಗೆ ಹರಿದು ಬಂದಿತ್ತು. ಇನ್ನು ಕೇವಲ 40 ಸಾವಿರ ಕ್ಯೂಸೆಕ್‌ ನೀರು ಹರಿಯುವ ಸಾಮರ್ಥ್ಯ ಹೊಂದಿರುವ ಮಲಪ್ರಭಾ ನದಿಗೆ ಬರೋಬ್ಬರಿ 1.17 ಲಕ್ಷ ಕ್ಯೂಸೆಕ್‌ ನೀರು ಹರಿದು ಬಂದಿದ್ದರೆ, ಘಟಪ್ರಭಾ ನದಿಗೆ ಆ. 7ರಂದು 2.27 ಲಕ್ಷ ಕ್ಯೂಸೆಕ್‌ ನೀರು ಹರಿಯಿತು. ಭಾರಿ ಪ್ರಮಾಣದಲ್ಲಿ ಬಂದ ನೀರನ್ನು ತಮ್ಮ ಒಡಲಿನಲ್ಲಿಟ್ಟುಕೊಳ್ಳದೇ ಮೂರು ನದಿಗಳು ಮನಬಂದಂತೆ ಹರಿದವು. ಹೀಗಾಗಿ ಜಿಲ್ಲೆಯ 191 ಗ್ರಾಮಗಳ ಜನರು ತತ್ತರಿಸಿ ಹೋದರು. ಸಾವಿರಾರು ಜನರು, ತಮ್ಮ ಜಾನುವಾರು ಉಳಿಸಿಕೊಳ್ಳಲೆಂದೇ ಪುನಃ ನೀರೊಳಗೆ ಹೋಗಿ ಸಂಕಷ್ಟಕ್ಕೆ ಸಿಲುಕಿದ್ದವು. ಎರಡು ದಿನಗಳ ಕಾಲ ಮರ, ಮನೆ, ದೇವಾಲಯ ಏರಿ ಪ್ರಾಣಭಿಕ್ಷೆಗಾಗಿ ಕೂಗಾಡುತ್ತಿದ್ದರು. ಇಂತಹ ದಯನೀಯ ಸ್ಥಿತಿಯಲ್ಲಿದ್ದ ನಿರಾಶ್ರಿತರ ನೆರವಿಗೆ ಧಾವಿಸಿ, ತಮ್ಮ ಪ್ರಾಣವನ್ನೂ ಒತ್ತೆ ಇಟ್ಟು ಜನರ ರಕ್ಷಣೆ ಮಾಡಲಾಯಿತು.

251 ತುರ್ತು ಸೇವಕರು: ರಾಷ್ಟ್ರೀಯ ವಿಪತ್ತು ಸ್ಪಂದನೆ ಪಡೆ (ಎನ್‌ಡಿಆರ್‌ಎಫ್‌)ಯ ಮೂರು ತಂಡಗಳ 33 ಸೈನಿಕರು, ರಾಜ್ಯ ವಿಪತ್ತು ಸ್ಪಂದನೆ ಪಡೆ (ಎಸ್‌ಡಿಆರ್‌ಎಫ್‌)ಯ 60 ಸಿಬ್ಬಂದಿ ಹಾಗೂ ಭಾರತೀಯ ಸೇನಾ ಪಡೆಯ 60, ಸೇನೆಯ ಎಂಜಿನಿಯರ್ಸ ತಂಡದ 43 ಸೈನಿಕರು ಹಾಗೂ ಜಿಲ್ಲೆಯ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲೋಕೇಶ ಜಗಲಾಸರ ನೇತೃತ್ವ 1 ಸಾವಿರ ಸಿಬ್ಬಂದಿ ಪ್ರವಾಹ ಪರಿಸ್ಥಿತಿಯಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚಣೆಯಲ್ಲಿ ತೊಡಗಿದ್ದರು.

