ಕುಸಿದ ಸೇತುವೆ ಮೇಲೆ ಜನರ ಸರ್ಕಸ್

ನಿತ್ಯ ಭಯದಲ್ಲೇ ಗ್ರಾಮಸ್ಥರ ಸಂಚಾರ10 ತಿಂಗಳಾದರೂ ದುರಸ್ತಿಯಾಗದ ಸೇತುವೆ

Team Udayavani, Apr 18, 2019, 5:30 PM IST

ಬೈಲಹೊಂಗಲ: ಬೇವಿನಕೊಪ್ಪ-ಸಂಗೊಳ್ಳಿ ಮಾರ್ಗದಲ್ಲಿ ಹಾಳಾಗಿರುವ ಸೇತುವೆ ಮೇಲೆ ಸಂಚರಿಸುತ್ತಿರುವ ಬೈಕ್‌ ಸವಾರರು.

ಬೈಲಹೊಂಗಲ: ತಾಲೂಕಿನ ಬೇವಿನಕೊಪ್ಪ-ಸಂಗೊಳ್ಳಿ ಗ್ರಾಮಗಳ ನಡುವೆ ಮಲಪ್ರಭಾ ನದಿಗೆ ನಿರ್ಮಿಸಿದ್ದ ಸೇತುವೆ (ಬಾಂದಾರ್‌) ಕೊಚ್ಚಿ ಹೋಗಿ 10 ತಿಂಗಳಾಗಿದ್ದರೂ ಅ ಧಿಕಾರಿಗಳು ದುರಸ್ತಿ ಮಾಡದಿರುವದರಿಂದ ವಾಹನ ಸಂಚಾರಕ್ಕೆ ಗ್ರಾಮಸ್ಥರು
ಪರದಾಡುವಂತಾಗಿದೆ.

ಕಳೆದ ಬಾರಿ ಖಾನಾಪುರ ಭಾಗದಲ್ಲಿ ಧಾರಾಕಾರವಾಗಿ ಮಳೆ ಸುರಿದಿದ್ದರಿಂದ ಮಲಪ್ರಭಾ ನದಿಯಲ್ಲಿ ನೀರಿನ ಪ್ರವಾಹ ಹೆಚ್ಚಾಗಿ 2018ರ ಜೂನ್‌ ತಿಂಗಳಲ್ಲಿ ಮಳೆ ನೀರಲ್ಲಿ ಸೇತುವೆ ಕೊಚ್ಚಿಕೊಂಡು ಹೋಗಿತ್ತು. ಸೇತುವೆ ಕೊಚ್ಚಿ ಹೋಗಿದ್ದರಿಂದ ನೀರಾವರಿ ಇಲಾಖೆ
ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.

ಸೇತುವೆ ಕೊಚ್ಚಿ ಹೋದ ಸ್ಥಳದಲ್ಲಿ ಮಾತ್ರ ಮಣ್ಣು ಹಾಕಿ, ಅದಕ್ಕೆ ತೇಪೆ ಹಾಕುವ ಕೆಲಸ ಮಾಡಲಾಗಿತ್ತು. ಇನ್ನೇನು ಸೇತುವೆಗೆ ಸೌಲಭ್ಯ ಸಿಕ್ಕಿತೆಂದು ಅಂದುಕೊಳ್ಳುವಾಗಲೇ 2019ರ ಫೆಬ್ರವರಿ ತಿಂಗಳಲ್ಲಿ ಸೇತುವೆ ಕುಸಿದು ಬಿದ್ದು ಸಂಚರಿಸುತ್ತಿದ್ದ ಕಾರು ಮಲಪ್ರಭಾ ನದಿ ಪಾಲಾಗಿತ್ತು. ಅಲ್ಲಿ ಸ್ಥಳದಲ್ಲಿದ್ದ ಜನ ನೆರವಿಗೆ ಬಂದು ಕಾರಿನಲ್ಲಿದ್ದ ಇಬ್ಬರ ಪ್ರಾಣ ಉಳಿಸಿದ್ದರು. ನಿರಂತರವಾಗಿ ಒಂದಿಲ್ಲೊಂದು ಅವಾಂತರ ನಡೆದರೂ ಅ ಧಿಕಾರಿಗಳು ಎಚ್ಚರಗೊಳ್ಳದ ಕಾರಣ ಈ ಸೇತುವೆಯ ಸಮಸ್ಯೆ ಇನ್ನೂವರೆ‌ಗೆ ಬಗೆಹರಿದಿಲ್ಲ ಎಂದು ಬೇವಿನಕೊಪ್ಪ ಮತ್ತು ಸಂಗೊಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ದೂರಿದ್ದಾರೆ.

