ಮತದಾರರು ಹೆಚ್ಚಾದರೂ ಏರದ ಮತದಾನ !

Team Udayavani, Apr 25, 2019, 2:54 PM IST

ಬಾಗಲಕೋಟೆ: ಪ್ರಸ್ತುತ 17ನೇ ಲೋಕಸಭೆಗೆ ಮತದಾನ ಪೂರ್ಣಗೊಂಡಿದೆ. ಜಿಲ್ಲಾ ಸ್ವೀಪ್‌ ಸಮಿತಿ, ಹಲವಾರು ರೀತಿಯ ಮತದಾನ ಜಾಗೃತಿ ಮೂಡಿಸಿದರೂ ಜನರು ಮಾತ್ರ ಮತಗಟ್ಟೆಗೆ ಬಂದು ಮತದಾನ ಮಾಡುವಲ್ಲಿ ನಿಷ್ಕಾಳಜಿ ವಹಿಸಿರುವುದು ಕಂಡು ಬಂದಿದೆ.

ಹೌದು, ಕಳೆದ 2014ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ, ಈ ಬಾರಿ ಶೇ.1.73ರಷ್ಟು ಹೆಚ್ಚಳವಾಗಿದೆ ಎಂಬ ಖುಷಿಯಲ್ಲಿ ಜಿಲ್ಲಾಡಳಿತವಿದೆ. ಆದರೆ, ವಾಸ್ತವದಲ್ಲಿ ಕಳೆದ ಬಾರಿಗಿಂತ ಮತದಾನ ಪ್ರಮಾಣ ಶೇ.6.19ರಷ್ಟು ಕುಸಿದಿದೆ.

ಜಿಲ್ಲಾಡಳಿತದ ವಾದವೇನು: ವಾಸ್ತವಾಂಶ ಬದಿಗಿಟ್ಟು ಜಿಲ್ಲಾಡಳಿತ, ಬೇರೆಯದ್ದೇ ಸಾಧನೆ ಹೇಳುತ್ತಿದೆ. ಕಳೆದ ಬಾರಿ ಶೇ. 68.90ರಷ್ಟು ಮತದಾನವಾಗಿತ್ತು. ಈ ಬಾರಿ ಶೇ.70.63ರಷ್ಟು ಮತದಾನವಾಗಿದ್ದು, ಹೀಗಾಗಿ ಕಳೆದ ಬಾರಿಗಿಂತ ಶೇ.1.73ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಿದೆ ಎಂದು ಜಿಲ್ಲಾ ಸ್ವೀಪ್‌ ಸಮಿತಿ ಅಧ್ಯಕ್ಷರೂ ಆಗಿರುವ ಜಿಪಂ. ಸಿಇಒ ಗಂಗೂಬಾಯಿ ಮಾನಕರ ಹೇಳುತ್ತಾರೆ.

ಮತದಾನ ಜಾಗೃತಿಗಾಗಿ ಹಾಸ್ಯಸಂಜೆ, ಮತದಾರರ ಜಾತ್ರೆ, ಜಾನಪದ ಜಾತ್ರೆ, ಫ್ಯಾಶನ್‌ ಶೋ, ಅಡುಗೆ ಸ್ಪರ್ಧೆ ಹೀಗೆ ಹಲವು ಕಾರ್ಯಕ್ರಮ ನಡೆಸಲಾಗಿತ್ತು. ನಗರ- ಗ್ರಾಮೀಣ ಭಾಗದಲ್ಲೂ ಮತದಾನ ಜಾಗೃತಿ ಮಾಡಿದ್ದರಿಂದ, ಮತದಾನ ಪ್ರಮಾಣ ಹೆಚ್ಚಳವಾಗಿದೆ ಎಂದು ಅವರು ಸಮರ್ಥಿಸಿಕೊಳ್ಳುತ್ತಾರೆ.

ವಾಸ್ತವವೇನು?: ಕಳೆದ ಬಾರಿಗಿಂತ ಈ ಬಾರಿ ಶೇ.6.19ರಷ್ಟು ಮತದಾನ ಪ್ರಮಾಣ ಕುಸಿದಿದೆ. ಕಳೆದ ಬಾರಿ 7,911,118 ಪುರುಷರು, 7,74,552 ಮಹಿಳೆಯರು ಹಾಗೂ 107 ಇತರೇ ಸೇರಿ ಒಟ್ಟು 15,65,777 ಮತದಾರರಿದ್ದರು. ಅದರಲ್ಲಿ 5,61,494 ಪುರುಷರು, 5,17,311 ಮಹಿಳೆಯರು ಸೇರಿ ಒಟ್ಟು 10,78,805 ಜನ ಮತದಾನ ಮಾಡಿದ್ದರು. ಪುರುಷರು ಶೇ.70.97ರಷ್ಟು ಮತ ಹಾಕಿದ್ದರೆ, ಮಹಿಳೆಯರು ಶೇ.66.79ರಷ್ಟು ಜನ ತಮ್ಮ ಹಕ್ಕು ಚಲಾಯಿಸಿದ್ದರು.

