ಬಸ್‌ ನಿಲ್ದಾಣ ಉದ್ಘಾಟನೆ ಎಂದು?

Team Udayavani, Oct 20, 2019, 12:45 PM IST

ಅಮೀನಗಡ: ಬರೋಬ್ಬರಿ ಅರ್ಧಕೋಟಿ ಖರ್ಚು ಮಾಡಿ ಪ್ರಯಾಣಿಕರಿಗೆ ಅನುಕೂಲವಾಗಲೆಂದು ನಿರ್ಮಿಸಿದ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣ ಅನಾಥವಾಗಿ ನಿಂತಿದೆ. ಸೂಳೇಭಾವಿ ಸುಂದರ ಬಸ್‌ ನಿಲ್ದಾಣ ನಿರ್ಮಾಣಗೊಂಡು ವರ್ಷ ಕಳೆದರೂ ಉದ್ಘಾಟನೆ ಭಾಗ್ಯ ಸಿಕ್ಕಿಲ್ಲ.

ಹೌದು, ಸೂಳೇಭಾವಿ ಗ್ರಾಮದ ಬಹುದಿನಗಳ ಬೇಡಿಕೆ ನೂತನ ಬಸ್‌ ನಿಲ್ದಾಣ ಕಾಮಗಾರಿ ಬಹುತೇಕ ಮುಗಿದಿದೆ. ಸುಣ್ಣ-ಬಣ್ಣಗಳಿಂದ ಕಂಗೊಳಿಸುತ್ತಿರುವ ಬಸ್‌ ನಿಲ್ದಾಣ ಈಗ ಉದ್ಘಾಟನೆಗೆ ಸಜ್ಜಾಗಿದೆ. 50 ಲಕ್ಷ ರೂ. ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡಿರುವ ಸಾರಿಗೆ ಸಂಸ್ಥೆ ಬಸ್‌ ನಿಲ್ದಾಣದ ಕಾಮಗಾರಿ ಪೂರ್ಣಗೊಂಡು ಆಗಲೇ ಒಂದು ವರ್ಷ ಕಳೆದಿವೆ. ಹೊಸ ಬಸ್‌ ನಿಲ್ದಾಣ ಉದ್ಘಾಟನೆ ಕಂಡಿಲ್ಲ. ಹೀಗಾಗಿ ಹೊಸದಾಗಿ ಅಳವಡಿಸಿದ್ದ ಕಿಟಕಿ, ಗಾಜು ಎಲ್ಲವೂ ಪುಡಿಯಾಗಿವೆ. ವರ್ಷವಾದರೂ ಕೂಡಾ ಉದ್ಘಾಟನೆ ಭಾಗ್ಯ ಕಾಣದ ಗ್ರಾಮದ ನೂತನ ಬಸ್‌ ನಿಲ್ದಾಣದಲ್ಲಿ ರಾತ್ರಿಯಾಗುತ್ತಿದ್ದಂತೆ ಕೆಲ ಕಿಡಿಗೇಡಿಗಳ ಕಾಟ ಹೆಚ್ಚುತ್ತದೆ.

ಕೆಲವರು ಬಸ್‌ ನಿಲ್ದಾಣದ ಕಟ್ಟಡದಲ್ಲಿ ಮಧ್ಯ ಸೇವಿಸುತ್ತಿದ್ದಾರೆ. ಎಲ್ಲೆಂದರಲ್ಲಿ ಮದ್ಯದ ಬಾಟಲಿ, ಪೌಚಗಳು ಬಿದ್ದಿವೆ. ಸ್ವಚ್ಚತೆ ಸಿಬ್ಬಂದಿ ಇಲ್ಲದಿರುವುದರಿಂದ ಅಸ್ವಚ್ಚತೆ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಂದರಲ್ಲಿ ಕಸದ ರಾಶಿ ಬಿದ್ದಿದೆ. ಗುಟ್ಕಾ ತಿಂದು ಉಗಿಯಲಾಗಿದೆ. ಕಸ ಕಡ್ಡಿ ಪ್ಲಾಸ್ಟಿಕ, ಸಿಗರೇಟ್‌ ಪ್ಯಾಕ್‌ ಸೇರಿದಂತೆ ಎಲ್ಲೆಂದರಲ್ಲಿ ಉಗುಳುವ ಮೂಲಕ ಹೊಸ ಬಸ್‌ ನಿಲ್ದಾಣ ನೋಡಲಾಗದ ಸ್ಥಿತಿ ತಲುಪಿದೆ. ಕೆಲ ಕಿಡಿಗೇಡಿಗಳು ನೂತನವಾಗಿ ನಿರ್ಮಾಣಗೊಂಡ ಬಸ್‌ ನಿಲ್ದಾಣದ ಕಿಟಕಿಯ ಗ್ಲಾಸ್‌ ಮುರಿದು ಹಾಕಿದ್ದಾರೆ.