ಹೆಲಿಕಾಪ್ಟರ್‌ನಿಂದ 19 ಜನರ ರಕ್ಷಣೆ: ಮುಧೋಳ ತಾಲೂಕು ಚಿಚಖಂಡಿಯಲ್ಲಿ 1, ರೂಗಿಯಲ್ಲಿ 12, ಚಲಾಣದಲ್ಲಿ 3 ಜನ ಸೇರಿದಂತೆ 19 ಜನರು ತೀವ್ರ ಸಂಕಷ್ಟದಲ್ಲಿ ಸಿಲುಕಿದ್ದರು. ಅವರನ್ನು ಬೆಳಗಾವಿಯ ಸೇನಾ ಹೆಲಿಕಾಪ್ಟರ್‌ ಮೂಲಕ ಕಾರ್ಯಾಚರಣೆ ನಡೆಸಿ ಬದುಕಿಳಿಸಲಾಯಿತು. ಚಿಚಖಂಡಿ-ಜೀರಗಾಳ ಮಧ್ಯೆ ಘಟಪ್ರಭಾ ನದಿ 2.27 ಲಕ್ಷ ಕ್ಯೂಸೆಕ್‌ ನೀರು ರಭಸವಾಗಿ ಹರಿಯುತ್ತಿದ್ದ ವೇಳೆ ಜೀರಗಾಳದ ಶ್ರೀಶೈಲ ಉಪ್ಪಾರ ಮತ್ತು ಪುತ್ರ ರಮೇಶ ಉಪ್ಪಾರ ನದಿಯ ಮಧ್ಯ ಭಾಗದಲ್ಲಿ ಸಿಲುಕಿದ್ದರು. ಈ ವೇಳೆ ಮುಧೋಳ ಪಿಎಸ್‌ಐ ಶ್ರೀಶೈಲ ಬ್ಯಾಕೋಡ ಹಾಗೂ ಎಸ್‌ಡಿಆರ್‌ಎಫ್‌ನ ಹರೀಶ ಡಿ.ವಿ ನೇತೃತ್ವದಲ್ಲಿ ಬೋಟ್‌ನಲ್ಲಿ ತೆರಳಿ, ಇಬ್ಬರನ್ನೂ ರಕ್ಷಣೆ ಮಾಡಿ ಹೊರ ತಂದರು.

ಪಕ್ಕದಲ್ಲೇ ಇಂಗಳಗಿಯ ಶ್ರೀಕಾಂತ ದಡ್ಡಿ ಎಂಬ ಟ್ರಾಕ್ಟರ್‌ ಚಾಲಕ, ಟ್ಯಾಕ್ಟರ್‌ ಸಮೇತ ಪ್ರವಾಹದಲ್ಲಿ ಸಿಲುಕಿದ್ದ ಆತನನ್ನು ಈ ತಂಡ ಪ್ರಯತ್ನಿಸಿತಾದರೂ, ನೀರಿನ ರಭಸ ಹಾಗೂ ಮುಳ್ಳು-ಕಂಟಿಗಳ ಇಕ್ಕಟ್ಟಾದ ಸ್ಥಳದಿಂದ ಬೋಟ್ ಹೋಗಲಿಲ್ಲ. ಆಗ ಸೇನೆಯ ಹೆಲಿಕಾಪ್ಟರ್‌ ಮೂಲಕ ಶ್ರೀಕಾಂತ ದಡ್ಡಿ ಎಂಬಾತನನ್ನು ರಕ್ಷಿಸಲಾಯಿತು.

