ತನಿಖಾ ವರದಿ ಆಧರಿಸಿ ಕ್ರಮ

Team Udayavani, Jun 20, 2019, 3:05 AM IST

ಬೆಂಗಳೂರು: ಹೆಬ್ಬಾಳ ಬಳಿ ಕಾಮಗಾರಿ ಹಂತದಲ್ಲಿದ್ದ ಎಸ್‌ಟಿಪಿ ಟ್ಯಾಂಕ್‌ನ ಮೇಲ್ಛಾವಣಿ ಕುಸಿತಕ್ಕೆ ಸಂಬಂಧಿಸಿದಂತೆ ಈಗಾಗಲೇ ತನಿಖೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಬುಧವಾರ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ಜಲಮಂಡಳಿ ಅಧಿಕಾರಿಗಳಿಂದ ಮಾಹಿತಿ ಪಡೆದ ಬಳಿಕ ಸುದ್ದಿಗಾರರ ಜತೆ ಮಾತನಾಡಿದರು.

ನಿರ್ಮಾಣ ಹಂತದ ತ್ಯಾಜ್ಯ ನೀರು ಸಂಸ್ಕರಣೆ ಘಟಕದ ಮೇಲ್ಛಾವಣಿ ಕುಸಿದು ಮೂರು ಮಂದಿ ಎಂಜಿನಿಯರ್‌ಗಳು ಸಾವನ್ನಪ್ಪಿರುವುದು ದುರದೃಷ್ಟಕರ. ಮೃತರ ಕುಟುಂಬಕ್ಕೆ ಇಲಾಖೆಯಿಂದ ಪರಿಹಾರ ನೀಡುವ ಕುರಿತು ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಹೇಳಿದರು.

ಇದು ಜಲಮಂಡಳಿ ನಿರ್ಮಿಸುತ್ತಿರವ ಎರಡನೇ ಅತಿ ದೊಡ್ಡ ಎಸ್‌ಟಿಪಿ ಆಗಿದ್ದು, ಶೀಘ್ರ ಕಾಮಗಾರಿ ಪೂರ್ಣಗೊಳಿಸಿ ಕಾರ್ಯಾರಂಭಿಸಲು ನಿರ್ದೇಶನ ನೀಡಲಾಗಿತ್ತು. ಆದರೆ, ಕಾಮಗಾರಿ ಪರಿಶೀಲನೆ ವೇಳೆಯೇ ಅವಘಡ ಸಂಭವಿಸಿರುವುದು ಬೇಸರ ತರಿಸಿದೆ ಎಂದರು.

ಮೇಚ್ಛಾವಣಿ ಕುಸಿತಕ್ಕೆ ಕಾರಣವೇನು, ಏನು ದೋಷವಾಗಿದೆ ಎಂಬುದು ತನಿಖೆಯಿಂದ ತಿಳಿಯಲಿದೆ. ಇದಕ್ಕಾಗಿ ಮೂರನೇ ಪ್ರತ್ಯೇಕ ಸಂಸ್ಥೆಯಿಂದ ತನಿಖೆಗೆ ನಡೆಸಲಾಗುತ್ತಿದೆ. ಇದರ ಜತೆಗೆ ಇಲಾಖೆಯಿಂದಲೂ ತನಿಖೆಗೆ ಸೂಚಿಸಲಾಗಿದ್ದು,

ಆ ದಿನ ಯಾರೆಲ್ಲಾ ಅಧಿಕಾರಿಗಳು ಸ್ಥಳದಲ್ಲಿದ್ದರು, ಮುಂಜಾಗ್ರತೆ ಕ್ರಮ ಕೈಗೊಂಡಿರಲಿಲ್ಲವೇ ಎಂಬ ಅಂಶಗಳ ಕುರಿತು ತನಿಖೇ ನಡೆಸಿ, ಇಂಥ ಘಟನೆ ಮರುಕಳಿಸದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಸೆಂಟ್ರಿಂಗ್‌ ನಡೆಯುವಾಗ ಮುಖ್ಯ ಎಂಜಿನಿಯರ್‌ ಸ್ಥಳದಲ್ಲಿ ಇದ್ದರಾ, ಅವರ ನೇತೃತ್ವದಲ್ಲೇ ಕೆಲಸ ಮಾಡಿಸಬೇಕು.

ಕಾಮಗಾರಿಯು ಪ್ರಮುಖ ಘಟ್ಟದಲ್ಲಿದ್ದಾಗ ನೀವೇ ಹೋಗಿಲ್ಲದಿರುವುದು ಬೇಜವಾಬ್ದಾರಿ ತೋರಿಸುತ್ತದೆ. ಇಂತಹ ಘಟನೆಯಿಂದ ಮುಂದೆ ಕಾಮಗಾರಿಗೆ ಕಾರ್ಮಿಕರು ಹೇಗೆ ಬರುತ್ತಾರೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಡಿಸಿಎಂ, ತನಿಖಾ ವರದಿ ಬಳಿಕ ತಪ್ಪು ಮಾಡಿರುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳುತ್ತೇವೆ ಎಂದು ಹೇಳಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