ಅಧಿಕಾರಿಗಳ ನಿದ್ದೆಗೆಡಿಸಿದ “ಆಂಜನೇಯ’

Team Udayavani, Oct 14, 2019, 3:08 AM IST

ಬೆಂಗಳೂರು: ಕಳೆದ ಕೆಲ ತಿಂಗಳಿಂದ ಆಂಜನೇಯ ಸ್ವಾಮಿ ಅಕ್ಷರಶಃ ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‌ಸಿಎಲ್‌)ದ ಅಧಿಕಾರಿಗಳ ನಿದ್ದೆಗೆಡಿಸಿದ್ದಾನೆ. ಹೌದು, “ನಮ್ಮ ಮೆಟ್ರೋ’ ಎರಡನೇ ಹಂತದ ಯೋಜನೆಯ ಹೊಸ ಎತ್ತರಿಸಿದ ಮಾರ್ಗ ಆರ್‌.ವಿ. ರಸ್ತೆ-ಬೊಮ್ಮಸಂದ್ರ ನಡುವೆ ಆಂಜನೇಯ ಸ್ವಾಮಿ ಬಂಡೆಯಂತೆ ನಿಂತಿದ್ದಾನೆ. ಅವನನ್ನು ಪಕ್ಕಕ್ಕಿಟ್ಟು ಮುಂದೆ ಸಾಗುವ ವಿಚಾರದಲ್ಲಿ ಅಧಿಕಾರಿಗಳು ಮತ್ತು ಭಕ್ತರ ನಡುವೆ ಹಗ್ಗಜಗ್ಗಾಟ ನಡೆದಿದೆ.

ಈ ಮಧ್ಯೆ ಮತ್ತೊಂದು ನೂತನ ಸುರಂಗ ಮಾರ್ಗದಲ್ಲಿ ಈಗಾಗಲೇ ಆಲ್‌ಸೇಂಟ್‌ ಚರ್ಚ್‌ನ ಸದಸ್ಯರಿಂದ ವಿರೋಧ ವ್ಯಕ್ತವಾಗಿದ್ದು, ಅದು ಕೂಡ ಕಗ್ಗಂಟಾಗಿದೆ. 18.82 ಕಿ.ಮೀ. ಉದ್ದದ ಆರ್‌.ವಿ.ರಸ್ತೆ-ಬೊಮ್ಮಸಂದ್ರ ನಡುವೆ ಮೆಟ್ರೋ ಮಾರ್ಗದಲ್ಲಿ ಒಟ್ಟಾರೆ ಮೂರು ದೇವಸ್ಥಾನಗಳು ಬರುತ್ತವೆ. ಆ ಮೂರೂ ಆಂಜನೇಯ ಸ್ವಾಮಿ ದೇವಸ್ಥಾನಗಳೇ ಆಗಿವೆ. ಈ ಪೈಕಿ ಭಕ್ತರ ಮನವೊಲಿಸಿ ಬೊಮ್ಮನಹಳ್ಳಿಯ ಕಂಬದ ಆಂಜನೇಯ ದೇವಸ್ಥಾನ ತೆರವುಗೊಳಿಸುವಲ್ಲಿ ಬಿಎಂಆರ್‌ಸಿಎಲ್‌ ಯಶಸ್ವಿಯಾಗಿದೆ.

ಆದರೆ, ಗಾರ್ವೇಬಾವಿಪಾಳ್ಯ ಮತ್ತು ರೂಪೇನ ಅಗ್ರಹಾರದ ಆಂಜನೇಯಸ್ವಾಮಿ ದೇವಸ್ಥಾನಗಳ ತೆರವಿಗೆ ತೀವ್ರ ವಿರೋಧ ವ್ಯಕ್ತವಾಗಿದೆ. ಈ ಸಂಬಂಧ ಅಧಿಕಾರಿಗಳು ಸ್ಥಳೀಯ ಮುಖಂಡರೊಂದಿಗೆ ಮಾತುಕತೆಗಿಳಿದರೆ, ಅತ್ತ ಭಕ್ತರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರಿಗೆಲ್ಲಾ ಪತ್ರ ಬರೆದು “ದೇವಸ್ಥಾನ ಉಳಿಸಿ’ ಎಂದು ಮೊರೆ ಇಟ್ಟಿದ್ದಾರೆ.

ಒಂದು ಸರ್ವಿಸ್‌ ರಸ್ತೆಗಾಗಿ ಮತ್ತೊಂದು ನಿಲ್ದಾಣಕ್ಕಾಗಿ ದೇವಸ್ಥಾನಗಳನ್ನು ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ. ಈ ಬಗ್ಗೆ ಶಾಸಕರೊಂದಿಗೂ ಚರ್ಚಿಸಲಾಗುತ್ತಿದ್ದು, ಅರ್ಚಕರು ಮತ್ತು ಭಕ್ತರು ಸಹಕರಿಸುವ ವಿಶ್ವಾಸ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಗಳು ತಿಳಿಸುತ್ತಾರೆ. ಆದರೆ, ಯಾವುದೇ ಕಾರಣಕ್ಕೂ ದೇವಸ್ಥಾನ ತೆರವಿಗೆ ಅವಕಾಶ ನೀಡುವುದಿಲ್ಲ ಎಂದು ಸ್ಥಳೀಯರು ಪಟ್ಟುಹಿಡಿದಿದ್ದಾರೆ.

