ಮನರಂಜನೆ ತಾಣವಾದ ಫ‌ಲಪುಷ್ಪ ಪ್ರದರ್ಶನ


Team Udayavani, Jan 21, 2019, 6:44 AM IST

manaranjane.jpg

ಬ್ರಿಟಿಷ್‌ ಸೈನಿಕರಿಗೆ ಬೇಕಾದ ತರಕಾರಿ ಬೆಳೆಯುತ್ತಿದ್ದ ಲಾಲ್‌ಬಾಗ್‌ ಇಂದು ಸಸ್ಯಕಾಶಿಯಾಗಿ ಬೆಳೆದಿದೆ. ಪ್ರತಿ ವರ್ಷ ಇಲ್ಲಿ ನಡೆಯುವ ಫ‌ಲಪುಷ್ಪ ಪ್ರದರ್ಶನಗಳು ವಿವಿಧ ಕಾಲಘಟ್ಟದಲ್ಲಿ ನಗರದ ಪ್ರತಿಷ್ಠಿತರಿಂದ ಹಿಡಿದು ಹಳ್ಳಿಯ ರೈತರ ಜಮೀನುಗಳನ್ನು ತಲುಪುವಲ್ಲಿ ಯಶಸ್ವಿಯಾಗಿವೆ. ಆದರೆ, ಇಂದು “ಥೀಮ್‌’ಗಳ ಹಿಂದೆ ಬಿದ್ದಿರುವ ಪ್ರದರ್ಶನವು ತನ್ನ ಮೂಲ ಪರಿಕಲ್ಪನೆ ಬದಲಿಸಿಕೊಂಡಿದೆ ಎಂಬ ಕೂಗು ಕೇಳಿಬರುತ್ತಿದೆ. ಈ ನಿಟ್ಟಿನಲ್ಲಿ ಒಂದು ಪಕ್ಷಿನೋಟ ಈ ಬಾರಿಯ ಸುದ್ದಿಸುತ್ತಾಟದಲ್ಲಿ…

ಲಾಲ್‌ಬಾಗ್‌ನ‌ಲ್ಲಾದ ಸಂಶೋಧನೆಗಳು, ದೇಶ-ವಿದೇಶಗಳಿಂದ ತಂದು ಬೆಳೆದ ಅಪರೂಪದ ಹೂವು-ಹಣ್ಣು, ತರಕಾರಿಗಳನ್ನು ಪರಿಚಯಿಸಲು ತೋಟಗಾರಿಕೆ ಪ್ರದರ್ಶನ (ಇಂದಿನ ಫ‌ಲಪುಷ್ಪ ಪ್ರದರ್ಶನ) ಪ್ರಾರಂಭಗೊಂಡು ಕಾಲಾನುಕ್ರಮದಲ್ಲಿ ಇಡೀ ದೇಶದ ಗಮನಸೆಳೆದಿತ್ತು. ಇದನ್ನು ವೀಕ್ಷಿಸಲು ನಾನಾ ಭಾಗಗಳಿಂದ ಸಂಶೋಧಕರು, ಸಸ್ಯಶಾಸ್ತ್ರಜ್ಞರು, ವಿದ್ಯಾರ್ಥಿಗಳು ಹರಿದುಬರುತ್ತಿದ್ದರು. ಆದರೆ, ಅಂದು ಶಾಸ್ತ್ರೀಯವಾಗಿ ನಡೆಯುತ್ತಿದ್ದ ತೋಟಗಾರಿಕೆ ಪ್ರದರ್ಶನ ಈಗಲೂ ಹಾಗೇ ನಡೆಯುತ್ತಿದೆಯೇ?

ಉತ್ತರ- ಇಲ್ಲ. ಏಕೆಂದರೆ, ಫ‌ಲಪುಷ್ಪ ಪ್ರದರ್ಶನದ ಮೂಲ ಪರಿಕಲ್ಪನೆಯೇ ಇಂದು ಬದಲಾಗುತ್ತಿದೆ. ವೈವಿಧ್ಯತೆಯಿಂದ ಏಕತಾನತೆಯತ್ತ ಮುಖಮಾಡುತ್ತಿದೆ. ಶಾಸ್ತ್ರೀಯತೆ ಬದಲಿಗೆ ಸ್ಮಾರಕಕ್ಕೆ ಸೀಮಿತವಾಗುತ್ತಿದೆ. ಇದರಿಂದ ಭೇಟಿ ನೀಡುವವರ ಸಂಖ್ಯೆ ಮತ್ತು ಆದಾಯ ಹಿಂದಿಗಿಂತ ನೂರುಪಟ್ಟು ಹೆಚ್ಚಾಗಿರಬಹುದು. ಆದರೆ, ಹೊಸತನ ಇಲ್ಲವಾಗಿದೆ. ಸಂಶೋಧನಾ ಕೇಂದ್ರದಂತಿದ್ದ ಲಾಲ್‌ಬಾಗ್‌, ಮನರಂಜನೆಯ ತಾಣವಾಗುತ್ತಿದೆ ಎಂಬ ಆತಂಕ ತಜ್ಞರಿಂದ ವ್ಯಕ್ತವಾಗುತ್ತಿದೆ.

