ಮೂಳೆ ಗಟ್ಟಿಯಾಗಿದ್ದರೆ ದೇಹ ಸದೃಢ: ಡಾ| ನರೇಂದ್ರ
150ಕ್ಕೂ ಹೆಚ್ಚು ಜನರಿಗೆ ಉಚಿತ ಆರೋಗ್ಯ ತಪಾಸಣೆ
Team Udayavani, Jun 17, 2019, 4:19 PM IST
ಬಾಳೆಹೊನ್ನೂರು: ಮಸೀದಿಕೆರೆ ಅಲ್ ಬದ್ರಿಯಾ ಶಾದಿಮಹಲ್ ಸಭಾಂಗಣದಲ್ಲಿ ಉಚಿತ ಮೂಳೆ ಸಾಂದ್ರತೆ ತಪಾಸಣಾ ಶಿಬಿರ ನಡೆಯಿತು.
ಬಾಳೆಹೊನ್ನೂರು: ಚಿಕ್ಕಂದಿನಿಂದಲೇ ಮೂಳೆಗಳ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಿದರೆ ವಯಸ್ಸಾದಾಗ ಮೂಳೆ ಸಂಬಂಧಿ ಕಾಯಿಲೆಗಳು ಕಂಡು ಬರುವುದು ಕಡಿಮೆಯಾಗುತ್ತದೆ ಎಂದು ಉಡುಪಿಯ ಸುನಾಗ್ ಆಸ್ಪತ್ರೆಯ ಆಡಳಿತ ನಿದೆೇರ್ಶಕ ಹಾಗೂ ಮೂಳೆ ತಜ್ಞ ಡಾ| ನರೇಂದ್ರ ಕುಮಾರ್ ಹೇಳಿದರು.
ಅವರು ಪಟ್ಟಣ ಸಮೀಪದ ಮಸೀದಿಕೆರೆ ಅಲ್ ಬದ್ರಿಯಾ ಶಾದಿಮಹಲ್ ಸಭಾಂಗಣದಲ್ಲಿ ಬಾಳೆಹೊನ್ನೂರು ಟೀಂ ಜಾಗೃತ್ ಸಹಾಯ ಹಸ್ತ, ಉಡುಪಿಯ ಹೆಚ್.ಎಲ್. ಸುಬ್ರಹ್ಮಣ್ಯ ಸ್ಮಾರಕ ಸುನಾಗ್ ಆರ್ಥೋಕೇರ್ ಮತ್ತು ಮಲ್ಟಿಸ್ಪೆಷಾಲಿಟಿ ಸೆಂಟರ್ ಮತ್ತು ಇಂಪಾಲ್ ಗ್ರೂಪ್ಸ್ ನ ಮಾಲೀಕ ಟಿ.ಎಂ.ನಾಸೀರ್ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಮೂಳೆ ಸಾಂದ್ರತೆ ತಪಾಸಣೆ, ಬೆನ್ನು ನೋವು, ಸಂವಾತ, ಕ್ರೀಡಾಚಟುವಟಿಕೆ ನೋವು, ಗಂಟು ಮರು ಜೋಡಣೆ, ದಂತ ಚಿಕಿತ್ಸೆ ಬಗ್ಗೆ ಮಾಹಿತಿ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಮೂಳೆಗಳು ಗಟ್ಟಿಮುಟ್ಟಾಗಿದ್ದರೆ ಮಾತ್ರ ದೇಹ ಗಟ್ಟಿಯಾಗಿರಲು ಸಾಧ್ಯ, ಅಲ್ಲದೆ ಮೂಳೆಗಳ ಆರೋಗ್ಯ ಕಾಪಾಡಲು ಸಮತೋಲನ ಆಹಾರ ಅಗತ್ಯವಾಗಿದೆ. ಮೂಳೆನೋವು, ಮೂಳೆ ಸವೆತ, ಮೂಳೆ ಕ್ಯಾನ್ಸರ್ ಲಕ್ಷಣಗಳು ಹಾಗೂ ಮೂಳೆಗಳ ಆರೋಗ್ಯದ ಬಗ್ಗೆ ಸಂಕ್ಷಿಪ್ತವಾಗಿ ಮಾಹಿತಿ ನೀಡಿದರು.