ಪರ್ಯಾಯ ಏನು?: ಮೆಟ್ರೋ ಮಾರ್ಗ ನಿರ್ಮಾಣಕ್ಕಾಗಿ ಬಿಎಂಆರ್‌ಸಿಎಲ್‌, ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಸೇರಿದ ಸರ್ವಿಸ್‌ ರಸ್ತೆಯನ್ನು ಬಳಸಿಕೊಂಡಿದೆ. ಒಪ್ಪಂದದ ಪ್ರಕಾರ ಇದಕ್ಕೆ ಪರ್ಯಾಯವಾಗಿ ಪಕ್ಕದಲ್ಲೇ ಮತ್ತೊಂದು ಸರ್ವಿಸ್‌ ರಸ್ತೆ ನಿರ್ಮಿಸಿಕೊಡುವ ಜವಾಬ್ದಾರಿ ಈಗ ನಿಗಮದ ಮೇಲಿದೆ. ಆದರೆ, ಆ ಹೊಸದಾಗಿ ನಿರ್ಮಿಸಲಿರುವ ಸರ್ವಿಸ್‌ ರಸ್ತೆಯಲ್ಲಿ ಗರ್ವೇಬಾವಿಪಾಳ್ಯದ ಬಳಿ 80 ವರ್ಷಕ್ಕೂ ಹಳೆಯದಾದ ಆಂಜನೇಯಸ್ವಾಮಿ ದೇವಸ್ಥಾನ ಬರುತ್ತದೆ. ಇದನ್ನು ತೆರವುಗೊಳಿಸುವ ಅನಿವಾರ್ಯತೆ ಎದುರಾಗಿದೆ.

ಸುಮಾರು 160 ಚದರ ಮೀಟರ್‌ ಜಾಗವನ್ನು ವಶಪಡಿಸಿಕೊಳ್ಳುತ್ತಿದ್ದು, ಇದಕ್ಕೆ ಬದಲಾಗಿ ಪಕ್ಕದಲ್ಲೇ 175 ಚದರ ಮೀಟರ್‌ ಜಾಗವನ್ನು ನೀಡಲಾಗುತ್ತಿದೆ. ಜತೆಗೆ ಕಟ್ಟಡ ನಿರ್ಮಾಣಕ್ಕೆ ತಗಲುವ ವೆಚ್ಚವನ್ನೂ ಭರಿಸಿಕೊಡಲಾಗುವುದು ಎಂದೂ ಹೇಳಿದೆ. ಸಹಮತ ಸಿಗುವ ಸಾಧ್ಯತೆ ಇದೆ ಎಂದು ಬಿಎಂಆರ್‌ಸಿಎಲ್‌ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದರು.

ಮೂರನೇ ಬಾರಿ ಶಿಫ್ಟ್?: “ಈಗಾಗಲೇ ಇದ್ದಂತಹ ಶೆಡ್‌, ಶೌಚಾಲಯ ತೆರವುಗೊಳಿಸಿದ್ದಾರೆ. ದೇವಸ್ಥಾನಕ್ಕೆ ಬರುವ ಭಕ್ತರ ಸಂಖ್ಯೆ ಕೂಡ ಕಡಿಮೆ ಆಗಿದೆ. ರಾಜಕಾರಣಿಗಳೂ ಒತ್ತಡ ಹಾಕುತ್ತಿದ್ದಾರೆ. ರಸ್ತೆ ವಿಸ್ತರಣೆಗಾಗಿ ಈ ಮೊದಲು ಎರಡು ಬಾರಿ ದೇವಸ್ಥಾನ ಸ್ಥಳಾಂತರಗೊಂಡಿದೆ. ಈಗ ಮತ್ತೆ ಮೆಟ್ರೋಗಾಗಿ ಸ್ಥಳಾಂತರಿಸುತ್ತಿದ್ದಾರೆ. ಮತ್ತೆ ಎಲ್ಲಿಗೆ ಹೋಗುವುದು?’ ಎಂದು ರೂಪೇನ ಅಗ್ರಹಾರ ಆಂಜನೇಯ ದೇವಸ್ಥಾನದ ಅರ್ಚಕ ರಾಮಕೃಷ್ಣ ತಿಳಿಸುತ್ತಾರೆ.