ಸಸ್ಯಕಾಶಿಯಲ್ಲಿ ಮೊದಲ ಬಾರಿಗೆ ಫ‌ಲಪುಷ್ಪ ಪ್ರದರ್ಶನ ನಡೆದದ್ದು 1836ರಲ್ಲಿ. ಅಂದು ಉದ್ಯಾನವನ್ನು ನಿರ್ವಹಣೆ ಮಾಡುತ್ತಿದ್ದವನು ವಿಲಿಯಂ ಮುನ್ರೊà. ಸತತ ನಾಲ್ಕು ವರ್ಷಗಳ ಕಾಲ ಸಾಕಷ್ಟು ಸಂಶೋಧನೆ ನಡೆಸಿ, ಉದ್ಯಾನವನ್ನು ಅಭಿವೃದ್ಧಿಪಡಿಸುತ್ತಾನೆ. ಆ ವರ್ಷ ಉತ್ತಮ ಪ್ರದರ್ಶನಕ್ಕೆ ಪಾರಿತೋಷಕವನ್ನೂ ಮುನ್ರೊà ನೀಡುತ್ತಾನೆ. ಇದಾಗಿ ಕೆಲವು ವರ್ಷಗಳ ಕಾಲ ಪ್ರದರ್ಶನ ಹಿನ್ನೆಲೆಗೆ ಸರಿಯಿತು. ಈ ಮಧ್ಯೆ ಮದ್ರಾಸ್‌ ಸರ್ಕಾರವು ಸೈನಿಕರಿಗೆ ಬೇಕಾಗುವ ಹಣ್ಣು-ತರಕಾರಿ ಬೆಳೆಯಲು ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಹ್ಯೂಗ್‌ ಕ್ಲೆಗಾರ್ನ್ ಎಂಬಾತನನ್ನು ಲಾಲ್‌ಬಾಗ್‌ಗೆ ನೇಮಕ ಮಾಡಲಾಗುತ್ತದೆ.

ಆತ, ಲಾಲ್‌ಬಾಗನ್ನು ರಾಜ್ಯ ಬೊಟಾನಿಕಲ್‌ ಗಾರ್ಡನ್‌ ಆಗಿ ಮೇಲ್ದರ್ಜೆಗೇರಿಸುವಂತೆ ಮನವಿ ಮಾಡುತ್ತಾನೆ. ಇದು ಮಾನ್ಯವಾಗುತ್ತದೆ. ಇದರ ಪ್ರತಿಫ‌ಲವಾಗಿ ಬಜೆಟ್‌ ಕೂಡ ಬರಲು ಶುರುವಾಗುತ್ತದೆ. ಆಗ ಇದರ ನಿರ್ವಹಣೆಗೆ ಅಧಿಕೃತವಾಗಿ ಲಂಡನ್‌ನ ಕ್ಯು ರಾಯಲ್‌ ಬೊಟಾನಿಕಲ್‌ ಗಾರ್ಡನ್‌ನಿಂದ ವಿಲಿಯಂ ನ್ಯೂ ಎಂಬ ಸಸ್ಯಶಾಸ್ತ್ರಜ್ಞನನ್ನು ಕ್ಯುರೇಟರ್‌ ಆಗಿ ನೇಮಕ ಮಾಡಲಾಗುತ್ತದೆ. ಅವನು 1863ರಲ್ಲಿ ಬ್ಯಾಂಡ್‌ಸ್ಟಾಂಡ್‌ ನಿರ್ಮಿಸಿ, ಅದರ ಸುತ್ತ ಫ‌ಲ-ಪುಷ್ಪ ಪ್ರದರ್ಶನ ಏರ್ಪಡಿಸುತ್ತಿದ್ದ. 1867ರಿಂದ ಕ್ರಮಬದ್ಧ ಆಯೋಜನೆ ಶುರುವಾಯಿತು.

ವರ್ಷಕ್ಕೊಮ್ಮೆ ನಡೆಯುತ್ತಿತ್ತು: 1873-74ರಲ್ಲಿ ಬಂದ ಕ್ಯುರೇಟರ್‌ ಜಾನ್‌ ಕ್ಯಾಮರಾನ್‌ ಈ ಪ್ರದರ್ಶನಕ್ಕೆ ಹೊಸ ಸ್ಪರ್ಶ ನೀಡಿದನು. ಅದು ಕೃಷಿ, ತೋಟಗಾರಿಕೆ, ಗಿಡಮೂಲಿಕೆ, ಆಹಾರ, ಪಶುಸಂಗೋಪನೆ ಸೇರಿದಂತೆ ಸಮಗ್ರವಾದ ದೃಷ್ಟಿಕೋನವನ್ನು ಒಳಗೊಂಡಿತ್ತು. ವರ್ಷಕ್ಕೊಮ್ಮೆ ಇದು ನಡೆಯುತ್ತಿತ್ತು. ಅಷ್ಟೇ ಅಲ್ಲ, ಕೃಷಿ-ತೋಟಗಾರಿಕಾ ಪ್ರದರ್ಶನ ಸಮಿತಿಯನ್ನೂ ಆತ ರಚಿಸುತ್ತಾನೆ.

