ಬಿಜೆಪಿಯ ಭಿನಮತಕ್ಕೆ ತುಪ್ಪ ಸುರಿದ ನೇಮಕ

Team Udayavani, May 3, 2017, 9:54 AM IST

ಉಪಾಧ್ಯಕ್ಷರಾಗಿ ಶ್ರೀನಿವಾಸ ಪ್ರಸಾದ್‌ ನೇಮಿಸಿದ ಬಿಎಸ್‌ವೈ
ಬೆಂಗಳೂರು: ಬಿಜೆಪಿ ರಾಜ್ಯ ಘಟಕದಲ್ಲಿ ತೀವ್ರಗೊಳ್ಳುತ್ತಿರುವ ಬಿಕ್ಕಟ್ಟು ಶಮನಕ್ಕೆ ಪ್ರಯತ್ನಗಳು ನಡೆಯುತ್ತಿರುವ ಮಧ್ಯೆಯೇ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಿಸಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ  ಆದೇಶ ಹೊರಡಿಸಿದ್ದಾರೆ.

ಆದೇಶ ಪತ್ರದಲ್ಲಿ ಏ. 26ರ ದಿನಾಂಕ ಅಚ್ಚಾಗಿದ್ದು, ಬಹಿರಂಗವಾಗಿರುವುದು ಮಾತ್ರ ಮೇ 2ರಂದು. ಹೀಗಾಗಿ ತಮ್ಮ ವಿರುದ್ಧ ತಿರುಗಿಬಿದ್ದಿರುವವರ ವಿರುದ್ಧ ಕ್ರಮ ಕೈಗೊಳ್ಳಲು ಯಡಿಯೂರಪ್ಪ ಅವರು ಮೊದಲೇ ತೀರ್ಮಾನಿಸಿದ್ದರೇ ಅಥವಾ ವಿವಾದ ಏಳದಂತೆ ನೋಡಿಕೊಳ್ಳಲು ದಿನಾಂಕ ಬದಲಿಸಲಾಯಿತೇ ಎಂಬ ಜಿಜ್ಞಾಸೆ ಆರಂಭವಾಗಿದೆ. ಅಲ್ಲದೆ, ದಲಿತ ಸಮುದಾಯದ ಪ್ರಸಾದ್‌ ಅವರಿಗೆ ಜವಾಬ್ದಾರಿ ನೀಡುವ ಮೂಲಕ ಅತೃಪ್ತ ನಾಯಕ ಈಶ್ವರಪ್ಪ ಅವರಿಗೆ ಟಾಂಗ್‌ ನೀಡಿದ್ದಾರೆ ಎಂದು ವಿಶ್ಲೇಷಿಸಲಾಗುತ್ತಿದೆ.

ಇತ್ತೀಚೆಗೆ ತಾನೇ ಬಿಜೆಪಿಗೆ ಸೇರಿ ನಂಜನಗೂಡು ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ಪರಾಭವಗೊಂಡಿದ್ದ ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್‌ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷರನ್ನಾಗಿ ನೇಮಕಕ್ಕೆ ಯಾವುದೇ ಆಕ್ಷೇಪ ಇಲ್ಲದಿದ್ದರೂ ನೇಮಕದ ಬಳಿಕ ಒಂದು ವಾರ ಕಾಲ ಅದನ್ನು ಮುಚ್ಚಿಡಲಾಗಿದೆ ಎಂಬ ಬಗ್ಗೆ ಪಕ್ಷದೊಳಗೆ ಅಸಮಾಧಾನ ವ್ಯಕ್ತವಾಗಿದೆ.

ಕಣ್ಣೊರೆಸ‌ುವ ತಂತ್ರ:
ಯಡಿಯೂರಪ್ಪ ವಿರುದ್ಧ ಅಸಮಾಧಾನಗೊಂಡಿರುವ ಕೆಲವು ಮುಖಂಡರು ಕಳೆದ ಶನಿವಾರ (ಏ. 27) ಬೆಂಗಳೂರಿನಲ್ಲಿ “ಸಂಘಟನೆ ಉಳಿಸಿ’ ಎಂಬ ಸಭೆ ನಡೆಸಿದ್ದರು. ಇದರಿಂದ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿತ್ತು. ಈ ಹಿನ್ನೆಲೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಅವರ ಸೂಚನೆಯಂತೆ ರಾಜ್ಯ ಉಸ್ತುವಾರಿ ಮುರಳೀಧರರಾವ್‌ ಅವರು ಏ. 29ರ ಭಾನುವಾರ ಬೆಂಗಳೂರಿಗೆ ಆಗಮಿಸಿ ಅತೃಪ್ತಿ ಶಮನಗೊಳಿಸುವ ಕುರಿತು ಮುಖಂಡರಿಂದ ಅಭಿಪ್ರಾಯ ಸಂಗ್ರಹಿಸುವ ಕೆಲಸ ಆರಂಭಿಸಿದ್ದರು.