ಸಂಚಾರಕ್ಕೆ ಸೇತುವೆ ಆಸರೆ: ಮಲಪ್ರಭಾ ನದಿಯ ಎರಡು ಬದಿಗೆ ಸಂಗೊಳ್ಳಿ ಮತ್ತು ಬೇವಿನಕೊಪ್ಪ ಗ್ರಾಮಗಳಿವೆ. ಎರಡೂ ಕಡೆಗಳಲ್ಲಿ ರೈತರ ಕೃಷಿಭೂಮಿಗಳಿವೆ. ರೈತರು ಮತ್ತು ಗ್ರಾಮಸ್ಥರಿಗೆ ಸಂಚಾರಕ್ಕೆ ಆಸರೆಯಾಗಿರುವುದು ಇದೊಂದೇ ಸೇತುವೆ. ಸಂಗೊಳ್ಳಿ ಗ್ರಾಮಸ್ಥರು ಈ ಸೇತುವೆ ಮುಖಾಂತರವಾಗಿ ಸಂಚರಿಸಿದರೆ,
ಎಂಟೇ ಕಿ.ಮೀ. ದೂರದಲ್ಲಿ ತಾಲೂಕು ಕೇಂದ್ರ ಬೈಲಹೊಂಗಲಕ್ಕೆ ತಲುಪಬಹುದು. ಆದರೆ ಈಗ ಸೇತುವೆ ಮೇಲೆ ಸಂಚಾರ ಸ್ಥಗಿತಗೊಂಡಿರುವ ಕಾರಣ ಬೈಲಹೊಂಗಲಕ್ಕೆ ಹೋಗಲು ಗರ್ಜೂರ ಮತ್ತು ಕೆಂಗಾನೂರ ಮುಖಾಂತರವಾಗಿ ಸುತ್ತು ಬಳಸಿ 18
ಕಿ.ಮೀ. ದೂರ ಪ್ರಯಾಣಿಸಬೇಕಾಗಿದೆ ಎಂದು ಸಂಗೊಳ್ಳಿ ಗ್ರಾಮದ ನಾಗರಿಕ ಉಮೇಶ ಲಾಳ್‌ ಅಳಲು ತೊಂಡಿಕೊಂಡಿದ್ದಾರೆ.

ಸಂಗೊಳ್ಳಿ-ಬೇವಿನಕೊಪ್ಪ ಗ್ರಾಮಗಳ ನಡುವೆ ಸಂಪರ್ಕ ಕಲ್ಪಿಸುವ ಸೇತುವೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. ಕೆಲ ತಾಂತ್ರಿಕ ಸಮಸ್ಯೆಗಳಿಂದ ವಿಳಂಬವಾಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಎರಡು ಗ್ರಾಮಗಳ ಸಂಚಾರಕ್ಕೆ ಅನುಕೂಲ ಮಾಡಲಾಗುವುದು.‌ ಕಳೆದ ವರ್ಷ ಮಳೆಗಾಲದಲ್ಲೇ ಸೇತುವೆ ಮುಂಭಾಗದ ಮಣ್ಣು ಸಂಪೂರ್ಣ ಕೊಚ್ಚಿ ಹೋಗಿದ್ದು, ಈವರೆಗೂ
ಅಧಿಕಾರಿಗಳು ದುರಸ್ತಿಗೊಳಿಸಿಲ್ಲ. ನಿತ್ಯ ಬೈಕ್‌ ಸವಾರರು ಭಯದಲ್ಲೇ ಈ ಸೇತುವೆ ಮೇಲೆ ಸಂಚರಿಸುವಂತಾಗಿದೆ. ಶೀಘ್ರವೇ
ಸೇತುವೇ ದುರಸ್ತಿಗೊಳಸದಿದ್ದರೆ ಹೋರಾಟ ಮಾಡಲಾಗುವುದು.
ಬಸವರಾಜ ಕೊಡ್ಲಿ,
ಸಂಗೊಳ್ಳಿ ಗ್ರಾಪಂ ಉಪಾಧ್ಯಕ್ಷ

