ಜಾಹಿರಾತು ಫಲಕಗಳ ಅಳವಡಿಕೆ ಮಧ್ಯಂತರ ಆದೇಶ ತೆರವು
Team Udayavani, Sep 19, 2018, 12:43 PM IST
ಬೆಂಗಳೂರು: ಜಾಹಿರಾತು ಫಲಕಗಳ ಅಳವಡಿಕೆಗೆ ಸಂಬಂಧಿಸಿದಂತೆ ಜಾಹಿರಾತು ಸಂಸ್ಥೆಗಳ ವಿರುದ್ಧ ಯಾವುದೇ ಬಲವಂತದ ಕ್ರಮ ಜರುಗಿಸದಂತೆ ಈ ಹಿಂದೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ಮಂಗಳವಾರ ತೆರವುಗೊಳಿಸಿದೆ.
ನಗರದ ವ್ಯಾಪ್ತಿಯಲ್ಲಿ 1ವರ್ಷದ ಅವಧಿಗೆ ಎಲ್ಲ ಬಗೆಯ ಜಾಹಿರಾತು ಫಲಕಗಳ ಅಳವಡಿಕೆ ನಿಷೇಧಿಸಿ ಕೈಗೊಳ್ಳಲಾಗಿರುವ ನಿರ್ಣಯದ ಪ್ರಕಾರ, ಅರ್ಜಿದಾರ ಜಾಹಿರಾತು ಸಂಸ್ಥೆಗಳ ವಿರುದ್ಧ ಬಲವಂತದ ಕ್ರಮಕ್ಕೆ ಮುಂದಾಗದಂತೆ ಬಿಬಿಎಂಪಿಗೆ ಸೂಚಿಸಿ ಸೆ.6ರಂದು ನೀಡಿದ್ದ ಮಧ್ಯಂತರ ಆದೇಶವನ್ನು ನ್ಯಾ. ವಿನೀತ್ ಕೊಠಾರಿ ಅವರಿದ್ದ ಪೀಠ ತೆರವುಗೊಳಿಸಿತ್ತು.
ಬಿಬಿಎಂಪಿ ಕೌನ್ಸಿಲ್ ಸಭೆಯಲ್ಲಿ ಕೈಗೊಂಡಿರುವ ನಿರ್ಣಯ ರದ್ದುಪಡಿಸುವಂತೆ ಕೋರಿ ಮೆಸರ್ಸ್ ಅವಿನಾಶಿ ಆ್ಯಡ್ಸ್ ಔಟ್‌ಡೋರ್ ಅಡ್ವಟೈìಸಿಂಗ್ ಸೇರಿ ಹಲವು ಜಾಹೀರಾತು ಏಜೆನ್ಸಿಗಳು ತಕರಾರು ಅರ್ಜಿ ಸಲ್ಲಿಸಿದ್ದರು. ಇವುಗಳ ವಿಚಾರಣೆ ಮಂಗಳವಾರ ನಡೆಯಿತು.
ಈ ಮಧ್ಯೆ ಫ್ಲೆಕ್ಸ್ ನಿಷೇಧ ನಿರ್ಣಯಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಲು ನಿರಾಕರಿಸಿದ ಪೀಠ, ಫ್ಲೆಕ್ಸ್, ಹೋರ್ಡಿಂಗ್ಸ್ ತೆರವು ಸಂಬಂಧ ಸಲ್ಲಿಕೆಯಾಗಿರುವ ಹಲವು ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳು ಮುಖ್ಯ ನ್ಯಾ. ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಾಕಿ ಇವೆ. ಆ ಎಲ್ಲ ಆರ್ಜಿಗಳು ಇತ್ಯರ್ಥವಾದ ಬಳಿಕ ಈ ತಕರಾರು ಅರ್ಜಿಗಳ ಅಂತಿಮ ವಿಚಾರಣೆ ನಡೆಸಲಾಗುವುದು ಎಂದು ತಿಳಿಸಿ ವಿಚಾರಣೆ ಮುಂದೂಡಿತು.