ತುಳಸಿಗೇರಿ ಯಾತ್ರಿ ನಿವಾಸ ಉದ್ಘಾಟನೆ ಎಂದು?

Team Udayavani, Nov 15, 2019, 11:45 AM IST

ಕಲಾದಗಿ: ತುಳಸಿಗೇರಿ ಹನುಮಪ್ಪನ ಯಾತ್ರಿ ನಿವಾಸ ಕಟ್ಟಡ ನಿರ್ಮಾಣಗೊಂಡು ಮೂರು ವರ್ಷ ಕಳೆದರೂ ಇನ್ನೂ ಲೋಕಾರ್ಪಣೆಗೊಂಡಿಲ್ಲ. ಬೆಳಗಾವಿ- ರಾಯಚೂರು ಹೆದ್ದಾರಿ ಪಕ್ಕದಲ್ಲಿ 1 ಕೋಟಿ ರೂ. ಅನುದಾನದಲ್ಲಿ ಹೈಟೆಕ್‌ ಯಾತ್ರಿ ನಿವಾಸ ನಿರ್ಮಾಣಗೊಂಡಿದೆ.

ಕೆಳಮಹಡಿ ಮತ್ತು ಮೊದಲ ಮಹಡಿ ಒಳಗೊಂಡಿದೆ. ಯಾತ್ರಿ ನಿವಾಸ ಕೆಳಮಹಡಿಯಲ್ಲಿ 8 ಕೊಠಡಿಗಳು ಹೈಟೆಕ್‌ ಸೌಲಭ್ಯ ಹೊಂದಿವೆ. ಈ ಹೈಟೆಕ್‌ ಯಾತ್ರಿ ನಿವಾಸಕ್ಕೆ ಅಂದಿನ ಶಾಸಕರಾಗಿದ್ದ ಜೆ.ಟಿ. ಪಾಟೀಲ ಅವರು 2016, ಸೆ.28ರಂದು ಅಡಿಗಲ್ಲು ಪೂಜೆ ನೆರವೇರಿಸಿದ್ದರು.

2017ರ ಜಾತ್ರೆಯ ಮೊದಲೇ ಇದು ಉದ್ಘಾಟನೆಯಾಗಬೇಕೆಂದು ಸೂಚಿಸಿದ್ದರು. ನೂತನ ಹೈಟೆಕ್‌ ಯಾತ್ರಿ ನಿವಾಸ ನೂತನ ಮಾದರಿಯಲ್ಲಿ ನಿರ್ಮಿಸಿರುವ ಕೊಠಡಿಗಳಲ್ಲಿ ವಿದ್ಯುತ್‌ ತಂತಿಗಳು, ವಿದ್ಯುದ್ದೀಪಗಳು, ಸ್ವಿಚ್‌ಗಳು ಕಿತ್ತೋಗಿವೆ. ಕೆಲವುಗಳನ್ನು ದೋಚಿದ್ದಾರೆ. ಪ್ರಮುಖ ದ್ವಾರಬಾಗಿಲಿನ ಬಳಿ ಇರುವ ಕಿಟಕಿಯ ಗ್ಲಾಸ್‌ಗಳು ಒಡೆದು ಪುಡಿ-ಪುಡಿಯಾಗಿವೆ. ಕೆಲವು ಕೋಣೆಗಳ ಗ್ಲಾಸ್‌ಗಳು ಒಡೆದಿವೆ. ಶೌಚಾಲಯದಲ್ಲಿ ಹಾಕಿದ್ದ ಹೈಟೆಕ್‌ ನಲ್ಲಿಗಳು, ಪರಿಕರಗಳು ಕಾಣೆಯಾಗಿವೆ.

ಕುಡುಕರ ಅಡ್ಡೆ: ಕೆಲವು ಕೋಣೆಗಳಲ್ಲಿ ಎಲ್ಲೆಂದರಲ್ಲಿ ಬಿಯರ್‌ ಬಾಟಲಿ, ಮದ್ಯದ ಪಾಕೆಟ್‌ಗಳು ಬಿದ್ದಿವೆ. ಇಸ್ಪೀಟ್‌ ಎಲೆಗಳು ಕೊಠಡಿಯಲ್ಲಿವೆ. ಶೌಚಾಲಯಗಳು ಗಬ್ಬು ನಾರುತ್ತಿದೆ. ಯಾತ್ರಿ ನಿವಾಸಕ್ಕೆ ದಿಕ್ಕು ದಿಸೆ ಇಲ್ಲದಂತಾಗಿದೆ. ಡಿ. 14ರಿಂದ 22ರವರೆಗೆ ನಡೆಯುವ ಜಾತ್ರಾ ಮಹೋತ್ಸವಕ್ಕಾದರೂ ಯಾತ್ರಿ ನಿವಾಸ ಭಕ್ತರಿಗೆ ಲಭ್ಯವಾಗಲಿ ಎಂಬುದು ಭಕ್ತರ ಆಶಯವಾಗಿದೆ.

ಯಾತ್ರಿ ನಿವಾಸಕ್ಕೆ ಅಗತ್ಯ ಪೀಠೊಪಕಣಗಳ ಅವಶ್ಯತೆಯಿದೆ. ಎಲ್ಲ ವ್ಯವಸ್ಥೆ ಮಾಡಿಕೊಂಡು, ಅಧಿ ಕಾರಿಗಳ ಜತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವೆ. ಮುರುಗೇಶ ನಿರಾಣಿ, ಬೀಳಗಿ ಶಾಸಕರು.

ಮುಜರಾಯಿ ಇಲಾಖೆ ಅನುದಾನದಲ್ಲಿ ನಿರ್ಮಿತಿ ಕೇಂದ್ರದವರು ಯಾತ್ರಿ ನಿವಾಸ ನಿರ್ಮಿಸಿದ್ದಾರೆ. 1 ಕೋಟಿ ರೂ. ಅನುದಾನದಲ್ಲಿ ನಿರ್ಮಿಸಿದ ಯಾತ್ರಿ ನಿವಾಸ ನಿರ್ಮಾಣಗೊಂಡು 3 ವರ್ಷ ಕಳೆದರೂ ಲೋಕಾರ್ಪಣೆ ಮಾಡದಿರುವುದು ಅ ಧಿಕಾರಿಗಳ, ಜನಪ್ರತಿನಿಧಿಗಳ ನಿರ್ಲಕ್ಷ ಎದ್ದು ಕಾಣುತ್ತಿದೆ. – ಹನಮಂತ ಹೊಸಕೋಟಿ, ತುಳಸಿಗೇರಿ ಗ್ರಾಮಸ್ಥ

ತುಳಸಿಗೇರಿ ಹನಮಪ್ಪನ ಭಕ್ತರಿಗೆ ಅನುಕೂಲವಾಗುವ ಉದ್ದೇಶದಿಂದ ಯಾತ್ರಿ ನಿವಾಸ ನಿರ್ಮಾಣವಾಗಿದೆ. ಆದರೆ ಲೋಕಾರ್ಪಣೆಗೂ ಮುನ್ನವೇ ನಿವಾಸ ದುಸ್ಥಿತಿಗೆ ತಲುಪಿರುವುದು ವಿಪರ್ಯಾಸ. –ವೆಂಕಟೇಶ ಕೊಳಚಿ, ತುಳಸಿಗೇರಿ ಗ್ರಾಮಸ್ಥ

 

ಚಂದ್ರಶೇಖರ.ಆರ್‌.ಎಚ್‌


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