131 ಸದಸ್ಯರ ಅವಿರೋಧ ಆಯ್ಕೆ

Team Udayavani, Jan 19, 2020, 3:10 AM IST

ಬೆಂಗಳೂರು: ಪಾಲಿಕೆಯ 12 ಸ್ಥಾಯಿ ಸಮಿತಿಗಳ ಸದಸ್ಯರ ಆಯ್ಕೆ ಕೊನೆಗೂ ಶನಿವಾರ ನಡೆಯಿತು. ಸ್ಥಾನ ವಂಚಿತ ಕೆಲವು ಸದಸ್ಯರ ಅಸಮಾಧಾನ, ಆಕ್ರೋಶ, ಕಣ್ಣೀರಿನ ನಡುವೆಯೇ ಎಲ್ಲ ಸ್ಥಾಯಿ ಸಮಿತಿಗಳಿಗೆ ಅವಿರೋಧವಾಗಿ ಸದಸ್ಯರ ಆಯ್ಕೆಯಾಯಿತು.

ಬಿಬಿಎಂಪಿಯ ಕೆಂಪೇಗೌಡ ಪೌರಸಭಾಂಗಣದಲ್ಲಿ ಶನಿವಾರ ಬೆಳಗ್ಗೆ 8 ಗಂಟೆಯಿಂದ 9.30ರವರೆಗೆ 12 ಸ್ಥಾಯಿ ಸಮಿತಿ ಸದಸ್ಯ ಸ್ಥಾನಕ್ಕೆ ನಾಮಪತ್ರ ಸ್ವೀಕರಿಸಲಾಯಿತು. 10 ಗಂಟೆಯಿಂದ 12.30ವರೆಗೆ ನಾಮಪತ್ರ ಪರಿಶೀಲನೆ ನಡೆಸಲಾಯಿತು. ಅವಿರೋಧ ಆಯ್ಕೆಗೆ ಪ್ರತಿ ಸ್ಥಾಯಿ ಸಮಿತಿಗೆ 11 ಮಂದಿ ಸದಸ್ಯರ ಇರಬೇಕು. ಆದರೆ, ಪಾಲಿಕೆಯ 12 ಸ್ಥಾಯಿ ಸಮಿತಿ ಪೈಕಿ ಐದು ಸ್ಥಾಯಿ ಸಮಿತಿಗಳಿಗೆ ತಲಾ 11 ನಾಮಪತ್ರ ಸಲ್ಲಿಕೆಯಾಗಿದ್ದವು.

ಉಳಿದ ಏಳು ಸ್ಥಾಯಿ ಸಮಿತಿಗಳಿಗೆ 11ಕ್ಕಿಂತ ಹೆಚ್ಚು ನಾಮಪತ್ರ ಸಲ್ಲಿಕೆಯಾಗಿದ್ದವು. ಹೀಗಾಗಿ, ಸದಸ್ಯರಿಂದ ನಾಮಪತ್ರಗಳನ್ನು ವಾಪಸ್‌ ತೆಗೆಸುವುದಕ್ಕೆ ಅಡಳಿತಪಕ್ಷದ ಮುಖಂಡರು ಸರ್ಕಸ್‌ ಮಾಡಿದರು. ಹೀಗಾಗಿ, 11.30ಕ್ಕೆ ಆರಂಭಗೊಳ್ಳಬೇಕಾದ ಚುನಾವಣೆ ಪ್ರಕ್ರಿಯೆ ಮಧ್ಯಾಹ್ನ 12.40ಕ್ಕೆ ಪ್ರಾರಂಭವಾಯಿತು. ಪ್ರಾದೇಶಿಕ ಆಯುಕ್ತ ವಿ.ಎನ್‌. ಪ್ರಸಾದ್‌ ಹೆಚ್ಚಿನ ನಾಮಪತ್ರ ವಾಪಸ್‌ ಪಡೆಯುವುದಕ್ಕೆ ಅವಕಾಶ ನೀಡಿದರು.