ಇನ್ನೂ ಒಂದು ಹೆಜ್ಜೆ ಮುಂದೆಹೋಗಿ ಇಂಗ್ಲೆಂಡ್‌ ಮಾದರಿಯಲ್ಲಿ ಇಲ್ಲಿಯೂ ವಿದೇಶಿ ಜಾತಿಯ ಗಿಡಗಳನ್ನು ಬೆಳೆಸಿ, ಸಂರಕ್ಷಿಸಲು ‘conservatory’ ಪ್ರಸ್ತಾವನೆ ಮುಂದಿಟ್ಟ. ಇದಕ್ಕೆ 1889ರಲ್ಲಿ ಮೈಸೂರು ಮಹಾರಾಜ ಚಾಮರಾಜ ಒಡೆಯರ್‌ ಅವರು 75 ಸಾವಿರ ರೂ. ಅನುದಾನವನ್ನೂ ನೀಡಿದರು. ಅದೇ ಈಗಿನ ಗಾಜಿನ ಮನೆ ಎಂದು ತೋಟಗಾರಿಕೆ ಸಮಾಲೋಚಕ ಮತ್ತು ತಜ್ಞ ಸಂತೆ ನಾರಾಯಣಸ್ವಾಮಿ ತಿಳಿಸುತ್ತಾರೆ.

ಈ ಗಾಜಿನ ಮನೆಯಲ್ಲಿ ಉಷ್ಣವಲಯ, ಸಮಶೀತೋಷ್ಣವಲಯದ ಗಿಡಗಳು, ಕಳ್ಳಿಜಾತಿಯ ಗಿಡಗಳು, ಗುಲಾಬಿ, ಔಷಧೀಯ ಸಸ್ಯಗಳನ್ನು ವರ್ಗೀಕರಿಸಿ ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಈ ರೀತಿಯ ವರ್ಗೀಕರಣ ದೇಶದಲ್ಲಿ ಎಲ್ಲಿಯೂ ಇರಲಿಲ್ಲ. ನಂತರ 1908ರಲ್ಲಿ ಕ್ಯುರೇಟರ್‌ ಆಗಿ ಬಂದವರು ಕ್ರುಂಬಿಗಲ್‌. ಅವರು ಲಾಲ್‌ಬಾಗ್‌ಗೆ ಸೀಮಿತವಾಗಿದ್ದ ಉದ್ಯಾನವನ್ನು ನಗರದ ಪ್ರತಿಷ್ಠಿತರ ಮನೆಗಳಿಗೆ ಕೊಂಡೊಯ್ದರು. ಇದಕ್ಕಾಗಿ ತೋಟಗಾರಿಕಾ ಸಂಘದ ಪ್ರಸ್ತಾವನೆ ಇಟ್ಟರು. ಅದೇ ಇಂದಿನ ಮೈಸೂರು ಉದ್ಯಾನ ಕಲಾ ಸಂಘ. 1912ರಿಂದ ನಿರಂತರವಾಗಿ ಈ ಸಂಘವು ಪ್ರದರ್ಶನ ನಡೆಸಿಕೊಂಡು ಬರುತ್ತಿದೆ.

ಪ್ರದರ್ಶನಕ್ಕೆ ಹೊಸ ಆಯಾಮ: 1932ರಲ್ಲಿ ಮೊದಲ ದೇಶೀಯ ವ್ಯಕ್ತಿ ತೋಟಗಾರಿಕಾ ಅಧಿಕಾರಿಯಾಗಿ ರಾವ್‌ಬಹದ್ದೂರ್‌ ಜವರಾಯ ಎಂಬುವವರು ನೇಮಕಗೊಂಡರು. ತದನಂತರ ಸಂಯುಕ್ತ ಭಾರತದ ಮುಖ್ಯ ಮಾರುಕಟ್ಟೆ ಅಧಿಕಾರಿಯಾಗಿದ್ದ ಅವರು, ಲಾಲ್‌ಬಾಗ್‌ ಮಾದರಿಯ ಪ್ರದರ್ಶನವನ್ನು ದೆಹಲಿಗೆ ಪರಿಚಯಿಸಿದರು. ಅಲ್ಲಿಯೂ ಫ‌ಲಪುಷ್ಪ ಪ್ರದರ್ಶನ ಶುರುವಾಗಲು ಇದು ಕಾರಣವಾಯಿತು.