ಶೌಚಾಲಯ ಸುತ್ತ ಕಸದ ರಾಶಿ: ನೂತನವಾಗಿ ನಿರ್ಮಾಣವಾಗಿರುವ ಸೂಳೇಭಾವಿ ಬಸ್‌ ನಿಲ್ದಾಣದಲ್ಲಿ ನಿರ್ಮಾಣಗೊಂಡ ಶೌಚಾಲಯಗಳ ಸುತ್ತ ಕಸದ ಗಿಡಗಳು ಬೆಳೆದು ನಿಂತಿವೆ. ಅಲ್ಲಿಗೆ ಹೋಗಿ ಬರಲು ಸಾಧ್ಯವಾಗದಷ್ಟು ಈ ಕಸದ ಗಿಡಗಳು ಬೆಳೆದು ನಿಂತಿವೆ. ಆವರಣದ ಸುತ್ತಲಿನ ಪ್ರದೇಶ ಸ್ವಚ್ಚವಾಗಿಟ್ಟುಕೊಳ್ಳುವಲ್ಲಿ ಸಾರಿಗೆ ಸಂಸ್ಥೆ ಸಿಬ್ಬಂದಿ ನಿರ್ಲಕ್ಷ್ಯ ತೋರಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಕೂಡಲೇ ಸಾರಿಗೆ ಸಂಸ್ಥೆಯ ಹಿರಿಯ ಅಧಿಕಾರಿಗಳು, ಜನಪ್ರತಿನಿಧಿಗಳು ಇನ್ನಾದರೂ ಸೂಳೇಬಾವಿಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಬಸ್‌ ನಿಲ್ದಾಣ ಉದ್ಘಾಟಿಸಿ, ಪ್ರಯಾಣಿಕರ ಸೌಲಭ್ಯ ಕಲ್ಪಿಸಬೇಕು. ಸೇವೆಗೆ ಒದಗುವ ಮೊದಲೇ ಕಿಟಕಿ-ಗಾಜು ಪುಡಿಯಾಗಿದ್ದು ದುರಸ್ತಿ ಮಾಡಬೇಕು. ಬಸ್‌ ನಿಲ್ದಾಣದ ಆವರಣ ಸುತ್ತ ಸ್ವತ್ಛತೆ ಮಾಡಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.

ತಾಂತ್ರಿಕ ತೊಂದರೆಯಿಂದ ಉದ್ಘಾಟನೆ ತಡವಾಗಿದೆ. ಹಿರಿಯ ಅಧಿಕಾರಿಗಳ, ಕ್ಷೇತ್ರದ ಶಾಸಕರ ಜತೆ ಚರ್ಚೆ ಮಾಡಿ ಶೀಘ್ರ ಸೂಳೇಭಾವಿಯಲ್ಲಿ ಬಸ್‌ ನಿಲ್ದಾಣ ಉದ್ಘಾಟನೆ ಮಾಡಲಾಗುವುದು. ಬಸ್‌ ನಿಲ್ದಾಣ ಆವರಣದಲ್ಲಿ ಮುಂದಿನ ವರ್ಷ ಡಾಂಬರಿಕರಣ ಕಾಮಗಾರಿ ಮಾಡಲಾಗುವುದು. ಎಸ್‌.ಪಿ. ಕಡ್ಲಿಮಟ್ಟಿ, ಇಂಜಿನಿಯರ್‌, ಸಾರಿಗೆ ಸಂಸ್ಥೆ

 ಸೂಳೇಭಾವಿಯ ಬಹುದಿನಗಳ ಕನಸು ಬಸ್‌ ನಿಲ್ದಾಣ ನಿರ್ಮಾಣಗೊಂಡಿದ್ದು ನಮಗೆ ಸಂತಸವಾಗಿದೆ. ಆದರೆ ಬಸ್‌ ನಿಲ್ದಾಣ ನಿರ್ಮಾಣಗೊಂಡು ವರ್ಷವಾದರೂ ಉದ್ಘಾಟನೆಯಾಗಿಲ್ಲ . ಇದರಿಂದ ಹೊಸ ಬಸ್‌ ನಿಲ್ದಾಣದಲ್ಲಿ ಅಸ್ವಚ್ಚತೆ ನಿರ್ಮಾಣವಾಗಿದೆ. ಕೂಡಲೇ ಉದ್ಘಾಟಿಸಿ ಪ್ರಯಾಣಿಕರ ಉಪಯೋಗಕ್ಕೆ ಮುಕ್ತಗೊಳಿಸಬೇಕು.-ನಾಗೇಂದ್ರಸಾ ನಿರಂಜನ್‌, ಅಧ್ಯಕ್ಷರು, ಸೂಳೇಭಾವಿ ಗ್ರಾಪಂ

 

-ವಿಶೇಷ ವರದಿ

 

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