ಆಗಲೂ ಬಿಟ್ಟಿಲ್ಲ; ಈಗಲೂ ಬಿಡಲ್ಲ: “1992ರಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು ಸರ್ವಿಸ್‌ ರಸ್ತೆ ನಿರ್ಮಿಸಲು ಮುಂದಾದಾಗಲೂ ಹೋರಾಟ ಮಾಡಿ, ಈ ಪುರಾತನ ದೇವಾಲಯವನ್ನು ನಾವು ಉಳಿಸಿಕೊಂಡಿದ್ದೇವೆ. ಈಗಲೂ ಅಗತ್ಯಬಿದ್ದರೆ ಹೋರಾಟದ ಮೂಲಕ ಉಳಿಸಿಕೊಳ್ಳುತ್ತೇವೆ. ದೇವಸ್ಥಾನದ ಹಿಂದೆ ಜಾಗ ತೋರಿಸಿದ್ದಾರೆ. ಆದರೆ, ಸನಾತನ ಧರ್ಮ ಮತ್ತು ವಾಸ್ತು ಪ್ರಕಾರ ದೇವಸ್ಥಾನಗಳು ದಕ್ಷಿಣಕ್ಕೆ ಅಥವಾ ಪಶ್ಚಿಮಕ್ಕೆ ಸ್ಥಳಾಂತರ ಆಗಬಾರದು.

ಈ ಬಗ್ಗೆ ಪ್ರಧಾನಿಯಿಂದ ಹಿಡಿದು ಸಂಸದರವರೆಗೂ ಪತ್ರಗಳನ್ನು ಬರೆದಿದ್ದೇವೆ’ ಎಂದು ದೇವಸ್ಥಾನದ ಅರ್ಚಕ ಬಿ.ಜಿ. ಚನ್ನಕೇಶವ ತಿಳಿಸುತ್ತಾರೆ. ಅಷ್ಟಕ್ಕೂ ಈ ಮೊದಲು ಸ್ವತಃ ಬಿಎಂಆರ್‌ಸಿಎಲ್‌, ಮೆಟ್ರೋ ಮಾರ್ಗಕ್ಕಾಗಿ ದೇವಸ್ಥಾನ ತೆರವುಗೊಳಿಸುವುದಿಲ್ಲ ಎಂದು ಸ್ಪಷ್ಟಪಡಿಸಿತ್ತು. ಈಗ ಏಕಾಏಕಿ ಮತ್ತೆ ತನ್ನ ನಿಲುವು ಬದಲಿಸಿದೆ. ಇದಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೂ ಮನವಿ ಮಾಡಿದ್ದೇವೆ ಎಂದು ಅವರು ಹೇಳಿದರು.

ಅದೇ ರೀತಿ, ಗರ್ವೇಬಾವಿಪಾಳ್ಯದ ಆಂಜನೇಯ ದೇವಸ್ಥಾನಕ್ಕಿಂತಲೂ ಎಚ್‌ಎಸ್‌ಆರ್‌ ಮೆಟ್ರೋ ನಿಲ್ದಾಣದ ಬಳಿ ಇರುವ ರೂಪೇನ ಅಗ್ರಹಾರದ ಆಂಜನೇಯಸ್ವಾಮಿ ದೇವಸ್ಥಾನ ಹಳೆಯದಾಗಿದೆ. ಅಲ್ಲಿನ ಭಕ್ತರು ಕೂಡ ಪ್ರಧಾನಿ ಸೇರಿದಂತೆ ಕೇಂದ್ರ ಸಚಿವರಿಗೆ ಪತ್ರ ಬರೆದು ಮನವಿ ಮಾಡಿಕೊಂಡಿದ್ದಾರೆ. ಇದರಿಂದ ಪೂರಕ ಸ್ಪಂದನೆಯೂ ಸಿಕ್ಕಿದ್ದು, ಸ್ಥಳಾಂತರ ನಿರ್ಧಾರದಿಂದ ಹಿಂದೆಸರಿಯುವ ಸಾಧ್ಯತೆ ಇದೆ ಎಂದು ಸ್ಥಳೀಯ ಆಂಜನೇಯ ಸ್ವಾಮಿ ಭಕ್ತ ಎಂ.ಶ್ರೀನಿವಾಸ್‌ ವಿಶ್ವಾಸ ವ್ಯಕ್ತಪಡಿಸುತ್ತಾರೆ.

ಸರ್ವಿಸ್‌ ರಸ್ತೆಗಾಗಿ ಆಂಜನೇಯಸ್ವಾಮಿ ದೇವಸ್ಥಾನ ತೆರವು ಅನಿವಾರ್ಯವಾಗಿದ್ದು, ಈ ಸಂಬಂಧ ಸ್ಥಳೀಯ ಮುಖಂಡರು ಮತ್ತು ಶಾಸಕರೊಂದಿಗೆ ಮಾತುಕತೆ ನಡೆಸಲಾಗಿದೆ. ಮನವೊಲಿಸಿದ ನಂತರವೇ ತೆರವುಗೊಳಿಸಲಾಗುವುದು. ಇದಕ್ಕೆ ಪ್ರತಿಯಾಗಿ ಜಾಗ ಹಾಗೂ ನಿರ್ಮಾಣ ವೆಚ್ಚ ಭರಿಸಲಾಗುವುದು.
-ಅಜಯ್‌ ಸೇಠ್, ಬಿಎಂಆರ್‌ಸಿಎಲ್‌ ಎಂಡಿ

* ವಿಜಯಕುಮಾರ ಚಂದರಗಿ

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