1947ರಲ್ಲಿ ಡಾ.ಎಂ.ಎಚ್‌.ಮರಿಗೌಡ ಈ ಪ್ರದರ್ಶನಕ್ಕೆ ಹೊಸ ಆಯಾಮ ನೀಡಿದರು. ರಾಜ್ಯದ ಉದ್ದಗಲಕ್ಕೂ ಸಂಚರಿಸಿ, ರೈತರು ಬೆಳೆದ ತೋಟಗಾರಿಕಾ ಬೆಳೆಗಳಿಗೂ ಈ ಪ್ರದರ್ಶನದಲ್ಲಿ ವೇದಿಕೆ ಕಲ್ಪಿಸಿದರು. ಪರಿಣಾಮ ಪ್ರತಿಷ್ಠಿತರು ಮತ್ತು ಯೂರೋಪಿಯನ್‌ರಿಗೆ ಸೀಮಿತವಾಗಿದ್ದ ಪ್ರದರ್ಶನ ಸಾಮಾನ್ಯ ವರ್ಗಕ್ಕೂ ವಿಸ್ತರಣೆಗೊಂಡಿತು. ಅಷ್ಟೇ ಅಲ್ಲ, ವರ್ಷದಲ್ಲಿ ಎರಡು ಬಾರಿ ಪ್ರದರ್ಶನ ನಡೆಸುವುದಕ್ಕೆ ನಾಂದಿ ಹಾಡಿದರು. ಇದರಿಂದ ರೈತರಿಗೂ ಪ್ರೇರಣೆ ದೊರೆಯಿತು ಎಂದು ವಿವರಿಸಿದರು.

ಜತೆಗೆ ಸರ್ಕಾರಿ ಸಂಸ್ಥೆಗಳೂ ಪ್ರದರ್ಶನದಲ್ಲಿ ಭಾಗವಹಿಸುವ ಅವಕಾಶವನ್ನು ಮರಿಗೌಡರು ಮಾಡಿಕೊಟ್ಟರು. ಇದರ ಫ‌ಲವಾಗಿ ಬಿಇಎಂಎಲ್‌, ಎಚ್‌ಎಎಲ್‌, ಎಚ್‌ಎಂಟಿಯಂತಹ ಸಂಸ್ಥೆಗಳಿಗೆ ಉದ್ಯಾನಗಳ ಬಗ್ಗೆ ಆಸಕ್ತಿ ಬೆಳೆಯಿತು. ಅಲ್ಲಿಯೂ ಉದ್ಯಾನಗಳು ತಲೆಯೆತ್ತುವಂತಾಯಿತು. ಆದರೆ, 2000ದಿಂದ ಈಚೆಗೆ ಇದರ ಪರಿಕಲ್ಪನೆ ಬದಲಾಯಿತು. ಥೀಮ್‌ಗಳನ್ನು ಇಟ್ಟುಕೊಂಡು ಜನಾಕರ್ಷಣೆಗೆ ಒತ್ತುಕೊಡಲು ಶುರುವಾಯಿತು.

ಅದನ್ನು ಗುತ್ತಿಗೆ ನೀಡುವ ಪದ್ಧತಿಯೂ ಬಂತು. ಹೀಗೆ ಗುತ್ತಿಗೆ ಪಡೆದವರು ಒಂದೇ ರೀತಿಯ ಹೂವುಗಳಿಂದ ಅಲಂಕರಿಸಿದ ಸ್ಮಾರಕಗಳನ್ನು ನಿರ್ಮಿಸಲು ಆರಂಭಿಸಿದರು. ಪರಿಣಾಮ ವೈವಿಧ್ಯತೆ ಕಳೆದುಕೊಳ್ಳುತ್ತಿರುವ ಬೆನ್ನಲ್ಲೇ ಸಂಶೋಧಕರು, ವಿಜ್ಞಾನಿಗಳು, ಸಸ್ಯಶಾಸ್ತ್ರ ವಿದ್ಯಾರ್ಥಿಗಳು ಇದರಿಂದ ದೂರ ಉಳಿಯುತ್ತಿದ್ದಾರೆ. ಬದಲಿಗೆ ಸಾಮಾನ್ಯ ಜನರಿಗೆ ಇದೊಂದು ಮನರಂಜನೆಯ ತಾಣವಾಗುತ್ತಿದೆ ಎಂದು ಸಂತೆ ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸುತ್ತಾರೆ.

ಮೈಸೂರು ಉದ್ಯಾನಕಲಾ ಸಂಘ ಆರಂಭವಾದ ದಿನಗಳಿಂದ ಹಲವು ವರ್ಷಗಳ ಕಾಲ ಕಡಿಮೆ ವೆಚ್ಚದಲ್ಲೇ ಫ‌ಲಪುಷ್ಪ ಪ್ರದರ್ಶನ ಅಣಿಯಾಗುತ್ತಿತ್ತು. ತೋಟಗಾರಿಕಾ ಬೆಳೆಗಳ ಬಗ್ಗೆಯೂ ನೋಡುಗರಿಗೆ ಒಂದು ರೀತಿ ಕೃಷಿ ಶಿಕ್ಷಣ ಇರುತ್ತಿತ್ತು. ಪ್ರದರ್ಶನ ವೀಕ್ಷಿಸುತ್ತಿದ್ದ ರೈತರು ಈ ರೀತಿಯ ಪ್ರಯೋಗಗಳನ್ನು ತಮ್ಮ ತೋಟದಲ್ಲೂ ಮಾಡುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ.