ಈ ಮಧ್ಯೆ ಏ. 29ರಂದು ಮಧ್ಯರಾತ್ರಿ ವೇಳೆ ಯಡಿಯೂರಪ್ಪ ಅವರ ವಿರುದ್ಧ ತಿರುಗಿಬಿದ್ದಿದ್ದ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಕೈಬಿಡಲಾಗಿತ್ತು. ಜತೆಗೆ ಬಿಜೆಪಿ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಬಿ.ಎಲ್‌.ಸಂತೋಷ್‌ ಅವರ ವಿರುದ್ಧ ಹೇಳಿಕೆ ನೀಡಿದ ಕಾರಣಕ್ಕೆ ಯಡಿಯೂರಪ್ಪ ಬೆಂಬಲಿಗರಾದ ಮಾಜಿ ಶಾಸಕ ಎಂ.ಪಿ.ರೇಣುಕಾಚಾರ್ಯ ಅವರನ್ನು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಸ್ಥಾನದಿಂದ ಮತ್ತು ಗೋ.ಮಧುಸೂಧನ್‌ ಅವರನ್ನು ರಾಜ್ಯ ವಕ್ತಾರ ಹುದ್ದೆಯಿಂದ ಕೆಳಗಿಳಿಸಲಾಗಿತ್ತು. ಮುರಳೀಧರರಾವ್‌ ಅವರು ಬೆಂಗಳೂರಿಗೆ ಆಗಮಿಸಿದ ಬಳಿಕ ಬಿಕ್ಕಟ್ಟು ಶಮನ ಪ್ರಯತ್ನದ ಫ‌ಲವಾಗಿ ವರಿಷ್ಠರ ಸೂಚನೆಯಂತೆ ಕ್ರಮ ಜರುಗಿಸಲಾಗಿದೆ ಎಂದು ಭಾವಿಸಲಾಗಿತ್ತು.

ಆದರೆ, ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಪಕ್ಷದ ರಾಜ್ಯ ಉಪಾಧ್ಯಕ್ಷ ಸ್ಥಾನದಿಂದ ಕೈಬಿಡಲು ಯಡಿಯೂರಪ್ಪ ಅವರು ಹಿಂದೆಯೇ ತೀರ್ಮಾನಿಸಿದ್ದರೇ ಎಂಬ ಅನುಮಾನ ಶ್ರೀನಿವಾಸ ಪ್ರಸಾದ್‌ ಅವರ ನೇಮಕದ ಬಳಿಕ ಹುಟ್ಟಿಕೊಂಡಿದೆ. ಅಲ್ಲದೆ, ರೇಣುಕಾಚಾರ್ಯ ಮತ್ತು ಗೋ.ಮಧುಸೂಧನ್‌ ಅವರನ್ನು ಪಕ್ಷದ ಜವಾಬ್ದಾರಿಯಿಂದ ಮುಕ್ತಗೊಳಿಸಿರುವುದು ಅಸಮಾಧಾನಿತರ ಕಣ್ಣಿಗೆ ಮಣ್ಣೆರಚುವ ಪ್ರಯತ್ನ ಎಂಬುದೂ ಸ್ಪಷ್ಟವಾಗಿದೆ ಎಂಬ ಆರೋಪ ಕೇಳಿಬಂದಿದೆ.

