ಧರಣಿ ಕೈಬಿಡಲು ವೈದ್ಯರಿಗೆ ಮನವಿ

Team Udayavani, Nov 7, 2019, 3:08 AM IST

ಬೆಂಗಳೂರು: ಕರವೇ ಕಾರ್ಯಕರ್ತರ ಬಂಧನಕ್ಕೆ ಆಗ್ರಹಿಸಿ ವಿಕ್ಟೋರಿಯಾ ಆಸ್ಪತ್ರೆ ಆವರಣದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರ ಪ್ರತಿಭಟನೆ ಐದನೇ ದಿನವೂ ಮುಂದುವರಿದಿದೆ. ಬುಧವಾರ ಪ್ರತಿಭಟನೆ ಭಾಗವಾಗಿ ನೇತ್ರದಾನದ ಪ್ರತಿಜ್ಞೆ ಸ್ವೀಕರಿಸಿ, ರಕ್ತದಾನ ಕಾರ್ಯಕ್ರಮ ನಡೆಸಲಾಯಿತು.

22 ಮಂದಿ ಕಣ್ಣಿನ ದಾನಕ್ಕೆ ನೋಂದಣಿ ಮಾಡಿಸಿದರೆ, 50ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು. ಮಧ್ಯಾಹ್ನ ವೇಳೆಗೆ ಪ್ರತಿಭಟನಾ ಸ್ಥಳಕ್ಕೆ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಹಾಗೂ ನಿವೃತ್ತ ನ್ಯಾ. ಕೆ.ಎಲ್‌. ಮಂಜುನಾಥ್‌ ಆಗಮಿಸಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಬೆಂಗಳೂರು ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಮಾತನಾಡಿ, ಆಸ್ಪತ್ರೆ ಒಳಗೆ ಪ್ರವೇಶಿಸಿ ಹಲ್ಲೆಗೆ ಪ್ರಯತ್ನಿಸಿರುವ ಕರವೇ ಕಾರ್ಯಕರ್ತರ ವಿರುದ್ಧ ಸಿಆರ್‌ಪಿಸಿ 107ರ ಪ್ರಕಾರ ಹಾಗೂ 114 ರ ಪ್ರಕಾರ ಕ್ರಮ ಕೈಗೊಳ್ಳಲಾಗುವುದು.

ಹಾಗೆಯೇ ದೃಷ್ಟಿ ಕಳೆದುಕೊಂಡಿರುವವರು ನೀಡಿರುವ ದೂರನ್ನೂ ಪರಿಗಣಿಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು. ತಪ್ಪಿತಸ್ಥರ ವಿರುದ್ಧ ಯಾವಾಗ ಕ್ರಮ ಕೈಗೊಳ್ಳಬೇಕು, ಹೇಗೆ ಕ್ರಮ ಕೈಗೊಳ್ಳಬೇಕು ಎಂಬುದು ಪೊಲೀಸ್‌ ಅಧಿಕಾರಿಗಳ ವಿವೇಚನೆಗೆ ಬಿಟ್ಟದ್ದು. ಯಾವುದೇ ಕ್ರಮ ಕೈಗೊಂಡರು ಒಟ್ಟಾರೆ ಪರಿಣಾಮ ಅರಿತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಈವರೆಗೂ ಪೊಲೀಸರು ಎಂದೂ ಆಸ್ಪತ್ರೆಗೆ ಬಂದು ವೈದ್ಯರನ್ನು ಬಂಧಿಸಿಲ್ಲ. ಅದು ಆಗೋದು ಬೇಡ. ವೈದ್ಯರ ನೋವಿಗೆ ನಮ್ಮ ಸಹಾನುಭೂತಿ ಇದೆ. ಚಿಕಿತ್ಸೆ ಕೋರಿ ಆಸ್ಪತ್ರೆಗೆ ಬರುವ ಬಡ ರೋಗಿಗಳನ್ನು ನೋಡಿ. ಅವರಿಗೋಸ್ಕರವಾದರೂ ಪ್ರತಿಭಟನೆ ಕೈಬಿಡಿ. ಪೊಲೀಸ್‌ ಇಲಾಖೆಯಿಂದ ಅಗತ್ಯ ಭದ್ರತೆ ಒದಗಿಸುತ್ತೇವೆ ಎಂದರು.

ಬಂಧಿಸುವವರೆಗೂ ಪ್ರತಿಭಟನೆ ನಿಲ್ಲಿಸಲ್ಲ: ಒಂದೆಡೆ ವೈದ್ಯರ ಪ್ರತಿಭಟನೆಯಿಂದ ರೋಗಿಗಳಿಗೆ ತೊಂದರೆಯಾಗುತ್ತಿದೆ. ಪ್ರತಿಭಟನೆ ಕೈಬಿಡುವಂತೆ ವೈದ್ಯಕೀಯ ಶಿಕ್ಷಣ ಸಚಿವರು ಎರಡು ಬಾರಿ ನಡೆಸಿದ ಸಭೆಯೂ ವಿಫಲವಾಗಿದೆ. ಬೆಂಗಳೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಐ)ಡೀನ್‌ ಸೇರಿದಂತೆ ಆಸ್ಪತ್ರೆಗಳ ವೈದ್ಯ ಅಧೀಕ್ಷಕರ ಮಾತಿಗೂ ಜಗ್ಗುತ್ತಿಲ್ಲ. ಬುಧವಾರವೂ ನಗರ ಪೊಲೀಸ್‌ ಆಯುಕ್ತರು ಬಂದಾಗಲೂ ವೈದ್ಯಕೀಯ ವಿದ್ಯಾರ್ಥಿಗಳು ” ಹಲ್ಲೆ ಮಾಡುವವರನ್ನು ಬಂದಿಸುವವರೆಗೂ, ಪ್ರತಿಭಟನೆ ನಿಲ್ಲಿಸುವುದಿಲ್ಲ’ ಎಂದು ಹೇಳಿದ ಕಿರಿಯ ವೈದ್ಯರು, ನಾಳೆಯೂ ಪ್ರತಿಭಟನೆ ಮುಂದುವರಿಸಲಿದ್ದಾರೆ.