ಸಮರ್ಪಕ ನಿಭಾಯಿಸಿದ ಜಿಲ್ಲಾಡಳಿತ: ಇತಿಹಾಸದಲ್ಲೇ ಕಂಡರಿಯದ ಇಂತಹ ಪ್ರವಾಹದಿಂದ ಜಿಲ್ಲೆಯಲ್ಲಿ ಸಾವು- ನೋವು ಹೆಚ್ಚಾಗುತ್ತವೆ ಎಂಬ ಆತಂಕ ತೀವ್ರವಾಗಿತ್ತು. ಕೊಂಚ ನಿರ್ಲಕ್ಷ್ಯ ಅಥವಾ ಅಸಡ್ಡೆ ತೋರಿದ್ದರೆ ಕನಿಷ್ಠ 50ಕ್ಕೂ ಹೆಚ್ಚು ಜನರು ನೀರು ಪಾಲಾಗುತ್ತಾರೆ ಎಂಬ ಭಯ ಎಲ್ಲರನ್ನೂ ಕಾಡಿತ್ತು. ಆದರೆ, ಜಿಲ್ಲಾಡಳಿತ ಪರಿಸ್ಥಿತಿ ಕಂಡು (ನೀರು ಬಿಡುವುದನ್ನು ಮೊದಲೇ ಅರಿತು) ಹೆಚ್ಚಿನ ಸೇನಾ ಸಿಬ್ಬಂದಿ, ನದಿ ಪಾತ್ರದ ಗ್ರಾಮಗಳ ಜನರ ಸ್ಥಳಾಂತರ ಕಾರ್ಯ ಮಾಡಿತು. 191 ಗ್ರಾಮಗಳ 1,29,443 ಜನರ್ನು ಕೇವಲ ಮೂರು ದಿನಗಳಲ್ಲಿ ಸುರಕ್ಷಿತ ಸ್ಥಳಕ್ಕೆ, ಅದು ಪರಿಹಾರ ಕೇಂದ್ರ ಆರಂಭಿಸಿ ಆ ಕೇಂದ್ರಕ್ಕೆ ಸಾಗಿಸುವುದು ಸಣ್ಣ ಮಾತಲ್ಲ. ಆದರೆ, ಕೇಂದ್ರ- ರಾಜ್ಯದಿಂದ ಬಂದ ಎಲ್ಲ ಹಂತದ ಸಿಬ್ಬಂದಿ, ಜಿಲ್ಲೆಯ ಕಂದಾಯ, ಜಿ.ಪಂ.ಇಲಾಖೆಗಳ ಎಲ್ಲ ಅಧಿಕಾರಿ-ಸಿಬ್ಬಂದಿ ಒಂದೊಂದು ಗ್ರಾಮಗಳಿಗೆ ನಿಯೋಜನೆಗೊಂಡು ಪ್ರವಾಹ ಪರಿಸ್ಥಿತಿ ನಿಭಾಯಿಸುವಲ್ಲಿ ಕೆಲಸ ಮಾಡಿದ್ದಾರೆ.

ಹೆತ್ತವರ ಕಾಳಜಿ ತೋರಿದರು: ಸಂಕಷ್ಟದಲ್ಲಿ ಸಿಲುಕಿದವರನ್ನು ಹೊರ ತರಲು ಬಂದ ಸೈನಿಕರು, ನಮ್ಮ ಪಾಲಿಗೆ ಪುನರ್‌ಜನ್ಮ ನೀಡಿದ ದೇವರೆಂದೇ ಪಟ್ಟದಕಲ್ಲನ ನಿರಾಶ್ರಿತರು ಹೇಳುತ್ತಾರೆ. ಇಲ್ಲಿ 272 ಜನರು, ಐತಿಹಾಸಿಕ ಸ್ಮಾರಕಗಳ ಆಸರೆ ಪಡೆದು, 36 ಗಂಟೆಗಳ ಜೀವನ್ಮರಣದಲ್ಲಿದ್ದರು. ಎನ್‌ಡಿಆರ್‌ಎಫ್‌ ಮತ್ತು ಎಸ್‌ಡಿಆರ್‌ಎಫ್‌ ತಂಡದವರು ಎರಡು ಬೋಟ್‌ಗಳ ಮೂಲಕ ಹೋಗಿ, ಸಂಕಷ್ಟಕ್ಕೆ ಸಿಲುಕಿದ್ದ 272 ಜನರನ್ನೂ ಪರಿಹಾರ ಕೇಂದ್ರಕ್ಕೆ ಸಾಗಿಸಿದರು. ಇಲ್ಲಿ ಸಿಲುಕಿಕೊಂಡವರಿಗೆಲ್ಲ ನೀರು ಬರುವ ಮುನ್ಸೂಚನೆ ಕೊಟ್ಟಿದ್ದರೂ, ಅವರೆಲ್ಲ ನಿರ್ಲಕ್ಷ್ಯ ಮಾಡಿ, ನೀರು ಬಂದಾಗ ನೋಡೋಣ ಎಂದು ಹಾಗೆಯೇ ಮನೆಯಲ್ಲಿದ್ದರು. ಆದರೆ, ಮನೆಗೆ ನೀರು ಹೊಕ್ಕಾಗ, ಅನಿವಾರ್ಯವಾಗಿ ದೇವಾಲಯ ಮೇಲೇರಿದ್ದರು. ಕಾರ್ಯಾಚರಣೆ ವೇಳೆ ಯಾವುದೇ ಸಿಬ್ಬಂದಿ, ಅಧಿಕಾರಿಗಳು ಸಿಡುಕುಗೊಳ್ಳದೇ ಹೆತ್ತವರ ಪ್ರೀತಿ ತೋರಿದಂತೆ ನೆರವಿಗೆ ಬಂದಿದ್ದರು.

