ಫ‌ರಾ ಟವರ್‌ನಲ್ಲಿ ಆಕಸ್ಮಿಕ ಬೆಂಕಿ

Team Udayavani, Sep 19, 2019, 3:10 AM IST

ಬೆಂಗಳೂರು: ಮಹಾತ್ಮ ಗಾಂಧಿ ರಸ್ತೆಯಲ್ಲಿರುವ ನಾಲ್ಕಂತಸ್ತಿನ ಫ‌ರಾ ಟವರ್‌ನ ನೆಲಮಹಡಿಯಲ್ಲಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಆಕಸ್ಮಿಕ ಬೆಂಕಿ ತೀವ್ರ ಆತಂಕಕ್ಕೆ ಕಾರಣವಾಗಿತ್ತು, ಸಮೀಪದ ಬಿಲ್ಡಿಂಗ್‌ ನಿರ್ವಹಣೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಫ‌ರಾ ಟವರ್‌ನ ನೆಲಮಹಡಿಯಲ್ಲಿ ಯುಕೋ ಬ್ಯಾಂಕ್‌ ಶಾಖೆಯಿದ್ದು, ಎರಡನೇ ಮಹಡಿಯಲ್ಲಿ ಐಟಿ ತರಬೇತಿ ಸಂಸ್ಥೆ, ಕೊರಿಯರ್‌ ಸಂಸ್ಥೆ ಇನ್ನಿತರೆ ಕಚೇರಿಗಳಿದ್ದು ವಿದ್ಯಾರ್ಥಿಗಳು ಸೇರಿದಂತೆ 150ಕ್ಕೂ ಅಧಿಕ ಮಂದಿ ಪ್ರತಿನಿತ್ಯ ಇರುತ್ತಿದ್ದರು.

ಮಧ್ಯಾಹ್ನ 2.40ರ ಸುಮಾರಿಗೆ ನೆಲಮಹಡಿಯಲ್ಲಿರುವ ಮೆಟ್ಟಿಲುಗಳ ಸಮೀಪದ ವಿದ್ಯುತ್‌ ಸಂಪರ್ಕದ ಸ್ವಿಚ್‌ ಬೋರ್ಡ್‌ನಲ್ಲಿ ಆಕಸ್ಮಿಕವಾಗಿ ವಿದ್ಯುತ್‌ ಕಾಣಿಸಿಕೊಂಡು ವೈರ್‌ಗಳು ಸುಡುತ್ತಿದ್ದಂತೆ ದಟ್ಟ ಹೊಗೆ ಕಾಣಿಸಿಕೊಳ್ಳಲಾರಂಭಿಸಿದೆ. ಇದನ್ನು ಗಮನಿಸಿದ ಕಟ್ಟಡದೊಳಗಿನ ಸಿಬ್ಬಂದಿ ಸಹಾಯಕ್ಕೆ ಕಿರುಚಿಕೊಂಡಿದ್ದಾರೆ. ಪಕ್ಕದಲ್ಲಿಯೇ ಇರುವ ಬಾರ್ಟನ್‌ ಕಟ್ಟಡ ನಿರ್ವಹಣೆ ಸಿಬ್ಬಂದಿಯೂ ಗಮನಿಸಿ ಕೂಡಲೇ 25 ಅಗ್ನಿ ನಂದಕ ಸಿಲಿಂಡರ್‌ಗಳನ್ನು ತೆಗೆದುಕೊಂಡು ಹೋಗಿ ಬೆಂಕಿ ನಂದಿಸಿದ್ದಾರೆ. ಈ ಕಾರ್ಯಕ್ಕೆ ಸಾರ್ವಜನಿಕರು ಕೂಡ ಕೈ ಜೋಡಿಸಿದ್ದಾರೆ.