ಪ್ರದರ್ಶನಕ್ಕಾಗಿಯೇ “ಇವೆಂಟ್‌ ಮ್ಯಾನೇಜರ್‌’ ಇದ್ದಾರೆ. ಡೆಕೋರೇಟರ್‌ಗಳ ಜತಗೆ ಪ್ರಾಯೋಜಕರೂ ಆಗಮಿಸಿದ್ದಾರೆ. ಹೀಗಾಗಿ, ರೈತರಿಗೆ ಕೃಷಿ ಶಿಕ್ಷಣ ನೀಡಬೇಕಾಗಿದ್ದ ಫ‌ಲಪುಷ್ಪ ಪ್ರದರ್ಶನ ಈಗ ಶಿಕ್ಷಣದ ಬದಲಿಗೆ ಪ್ರವಾಸಿರಿಗೆ ಮನಂರಜನೆ ನೀಡುತ್ತಿದೆ ಎಂದು ತೋಟಗಾರಿಕೆ ಇಲಾಖೆ ನಿವೃತ್ತ ಹೆಚ್ಚುವರಿ ನಿರ್ದೇಶಕ ಡಾ.ಎಸ್‌.ವಿ.ಹಿತ್ತಲಮನಿ ಅಸಮಾಧಾನ ವ್ಯಕ್ತಪಡಿಸುತ್ತಾರೆ. 

ಒಂದು ರೂ.ನಿಂದ 70ರೂ.ವರೆಗೆ: ಪ್ರಾರಂಭದ ದಿನಗಳಲ್ಲಿ ಫ‌ಲಪುಷ್ಪ ಪ್ರದರ್ಶನದ ಪ್ರವೇಶ ಶುಲ್ಕ ಒಂದು ರೂ. ಇತ್ತು. ಈಗ 70 ರೂ. ಆಗಿದೆ. ಪ್ರದರ್ಶನಕ್ಕೆ ಕೋಟ್ಯಂತರ ರೂ. ಸುರಿದು, ಅಷ್ಟೇ ಪ್ರಮಾಣದ ಹಣವನ್ನು ಸಾರ್ವಜನಿಕರಿಂದ ಪಡೆಯಲಾಗುತ್ತದೆ. ಈ ಹಿಂದೆ ಪ್ರದರ್ಶನವನ್ನು ಸಾವಿರ, ಲಕ್ಷ ರೂ. ವೆಚ್ಚದಲ್ಲಿ ಆಯೋಜಕರು ಮುಗಿಸುತ್ತಿದ್ದರು. 2002-2003ರವರೆಗೂ ಮೂಲ ಪರಿಕಲ್ಪನೆ ಉಳಿಸಿಕೊಂಡಿತ್ತು ಎಂದು ಹೆಸರು ಹೇಳಲಿಚ್ಛಿಸದ ತೋಟಗಾರಿಕೆ ತಜ್ಞರು ನೆನಪಿಸಿಕೊಳ್ಳುತ್ತಾರೆ.

ಕುಗ್ಗಿದ ಉತ್ಸಾಹ: ಫ‌ಲಪುಷ್ಪ ಪ್ರದರ್ಶನದಲ್ಲಿ ಭಾಗವಹಿಸಲಿಕ್ಕಾಗಿಯೇ ಎಚ್‌ಎಎಲ್‌, ಬಿಇಎಲ್‌, ಎಚ್‌ಎಂಟಿಯಂತಹ ಅನೇಕ ಸಂಸ್ಥೆಗಳು ಪ್ರತ್ಯೇಕ ಅನುದಾನ ಮೀಸಲಿಡುತ್ತಿದ್ದವು. ಅಲ್ಲದೆ, ಈ ಸಂಬಂಧ ಅಧಿಕಾರಿಗಳನ್ನು ನೇಮಕ ಮಾಡುತ್ತಿದ್ದವು. ಆದರೆ, ಈಗ ಆ ಉತ್ಸಾಹ ಮರೆಯಾಗಿದೆ. ಕಾಟಾಚಾರಕ್ಕೆ ಕೆಲವೇ ಸಂಸ್ಥೆಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳುತ್ತಿವೆ ಎಂದು ತಜ್ಞರು ಅಭಿಪ್ರಾಯಪಡುತ್ತಾರೆ.
            