ರೋಗಿಗಳಿಗೆ ಮತ್ತಷ್ಟು ಸಮಸ್ಯೆ: ಪ್ರತಿಭಟನೆ ಹಿನ್ನೆಲೆ ವಿಕ್ಟೋರಿಯಾ ಸಮುತ್ಛಯದ ಆಸ್ಪತ್ರೆಗಳ ಹೊರರೋಗಿಗಳ ವಿಭಾಗದಲ್ಲಿ ಸೇವೆ ವ್ಯತ್ಯಯ ಉಂಟಾಯಿತು. ವಿವಿಧ ಚಿಕಿತ್ಸಾ ವಿಭಾಗಗಳ ಎದುರು ಸಾಕಷ್ಟು ಮಂದಿ ಸರತಿಯಲ್ಲಿ ನಿಂತದ್ದು ಕಂಡುಬಂದಿತು. ಪ್ರತಿಭಟನನಿರತರು ಆಸ್ಪತ್ರೆ ಭಾಗಿಲಲ್ಲೆ ಕುಳಿತಿದ್ದರಿಂದ ರೋಗಗಳ ಓಡಾಡಕ್ಕೆ ಸಾಕಷ್ಟು ಸಮಸ್ಯೆಯಾಯಿತು. ಜತೆಗೆ ಧ್ವನಿವರ್ಧಕ, ಜೋರು ಧ್ವನಿಯಲ್ಲಿ ಘೋಷಣೆಗಳು ಕೂಗಿದ್ದರಿಂದ ಆಸ್ಪತ್ರೆಯಲ್ಲಿ ದಾಖಲಾದ ರೋಗಿಗಳಿಗೂ ಬೆಳಗ್ಗೆಯಿಂದ ಸಂಜೆ ವರೆಗೂ ಸಮಸ್ಯೆಯಾಯಿತು.

ಪ್ರತಿಭಟನೆಯಿಂದ ಸಂತ್ರಸ್ತರಿಗೆ ನೆರವಾಯಿತೇ?: ಕಿರಿಯ ವೈದ್ಯರ ನಿರಂತರ ಪ್ರತಿಭಟನೆಯಿಂದ ಕಣ್ಣುಕಳೆದುಕೊಂಡ ಸಂತ್ರಸ್ತರ ವಿಚಾರ ಎಲ್ಲೆಡೆ ಸದ್ದು ಮಾಡಿತು. ಇದರ ಪರಿಣಾಮ ಸಚಿವರು ಸಂತ್ರಸ್ತರ ನೆರವಿಗೆ ಧಾವಿಸಿ ಮೂರು ಲಕ್ಷ ರೂ. ಪರಿಹಾರ ಘೋಷಿಸಿದ್ದರು ಎಂದು ತಿಳಿದು ಬಂದಿದೆ.

ಮಿಂಟೋ ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಔಷಧ ವ್ಯತ್ಯಯವಾಗಿ 22 ಮಂದಿ ಕಣ್ಣು ಕಳೆದುಕೊಂಡಿದ್ದರು. ಈ ಪೈಕಿ ವಯಸ್ಸಾದವರು ಹಾಗೂ ಬಡವರೇ ಹೆಚ್ಚಿದ್ದರು. ಕಣ್ಣು ಕಳೆದುಕೊಂಡಿದ್ದವರು ಪೊಲೀಸ್‌ ದೂರು ನೀಡಿದ್ದು, ಔಷಧ ವ್ಯತ್ಯಯ ಎಂದು ಪ್ರಕರಣ ತನಿಖೆಯಲ್ಲಿತ್ತು. ಇತ್ತ ಕಣ್ಣು ಕಳೆದುಕೊಂಡವರು ನಾಲ್ಕು ತಿಂಗಳಾದರೂ ಚಿಕಿತ್ಸೆಯೂ ಸಿಗದೆ, ಪರಿಹಾರ ಧನವೂ ಸಿಗದೇ ಕಷ್ಟ ಪಡುತ್ತಿದ್ದರು.

ನ.1 ರಂದು ಕರವೇ ಈ ಕುರಿತು ಆಸ್ಪತ್ರೆಯಲ್ಲಿ ಪ್ರತಿಭಟನೆ ನಡೆಸಿತ್ತು. ಆ ವೇಳೆ ಕರವೇ ಕಾರ್ಯಕರ್ತರು ಹಲ್ಲೆ ಮಾಡಿದ್ದರು ಎಂದು ಆರೋಪಿಸಿ ಸ್ನಾತಕೋತ್ತರ ವಿದ್ಯಾರ್ಥಿಗಳು ಹಾಗೂ ಕಿರಿಯ ವೈದ್ಯರು ಠಾಣೆಗೆ ದೂರು ನೀಡಿ ನಿರಂತರ ಪ್ರತಿಭಟನೆಗೆ ಮುಂದಾದರು. ಇದು ಸಂತ್ರಸ್ತರ ನೆರವಿಗೆ ಕಾರಣವಾಯಿತು.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