ಸಿ.ವೈ. ಮೆಣಶಿನಕಾಯಿ


ಈ ವಿಭಾಗದಿಂದ ಇನ್ನಷ್ಟು

  • ಬೆಂಗಳೂರು: ಸಮಸ್ಯೆಗೆ ಸೂಚಿಸಿದ ಪರಿಹಾರವೇ ಸಮಸ್ಯೆಯಾಗಿ ಪರಿಣಮಿಸಿದರೆ ಏನಾಗಬಹುದು? ಇದನ್ನು ತಿಳಿಯಲು ನೀವು ಒಮ್ಮೆ ಕೆ.ಆರ್‌.ಪುರದ ಟಿನ್‌ ಫ್ಯಾಕ್ಟರಿ ರಸ್ತೆಯಲ್ಲಿ...

  • ಬೆಂಗಳೂರು: ರೈತರ ಸಮಸ್ಯೆ, ನೆಲ, ಜಲಕ್ಕೆ ಸಂಬಂಧಿಸಿದ ಕನ್ನಡ ಪರ ಹೋರಾಟಗಳ ಸಂದರ್ಭದಲ್ಲಿ ಚಿತ್ರರಂಗ ಒಂದಾಗುತ್ತದೆ ಎಂದು ಚಿತ್ರನಟ ಶಿವರಾಜ್‌ಕುಮಾರ್‌ ಹೇಳಿದರು. ಕನ್ನಡ...

  • ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ಮೋದಿ ಅಲೆಯಲ್ಲಿ ಬಿಜೆಪಿ ಜಯಭೇರಿ ಬಾರಿಸಿದ್ದು, ರಾಜ್ಯದಲ್ಲೂ ಪಕ್ಷ ಇಟ್ಟುಕೊಂಡಿದ್ದ ಗುರಿ ತಲುಪಲು ಶ್ರಮಿಸಿದ...

  • ಬೆಂಗಳೂರು: ಚುನಾವಣೆ ಫ‌ಲಿತಾಂಶ ಹೊರ ಬಿದ್ದು ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೆ ಅಧಿಕಾರ ಹಿಡಿದಿದೆ. ಈ ಸಂದರ್ಭದಲ್ಲಿ ದೇಶ, ರಾಜ್ಯ ಹಾಗೂ ನನ್ನ ಕ್ಷೇತ್ರದ...

  • ಬೆಂಗಳೂರು: ಬಿಬಿಎಂಪಿ ವತಿಯಿಂದ ನಗರದಲ್ಲಿ ಕೈಗೊಂಡಿರುವ ಕಾಮಗಾರಿಗಳನ್ನು ಮಳೆಗಾಲ ಆರಂಭವಾಗುವಷ್ಟರಲ್ಲಿ ಪೂರ್ಣಗೊಳಿಸುವಂತೆ ಮೇಯರ್‌ ಗಂಗಾಂಬಿಕೆ ಅಧಿಕಾರಿಗಳಿಗೆ...

ಹೊಸ ಸೇರ್ಪಡೆ