ಒಟ್ಟಾರೆ, ಜಿಲ್ಲೆಯಲ್ಲಿ ಆ. 2ರಿಂದ ಆರಂಭಗೊಂಡ ಪ್ರವಾಹದಲ್ಲಿ ಸಿಲುಕಿದವರ ರಕ್ಷಣಾ ಕಾರ್ಯಾಚಣೆಗೆ, ನಿರಾಶ್ರಿತರು ಮತ್ತೆ ಹುಟ್ಟಿ ಬಂದೇವು ಎಂಬ ಆನಂದದ ಕಣ್ಣೀರು ಸುರಿಸಿದರು.

ಪ್ರವಾಹದಲ್ಲಿ ಸಿಲುಕಿದವರ ರಕ್ಷಣೆಗೆ ಬಂದಿದ್ದ ಸೇನೆ ಹಾಗೂ ಎಸ್‌ಡಿಆರ್‌ಎಫ್‌ ಸಹಿತ ಎಲ್ಲ ರಕ್ಷಣಾ ಸಿಬ್ಬಂದಿಗೆ ತಾಲೂಕುವಾರು ವಾಸ್ತವ್ಯ, ಊಟದ ವ್ಯವಸ್ಥೆ ಮಾಡಲಾಗಿತ್ತು. ಅದಕ್ಕಾಗಿಯೇ ಸ್ಥಳೀಯ ಕೆಲ ಅಧಿಕಾರಿಗಳನ್ನು ನೇಮಕ ಮಾಡಲಾಗಿತ್ತು. ಕೇವಲ ಮೂರು ದಿನಗಳಲ್ಲಿ 1.29 ಲಕ್ಷ ಜನರನ್ನು ಜಲಾವೃತಗೊಂಡ ಗ್ರಾಮಗಳಿಂದ ಸುರಕ್ಷಿತವಾಗಿ ಹೊರಗೆ ತಂದಿದ್ದೇವೆ. ಈ ಕಾರ್ಯಕ್ಕೆ ಎಲ್ಲ ಹಂತದ ಸಿಬ್ಬಂದಿ, ಅಧಿಕಾರಿಗಳು, ಜನಪ್ರತಿನಿಧಿಗಳು ನೆರವಾಗಿದ್ದಾರೆ. ಜಿಲ್ಲಾಧಿಕಾರಿಯಾಗಿ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ.• ಆರ್‌. ರಾಮಚಂದ್ರನ್‌,ಜಿಲ್ಲಾಧಿಕಾರಿ