ಬೆಂಕಿ ನಂದಿದ ಕೂಡಲೇ ಕಟ್ಟಡದೊಳಗಿದ್ದ ಎಲ್ಲರೂ ಮೆಟ್ಟಿಲುಗಳ ಮೂಲಕ ಸುರಕ್ಷಿತವಾಗಿ ಹೊರಗೆ ಬಂದಿದ್ದಾರೆ. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ ಕೂಡ ಮತ್ತೂಮ್ಮೆ ಕಾರ್ಯಾಚರಣೆ ನಡೆಸಿ ಯಾವುದೇ ಅನಾಹುತ ನಡೆಯಲು ಆಸ್ಪದವಾಗದಂತೆ ಇಡೀ ಕಟ್ಟಡ ಪರಿಶೀಲನೆ ನಡೆಸಿದರು. ಜತೆಗೆ, ನಾಲ್ಕನೇ ಮಹಡಿಯಲ್ಲಿದ್ದ ಕೆಲವರನ್ನು ಸುರಕ್ಷಿತವಾಗಿ ಕರೆತಂದರು.

ಕಿಟಕಿಯಿಂದ ಹಾರಲು ಯತ್ನ: ಕಟ್ಟಡದಲ್ಲಿ ಭಾರೀ ದಟ್ಟಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಒಳಗಡೆ ಇದ್ದವರೆಲ್ಲ ಆತಂಕದಿಂದ ಕೂಗಿಕೊಂಡಿದ್ದಾರೆ. ನಾಲ್ಕನೇ ಮಹಡಿಗೆ ಕೆಲವರು ದೌಡಾಯಿಸಿದರೆ, ಕೆಲವರು ಹೊರಗಡೆ ಓಡಿದ್ದಾರೆ. ಮೂರನೇ ಮಹಡಿಯಲ್ಲಿದ್ದವರು ಕಿಟಕಿ ಗಾಜು ಓಡೆದು ಹಗ್ಗದ ಮೂಲಕ ಕಳಗೆ ಇಳಿದಿದ್ದಾರೆ. ಮೂರ್‍ನಾಲ್ಕು ಯುವಕರು ಕಿಟಕಿಗಳ ಮೂಲಕ ಕೆಳಗೆ ಜಿಗಿದಿದ್ದು, ಕೂಡಲೇ ರಕ್ಷಿಸಲಾಗಿದೆ. ಅವರಿಗೆ ಯಾವುದೇ ಗಾಯಗಳು, ತೊಂದರೆ ಆಗಿಲ್ಲ ಎಂದು ಪೊಲೀಸರು ತಿಳಿಸಿದರು.

ಇಬ್ಬರು ಯುವಕರು ಕಿಟಕಿ ಮೂಲಕ ಜಿಗಿಯಲು ಪ್ರಯತ್ನಿಸಿದರು ಅವರಿಗೆ ಧೈರ್ಯತುಂಬಿ ನಮ್ಮ ಕಟ್ಟಡಲ್ಲಿದ್ದ ಕ್ರೇನ್‌ ಮೂಲಕ ಕೆಳಗಡೆ ಇಳಿಸಿಕೊಳ್ಳಲಾಯಿತು ಎಂದು ಪ್ರತ್ಯಕ್ಷದರ್ಶಿ ವಿನಯ್‌ ತಿಳಿಸಿದರು. ಲಿಫ್ಟ್ ಪಕ್ಕದಲ್ಲಿರುವ ಭದ್ರತಾ ಕೊಠಡಿಯಲ್ಲಿ ಸಿಡಿತದ ಶಬ್ಧ ಕೇಳಿದ ಕೂಡಲೇ ಕಟ್ಟಡಕ್ಕೆ ವಿದ್ಯುತ್‌ ಪೂರೈಕೆ ಕಡಿತಗೊಳಿಸಲಾಯಿತು. ಅದೃಷ್ಟವಶಾತ್‌ ಲಿಫ್ಟ್ನಲ್ಲಿ ಯಾರೂ ಇರದಿದ್ದರಿಂದ ಯಾವುದೇ ಅನಾಹುತ ಸಂಭವಿಸಲಿಲ್ಲ ಎಂದು ಭದ್ರತಾ ಸಿಬ್ಬಂದಿ ಗಜೇಂದ್ರ ಹೇಳಿದರು.