ಈ ವೇಳೆ ಕೆಲವು ಸದಸ್ಯರು ನಾಮಪತ್ರ ವಾಪಸ್‌ ಪಡೆಯುವುದಕ್ಕೆ ಒಪ್ಪಲಿಲ್ಲ. ಪಕ್ಷದ ನಾಯಕರು ಮನವೊಲಿಸಿ ಸದಸ್ಯರಿಂದ ನಾಮಪತ್ರ ವಾಪಸ್‌ ಪಡೆಯುವಲ್ಲಿ ಯಶಸ್ವಿಯಾದರು. ಹೀಗಾಗಿ, 12ಕ್ಕೆ 12 ಸ್ಥಾಯಿ ಸಮಿತಿಗಳಿಗೆ ಸದಸ್ಯರು ಅವಿರೋಧವಾಗಿ ಆಯ್ಕೆಯಾದರು. ಈ ವೇಳೆ ಬಿಬಿಎಂಪಿ ಆಯುಕ್ತ ಬಿ.ಎಚ್‌.ಅನಿಲ್‌ಕುಮಾರ್‌ ಹಾಗೂ ಬೆಂಗಳೂರು ನಗರ ಜಿಲ್ಲಾಧಿಕಾರಿ ಶಿವಮೂರ್ತಿ ಮತ್ತಿತರರು ಹಾಜರಿದ್ದರು.

ಮುಂದೊಂದು ದಿನ ನಾನೂ ಹಾಡು ಹಾಡ್ತೇನೆ!: ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಹಿನ್ನೆಲೆಯಲ್ಲಿ ಪಾಲಿಕೆಯ ಹಲವು ಸದಸ್ಯರು ಕಣ್ಣೀರು ಹಾಕಿದರು. ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಕೈ ತಪ್ಪಿದ ಕಾರಣಕ್ಕೆ ಹೊಸಹಳ್ಳಿ ವಾರ್ಡ್‌ ಸದಸ್ಯೆ ಮಹಾಲಕ್ಷ್ಮೀ, ವಾರ್ಡ್‌ಮಟ್ಟದ ಕಾಮಗಾರಿ ಸ್ಥಾಯಿ ಸದಸ್ಯ ಸ್ಥಾನ ಕೈತಪ್ಪಿದ ಹಿನ್ನೆಲೆಯಲ್ಲಿ ಅಟ್ಟೂರು ವಾರ್ಡ್‌ನ ನೇತ್ರಾಪಲ್ಲವಿ, ಮಾರತ್‌ ಹಳ್ಳಿ ವಾರ್ಡ್‌ ಪಕ್ಷೇತರ ಸದಸ್ಯ ರಮೇಶ್‌ “ನಂಬಿಸಿ ಮೋಸ ಮಾಡಲಾಗಿದೆ’ ಎಂದು ಕಣ್ಣೀರು ಹಾಕಿದರು. ಇದೇ ವೇಳೆ ಎಚ್‌ಎಸ್‌ಆರ್‌ ಬಡಾವಣೆ ವಾರ್ಡ್‌ನ ಗುರುಮೂರ್ತಿ ಕಂದಾಯ ಸಚಿವ ಆರ್‌. ಅಶೋಕ್‌ ಎದುರೇ ಅಸಮಾಧಾನ ವ್ಯಕ್ತಪಡಿಸಿದರು. “ಆ ಕರ್ಣನಂತೆ ನೀ ದಾನಿಯಾದೆ ಎಂದು ಆರ್‌.ಅಶೋಕ್‌ ಹೇಳಿದ್ದಕ್ಕೆ ಬೇಸರಗೊಂಡ ಗುರುಮೂರ್ತಿ, “ನಾನೂ ಒಂದು ದಿನ ಈ ಹಾಡು ಹಾಡುತ್ತೇನೆ’ ಎಂದು ಸವಾಲು ಹಾಕಿದ ಪ್ರಸಂಗವೂ ನಡೆಯಿತು.