ಇದು ಷಡ್ಯಂತ್ರವಲ್ಲವೇ?:
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ವಿರುದ್ಧ ಪಕ್ಷದ ಒಂದು ಗುಂಪು ಮುನಿಸಿಕೊಳ್ಳಲು ಉಪಾಧ್ಯಕ್ಷರ ನೇಮಕವೂ ಕಾರಣವಾಗಿತ್ತು. ಪಕ್ಷಕ್ಕೆ ಇಂತಿಷ್ಟೇ ಸಂಖ್ಯೆಯಲ್ಲಿ ಉಪಾಧ್ಯಕ್ಷರನ್ನು ನೇಮಕ ಮಾಡಬೇಕು ಎಂಬ ನಿಯಮ ಇಲ್ಲವಾದರೂ ಸಾಮಾನ್ಯವಾಗಿ ಒಂಬತ್ತು ಉಪಾಧ್ಯಕ್ಷರನ್ನು ನೇಮಕ ಮಾಡಬೇಕು. ಆದರೆ, ಅದರ ಬದಲಾಗಿ 11 ಉಪಾಧ್ಯಕ್ಷರನ್ನು ನೇಮಿಸಲಾಗಿದೆ. ಆ ವೇಳೆ ಮೀಸಲಾತಿ ಅನುಸರಿಸಿಲ್ಲ ಎಂಬುದು ಅಸಮಾಧಾನಿತರ ಆರೋಪವಾಗಿತ್ತು. ಹೀಗಿರುವಾಗ 12ನೇ ಉಪಾಧ್ಯಕ್ಷರನ್ನಾಗಿ ಶ್ರೀನಿವಾಸ ಪ್ರಸಾದ್‌ ಅವರನ್ನು ನೇಮಿಸಲು ನಿರ್ಧರಿಸಿದ್ದೇಕೆ? ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ನಡೆಸಿದ ಷಡ್ಯಂತ್ರವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ನೇಮಕ ಸಮರ್ಥಿಸಿಕೊಂಡ ಬಿಜೆಪಿ:
ಶ್ರೀನಿವಾಸ ಪ್ರಸಾದ್‌ ಅವರನ್ನು ಬಿಜೆಪಿ ರಾಜ್ಯ ಉಪಾಧ್ಯಕ್ಷರಾಗಿ ನೇಮಿಸಿರುವ ಕ್ರಮವನ್ನು ಪಕ್ಷ ಸಮರ್ಥಿಸಿಕೊಂಡಿದೆ. ಶ್ರೀನಿವಾಸ ಪ್ರಸಾದ್‌ ಅವರ ನೇಮಕಕ್ಕೂ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಉಪಾಧ್ಯಕ್ಷ ಸ್ಥಾನದಿಂದ ಕೈಬಿಟ್ಟಿರುವುದಕ್ಕೂ ಸಂಬಂಧ ಇಲ್ಲ. ಇಂತಿಷ್ಟೇ ಉಪಾಧ್ಯಕ್ಷರು ಇರಬೇಕು ಎಂಬ ನಿಯಮ ಇಲ್ಲ ಮತ್ತು ಉಪಾಧ್ಯಕ್ಷರ ನೇಮಕ ರಾಜ್ಯಾಧ್ಯಕ್ಷರ ಪರಮಾಧಿಕಾರ ಎಂದು ಪಕ್ಷದ ಮೂಲಗಳು ಹೇಳಿವೆ.

ನಂಜನಗೂಡು ಕ್ಷೇತ್ರದ ಉಪ ಚುನಾವಣೆಯಲ್ಲಿ ಪರಾಭವಗೊಂಡ ಬಳಿಕ ಶ್ರೀನಿವಾಸ ಪ್ರಸಾದ್‌ ಅವರು ಚುನಾವಣಾ ರಾಜಕೀಯಕ್ಕೆ ನಿವೃತ್ತಿ ಘೋಷಿಸಿದ್ದರು. ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಪ್ರವಾಸ ಮಾಡಿ ಬಿಜೆಪಿ ಸಂಘಟನೆಗೆ ಶಕ್ತಿ ನೀಡುವುದಾಗಿ ಹೇಳಿದ್ದರು. ಮೇಲಾಗಿ ಅವರೊಬ್ಬ ದಲಿತ ಸಮುದಾಯದ ನಾಯಕರೂ ಆಗಿರುವುದರಿಂದ ಉಪಾಧ್ಯಕ್ಷ ಸ್ಥಾನ ನೀಡಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆಯಾದರೂ ನೇಮಕಾತಿ ಬಹಿರಂಗಗೊಳಿಸಲು ವಿಳಂಬ ಮಾಡಿದ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿವೆ.

ಹೆಸರಿಗೆ ಮಾತ್ರ ಉಪಾಧ್ಯಕ್ಷರಾಗಿದ್ದರು
ಕಳೆದ 29ರಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಸ್ಥಾನದಿಂದ ಪದಚ್ಯುತಗೊಂಡಿದ್ದ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರು ಕಳೆದ ಆರೇಳು ತಿಂಗಳಿನಿಂದಲೇ ಪಕ್ಷ ಸಂಘಟನೆ ಕಾರ್ಯದಿಂದ ದೂರವಾಗಿ ಕೇವಲ ಹೆಸರಿಗೆ ಮಾತ್ರ ಉಪಾಧ್ಯಕ್ಷರಾಗಿದ್ದರು ಎಂದು ಹೇಳಲಾಗಿದೆ.