ಶಾರ್ಟ್‌ ಸರ್ಕಿಟ್‌ ಸಾಧ್ಯತೆ: ಘಟನಾ ಸ್ಥಳಕ್ಕೆ ಖುದ್ದು ಭೇಟಿ ನೀಡಿ ಪರಿಶೀಲನೆ ನಡೆಸಿದ ಅಗ್ನಿಶಾಮಕ ದಳ ವಿಭಾಗದ ಎಡಿಜಿಪಿ ಸುನೀಲ್‌ ಅಗರ್‌ವಾಲ್‌, ಶಾರ್ಟ್‌ ಸರ್ಕಿಟ್‌ನಿಂದ ಅಗ್ನಿ ಅವಘಡ ಸಂಭವಿಸಿರುವ ಸಾಧ್ಯತೆಯಿದೆ. ನಿಖರ ಕಾರಣ ಪತ್ತೆಗೆ ತನಿಖೆ ನಡೆಸಲಾಗುತ್ತದೆ. ಜತೆಗೆ ಕಟ್ಟಡದಲ್ಲಿ ಮುಂಜಾಗ್ರತಾ ಕ್ರಮಗಳು, ನಿರಾಕ್ಷೇಪಣಾ ಪತ್ರಪಡೆಯಲಾಗಿದೆಯೇ ಎಂಬುದರ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತದೆ ಎಂದು ಹೇಳಿದರು.

ಸಮಯಪ್ರಜ್ಞೆ ಮೆರೆದ ಮೌಲಾನ ಅಲಿ: “ಫ‌ರಾ ಟವರ್‌ನಲ್ಲಿ ದಟ್ಟಹೊಗೆ ಕಾಣಿಸಿಕೊಂಡಿದೆ ಎಂದು ಭದ್ರತಾ ಸಿಬ್ಬಂದಿ ಹೇಳಿದ ಕೂಡಲೇ ನಮ್ಮ ಮೂರ್‍ನಾಲ್ಕು ಸಿಬ್ಬಂದಿಯನ್ನು ಕರೆದುಕೊಂಡು 25 ಅಗ್ನಿನಂದಕ ಸಿಲಿಂಡರ್‌ಗಳ ಸಮೇತ ಓಡಿದೆ. ದಟ್ಟಹೊಗೆ ಏನೂ ಕಾಣಿಸುತ್ತಿರಲಿಲ್ಲ. ಹೊಗೆಯಲ್ಲಿಯೇ ವಿದ್ಯುತ್‌ ನಿಯಂತ್ರಣ ಇರುವ ಕೊಠಡಿಗೆ ನುಗ್ಗಿ ವಿದ್ಯುತ್‌ ಸಂಪರ್ಕ ಕಡಿತಗೊಳಿಸಿದೆ.

ಬಳಿಕ ಸಿಲಿಂಡರ್‌ಗಳ ಮೂಲಕ ಬೆಂಕಿ ನಂದಿಸಿ, ಕಟ್ಟಡದ ಒಳಗಿದ್ದವರಿಗೆ ಮೆಟ್ಟಿಲುಗಳ ಮೂಲಕ ಇಳಿಯುವಂತೆ ಮನವಿ ಮಾಡಿಕೊಂಡೆವು. ಎಲ್ಲರೂ ಸುರಕ್ಷಿತವಾಗಿ ಹೊರಗೆ ಬಂದರು,’ ಎಂದು ಬಾರ್ಟನ್‌ ಕಟ್ಟಡ ನಿರ್ವಹಣೆ ಮಾಡುವ ಮೌಲಾನ ಅಲಿ ವಿವರಿಸಿದರು. “ಫ‌ರಾ ಟವರ್‌ ಕಟ್ಟಡದಲ್ಲಿ ಬೆಂಕಿ ನಂದಿಸುವ ಸಾಧನಗಳು ಇರಲಿಲ್ಲ. ಹೀಗಾಗಿ ನಮ್ಮದೇ ಅಗ್ನಿ ನಂದಕಗಳನ್ನು ಬಳಸಿದೆವು. ಘಟನೆಯಲ್ಲಿ ಯಾರಿಗೂ ಏನೂ ಆಗಲಿಲ್ಲ ಎಂಬ ಸಮಾಧಾನವಿದೆ,’ ಎಂದು ಅಲಿ ಹೇಳಿದರು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