ಕೋಟಿ ಜನರಿಗೆ ಒಂದು ಲಾಲ್‌ಬಾಗ್‌: ಹಿಂದೆ ಒಂದು ಲಕ್ಷ ಜನರಿಗೆ ಒಂದು ಲಾಲ್‌ಬಾಗ್‌ ಇತ್ತು. ಇಂದು ಒಂದು ಕೋಟಿ ಜನರಿಗೆ ಒಂದು ಆಗಿದೆ. ಈ ನಿಟ್ಟಿನಲ್ಲಿ ಸರ್ಕಾರ ನಗರದ ಇತರ ಕಡೆಗಳಲ್ಲೂ ಲಾಲ್‌ಬಾಗ್‌ ನಿರ್ಮಿಸುವ ಅವಶ್ಯಕತೆ ಇದೆ ಎನ್ನುತ್ತಾರೆ ತಜ್ಞರು. ಏಕಕಾಲದಲ್ಲಿ ಲಕ್ಷಾಂತರ ಜನ ಲಾಲ್‌ಬಾಗ್‌ಗೆ ಬಂದಾಗ ಅದು ಅಲ್ಲಿರುವ ಸಸ್ಯೆಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದರಿಂದ ಅಲ್ಲಿನ ಗಿಡ-ಮರಗಳ ಆಯಸ್ಸು ಕೂಡ ಕಡಿಮೆಯಾಗಬಹುದು ಎಂದೂ ಅವರು ಅಭಿಪ್ರಾಯಪಡುತ್ತಾರೆ.

ಆದರೆ, ಇದು ಜನರ ವರ್ತನೆಯನ್ನು ಅವಲಂಬಿಸಿದೆ. ಉದ್ಯಾನದಲ್ಲಿ ಆರೋಗ್ಯಕ್ಕೆ ಪೂರಕವಾದ ವಾತಾವರಣ ಇರುವುದರಿಂದ ಜನ ಅಲ್ಲಿಗೆ ಬಂದು ಒಳ್ಳೆಯ ಗಾಳಿ ಸೇವನೆ ಮಾಡಬಹುದು. ಪ್ರಕೃತಿ ಸೌಂದರ್ಯ ಸವಿಯಲು ಇದು ವೇದಿಕೆಯೂ ಆಗಿದೆ. ಅದಕ್ಕೆ ಪೂರಕವಾಗಿ ಜನ ಕೂಡ ಅದನ್ನು ದೇವತೆಯಂತೆ ಕಾಣಬೇಕು. ಅದುಬಿಟ್ಟು, ಗಿಡ, ಹೂವು ಕೀಳುವುದು, ಮುಟ್ಟಿ ನೋಡುವುದರಿಂದ ಸಸ್ಯಗಳು ಹಾಳಾಗುತ್ತವೆ ಎಂದು ಪರಿಸರವಾದಿ ಡಾ.ಎ.ಎನ್‌. ಯಲ್ಲಪ್ಪರೆಡ್ಡಿ ತಿಳಿಸುತ್ತಾರೆ.

ಕೈದಿಗಳಿಂದ ನಿರ್ವಹಣೆ: 1800ರ ಆಸುಪಾಸಿನಲ್ಲಿ ಲಾಲ್‌ಬಾಗ್‌ನಲ್ಲಿ ಬ್ರಿಟಿಷ್‌ ಸೈನಿಕರಿಗೆ ಬೇಕಾಗುವ ತರಕಾರಿಗಳನ್ನು ಬೆಳೆಯುವ ತಾಣವಾಗಿತ್ತು. ಅದರ ನಿರ್ವಹಣೆಗೆ ವಾಗ್‌ (waugh) ಎಂಬ ಮಿಲಿಟರಿ ಸಸ್ಯ ವಿಜ್ಞಾನಿಯನ್ನು ನೇಮಕ ಮಾಡಲಾಗುತ್ತದೆ. 18 ವರ್ಷ ಆತ ಇದನ್ನು ಸ್ವಂತ ತೋಟದಂತೆ ಅಕ್ಕರೆಯಿಂದ ಬೆಳೆಸುತ್ತಾನೆ. ತಾನು ವರ್ಗಾವಣೆ ಆಗುವಾಗ ಈ ಉದ್ಯಾನವನ್ನು ಬ್ರಿಟಿಷ್‌ ಗವರ್ನರ್‌ ಜನರಲ್‌ಗೆ ಕೊಡುಗೆಯಾಗಿ ನೀಡುತ್ತಾನೆ. ಕೊಲ್ಕತಾದ ಬೊಟಾನಿಕಲ್‌ ಗಾರ್ಡನ್‌ನ ಶಾಖೆಯಾಗಿದ್ದ ಲಾಲ್‌ಬಾಗ್‌ ಅನ್ನು ಕೆಲವೇ ತಿಂಗಳಲ್ಲಿ ಹೊರಗಿಡಲಾಗುತ್ತದೆ. 