ಈ ಬಾರಿ 8,50,381 ಪುರುಷರು, 8,50,074 ಮಹಿಳೆಯರು, 91 ಜನ ಇತರೆ ಸೇರಿ ಒಟ್ಟು 17,00,547 ಮತದಾರರಿದ್ದರು. ಅದರಲ್ಲಿ 6,19,725 (ಶೇ.72.88) ಪುರುಷರು, 5,81,290 (ಶೇ.68.38) ಮಹಿಳೆಯರು, 7 ಜನ (ಶೇ.7.69) ಇತರೇ ಸೇರಿ ಒಟ್ಟು 12,01,022 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು, ಒಟ್ಟಾರೆ, ಶೇ.70.63ರಷ್ಟು ಮತದಾನವಾಗಿದೆ.

ಮೂಲ ವಿಷಯ ಇರುವುದು ಇಲ್ಲಿಯೇ ಕಳೆದ ಬಾರಿಗಿಂತ ಈ ಬಾರಿ 1,34,770 ಜನ ಮತದಾರರು ಹೆಚ್ಚಳವಾಗಿದ್ದಾರೆ. ಈ ಹೆಚ್ಚಳವಾದ ಮತದಾರರ ಪ್ರಮಾಣವೂ ಒಳಗೊಂಡರೆ, ಒಟ್ಟಾರೆ (ಕಳೆದ ಬಾರಿಯಷ್ಟೇ ಮತದಾನವಾದರೂ) ಶೇ.78.55ರಷ್ಟು ಮತದಾನವಾಗಬೇಕಿತ್ತು. ಮತದಾರರು ಹೆಚ್ಚಾದಂತೆ ಮತದಾನ ಪ್ರಮಾಣವೂ ಹೆಚ್ಚಳವಾಗಬೇಕಿತ್ತು. ಅದು ಈ ಬಾರಿ ಆಗಿಲ್ಲ ಎಂಬುದು ವಾಸ್ತವಾಂಶ.

ಕಾರಣವೇನು?: ಮತದಾನ ಪ್ರಮಾಣ ಕಡಿಮೆಯಾಗಲು ಹಲವು ಕಾರಣ ಪ್ರಜ್ಞಾವಂತರು ಇಡುತ್ತಾರೆ. ಜಿಲ್ಲಾ ಕೇಂದ್ರಸ್ಥಾನವಾದ ಬಾಗಲಕೋಟೆ ವಿಧಾನಸಭೆ ಕ್ಷೇತ್ರದಲ್ಲೇ ಈ ಬಾರಿ ಅತಿ ಕಡಿಮೆ ಮತದಾನವಾಗಿದೆ. ಸುಶಿಕ್ಷಿತರು, ಪ್ರಜ್ಞಾವಂತರು ಇರುವ ಕ್ಷೇತ್ರ ಇದಾಗಿದ್ದು, ಮತಗಟ್ಟೆಗೆ ಬಂದು ಮತದಾನ ಮಾಡದೇ ಇರುವುದು ಕಂಡು ಬರುತ್ತದೆ.

ಯಾರು ಗೆದ್ದರೂ ಏನೂ ಮಾಡಲ್ಲ ಎಂಬ ನಿಷ್ಕಾಳಜಿ, ಮನೆಯ ಕೆಲಸ ಬಿಟ್ಟು ಸರತಿ ಸಾಲಿನಲ್ಲಿ ನಿಂತರೇನು ಲಾಭ, ಇಂತಹ ಬಿಸಿಲಿನಲ್ಲಿ ಓಟ ಹಾಕಿ ಏನ್‌ ಮಾಡೋದು ಎಂಬ ಮಾತುಗಳು ಹಲವು ಮತದಾರರಿಂದ ಕೇಳಿ ಬರುತ್ತವೆ. ಅಲ್ಲದೇ ಈ ವರೆಗೆ ಯಾರೇ ಗೆದ್ದರೂ, ಸಾಮಾನ್ಯರಿಂದ ಹಿಡಿದು, ಶ್ರೀಸಾಮಾನ್ಯರವರೆಗೂ ಪರಿಚಯದ ಅಭಿವೃದ್ಧಿ ಕೆಲಸವಾಗಲಿ, ಮತದಾರರೊಂದಿಗೆ ಉತ್ತಮ ಸಂಪರ್ಕವಾಗಲಿ ಇಟ್ಟುಕೊಂಡಿಲ್ಲ. ಹೀಗಾಗಿ ಯಾರು ಗೆದ್ದರೆ ನಮಗೇನು ಎಂಬ ಭಾವನೆ ಬಹುತೇಕರಲ್ಲಿದೆ. ಇದು, ಮತದಾನ ಪ್ರಮಾಣ ಕಡಿಮೆಯಾಗಲು ಕಾರಣ ಎಂಬ ವಿಶ್ಲೇಷಣೆಯ ಮಾತು ಕೇಳಿ ಬಂದಿವೆ.