ಇಂತಹ ವಿಪತ್ತು ಸಂದರ್ಭದಲ್ಲಿ ಜನರ ರಕ್ಷಣೆ ಮಾಡುವುದೇ ನಮ್ಮ ಕೆಲಸ. ನಾವು ದೊಡ್ಡ ಸೇವೆಯನ್ನೇನೂ ಮಾಡಿಲ್ಲ. ಸಂಕಷ್ಟದಲ್ಲಿದ್ದ ಜನರನ್ನು ರಕ್ಷಣೆ ಮಾಡಿದ ಖುಷಿ-ಜವಾಬ್ದಾರಿ ನಿಭಾಯಿಸಿದ್ದೇವೆ. ನದಿ ಪಾತ್ರಗಳಲ್ಲಿ ವಾಸಿಸುವ ಜನರೂ ಜಾಗೃತಗೊಳ್ಳಬೇಕು. ಮಳೆಗಾಲದ ಸಂದರ್ಭದಲ್ಲಿ ಎಚ್ಚರಿಕೆ ಬದುಕು ನಡೆಸಬೇಕು.• ಹರೀಶ ಡಿ.ವಿ,ಎಸ್‌ಡಿಆರ್‌ಎಫ್‌ತಂಡದ ಪಿಎಸ್‌ಐ, ಬೆಂಗಳೂರ

 

•ಶ್ರೀಶೈಲ ಕೆ. ಬಿರಾದಾರ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಜಮಖಂಡಿ: ಮಹಾರಾಷ್ಟ್ರದಲ್ಲಿ ಜು.27ರಿಂದ ಆ.18ರ ವರೆಗೆ ಸತತವಾಗಿ ಧಾರಾಕಾರ ಸುರಿದ ಮಳೆಯಿಂದ ತಾಲೂಕಿನ ಕೃಷ್ಣಾನದಿ ನಿರೀಕ್ಷೆಗೂ ಮೀರಿ ಹರಿದ ಪರಿಣಾಮ ಜನ-ಜಾನುವಾರುಗಳ...

  • ಮಲ್ಲೇಶ ಆಳಗಿ ಜಮಖಂಡಿ: ಅವತ್ತ ಬುಧವಾರ ರಾತ್ರಿ ಇತ್ರಿ. ನೀರು ಜಾಸ್ತಿ ಬರಬಹುದು, ನೀವು ಮನಿ ಖಾಲಿ ಮಾಡಬೇಕ್ರಿ ಅಂತ ಪಂಚಾಯಿತಿಯವರು ಹೇಳಿದ್ರು. ಒಮ್ಮೀ ನೀರ್‌...

  • ಜಮಖಂಡಿ: ನೆರೆ ನೆರವು ಸಂದಾಯ ಯೋಜನೆ ಅಡಿಯಲ್ಲಿ ಪ್ರವಾಹದಿಂದ ತೊಂದರೆ ಅನುಭವಿಸಿದ 9744 ಸಂತ್ರಸ್ತ ಕುಟುಂಬಗಳಿಗೆ ತುರ್ತು ಪರಿಹಾರವಾಗಿ 10 ಸಾವಿರ ರೂ.ಗಳಂತೆ ಈಗಾಗಲೇ...

  • ಅಮೀನಗಡ: ರಾತ್ರಿ ಮಲಕೊಂಡಾಗ ಏಕಾಏಕಿ ನೀರ ಬಂತ್ರಿ. ಉಟ್ಟ ಬಟ್ಟೆಯಲ್ಲಿ ಎದ್ದು ಹೊರಗ ಬಂದಿವಿ. ಹೊರಗ ಬಂದ ಎತ್ತರದ ಪ್ರದೇಶಕ್ಕ ಹೋಗಿ ಕುಂತೇವ್ರಿ. ಬೆಳಕು ಹರಿಯುವುದು...

  • ಬಾಗಲಕೋಟೆ: ಪ್ರವಾಹದಿಂದ ಹಾನಿಯಾದ ಕುಟುಂಬಗಳಿಗೆ ಪರಿಹಾರ ಹಾಗೂ ಶಾಶ್ವತ ಮನೆ ಕಲ್ಪಿಸಲು 5 ಲಕ್ಷ ನೀಡುವ ಯೋಜನೆಯನ್ನು ಒಂದು ಕುಟುಂಬದಲ್ಲಿ ಅಣ್ಣ-ತಮ್ಮಂದಿರು ಇದ್ದರೆ...

ಹೊಸ ಸೇರ್ಪಡೆ