ಹಠ ಮಾಡಿದ ನೇತ್ರಾಪಲ್ಲವಿ: ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ ಸ್ಥಾಯಿ ಸಮಿತಿಗೆ 15 ಜನ ಪಾಲಿಕೆ ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ, ನಾಲ್ವರು ನಾಮಪತ್ರ ವಾಪಸ್‌ ಪಡೆಯಬೇಕಾಗಿತ್ತು. ಜರಗನಹಳ್ಳಿ ವಾರ್ಡ್‌ನ ಬಿ.ಎಂ.ಶೋಭಾ, ಚಿಕ್ಕಪೇಟೆ ವಾರ್ಡ್‌ನ ಲೀಲಾ ಶಿವಕುಮಾರ್‌, ಅಜಾದ್‌ ನಗರ ವಾರ್ಡ್‌ನ ಸುಜಾತಾ ನಾಮಪತ್ರ ವಾಪಸ್‌ ಪಡೆದರಾದರೂ, ಅಟ್ಟೂರು ವಾರ್ಡ್‌ ಪಾಲಿಕೆ ಸದಸ್ಯೆ ನೇತ್ರಾಪಲ್ಲವಿ ವಾಪಸ್‌ ಪಡೆಯುವುದಿಲ್ಲ ಎಂದು ಹಠ ಮಾಡಿದರು. ಶಾಸಕ ಸತೀಶ್‌ ರೆಡ್ಡಿ, ಆಡಳಿತ ಪಕ್ಷದ ನಾಯಕ ಮುನೀಂದ್ರ ಕುಮಾರ್‌, ಪಾಲಿಕೆ ಸದಸ್ಯ ಉಮೇಶ್‌ ಶೆಟ್ಟಿ ಹಾಗೂ ಉಪಮೇಯರ್‌ ರಾಮಮೋಹನ್‌ ರಾಜ್‌ ಮನವೊಲಿಸಿ ನೇತ್ರಾಪಲ್ಲವಿ ಅವರು ನಾಮಪತ್ರ ವಾಪಸ್‌ ಪಡೆಯುವಂತೆ ಮಾಡುವಲ್ಲಿ ಯಶಸ್ವಿಯಾದರು.

ಲೆಕ್ಕಪತ್ರ ಸ್ಥಾಯಿ ಸಮಿತಿಗೆ 10 ಸದಸ್ಯರು: ಪಾಲಿಕೆಯ 11 ಸ್ಥಾಯಿ ಸಮಿತಿಗಳಿಗೆ 11 ಸದಸ್ಯರು ಆಯ್ಕೆಯಾದರೆ, ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಮಾತ್ರ 10 ಸದಸ್ಯರು ಆಯ್ಕೆಯಾಗಿದ್ದಾರೆ. ಲೆಕ್ಕಪತ್ರ ಸ್ಥಾಯಿ ಸಮಿತಿಗೆ ಶನಿವಾರ 12 ಸದಸ್ಯರು ನಾಮಪತ್ರ ಸಲ್ಲಿಸಿದ್ದರು. ನಾಮಪತ್ರ ವಾಪಸ್‌ ಪಡೆಯುವ ವೇಳೆ ಓಕಳೀಪುರ ವಾರ್ಡ್‌ನ ಶಿವಪ್ರಕಾಶ್‌ ಹಾಗೂ ಸಿಂಗಸಂದ್ರ ವಾರ್ಡ್‌ನ ಶಾಂತಬಾಬು ನಾಮಪತ್ರ ವಾಪಸ್‌ ಪಡೆದ ಹಿನ್ನೆಲೆಯಲ್ಲಿ 10 ಸದಸ್ಯರು ಮಾತ್ರ ಸಮಿತಿಯಲ್ಲಿ ಉಳಿದುಕೊಂಡರು. ಒಂದು ಸ್ಥಾನಕ್ಕೆ ನಾಮಪತ್ರ ಸಲ್ಲಿಸುವಂತೆ ಬಿಜೆಪಿ ನಾಯಕರು ಮನವಿ ಮಾಡಿದರು. ಆದರೆ, ಇದಕ್ಕೆ ಪ್ರಾದೇಶಿಕ ಆಯುಕ್ತರು ಅವಕಾಶ ನೀಡಲಿಲ್ಲ.