ಅಲ್ ಬದ್ರೀಯಾ ಜುಮ್ಮಾ ಮಸೀದಿ ಅಧ್ಯಕ್ಷ ಹಾಗೂ ಇಂಪಾಲ್ ಕನ್‌ಸ್ಟ್ರಕ್ಷನ ಮಾಲೀಕ ಟಿ.ಎಂ. ನಾಸೀರ್ ಮಾತನಾಡಿ, ಗ್ರಾಮೀಣ ಪ್ರದೇಶ ಬಡ ಜನತೆಯ ಅನುಕೂಲಕ್ಕಾಗಿ ಸಂಘಟಕರು ವ್ಯವಸ್ಥೆ ಮಾಡಿರುವುದು ಶ್ಲಾಘನೀಯ. ವೈದ್ಯಕೀಯ ಚಿಕಿತ್ಸೆ ದುಬಾರಿಯಾಗಿರುವ ಇಂದಿನ ದಿನಗಳಲ್ಲಿ ಕಡಿಮೆ ದರದಲ್ಲಿ ಚಿಕಿತ್ಸೆ ನೀಡುತ್ತಿದ್ದು, ಸದುಪಯೋಗಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.
ಬಾಳೆಹೊನ್ನೂರು ಕ್ಲಾಸಿಕ್ ಜೇಸಿ ಸಂಸ್ಥೆಯ ಅಧ್ಯಕ್ಷ ಸಿ.ಪಿ. ರಮೇಶ್ ಮಾತನಾಡಿ, ಟೀಂ ಜಾಗೃತ್ ಸಹಾಯ ಹಸ್ತ ತಂಡವು ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದೆ ಎಂದು ತಿಳಿಸಿದರು.
ಟೀಂ ಜಾಗೃತ್ ಸಹಾಯ ಹಸ್ತ ತಂಡದ ಅಧ್ಯಕ್ಷ ಕಾನ್ಕೆರೆ ಗೌತಮ್ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಕೊಪ್ಪ ಸಹಕಾರ ಸಾರಿಗೆ ಸಂಸ್ಥೆಯ ಮಹೇಶ್, ಉಡುಪಿಯ ದಂತ ವೈದ್ಯ ಮಂಜುನಾಥ್ ಮೆಸ್ತ ಹಾಗೂ ಟೀಂ ಜಾಗೃತ್ ಸಹಾಯ ಹಸ್ತ ತಂಡದ ಆದರ್ಶ ಪೂಜಾರಿ, ಸಂಕೀರ್ಣ, ಮಾಗೋಡು ಶರಣ್, ದಿವಿನ ಪೂಜಾರಿ, ಪೈಜಲ್, ಮಂಜುನಾಥಶೆಟ್ಟಿ, ಟಿ.ಟಿ. ಇಸ್ಮಾಯಿಲ್ ಸೇರಿದಂತೆ ಸಾರ್ವಜನಿಕರು ಪಾಲ್ಗೊಂಡಿದ್ದರು.
ಶಿಬಿರದಲ್ಲಿ ಉಡುಪಿ ಸುನಾಗ್ ಆಸ್ಪತ್ರೆಯ ಡಾ.ನರೇಂದ್ರ ಕುಮಾರ್, ಡಾ. ಮಂಜುನಾಥ್, ಡಾ. ವೀಣಾ ನರೇಂದ್ರ, ಶೋಭಾ ಆಚಾರ್ಯ, ಪ್ರಸನ್ನ ಕಾರಂತ್, ಲತಾ, ಪರ್ಜಾನಾ, ಸುಷ್ಮಾ, ಕೃತಿ ಇವರುಗಳು ಶಿಬಿರದಲ್ಲಿ ಸುಮಾರು 150ಕ್ಕೂ ಹೆಚ್ಚು ಜನರಿಗೆ ಉಚಿತ ಅರೋಗ್ಯ ತಪಾಸಣೆ ನಡೆಸಿದರು. ಇದೇ ಸಂದರ್ಭದಲ್ಲಿ ಉಚಿತ ಸುನಾಗ್ ಆರೋಗ್ಯ ಕಾರ್ಡ್ ವಿತರಿಸಲಾಯಿತು. ಇಂಪಾಲ್ ಗ್ರೂಪ್ಸ್ ನ ಮಾಲೀಕ ಟಿ.ಎಂ. ನಾಸೀರ್‌ಅವರನ್ನು ಸನ್ಮಾನಿಸಲಾಯಿತು. ತಂಡದ ಕಾರ್ಯದರ್ಶಿ ಎಸ್.ಕೆ. ರಫಿಕ್ ನಿರೂಪಿಸಿ, ಇಬ್ರಾಹಿಂ ಶಾಪಿ ಸ್ವಾಗತಿಸಿ, ವಂದಿಸಿದರು.