ಈ ಮಧ್ಯೆ 1836ರಲ್ಲಿ ಭಾರತೀಯ ಕೃಷಿ ತೋಟಗಾರಿಕಾ ಸೊಸೈಟಿ ಕೊಲ್ಕತ್ತದಲ್ಲಿ ಆರಂಭವಾಗುತ್ತದೆ. ಅದರ ಶಾಖೆಗಳು ಊಟಿ, ಮದ್ರಾಸ್‌, ಮುಂಬೈನಲ್ಲಿ ಬರುತ್ತವೆ. ಅಂದಿನ ಮೈಸೂರು ರಾಜ್ಯದ ಕಮೀಷನರ್‌ ಮಾರ್ಕ್‌ ಕಬ್ಬನ್‌ ಬೆಂಗಳೂರಿನಲ್ಲೂ ಒಂದು ಶಾಖೆ ತೆರೆಯಲು ಮೇಲಧಿಕಾರಿಗಳಿಗೆ ಮನವಿ ಮಾಡುತ್ತಾನೆ. ಅದರಂತೆ ಇಲ್ಲಿ ತೋಟಗಾರಿಕಾ ಸೊಸೈಟಿಯೊಂದು ಅಸ್ತಿತ್ವಕ್ಕೆ ಬರುತ್ತದೆ. ಆ ಸಮಿತಿಯಲ್ಲಿ ಮಿಲಿಟರಿ ಸೇನಾಧಿಕಾರಿಗಳೇ ಹೆಚ್ಚಾಗಿ ಸದಸ್ಯರಾಗಿದ್ದರು. 1842ರಲ್ಲಿ ಅದು ಮುಚ್ಚಲ್ಪಟ್ಟಿತು. ಇನ್ನು 1836ರಿಂದ 1867ರ ನಡುವೆ ಲಾಲ್‌ಬಾಗ್‌ ಸ್ವಲ್ಪ ಅಧೋಗತಿಗೆ ತಲುಪಿದ್ದೂ ಇದೆ. ಈ ಮಧ್ಯೆ ಸೆಂಟ್ರಲ್‌ ಜೈಲಿನಲ್ಲಿದ್ದ ಕೈದಿಗಳಿಂದ ಉದ್ಯಾನ ನಿರ್ವಹಣೆ ಕೆಲಸ ಮಾಡಿಸಲಾಯಿತು.

ಅಗತ್ಯಕ್ಕೆ ತಕ್ಕಂತೆ ಬದಲಾವಣೆ – ಡಾ.ಜಗದೀಶ್‌ ಸ್ಪಷ್ಟನೆ: ನಗರದ ಜನರ ಅಗತ್ಯಗಳಿಗೆ ತಕ್ಕಂತೆ ಫ‌ಲಪುಷ್ಪ ಪ್ರದರ್ಶನದ ಪರಿಕಲ್ಪನೆ ಮೂಡಿಬರುತ್ತಿದೆ. ಜತೆಗೆ ಮಹಾಪುರುಷರ ಪರಿಚಯ ಮತ್ತು ಮನಃಪರಿವರ್ತನೆ ಪ್ರಯತ್ನಗಳೂ ಇದರಲ್ಲಿ ಸೇರಿವೆ ಎಂದು ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ (ಉದ್ಯಾನಗಳು) ಡಾ.ಎಂ. ಜಗದೀಶ್‌ ಸ್ಪಷ್ಟಪಡಿಸಿದ್ದಾರೆ. ಕೆಲವು ದಶಕಗಳ ಹಿಂದೆ ತೋಟಗಾರಿಕೆ ನಮಗೆ ಅಪರಿಚಿತವಾಗಿತ್ತು. ಈ ಹಿನ್ನೆಲೆಯಲ್ಲಿ ಆಗ ನಮ್ಮ ರೈತರಿಗೆ ಅದನ್ನು ಪರಿಚಯಿಸುವ ಪ್ರಯತ್ನ ಈ ಪ್ರದರ್ಶನಗಳ ಮೂಲಕ ನಡೆಯುತ್ತಿತ್ತು.

ಈಗ ತಾಂತ್ರಿಕ ಜ್ಞಾನದಿಂದ ಹಿಡಿದು ಪ್ರತಿಯೊಂದೂ ಆಯಾ ಹೋಬಳಿ ಮತ್ತು ತಾಲ್ಲೂಕು ಮಟ್ಟದಲ್ಲೇ ದೊರೆಯುತ್ತಿದೆ. ಹಾಗಾಗಿ, ಅವರೆಲ್ಲಾ ಲಾಲ್‌ಬಾಗ್‌ ಮೇಲೆಯೇ ಅವಲಂಬನೆ ಆಗಿಲ್ಲ. ನಗರದ ಜನರಿಗೆ ಈಗ ಬೇಕಾಗಿರುವುದು ಅಲಂಕಾರಿಕ ತೋಟಗಾರಿಕೆ ಕುರಿತ ಮಾಹಿತಿ. ಅದನ್ನು ಪರಿಚಯಿಸುವ ಕೆಲಸ ನಡೆಯುತ್ತಿದೆ. ಇದರಲ್ಲಿಯೂ ಅಪರೂಪದ ಜಾತಿಯ ಗಿಡಗಳನ್ನು ಪ್ರದರ್ಶಿಸಲಾಗಿದೆ. ಅಷ್ಟಕ್ಕೂ ಕ್ರುಂಬಿಗಲ್‌ ಅವರ ಮೂಲ ಉದ್ದೇಶವೂ ಅಲಂಕಾರಿಕ ತೋಟಗಾರಿಕೆಯನ್ನು ಪರಿಚಯಿಸುವುದಾಗಿತ್ತು ಎಂದು ಡಾ.ಜಗದೀಶ್‌ ಹೇಳಿದ್ದಾರೆ.