ಅಧ್ಯಕ್ಷಗಿರಿ ಗ್ಯಾರಂಟಿ: ಜೆಡಿಎಸ್‌ನಿಂದ ಗೆದ್ದು ಬಿಜೆಪಿಗೆ ಬೆಂಬಲ ನೀಡಿದ ಲಗ್ಗೆರೆ ವಾರ್ಡ್‌ ಮಂಜುಳಾ ನಾರಾಯಣ ಸ್ವಾಮಿ, ದೇವದಾಸ್‌ ಹಾಗೂ ಕಾಂಗ್ರೆಸ್‌ನಿಂದ ಉಚ್ಛಾಟಿತಗೊಂಡ ಜಿ.ಕೆ.ವೆಂಕಟೇಶ್‌ಗೆ ಯಾವುದಾದರೊಂದು ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಬಹುತೇಕ ಖಚಿತ ಎಂದು ಹೇಳಲಾಗಿದೆ.

ಸ್ಥಾಯಿ ಸಮಿತಿಯಲ್ಲಿ ಯಾರಿದ್ದಾರೆ?
ತೆರಿಗೆ ಮತ್ತು ಆರ್ಥಿಕ: ಎಲ್‌.ಶ್ರೀನಿವಾಸ್‌, ಮಹಾಲಕ್ಷ್ಮೀ ಎಚ್‌.ರವೀಂದ್ರ, ಎಂ.ಸತೀಶ್‌, ಬಿ.ಎನ್‌. ನಿತೀನ್‌ ಪುರುಷೋತ್ತಮ, ಕೆ.ದೇವದಾಸ್‌, ಭಾಗ್ಯಲಕ್ಷ್ಮೀ ಮುರಳಿ, ಎಸ್‌.ಉದಯಕುಮಾರ್‌, ಎಸ್‌.ಕೇಶವಮೂರ್ತಿ , ಆರ್‌.ವಸಂತಕುಮಾರ್‌, ಎಸ್‌.ಅನ್ಸರ್‌ಪಾಷಾ, ಬಿ.ಭದ್ರೇಗೌಡ

ಸಾರ್ವಜನಿಕ ಆರೋಗ್ಯ: ಜಿ.ಮಂಜುನಾಥ ರಾಜು , ಆರ್‌.ಪ್ರತಿಮಾ , ಎಂ.ಎಲ್‌.ಶ್ರೀಕಾಂತ್‌, ಶಿಲ್ಪಾಶ್ರೀಧರ್‌, ಎಂ.ಪ್ರಮೀಳಾ, ಮಧುಕುಮಾರಿ ವಾಗೀಶ್‌, ಇರ್ಷಾದ್‌ ಬೇಗಂ, ಮೀನಾಕ್ಷಿ, ಆರ್‌.ರೂಪಾ, ಶಿಲ್ಪಾ ಅಭಿಲಾಷ್‌, ಶೋಭಾ ಜಗದೀಶ್‌ಗೌಡ

ನಗರ ಯೋಜನೆ ಮತ್ತು ಅಭಿವೃದ್ಧಿ: ಟಿ.ವಿ ಮಂಜುನಾಥ ಬಾಬು, ಎಸ್‌.ಆನಂದ ಕುಮಾರ್‌, ಟಿ.ರಾಮಚಂದ್ರ, ಎಂ.ಚಂದ್ರಪ್ಪ, ಆಶಾ ಸುರೇಶ್‌, ಡಿ.ಎಚ್‌.ಲಕ್ಷ್ಮೀ, ರಾಜಣ್ಣ, ಎಂ.ಶಶಿರೇಖಾ, ಮಮತಾ ಶರವಣ, ಭಾಗ್ಯಮ್ಮ ಕೃಷ್ಣ, ಎನ್‌.ರಾಜಶೇಖರ್‌