ಯಡಿಯೂರಪ್ಪ ಅವರು ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಪದಾಧಿಕಾರಿಗಳ ಪಟ್ಟಿ ಪರಿಷ್ಕರಣೆ ಮಾಡಲಾಗಿತ್ತು. ಆ ಸಂದರ್ಭದಲ್ಲಿ ಭಾನುಪ್ರಕಾಶ್‌ ಮತ್ತು ನಿರ್ಮಲ್‌ ಕುಮಾರ್‌ ಸುರಾನಾ ಅವರನ್ನು ಕರೆಸಿದ್ದ ಯಡಿಯೂರಪ್ಪ, ನಾನು ಹೇಳಿದ ಜಿಲ್ಲೆಗಳಿಗೆ ಮಾತ್ರ ಪ್ರವಾಸ ಮಾಡಬೇಕು ಎಂದು ಸೂಚನೆ ನೀಡಿದ್ದರು. ಆದರೆ, ನಂತರದಲ್ಲಿ ಅವರಿಗೆ ಪ್ರವಾಸ ಪಟ್ಟಿ ಒದಗಿಸಿರಲೇ ಇಲ್ಲ. ಹೀಗಾಗಿ ಅವರು ಪಕ್ಷ ಸಂಘಟನೆಯಿಂದ ದೂರವಾಗಿ ಹೆಸರಿಗಷ್ಟೇ ಉಪಾಧ್ಯಕ್ಷರಾಗಿ ಉಳಿದಿದ್ದರು. ಈ ಘಟನೆಯೂ ಪಕ್ಷದಲ್ಲಿ ಅಸಮಾಧಾನಿತರ ಗುಂಪು ಹುಟ್ಟಿಕೊಳ್ಳಲು ಕಾರಣವಾಗಿತ್ತು ಎಂದು ತಿಳಿದುಬಂದಿದೆ.

ರಾಜ್ಯ ಕಾರ್ಯಕಾರಣಿಗೆ ಮೂವರ ನೇಮಕ
ಪಕ್ಷದೊಳಗಿನ ಭಿನ್ನಮತದ ಮಧ್ಯೆಯೇ ಕುರುಬ ಸಮುದಾಯದ ಮುಖಂಡ ಎಂ.ನಾಗರಾಜ್‌ ಸೇರಿದಂತೆ ಬೆಂಗಳೂರಿನ ಮೂವರನ್ನು ರಾಜ್ಯ ಕಾರ್ಯಕಾರಿಣಿಗೆ ವಿಶೇಷ ಆಹ್ವಾನಿತರಾಗಿ ನೇಮಕಗೊಳಿಸಿ ಯಡಿಯೂರಪ್ಪ ಅವರು ಆದೇಶ ಹೊರಡಿಸಿದ್ದಾರೆ.

ಬಿಬಿಎಂಪಿ ಮಾಜಿ ಉಪಮೇಯರ್‌ ಎಸ್‌.ಹರೀಶ್‌ ಮತ್ತು ಕೋರಮಂಗಲ ನಿವಾಸಿ, ಪಿರಿಯಾಪಟ್ಟಣ ಮೂಲದ ಮಂಜುನಾಥ್‌ ಕಾರ್ಯಕಾರಿಣಿಗೆ ನೇಮಕಗೊಂಡ ಇನ್ನಿಬ್ಬರು ಆಹ್ವಾನಿತರು. ಈ ಮೂವರ ನೇಮಕಾತಿ ಬಗ್ಗೆ 10 ದಿನಗಳ ಹಿಂದೆಯೇ ಅವರಿಗೆ ಸೂಚನೆ ನೀಡಲಾಗಿತ್ತು. ಮೈಸೂರನಲ್ಲಿ ನಡೆಯುವ ಕಾರ್ಯಕಾರಿಣಿಗೆ ದಿನಗಳು ಹತ್ತಿರಬರುತ್ತಿದ್ದಂತೆ ನೇಮಕಾತಿ ಆದೇಶ ಹೊರಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಈ ವಿಚಾರವೂ ಪಕ್ಷದಲ್ಲಿ ಅತೃಪ್ತಿಗೆ ಕಾರಣವಾಗಿದೆ. ಪಕ್ಷದ ಆಂತರಿಕ ಮಟ್ಟದಲ್ಲಿ ಚರ್ಚಿಸದೆ ಈ ವಿಚಾರದಲ್ಲೂ ಯಡಿಯೂರಪ್ಪ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಬಿ.ಎಸ್‌. ಯಡಿಯೂರಪ್ಪ ಮತ್ತು ನಾವು ಅಣ್ಣ-ತಮ್ಮಂದಿರಿದ್ದಂತೆ. ಸಂಸಾರದಲ್ಲಿ ಪತಿ-ಪತ್ನಿಯರ ಜಗಳದಂತೆ ಪಕ್ಷದಲ್ಲೂ ಆಗಾಗ ಭಿನ್ನಾಭಿಪ್ರಾಯ ಮೂಡುತ್ತವೆ. ಕೆಲವೇ ದಿನಗಳಲ್ಲಿ ಎಲ್ಲ ಗೊಂದಲಗಳಿಗೆ ತೆರೆಬೀಳಲಿದೆ.
– ಕೆ.ಎಸ್‌. ಈಶ್ವರಪ್ಪ, ವಿಧಾನಪರಿಷತ್‌ ನಾಯಕ

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