ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ

Team Udayavani, Jul 12, 2019, 3:37 PM IST

ಬೆಂಗಳೂರು: ‘ಕೆ.ಆರ್‌. ಮಾರುಕಟ್ಟೆ ಪಾದಚಾರಿ ಮಾರ್ಗ ಮತ್ತು ರಸ್ತೆ ಮಾರ್ಗ ಒತ್ತುವರಿ ಮಾಡಿಕೊಂಡಿದ್ದ ವ್ಯಾಪಾರಿಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು’ ಎಂದು ಮೇಯರ್‌ ಗಂಗಾಂಬಿಕೆ ಹೇಳಿದರು.

ಕೆ.ಆರ್‌. ಮಾರುಕಟ್ಟೆಯಲ್ಲಿ ಗುರುವಾರ ತಪಾಸಣೆ ನಡೆಸಿದ ಮೇಯರ್‌, ‘ಬಿಬಿಎಂಪಿ ಅಧಿಕಾರಿಗಳು ಭೇಟಿ ಮಾಡುವಾಗ ಮಾತ್ರ ಸ್ವಚ್ಛತೆ ಕಾಪಾಡಿಕೊಳ್ಳಲಾಗುತ್ತಿದೆ. ಅಗ್ನಿಶಾಮಕ ದಳ ಮಾರುಕಟ್ಟೆಯೊಳಗೆ ಬರಲು ಮಾರ್ಗ ಕಲ್ಪಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ನೆಲಮಹಡಿಯಲ್ಲಿ ಸಂಗ್ರಹವಾಗಿರುವ ಕಸದ ರಾಶಿಯನ್ನು ಕೂಡಲೆ ತೆರವುಗೊಳಿಸಿ, ಆ ಜಾಗದಲ್ಲಿ ಕಸ ಬೀಳದಂತೆ ನೋಡಿಕೊಳ್ಳಬೇಕು. ಜತೆಗೆ ಯಾರೊಬ್ಬರೂ ಅಲ್ಲಿ ಕಸ ಬಿಸಾಡದಂತೆ ಮುಖ್ಯದ್ವಾರದಲ್ಲಿ ಶೆಟರ್‌ ಅಳವಡಿಸಿ, ಅಗ್ನಿಶಾಮಕ ದಳ ಬಂದ ವೇಳೆ ಮಾತ್ರ ಅದನ್ನು ತೆರೆಯುವಂತೆ ಕ್ರಮವಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಲಾಗಿದೆ’ ಎಂದು ತಿಳಿಸಿದರು.

ವಾರಕ್ಕೊಮ್ಮೆ ಸಭೆ ನಡೆಸಿ: ಕೆ.ಆರ್‌.ಮಾರುಕಟ್ಟೆ ನಿರ್ವಹಣೆ ಮಾಡುವ ಎಲ್ಲ ಅಧಿಕಾರಿಗಳ ಸಮ್ಮುಖದಲ್ಲಿ ವಾರಕ್ಕೊಮ್ಮೆ ಸಭೆ ನಡೆಸಬೇಕು. ಸಭೆಯ ಮಾಹಿತಿಯನ್ನು ಕಚೇರಿಗೆ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಭೆ ನಡೆಸದಿದ್ದರೆ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಮೇಯರ್‌ ತಿಳಿಸಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