ಬೃಹತ್‌ ಸಾರ್ವಜನಿಕ ಕಾಮಗಾರಿ: ಎ.ಸಿ ಹರಿಪ್ರಸಾದ್‌, ಡಿ. ಪ್ರಮೋದ್‌, ಚಂದ್ರಕಲಾ ಗಿರೀಶ್‌ ಲಕ್ಕಣ್ಣ , ಡಿ.ಜಿ ತೇಜಸ್ವಿನಿ ಸೀತಾರಾಮಯ್ಯ, ಮೋಹನ್‌ ಕುಮಾರ್‌, ಸಿ.ಪಲ್ಲವಿ, ಕುಮಾರಿ ಪಳನಿಕಾಂತ್‌, ಸಿ.ಸರಳ ಮಹೇಶ್‌ಬಾಬು, ಎಚ್‌.ಎಕೆಂಪೇಗೌಡ, ಪಳಿನಿಯಮ್ಮಳ್‌, ಕೆ.ವಿ.ರಾಜೇಂದ್ರ ಕುಮಾರ್‌

ವಾರ್ಡ್‌ ಮಟ್ಟದ ಸಾರ್ವಜನಿಕ ಕಾಮಗಾರಿ: ಬಿ.ಎನ್‌.ಐಶ್ವರ್ಯ, ಎನ್‌.ಶಾಂತಕುಮಾರಿ, ನಳನಿ ಎಂ. ಮಂಜು, ಬಿ.ವೆಂಕಟೇಶ್‌, ಎಂ.ಮಹದೇವ , ಗುರುಮೂರ್ತಿ ರೆಡ್ಡಿ, ಎಂ.ಗಾಯಿತ್ರಿ , ಮಂಜುಳ ವಿಜಯಕುಮಾರ್‌, ರಾಧಮ್ಮ ವೆಂಕಟೇಶ್‌, ನೌಶೀರ್‌ ಅಹ್ಮದ್‌, ಸವಿತಾ ವಿ.ಕೃಷ್ಣ

ಲೆಕ್ಕ ಪತ್ರ ಸ್ಥಾಯಿ ಸಮಿತಿ: ಆರ್‌.ರೇಖಾ, ಎಚ್‌.ಸಿ.ನಾಗರತ್ನ ರಾಮಮೂರ್ತಿ, ಎನ್‌.ಲೋಕೇಶ್‌, ಎಂ.ಚಂದ್ರಪ್ಪರೆಡ್ಡಿ, ಶೋಭಾ ಅಂಜನಪ್ಪ, ಕೆ.ನಾಗಭೂಷಣ್‌, ಸೀಮಾ ಅಲ್ತಾಫ್ ಖಾನ್‌, ಎಂ.ಅಂಜನಪ್ಪ, ಮಂಜುಳಾ, ಸುಪ್ರಿಯಾ ಶೇಖರ್‌

ಶಿಕ್ಷಣ ಸ್ಥಾಯಿ ಸಮಿತಿ: ಇಮ್ರಾನ್‌ ಪಾಷಾ, ಎಸ್‌.ಲೀಲಾ ಶಿವಕುಮಾರ್‌, ಮಂಜುಳಾ ಎನ್‌.ಸ್ವಾಮಿ, ಹೇಮಲತಾ ಸತೀಶ್‌ ಶೇಟ್‌, ಎನ್‌.ಭವ್ಯ, ವಿ.ವಿ. ಸತ್ಯನಾರಾಯಣ, ಸರ್ವಮಂಗಳ, ಕೆ.ಎಂ.ಮಮತಾ, ಜಿ.ವಿ.ಶಶಿಕಲಾ, ಬಿ.ಎನ್‌.ಮಂಜುನಾಥ ರೆಡ್ಡಿ, ಶಾಂತಬಾಬು