ಐದು ವರ್ಷಗಳ ಗಣರಾಜ್ಯೋತ್ಸವ ಪ್ರದರ್ಶನದ ಥೀಮ್‌ಗಳು
ವರ್ಷ    ಥೀಮ್‌    ವೆಚ್ಚ (ಲಕ್ಷಗಳಲ್ಲಿ)    ಬಳಸಿದ ಹೂವು (ಲಕ್ಷಗಳಲ್ಲಿ)

-2014    ಸುವರ್ಣ ಹಾರ್ಟಿಕಲ್ಚರ್‌ ಪಿಲ್ಲರ್‌    17.40    15
-2015    ಕೆಂಪು ಕೋಟೆ    33.76    3
-2016    ಕ್ರುಂಬಿಗಲ್‌ ಮನೆ    15    2.60
-2017    ವಿಜಯಪುರದ ಗೋಳಗುಮ್ಮಟ    26.25    4
-2018    ಶ್ರವಣಬೆಳಗೊಳದ ಮಹಾಮಸ್ತಕಾಭಿಷೇಕ    ಪ್ರಾಯೋಜಕರು

* ವಿಜಯಕುಮಾರ್‌ ಚಂದರಗಿ / ದೇವೇಶ ಸೂರಗುಪ್ಪ

ಟಾಪ್ ನ್ಯೂಸ್

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

NIA (2)

Rameshwaram Cafe case: ಎನ್‌ಐಎಯಿಂದ ಸಹ ಸಂಚುಕೋರನ ಬಂಧನ

1-qqwewqe

Congress ಹಾಸನ, ಮಂಡ್ಯದಲ್ಲೂ ಗೆಲ್ಲಲಿದೆ : ಸಚಿವ ಎಂ.ಬಿ.ಪಾಟೀಲ್

1-eewqe

BJP MP ಜಿಗಜಿಣಗಿ ಮಾಡಿದ ಅಪಮಾನವನ್ನು ಸಮಾಜದ ಮನೆ ಮನೆಗೆ ತಿಳಿಸುತ್ತೇವೆ: ರಾಠೋಡ

9

6.69 ಕೋಟಿ ರೂ. ಖೋಟಾನೋಟು ವಶಕ್ಕೆ: ಕೇಂದ್ರ ಏಜೆನ್ಸಿ ತನಖೆ ಆರಂಭ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

7-bng

Bengaluru: ಸಾಲ ವಸೂಲಿ ಹೆಸರಲ್ಲಿ ಆಟೋ ವಶ, ಧರ್ಮ ನಿಂದನೆ: ಬಂಧನ

6-bng

Bengaluru: ಪೇಂಟರ್‌ ಕೊಂದು ಪೊಲೀಸ್‌ ಠಾಣೆಗೆ ಬಂದು ಸಿಕ್ಕಿಬಿದ್ದ ಸ್ನೇಹಿತರು

5-bng

Bengaluru: ಪ್ರೀತಿಸಿ ಮದುವೆ ಆಗುವುದಾಗಿ ಅಂಗವಿಕಲ ಯುವತಿಗೆ ವಂಚನೆ

4-bng

Bengaluru: 290 ರೌಡಿಶೀಟರ್‌ಮನೆಗಳ ಮೇಲೆ ದಾಳಿ 

3-crime

Bengaluru: ಸ್ನೇಹಿತರಿಂದಲೇ ಸುಪಾರಿ ಕಿಲ್ಲರ್‌ನ ಹತ್ಯೆ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-qweqwew

Mangaluru;ಮನೆಯಲ್ಲೇ ಅಕ್ರಮ ಕಸಾಯಿಖಾನೆ:ಗೋಮಾಂಸ ಸಹಿತ ಮೂವರ ಬಂಧನ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ: ರಕ್ಷಾ ರಾಮಯ್ಯ

Raksha Ramaiah: ಯಾರಿಗೆ ಟಿಕೆಟ್‌ ಕೊಟ್ಟರೂ ಅಭ್ಯರ್ಥಿ ಪರ ಕೆಲಸ ಮಾಡ್ತೇವೆ; ರಕ್ಷಾ ರಾಮಯ್ಯ

1—eewqewq

World’s largest ಅನಕೊಂಡ ಅನಾ ಜೂಲಿಯಾ ಸಾವು; ಆಗಿದ್ದೇನು?

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

Politics: ಅಮಿತ್‌ ಶಾ ಓರ್ವ ಗೂಂಡಾ, ರೌಡಿ: ಯತೀಂದ್ರ 

1-asdasdad

Pralhad Joshi ವಿರುದ್ದ ಸಿಡಿದೆದ್ದ ದಿಂಗಾಲೇಶ್ವರ ಶ್ರಿಗಳಿಗೆ ವೀರಶೈವ ಮಹಾಸಭಾ ಬೆಂಬಲ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.