ಜಿಲ್ಲೆಯಲ್ಲಿ ಸ್ವೀಪ್‌ ಸಮಿತಿಯಿಂದ ಕೈಗೊಂಡ ಮತದಾನ ಜಾಗೃತಿ ಬಹುತೇಕ ಯಶಸ್ವಿಯಾಗಿದೆ. ಕಳೆದ ಬಾರಿಗಿಂತ ಮತದಾನ ಪ್ರಮಾಣ ಹೆಚ್ಚಿಸಬೇಕು ಎಂಬುದು ನಮ್ಮ ಗುರಿಯಾಗಿತ್ತು. ಕಳೆದ ಬಾರಿಗಿಂತ ಶೇ.1.73 ಪ್ರಮಾಣ ಹೆಚ್ಚಳವಾಗಿದೆ. ಈ ಬಾರಿ ಒಟ್ಟಾರೆ ಶೇ.70.63 ಮತದಾನವಾಗಿದೆ.

•ಗಂಗೂಬಾಯಿ ಮಾನಕರ, ಸ್ವೀಪ್‌ ಸಮಿತಿ ಅಧ್ಯಕ್ಷರು ಹಾಗೂ ಜಿಪಂ ಸಿಇಒ

ಹಲವು ಭರವಸೆ ನೀಡಿ, ಮತ ಪಡೆಯುವ ಜನಪ್ರತಿನಿಧಿಗಳು ಗೆದ್ದ ಬಳಿಕ ಜನರ ಕಷ್ಟವೇ ಕೇಳುವುದಿಲ್ಲ. ಕನಿಷ್ಠ ಪಕ್ಷ ಭೇಟಿಯೂ ಆಗಲ್ಲ. ಹೀಗಾಗಿ ಮತದಾನ ಮಾಡಿದರೂ ಏನು ಪ್ರಯೋಜನ ಎಂಬ ನಿಷ್ಕಾಳಜಿ ಜನರಲ್ಲಿದೆ. ರಾಜಕಾರಣಿಗಳು ಈ ಪ್ರವೃತ್ತಿ ಬದಲಿಸಿಕೊಂಡು, ಅಭಿವೃದ್ಧಿಪರ ಕೆಲಸ ಮಾಡಿದರೆ ಮಾತ್ರ ಮತದಾನ ಪ್ರಮಾಣ ಹೆಚ್ಚಾದೀತು.

•ಗಿರೀಶ ಪಾಟೀಲ, ಸಂಚಾಲಕ, ಘಟಪ್ರಭಾ ಬಲದಂಡೆ ನೀರಾವರಿ ಹೋರಾಟ ಸಮಿತಿ, ಕಗಲಗೊಂಬ

(ಕಳೆದ ಬಾರಿಗಿಂತ 1,34,770 ಮತದಾರರು ಹೆಚ್ಚಳವಾಗಿದ್ದು, ಮತದಾರರು ಹೆಚ್ಚಳವಾದ ಹಿನ್ನೆಲೆಯಲ್ಲಿ ಕಳೆದ ಬಾರಿಗೆ ಹೋಲಿಸಿದರೆ, ಈ ಬಾರಿ ಶೇ.7.92ರಷ್ಟು ಮತದಾನ ಪ್ರಮಾಣ ಹೆಚ್ಚಳವಾಗಬೇಕಿತ್ತು. ಆದರೆ, ಶೇ.1.73ರಷ್ಟು ಮತದಾನ ಮಾತ್ರ ಹೆಚ್ಚಳವಾಗಿದೆ)
•ಶ್ರೀಶೈಲ ಕೆ. ಬಿರಾದಾರ

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