ಸಾಮಾಜಿಕ ನ್ಯಾಯ: ಆರ್‌.ವಿ ಯುವರಾಜು, ಆರ್‌.ಜೆ.ಲತಕುವಾರ್‌ ರಾಥೋಡ್‌, ಎನ್‌.ಮಂಜುನಾಥ್‌, ಆನಂದಕುಮಾರ್‌, ಕೆ.ರಾಜೇಶ್ವರಿ ಚೋಳರಾಜ , ಸರಸ್ವತಮ್ಮ, ಡಿ.ಮುನಿಲಕ್ಷ್ಮಮ್ಮ, ಎ.ಕೋದಂಡ ರೆಡ್ಡಿ, ಬಿ.ಎಂ.ಪುಷ್ಪ ಮಂಜುನಾಥ ,ಹನುಮಂತಯ್ಯ, ನಾಜೀಮ್‌ ಖಾನಮ್‌

ಅಪೀಲುಗಳ ಸ್ಥಾಯಿ ಸಮಿತಿ: ಸಿ.ಆರ್‌.ಲಕ್ಷ್ಮೀ ನಾರಾಯಣ, ಎಂ.ವೇಲುನಯಕರ್‌, ಎನ್‌.ಜಯಪಾಲ್‌ , ಕೆ.ವೀಣಾ ಕುಮಾರಿ, ವಾಣಿ.ವಿ ರಾವ್‌, ಅಜ್ಮಲ್‌ಬೇಗ್‌, ಆರ್‌.ಸಂಪತ್‌ರಾಜ್‌, ಅಬ್ದುಲ್‌ ರಕೀಬ್‌ ಝಾಕೀರ್‌, ಶಕೀಲ್‌ಅಹಮದ್‌, ಬಿ.ಸುಮಂಗಲ, ಉಮೇಸಲ್ಮ

ತೋಟಗಾರಿಕೆ ಸ್ಥಾಯಿ ಸಮಿತಿ: ಹಾನಾ ಭುವನೇಶ್ವರಿ (ಭುವನ), ಜಿ.ಕೋಕಿಲಾ ಚಂದ್ರಶೇಖರ್‌, ಜಿ.ಬಾಲಕೃಷ್ಣನ್‌, ಉಮಾದೇವಿ ನಾಗರಾಜ, ಡಿ.ಎನ್‌.ರಮೇಶ್‌, ಎಸ್‌. ಸಂಪತ್‌ ಕುಮಾರ್‌, ಎಂ. ಮಾಲತಿ ಸೋಮಶೇಖರ್‌, ಐ.ಯಶೋಧ, ಶ್ರೀಲತಾ. ಸಿ.ಜಿ ಗೋಪಿನಾಥರಾಜು,ಎಂ.ಆಂಜನಪ್ಪ, ವಿ.ಬಾಲಕೃಷ್ಣ

ಮಾರುಕಟ್ಟೆ ಸ್ಥಾಯಿ ಸಮಿತಿ: ಎನ್‌.ನಾಗರಾಜು, ಜಿ. ಮಂಜುನಾಥ್‌, ಸೈಯದ್‌ ಸಾಜೀದಾ, ವಿ.ವಿ ಪಾರ್ತಿಬರಾಜನ್‌, ಎಂ.ಪದ್ಮಾವತಿ ಶ್ರೀನಿವಾಸ್‌, ಉಮಾವತಿ ಪದ್ಮರಾಜ್‌, ದೀಪಿಕಾ ಎನ್‌. ಮಂಜುನಾಥ ರೆಡ್ಡಿ, ಆರ್‌.ಪ್ರಭಾವತಿ ರಮೇಶ್‌ (ಜೆಲ್ಲಿ), ಭಾರತಿ ರಾಮಚಂದ್ರ, ಕೆ.ಗಣೇಶ್‌ ರಾವ್‌ ಮಾನೆ, ಆರ್‌. ಪದ್ಮಾವತಿ ಅಮರ್‌ನಾಥ್‌

ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ: ಜಿ.ಪದ್ಮಾವತಿ, ಎಂ.ಶಿವರಾಜು, ಆರ್‌.ಎಸ್‌. ಸತ್ಯನಾರಾಯಣ, ಮಹಮ್ಮದ್‌ ರಿಜ್ವಾನ್‌ ನವಾಬ್‌,ಅರುಣಾ ರವಿ, ಎಂ.ಬಿ.ದ್ವಾರಕನಾಥ್‌, ದೀಪಾ ನಾಗೇಶ್‌, ಇಂದಿರಾ.ಜಿ, ಎಂ.ನಾಗರಾಜ, ಪ್ರತಿಭಾ ಧನರಾಜ್‌, ಗಂಗಮ್ಮ

ಅಂಕಿ ಸಂಖ್ಯೆ
259: ಬಿಬಿಎಂಪಿ ಕೌನ್ಸಿಲ್‌ ಸದಸ್ಯರ ಸಂಖ್ಯೆ

178: ಶನಿವಾರ ಹಾಜರಿದ್ದವ ಸದಸ್ಯರು

142: ಸಲ್ಲಿಕೆಯಾಗಿದ್ದ ನಾಮಪತ್ರಗಳು

131: 12 ಸಮಿತಿಗೆ ಆಯ್ಕೆಯಾದ ಸದಸ್ಯರು

ನಮ್ಮಲ್ಲಿ ಮೂಲ ಬಿಜೆಪಿಗರು ಹಾಗೂ ವಲಸಿಗರು ಎನ್ನುವ ತಾರತಮ್ಯವಿಲ್ಲ. ನಾವು ಅಧಿಕಾರಕ್ಕೆ ಬರುವುದಕ್ಕೆ ಸಹಾಯ ಮಾಡಿದವರ ಬಗ್ಗೆಯೂ ಗಮನಹರಿಸಬೇಕಿದೆ. ಸಣ್ಣ ಪುಟ್ಟ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುತ್ತೇವೆ.
-ಆರ್‌. ಅಶೋಕ, ಕಂದಾಯ ಸಚಿವ

ನನ್ನನ್ನು ಕರೆತಂದ ನಾಯಕರೇ ನನ್ನ ಪರ ನಿಲ್ಲಲಿಲ್ಲ. ಇದೇ ಕಾರಣಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಸಿಕ್ಕಿಲ್ಲ. ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಟಿಕೆಟ್‌ ಮತ್ತು ನನ್ನ ಕ್ಷೇತ್ರದ ಅಭಿವೃದ್ಧಿಗೆ 10 ಕೋಟಿ ರೂ. ಕೇಳಿದ್ದೇನೆ ಅದನ್ನು ಕೊಟ್ಟರೆ ಸಾಕು.
-ಎನ್‌.ರಮೇಶ್‌, ಪಕ್ಷೇತರ ಸದಸ್ಯ ಮಾರತ್‌ಹಳ್ಳಿ ವಾರ್ಡ್‌

ಸ್ಥಾಯಿ ಸಮಿತಿಯ ಸದಸ್ಯತ್ವ ಸ್ಥಾನದಲ್ಲಿ ಶೇ.90ಮೂಲ ಬಿಜೆಪಿ ಸದಸ್ಯರೇ ಇದ್ದಾರೆ. ನಮಗೆ ಬೆಂಬಲ ನೀಡಿದ ಕೆಲವರಿಗೂ ಅವಕಾಶ ನೀಡಲಾಗಿದೆ.
-ಮುನೀಂದ್ರ ಕುಮಾರ್‌, ಆಡಳಿತ ಪಕ್ಷದ ನಾಯಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